ಮನುಷ್ಯನಿಗೆ ಕನಸು ಬೀಳುವುದು ಸಹಜ. ಆದರೆ ನಿದ್ರೆಯಿಂದ ಎದ್ದ ನಂತರ ಆ ಕನಸನ್ನು ಸಂಪೂರ್ಣವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವುದು ಮಾತ್ರ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಾವು ಕಂಡ ಕನಸಿನ ಪ್ರತಿಯೊಂದು ದೃಶ್ಯವೂ ಸ್ಪಷ್ಟವಾಗಿ ನೆನಪಿರುತ್ತದೆ. ಕೆಲವೊಮ್ಮೆ ಕೆಲವು ಘಟನೆಗಳು ಮಾತ್ರ ನೆನಪಿನಲ್ಲಿ ಉಳಿಯುತ್ತವೆ. ಇನ್ನೂ ಕೆಲವೊಮ್ಮೆ ಕನಸು ಕಂಡಿದ್ದೇವೆ ಎಂಬುದು ಮಾತ್ರ ಗೊತ್ತಿರುತ್ತದೆ, ಆದರೆ ಆ ಕನಸು ಏನು ಎಂಬುದೇ ನೆನಪಾಗುವುದಿಲ್ಲ. ಆದರೆ ಇನ್ನು ಮುಂದೆ ಕನಸುಗಳು ಕೇವಲ ನಿದ್ರೆಯಲ್ಲೇ ಉಳಿಯುವ ರಹಸ್ಯವಾಗಿರಬೇಕಿಲ್ಲ. ಮನುಷ್ಯನ ಕನಸುಗಳನ್ನು ದಾಖಲಿಸಿ, ಅವುಗಳನ್ನು ಪರದೆಯ ಮೇಲೆ ಮತ್ತೆ ವೀಕ್ಷಿಸುವ ಸಾಧ್ಯತೆಯತ್ತ ವಿಜ್ಞಾನ ಮತ್ತು ತಂತ್ರಜ್ಞಾನ ಈಗಾಗಲೇ ಹೆಜ್ಜೆ ಇಟ್ಟಿದೆ. ಈ ತಂತ್ರಜ್ಞಾನ ಇನ್ನೂ ಸಾಮಾನ್ಯ ಜನರ ಬಳಕೆಗೆ ಲಭ್ಯವಾಗದಿದ್ದರೂ, ಭವಿಷ್ಯದ ಬಗ್ಗೆ ಕುತೂಹಲ ಮೂಡಿಸುವಂತಿದೆ.
ಒಮ್ಮೆ ಯೋಚಿಸಿ ನೋಡಿ… ರಾತ್ರಿ ಕಂಡ ಕನಸನ್ನು ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ತೆಗೆದು ಮತ್ತೆ ‘ಪ್ಲೇ’ ಮಾಡಿ ನೋಡಲು ಸಾಧ್ಯವಾದರೆ ಹೇಗಿರಬಹುದು? ಕನಸಿನಲ್ಲಿ ನಾವು ಎಲ್ಲಿದ್ದೆವು, ಯಾರನ್ನು ಭೇಟಿಯಾಗಿದ್ದೆವು, ಏನು ನೋಡಿದ್ದೆವು ಎಂಬುದನ್ನು ಮತ್ತೆ ಕಣ್ಣಾರೆ ನೋಡಬಹುದು. ಕೆಲವೊಮ್ಮೆ ನಮಗೆ ನೆನಪೇ ಇಲ್ಲದ ಕನಸನ್ನೂ ಮತ್ತೆ ವೀಕ್ಷಿಸಬಹುದು. ನಮ್ಮ ಮನಸ್ಸು ನಿದ್ರೆಯ ಸಮಯದಲ್ಲಿ ಸೃಷ್ಟಿಸಿದ ಒಂದು ವಿಚಿತ್ರ ಲೋಕವನ್ನು ಟಿವಿ ಅಥವಾ ಮೊಬೈಲ್ ಪರದೆಯಲ್ಲಿ ನೋಡುವ ಅನುಭವವೇ ಒಂದು ರೀತಿಯ ಅದ್ಭುತವಾಗಿರಬಹುದು. “ನಿನ್ನೆ ರಾತ್ರಿ ಏನು ಕನಸು ಕಂಡೆ?” ಎಂದು ಯಾರಾದರೂ ಕೇಳಿದಾಗ, ಉತ್ತರಿಸುವ ಬದಲು, “ಒಂದು ನಿಮಿಷ… ನಿನಗೆ ತೋರಿಸುತ್ತೇನೆ!”ಎಂದು ಹೇಳುವ ದಿನ ಬಂದರೆ ಆಶ್ಚರ್ಯವೇನಿಲ್ಲ.
