"ಇಂದಿನ ಮಕ್ಕಳು ದಾರಿ ತಪ್ಪಿದ್ದಾರೆ" ಹಿರಿಯ ತಲೆಮಾರುಗಳು ಹೇಳುವ ಸಾಮಾನ್ಯ ಮಾತಿದು. ಹಾಗಾದರೆ ನಿಜವಾಗಿಯೂ ತಪ್ಪಿದ್ದಾರಾ? ಒಂದು ಕ್ಷಣ ನಿಂತು ಯೋಚಿಸಲೇ ಬೇಕಾದ ಪ್ರಶ್ನೆ ಇದು. ನಿಜವಾಗಿಯೂ ದಾರಿ ತಪ್ಪಿದವರು ಮಕ್ಕಳೇನಾ? ಅಥವಾ ಅವರ ಬದುಕಿನ ದಾರಿಯನ್ನು ರೂಪಿಸಬೇಕಾದ ದೊಡ್ಡವರಾ? ಈ ಪ್ರಶ್ನೆಗೆ ಉತ್ತರ ಇದೆಯಾ? ಇದ್ದರೆ ಉತ್ತರ ಯಾವುದು? ಹುಡಬೇಕಾದ ಅನಿವಾರ್ಯತೆ ಇದೆ.
ಅಂದ ಹಾಗೆ ಯಾರು ದಾರಿ ಯಾರ್ ತಪ್ಪಿಸಿದ್ರೂ ಅಂತೀರಾ. ಅದಕ್ಕೊಂದು ಕಥೆ ಇದೆ ಓದಿ. ಮುಗಿಲಪೇಟೆ ಅಂತ ಒಂದೂರು. ಅಲ್ಲೊಬ್ಬ ನೂರಾರು ಎಕರೆ ಭೂಮಿ, ಹತ್ತಾರು ದೊಡ್ಡ ಬಂಗಲೆಯನ್ನು ಹೊಂದಿದ ಶ್ರೀಮಂತ ವ್ಯಕ್ತಿ. ತನ್ನ ಹೆಂಡತಿ, ಮಗನೊಂದಿಗೆ ಆರಾಮದಾಯಕ ಜೀವನವನ್ನು ಕಳೆಯುತ್ತಿದ್ದ. ಅವನ ಮಗ ಹತ್ತಾರು ದೇವರಿಗೆ ಹರಕೆ ಕಟ್ಟಿ ಪಡೆದಿರುವ ಕುಲಪುತ್ರ. ಮಗ ಅಂಬೆಗಾಲಿಟ್ಟು, ತೊದಲು ಮಾತು ಶುರು ಮಾಡಿದ. ತಂದೆ-ತಾಯಿಗೆ ಎಲ್ಲಿಲ್ಲದ ಹಿಗ್ಗು. ಮೂರು ವರ್ಷದವನಿದ್ದಾಗ, ಮಗನಿಗೆ ಉತ್ತಮವಾದ ಶಿಕ್ಷಣವನ್ನು ನೀಡಿ, ಒಳ್ಳೆಯ ಪ್ರತಿಭಾವಂತ ವ್ಯಕ್ತಿಯನ್ನಾಗಿ ಮಾಡಬೇಕು ಅನ್ನೋದು ಅವರಿಬ್ಬರ ದೊಡ್ಡ ಕನಸು. ಎಲ್ಲರಿಗೂ ಇವರೇನು ಹೊರತಾಗಿಲ್ಲ. ತಾವು ಬೇರೆ ಅನಕ್ಷರಸ್ಥರು. ಅವನನ್ನು ಈಗಿನಿಂದಲೇ ವಸತಿ ಶಾಲೆಗೆ ಹಾಕಿ ವಿದೇಶದಲ್ಲಿ ಉದ್ಯೋಗ ಮಾಡಬೇಕು ಎಂದು ವಸತಿ ಶಾಲೆ ಎಂಬ ವನವಾಸಕ್ಕೆ ತಳ್ಳಿದರು.
