"ಮಾತೆತ್ತಿದರೆ ನಮ್ಮದು ಶಿಸ್ತಿನ ಪಕ್ಷ, ದೇಶ ಮೊದಲು, ಸಿದ್ಧಾಂತ ನಂತರ" ಎಂದು ಗಂಟೆಗಟ್ಟಲೆ ತತ್ವ ಸಿದ್ಧಾಂತದ ಭಾಷಣ ಬಿಗಿಯುತ್ತಿದ್ದ ಕರ್ನಾಟಕ ಬಿಜೆಪಿಯ ಇವತ್ತಿನ ಪರಿಸ್ಥಿತಿ ಬೀದಿ ರಂಪಾಟಕ್ಕೆ ಬಂದು ನಿಂತಿದೆ. ಇಷ್ಟು ಮರ್ಯಾದೆ ಬಿಟ್ಟು ಅಶಿಸ್ತಿನಿಂದ ವರ್ತಿಸುವ ರಾಜಕಾರಣಿಗಳನ್ನು ವಿಶ್ವದಲ್ಲೇ ಎಲ್ಲೂ ನೋಡಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ರಾಜ್ಯ ನಾಯಕರು ವರ್ತಿಸುತ್ತಿದ್ದು, ದಶಕಗಳಿಂದ ಕಣ್ಣು ಮುಚ್ಚಿ ಬೆಂಬಲಿಸುತ್ತಾ ಬಂದಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರೇ ಈಗ ತಲೆ ತಗ್ಗಿಸುವಂತಾಗಿದೆ.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನದ ಬಳಿಕ ಕೇಂದ್ರ ನಾಯಕರು ಹಸ್ತಕ್ಷೇಪ ಮಾಡಿ ಎಲ್ಲವನ್ನೂ ಸರಿಪಡಿಸುತ್ತಾರೆ, ಇನ್ನೊಂದು ಹದಿನೈದು ದಿನಗಳಲ್ಲಿ ಬಾಲ ಕಟ್ ಮಾಡಬೇಕಾದವರ ಬಾಲ ಕಟ್ ಮಾಡುತ್ತಾರೆ ಎಂದು ಕಾರ್ಯಕರ್ತರು ನಂಬಿದ್ದರು. ಆದರೆ ಆ ನಿರೀಕ್ಷೆಗಳೆಲ್ಲ ಸಂಪೂರ್ಣ ಸುಳ್ಳಾಗಿದ್ದು, ಪ್ರಸ್ತುತ ಕರ್ನಾಟಕ ಬಿಜೆಪಿ ಪರಿಸ್ಥಿತಿ ಪಶ್ಚಿಮ ಬಂಗಾಳದ ಟಿಎಂಸಿಗಿಂತಲೂ ಹದಗೆಟ್ಟು ನಗೆಪಾಟಲಿಗೀಡಾಗಿದೆ.
ವಾಸ್ತವವಾಗಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲಲು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಿಗಿಂತ ಅಂದಿನ ಬೊಮ್ಮಾಯಿ ಸರ್ಕಾರದ ನೀರಸ ಆಡಳಿತದ ಮೇಲಿದ್ದ ಜನರ ಆಕ್ರೋಶವೇ ಮುಖ್ಯ ಕಾರಣವಾಗಿತ್ತು. ಆದರೆ ಕೇಂದ್ರ ನಾಯಕರು ಮಾತ್ರ ಮೋದಿ ಅವರ ಜನಪ್ರಿಯತೆಯ ಭ್ರಮೆಯಲ್ಲೇ ತಪ್ಪು ನಿರ್ಧಾರಗಳನ್ನು ಕೈಗೊಂಡು ಕೈ ಸುಟ್ಟುಕೊಂಡರು. ಆನಂತರ ಲೋಕಸಭೆ ಚುನಾವಣೆ ವೇಳೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ದೆಹಲಿ ನಾಯಕರು ಈಗಲೂ ಕೇವಲ ಪೇಪರ್ ಮೇಲಿನ ಗಣಿತದ ಲೆಕ್ಕಾಚಾರದಲ್ಲೇ ಮುಳುಗಿದ್ದಾರೆ.