ಆದರೆ ಇಂತಹ ತಂತ್ರಜ್ಞಾನ ಕೇವಲ ಮನರಂಜನೆಗಾಗಿ ಮಾತ್ರವಲ್ಲ. ಮನುಷ್ಯನ ಮೆದುಳು, ನೆನಪುಗಳು, ಭಾವನೆಗಳು ಮತ್ತು ಕನಸುಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಇದು ವಿಜ್ಞಾನಿಗಳಿಗೆ ಸಹಾಯ ಮಾಡಬಹುದು. ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ನಿದ್ರೆಯ ಸಮಯದಲ್ಲಿ ಯಾವ ರೀತಿಯ ಚಿತ್ರಗಳು ಮತ್ತು ಆಲೋಚನೆಗಳು ಮೂಡುತ್ತವೆ ಎಂಬುದನ್ನು ಅಧ್ಯಯನ ಮಾಡಲು ಹೊಸ ಅವಕಾಶ ಸಿಗಬಹುದು. ಕನಸುಗಳ ಲೋಕವನ್ನು ಅರ್ಥಮಾಡಿಕೊಳ್ಳುವಲ್ಲಿ ಇದು ಒಂದು ದೊಡ್ಡ ಹೆಜ್ಜೆಯಾಗಬಹುದು.
ಆದರೂ ಇಲ್ಲಿ ಒಂದು ದೊಡ್ಡ ಪ್ರಶ್ನೆಯೂ ಇದೆ. ನಮ್ಮ ಕನಸುಗಳು ನಮ್ಮದೇ ಆದ ಖಾಸಗಿ ಜಗತ್ತು. ನಾವು ಯಾರಿಗೂ ಹೇಳಲು ಇಷ್ಟಪಡದ ಆಲೋಚನೆಗಳೂ ಕನಸಿನಲ್ಲಿ ಕಾಣಿಸಿಕೊಳ್ಳಬಹುದು. ಹಾಗಾಗಿ ಭವಿಷ್ಯದಲ್ಲಿ ಕನಸುಗಳನ್ನು ದಾಖಲಿಸುವ ತಂತ್ರಜ್ಞಾನ ಸಾಮಾನ್ಯ ಬಳಕೆಗೆ ಬಂದರೆ, ಗೌಪ್ಯತೆ ಮತ್ತು ವೈಯಕ್ತಿಕ ಹಕ್ಕುಗಳ ರಕ್ಷಣೆ ಕೂಡ ಅಷ್ಟೇ ಮುಖ್ಯವಾಗುತ್ತದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಮನುಷ್ಯನ ಮನಸ್ಸಿನ ಖಾಸಗಿತನವನ್ನು ಗೌರವಿಸುವ ನಿಯಮಗಳು ಅಗತ್ಯವಾಗುತ್ತವೆ.
ಇಂದು ನಾವು ಕನಸನ್ನು ಕಂಡು, ಬೆಳಗ್ಗೆ ಎದ್ದ ಮೇಲೆ ಅದು ನೆನಪಿದೆಯೇ ಎಂದು ಯೋಚಿಸುತ್ತೇವೆ. ಆದರೆ ನಾಳೆ ಕನಸುಗಳನ್ನು ಉಳಿಸಿಕೊಳ್ಳಲು, ಮತ್ತೆ ನೋಡಲು ಮತ್ತು ಬಹುಶಃ ಇತರರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುವ ಕಾಲ ಬರಬಹುದು. ಕನಸಿಗೂ ‘ರಿಪ್ಲೇ’ ಬಟನ್ ಬರುವ ದಿನ ದೂರವಿಲ್ಲವೇನೋ… ಆದರೆ ಆ ದಿನ ಬಂದಾಗ, ನಮ್ಮ ಕನಸುಗಳನ್ನು ನಾವು ಎಷ್ಟು ಸುರಕ್ಷಿತವಾಗಿ ಕಾಪಾಡಿಕೊಳ್ಳುತ್ತೇವೆ ಎಂಬುದೇ ದೊಡ್ಡ ಪ್ರಶ್ನೆ!
- ಶ್ರೇಯಾ ಎಸ್ ಹೆಗ್ಡೆ
ಎಸ್.ಡಿ.ಎಂ. ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