ಆತ ಎಷ್ಟು ಗೋಗರೆದರು ಕೇಳಲಿಲ್ಲ. ಅವರಿಗೆ ಅವನ ಸಂತೋಷಕ್ಕಿಂತ ಅವರ ಆಸೆ, ಕನಸೇ ಹೆಚ್ಚಾಗಿತ್ತು. ಅವನು ಕೆಲವು ದಿನ ಊಟವಿಲ್ಲದೆ ಅಳುತ್ತಿದ್ದ, ಕೇಳುವವರು ಯಾರಿಲ್ಲದೆ ಅನಾಥನಾಗಿದ್ದ. ಇರುವ ಒಬ್ಬ ಮಗನನ್ನು ಹಾಸ್ಟೆಲ್ ಹಾಕಿದರು. ಕೆಲವು ವರ್ಷದ ನಂತರ ಹರ್ಷ ಅಂದರೆ ಅವನ ಹೆಸರದು. ಆತ ಇವರನ್ನು ಮರೆಯೋಕೆ ಶುರುಮಾಡಿದ. ಕರೆ ಮಾಡುತ್ತಿರಲಿಲ್ಲ, ಭೇಟಿ ಆಗುತ್ತಿರಲಿಲ್ಲ. ಆಮೇಲೆ ಇವರಿಗೆ ಭಯವಾಗೋಕೆ ಶುರುವಾಯಿತು. ಎಲ್ಲಿ ನಮ್ಮ ಮಗ ನಮ್ಮನ್ನೇ ಮರೆತು ಬಿಡುತ್ತಾನೋ ಅಂತ.
ಬಾಲ್ಯದಲ್ಲಿ ಕಳೆದು ಹೋದ ಮಮತೆಯ ಜಾಗವನ್ನು ಯಾವ ಯಶಸ್ಸು ನೀಡುವುದಿಲ್ಲ. ಮುಂದೆ ವಿದ್ಯಾಭ್ಯಾಸ ಮುಗಿಸಿ ವಿದೇಶಕ್ಕೆ ತೆರಳಿದ. ಹೋಗುವಾಗ ಪೋಷಕರಿಗೆ ಹೇಳಬೇಕು ಅಂತ ಅವನಿಗೆ ಮನಸಾಗಲಿಲ್ಲ. ಒಮ್ಮೆಲೇ ಮದುವೆಯಾದ ಮೇಲೆ ಹೆಂಡತಿಯ ಜೊತೆಗೂಡಿ ಮರಳಿ ಮನೆಗೆ ಬಂದ. ಮನೆಯವರು ದಿಗ್ಬ್ರಾಂತಗೊಂಡರು. ಕೆಲವು ವರ್ಷ ಹೇಗೋ ಸಹಿಸಿಕೊಂಡು, ಮನೆಯ ಜಗಳ ಮಂದಿಗೆ ಗೊತ್ತಾಗದಂತೆ ದೂಡುತ್ತಾ ಹೋದರು. ಕೊನೆಗೊಂದು ದಿನ ಆ ಮಗನಿಗೆ ಮುದ್ದಾದ ಹೆಣ್ಣು ಮಗು ಹುಟ್ಟಿತು. ಇಬ್ಬರೂ ಅಪಾರ ಪ್ರೀತಿ, ಕಾಳಜಿಯಿಂದ ಬೆಳೆಸಿದರು. ಅವಳ ಬಾಲ್ಯವನ್ನು ಕಸಿದುಕೊಳ್ಳಬಾರದೆಂದು ಎಚ್ಚರಿಕೆಯಿಂದ ನೋಡಿಕೊಂಡ.