ಬಿಜೆಪಿಯ ಶೇಕಡಾ 36ರಷ್ಟು ವೋಟ್ ಶೇರ್ ಮತ್ತು ಜೆಡಿಎಸ್‌ನ ಶೇಕಡಾ 13ರಷ್ಟು ವೋಟ್ ಶೇರ್ ಸೇರಿದರೆ ಒಟ್ಟು 49ರಷ್ಟಾಗುತ್ತದೆ, ಇದರ ಜೊತೆಗೆ ಐದು ವರ್ಷಗಳ ಕಾಂಗ್ರೆಸ್ ಸರ್ಕಾರದ ಆಡಳಿತ ವಿರೋಧಿ ಅಲೆಯೂ ಸೇರಿದರೆ 2028ರಲ್ಲಿ ಮೈತ್ರಿಕೂಟ ಸುಲಭವಾಗಿ 130 ರಿಂದ 140 ಸೀಟುಗಳನ್ನು ಗೆಲ್ಲಬಹುದು ಎಂಬುದು ದೆಹಲಿ ನಾಯಕರ ಅತಿಯಾದ ಆತ್ಮವಿಶ್ವಾಸ. ಇದೇ ಘಮಂಡಿತನದಿಂದಾಗಿಯೇ ಅವರು ರಾಜ್ಯ ಬಿಜೆಪಿಯಲ್ಲಿ ದಿನನಿತ್ಯ ಹೊತ್ತಿ ಉರಿಯುತ್ತಿರುವ ಆಂತರಿಕ ಕಚ್ಚಾಟವನ್ನು ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಚುನಾವಣೆ ಹತ್ತಿರ ಬಂದಾಗ ಕೊನೆಯ ನಾಲ್ಕೈದು ತಿಂಗಳು ಒಟ್ಟಿಗೆ ಹೋದರೆ ಜನ ಎಲ್ಲವನ್ನೂ ಮರೆಯುತ್ತಾರೆ ಎಂಬ ಭ್ರಮೆಯಲ್ಲಿ ರಾಜ್ಯದ ಕೆಲವು ನಾಯಕರೂ ತೇಲುತ್ತಿದ್ದಾರೆ.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಬಿಜೆಪಿಯಲ್ಲಿ ಯಾರೂ ಯಾರ ಮಾತಿಗೂ ಕಟ್ಟುಬೀಳುತ್ತಿಲ್ಲ. ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ವಿರುದ್ಧ ಬಹಿರಂಗವಾಗಿಯೇ ವಕ್ರಬುದ್ಧಿಯವರೆಂದು, ಹಳೆ ಮೈಸೂರು ಭಾಗದವರಷ್ಟೇ ಒಕ್ಕಲಿಗರೆಂದು ಹೇಳಿಕೆ ನೀಡಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸದಾನಂದ ಗೌಡರು ಕೂಡ ವಿಶ್ವನಾಥ್ ಅವರನ್ನು ಭೂಗತ ಲೋಕದ ಪಾತಕಿ ಮುತ್ತಪ್ಪ ರೈ ಚೇಲ, ಬಿಡಿಎ ಮುಳುಗಿಸಿದವನು ಎಂದು ಕೀಳುಮಟ್ಟದ ಶಬ್ದಗಳಲ್ಲಿ ಜರೆದಿದ್ದಾರೆ.
ಬಿಜೆಪಿಯಿಂದ ಮುಖ್ಯಮಂತ್ರಿ ಸ್ಥಾನ, ಸಂಸದ ಸ್ಥಾನ ಹಾಗೂ ಎಂಟು ವರ್ಷಗಳ ಕಾಲ ಕೇಂದ್ರ ಸಚಿವ ಸ್ಥಾನ ಸೇರಿದಂತೆ ಯೋಗ್ಯತೆಗೂ ಮೀರಿದ ಎಲ್ಲ ಅಧಿಕಾರಗಳನ್ನು ಅನುಭವಿಸಿದ ಸದಾನಂದ ಗೌಡರು, ಪ್ರಸ್ತುತ ನಿವೃತ್ತಿ ಜೀವನದಲ್ಲಿ ಗೌರವದಿಂದ ಇರದೆ ಅನಗತ್ಯವಾಗಿ ಮೂಗು ತೂರಿಸುತ್ತಿದ್ದಾರೆ ಎಂಬ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಾವು ಬಂದ ಹಾದಿಯನ್ನು ಮರೆತು ನಾನೇ ದೊಡ್ಡ ನಾಯಕ ಎಂದು ಬಿಂಬಿಸಿಕೊಳ್ಳಲು ಹೋಗುತ್ತಿರುವ ಅವರು, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಅಧಿಕಾರದಿಂದ ಕಿತ್ತೊಗೆಯುವ ಕುರಿತಾದ ಆಡಿಯೋ ವಿವಾದದಲ್ಲೂ ಸಿಲುಕಿ ತಮ್ಮ ರಾಜಕೀಯ ಪ್ರಬುದ್ಧತೆಯನ್ನು ಪ್ರಶ್ನಿಸುವಂತೆ ಮಾಡಿದ್ದಾರೆ. ಇದರ ನಡುವೆ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಮತ್ತು ಎಸ್.