ಮುಂದೆ ಮಗು ದೊಡ್ಡದಾಗಿ ಶಾಲೆಗೆ ಹೋಗುವಾಗ ತಂದೆ-ತಾಯಿ, ಅಜ್ಜ-ಅಜ್ಜಿಗೆ ನಮಸ್ಕಾರ ಮಾಡಿ ಮನೆಯಿಂದ ತೆರಳುತ್ತಿತ್ತು. ಸಂತೋಷದಿಂದ ಅವರೊಂದಿಗೆ ಕಾಲ ಕಳೆಯುತ್ತಿತ್ತು. ಕಾಲ ಚಕ್ರ ತಿರುಗಿತು. ದಿನಗಳೆದಂತೆ ಅವರು ಅನಾರೋಗ್ಯದಿಂದ ಬಳಲಲು ಶುರುಮಾಡಿದರು. ಆಗ ಮನೆಯ ಶ್ರೇಷ್ಠ ಕುಲಪುತ್ರ ಅವರನ್ನು ನೋಡಿಕೊಳ್ಳಲು ಆಗದೆ ಅನಾಥಶ್ರಮಕ್ಕೆ ಕಳಿಸುವ ತಯಾರಿಯನ್ನು ಗೌಪ್ಯವಾಗಿ ನಡೆಸಿದ. ಒಂದಿನ ಅನಾಥಶ್ರಮಕ್ಕೆ ಬಿಟ್ಟೂಬಂದ. ಆತನೇನು ಅವರನ್ನು ನೋಡಿಕೊಳ್ಳಲು ಆಗದೆ ಬಿಟ್ಟು ಬಂದಿರಲಿಲ್ಲ.
ಅವರಿಗೆ ಒಂದ ಮಾತನ್ನು ಹೇಳುತ್ತಾನೆ "ನಾನು ನಿಮ್ಮನ್ನು ಅನಾಥಾಶ್ರಮದಲ್ಲಿ ಬಿಟ್ಟುಬಂದದ್ದು ನಿಮ್ಮನ್ನು ತ್ಯಜಿಸಲು ಅಲ್ಲ. ಮೂರು ವರ್ಷದ ಮಗುವಾಗಿದ್ದ ನನ್ನನ್ನು ಅಪರಿಚಿತರ ಮಧ್ಯೆ ಬಿಟ್ಟು ಬಂದಾಗ ನಾನು ಅನುಭವಿಸಿದ ಏಕಾಂತ, ನೋವು, ಅಸಹಾಯಕತೆಯ ಸಣ್ಣ ಅನುಭವವಾದರೂ ನಿಮಗೆ ತಿಳಿಯಲಿ ಎಂಬ ಕಾರಣಕ್ಕೆ" ಎಂದ, ಇಬ್ಬರ ಕಣ್ಣಲ್ಲಿ ನೀರು ಚಿಮ್ಮತ್ತಿತ್ತು. ಆ ಒಂದು ಮಾತು ಅವರಿಗೆ ತಮ್ಮ ತಪ್ಪಿನ ಅರಿವನ್ನು ಮೂಡಿಸಿತು. ಅಲ್ಲಿಗೆ ಮುಗಿಯಿತು. ಮುಂದೆ ಎಲ್ಲರೂ ಒಂದಾಗಿ ಮೊಮ್ಮಗಳೊಂದಿಗೆ ಆಟವಾಡುತ್ತಾ, ಚಂದ್ರನ ತೋರಿಸಿ ಊಟ ಮಾಡಿಸುವುದೇನೋ, ಲಾಲಿ ಹಾಡಿ ಮಲಗಿಸುವುದೇನೋ, ಮನೆಯಲ್ಲಿ ಪ್ರತಿದಿನವೂ ಹೊಸ ಚೈತನ್ಯ.
ಈ ಕಥೆ ಕೇವಲ ಕಥೆಯಲ್ಲ, ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಬೇಕು, ಉತ್ತಮ ಭವಿಷ್ಯ ಬೇಕು ಎಂಬುದು ಪ್ರತಿಯೊಬ್ಬ ಪೋಷಕರ ಕನಸು. ಆದರೆ ಆ ಕನಸಿನ ಹೆಸರಿನಲ್ಲಿ ಅವರ ಬಾಲ್ಯ, ಮಮತೆ, ಕುಟುಂಬದ ಒಡನಾಟ ಮತ್ತು ಭಾವನಾತ್ಮಕ ಬೆಳವಣಿಗೆಯನ್ನು ಕಸಿದುಕೊಳ್ಳಬಾರದು. ಇವತ್ತು ನಾವು ನೀವೆಲ್ಲರೂ ಇದನ್ನೇ ಮಾಡುತ್ತಿದ್ದೇವೆ ಅಲ್ವಾ. ಹಾಸ್ಟೆಲ್ ಸೇರಿಸಿದರೆ ಮಕ್ಕಳು ಅಕ್ಷರಸ್ಥರಾಗಿ ವಿದೇಶಕ್ಕೆ ಹೋಗಿ ಉದ್ಯೋಗ ಮಾಡುತ್ತಾರಾ? ಯಾಕೆ ಕನ್ನಡ ಶಾಲೆಯಲ್ಲಿ ಓದಿದವರು ಯಾರು ವಿದೇಶದಲ್ಲಿ ಇಲ್ಲವೇ? ಓದಬೇಕೆಂಬ ಆಸೆ, ಮಾಡಬೇಕೆಂಬ ಹಂಬಲ ಇದ್ದವನು ತಿಪ್ಪೆಯಲ್ಲಿ ಕೂರಿಸಿದರು ಓದುತ್ತಾನೆ, ಒಳ್ಳೆಯ ಹುದ್ದೆ ಸೇರುತ್ತಾನೆ. ಓದದೇ ಶೋಕಿ ಮಾಡಬೇಕು ಅಂದವನು ಕೋಟಿ ಕೋಟಿ ಹಣ ಸುರಿದು ಬೇರೆ ದೇಶದಲ್ಲಿ ಇಟ್ಟರೂ ಆತ ಶೋಕಿ ಮಾಡುವುದನ್ನು ನಿಲ್ಲಿಸುವುದಿಲ್ಲ. ಚಹಾ ಮಾರುವ ವ್ಯಕ್ತಿಯೊಬ್ಬ ದೇಶದ ಪ್ರಧಾನಿಯಾಗುತ್ತಾನೆ, ಪತ್ರಿಕೆ ಮಾರುವ ಯುವಕನೊಬ್ಬ ವಿಜ್ಞಾನಿಯಾಗುತ್ತಾನೆ, ಕನ್ನಡ ಕಲಿತವನೂ ಉತ್ತಮ ಉದ್ಯೋಗಸ್ಥನಾಗಬಲ್ಲ.
ಮೊದಲು ಪೋಷಕರಾದವರು ಎಚ್ಚೆತ್ತುಕೊಳ್ಳಬೇಕಿದೆ. ಚಿಕ್ಕವರಿದ್ದಾಗ ತಂದೆ, ತಾಯಿ, ಅಜ್ಜ, ಅಜ್ಜಿ ಎಂದು ಅವಿಭಕ್ತ ಕುಟುಂಬವನ್ನು ಪರಿಚಯಿಸಿ. ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಪದ್ಧತಿ, ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸಿಕೊಡಿ. ನೀವು ಚಿಕ್ಕವರಿದ್ದಾಗ ಅವರನ್ನು ಎಷ್ಟು ಆರೈಕೆ, ಪೂರೈಕೆ ಮಾಡುತ್ತಿರೋ, ನಿಮ್ಮ ಮುಪ್ಪಿನ ಸಮಯದಲ್ಲಿ ಅದನ್ನೇ ಅವರು ಮಾಡುತ್ತಾರೆ. ಈಗ ಪ್ರತಿಯೊಂದನ್ನ ಮಕ್ಕಳ ಮೇಲೆ ಆರೋಪ ಮಾಡಿದರೆ ತಪ್ಪು. ಜೀವನದಲ್ಲಿ ಸ್ವಾರ್ಥವಿಲ್ಲದೇ ಪ್ರೀತಿ ಹಂಚುವ ಹೆತ್ತವರೇ ಅವರನ್ನ ದೂಷಿಸಿದರೆ ಮಕ್ಕಳು ಅದೇ ಸಿಟ್ಟನ್ನು ಮುಂದೆ ನೀವು ಅಶಕ್ತರದಾಗ ನಿಮ್ಮ ಮೇಲೆ ತೋರಿಸುತ್ತಾರೆ ಅಷ್ಟೇ. ಬಾಲ್ಯದಲ್ಲಿ ಮಕ್ಕಳನ್ನ ಮಕ್ಕಳಾಗಿ ಬದುಕಲು ಬಿಡಿ, ಕೊನೆಗಾಲದಲ್ಲಿ ನಿಮ್ಮನ್ನ ಮಕ್ಕಳಂತೆ ಜೋಪಾನ ಮಾಡುತ್ತಾರೆ.
- ಗಂಗಾ ನೀಲಪ್ಪ ಅಮಾತೆಪ್ಪನವರ
ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