ಆರ್. ವಿಶ್ವನಾಥ್ ನಡುವಿನ ಜಗಳ ಹಾಗೂ ರೇಣುಕಾಚಾರ್ಯ ಅವರ ನಾಲಿಗೆ ಹರಿಬಿಡುವ ಚಾಳಿ ಪಕ್ಷದ ಶಿಸ್ತನ್ನು ಸಂಪೂರ್ಣವಾಗಿ ಗಾಳಿಗೆ ತೂರಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಇವತ್ತು ಕರ್ನಾಟಕ ಬಿಜೆಪಿಯ ಮೂಗುದಾರ ಯಾರ ಕೈಯಲ್ಲಿದೆ ಎಂಬ ಸ್ಪಷ್ಟತೆಯೇ ಇಲ್ಲದಂತಾಗಿದೆ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಧಿಕಾರ ವಹಿಸಿಕೊಂಡಾಗಿನಿಂದ ಕೇವಲ ಜಗಳ-ಗೊಂದಲಗಳಲ್ಲೇ ಕಾಲ ಕಳೆಯುತ್ತಿದ್ದು, ಅವರನ್ನು ಡಮ್ಮಿ ಮಾಡಲು ಉಳಿದ ನಾಯಕರು ಮಗ್ನರಾಗಿದ್ದಾರೆ. ಇನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರನ್ನು ಬೆಂಗಳೂರಿನ ಸ್ವಪಕ್ಷದ ಶಾಸಕರೇ ನಾಯಕರೆಂದು ಒಪ್ಪಿಕೊಳ್ಳುತ್ತಿಲ್ಲ. ಇದೆಲ್ಲವನ್ನೂ ನಿಯಂತ್ರಿಸಬೇಕಾದ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರಿಗೆ ಬಂಡಾಯ ಶಮನ ಮಾಡುವ ಯಾವುದೇ ಕೆಪಾಸಿಟಿಯೂ ಇಲ್ಲ, ಅವರ ಮಾತು ಕೇಳುವ ಸ್ಥಿತಿಯಲ್ಲಿ ರಾಜ್ಯದ ನಾಯಕರೂ ಇಲ್ಲ.
ಬಿಜೆಪಿಯ ಈ ಸರಣಿ ಕಚ್ಚಾಟ, ಸ್ವಾರ್ಥ ಮತ್ತು ದಿಕ್ಕಿಲ್ಲದ ರಾಜಕಾರಣವು ರಾಜಕೀಯದ ಪಕ್ಕಾ ಗೇಮ್ ಮಾಸ್ಟರ್ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ 2028ರ ಚುನಾವಣಾ ಹಾದಿಯನ್ನು ಅತ್ಯಂತ ಸಲೀಸು ಮಾಡುತ್ತಿದೆ. ತಾವೇನೂ ಶ್ರಮ ಪಡದೇ ಇದ್ದರೂ, ತಮ್ಮ ಮುಂದಿನ ಮುಖ್ಯಮಂತ್ರಿ ಹಾದಿಗೆ ಸ್ವತಃ ಬಿಜೆಪಿಯವರೇ ರತ್ನಗಂಬಳಿ ಹಾಸಿಕೊಡುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಅವರು ನೆಮ್ಮದಿಯಿಂದ ನಗುತ್ತಿದ್ದಾರೆ. ಬಿಜೆಪಿ ನಾಯಕರು ಹೀಗೆಯೇ ಬಣ ರಾಜಕಾರಣದಲ್ಲಿ ಮುಳುಗಿದ್ದರೆ ಮುಂದಿನ ದಿನಗಳಲ್ಲಿ ಪಕ್ಷ ಹೇಳ ಹೆಸರಿಲ್ಲದಂತೆ ವಾಶ್ ಔಟ್ ಆಗುವುದು ಮತ್ತು 2028ರಲ್ಲೂ ವನವಾಸ ಅನುಭವಿಸುವುದು ಸದ್ಯದ ಕಟು ಸತ್ಯವಾಗಿದೆ.
- ಪ್ರಸನ್ನ ಹೊಳ್ಳ ತೀರ್ಥಹಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



