ಕಷ್ಟಪಟ್ಟು ಓದಬೇಡಿ, ಇಷ್ಟಪಟ್ಟು ಓದಿ: ವಿದ್ಯಾರ್ಥಿಗಳಿಗೆ ಡಾ. ಮಾನಸ ಕಿವಿಮಾತು

Upayuktha
0




ಹಾಸನ: "ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದಬೇಕು. ಆಗ ಮಾತ್ರ ಓದಿದ್ದು ಮಸ್ತಕಕ್ಕೆ ತಲುಪಿ, ಸುಲಭವಾಗಿ ಅರ್ಥವಾಗುತ್ತದೆ" ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಕಿವಿಮಾತು ಹೇಳಿದರು.


ಹಾಸನದ ಗಂಧದ ಕೋಠಿ ಆವರಣದಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರಧಾನ) ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ನಾ ಮೆಚ್ಚಿದ ಪುಸ್ತಕ ಓದು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಕೃತಿಗಳನ್ನು ಓದುವ ಅಭಿರುಚಿ ಮೂಡಿಸಲು ಈ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವೇದಿಕೆಯ ಮೇಲೆ ಬಂದು ವಿಮರ್ಶೆ ಮಂಡಿಸುವಾಗ ಆರಂಭದಲ್ಲಿ ಅಳುಕು ಹಾಗೂ ಭಯ ಸಹಜವಾಗಿದ್ದರೂ ಹೆದರಿ ಹಿಂದೆ ಸರಿಯಬಾರದು, ನಿರಂತರ ಪ್ರಯತ್ನವಿಲ್ಲದೆ ಯಾವುದೇ ಯಶಸ್ಸು ಸಿಗುವುದಿಲ್ಲ ಎಂದು ಡಾ. ಮಾನಸ ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಿದರು.


ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರೂ ಹಾಗೂ ಪ್ರಾಧ್ಯಾಪಕರೂ ಆದ ಡಾ. ಕುಶಾಲ್ ಬರಗೂರು ಮಾತನಾಡಿ, ವಿದ್ಯಾರ್ಥಿಗಳು ಹಳೆಯ ಬೇರಿನಂತಿರುವ ಪುಸ್ತಕ ಜ್ಞಾನದೊಂದಿಗೆ, ಆಧುನಿಕ ತಂತ್ರಜ್ಞಾನದ ಮೊಬೈಲ್ ಜ್ಞಾನದ ಚಿಗುರನ್ನು ಸೇರಿಸಿಕೊಂಡು ಸಮಾಜಮುಖಿ ಸಾಧನೆ ಮಾಡಬೇಕು. ಮೊಬೈಲ್ ಚೀಲದಲ್ಲಿರಲಿ, ಪುಸ್ತಕ ಸದಾ ಕೈಯಲ್ಲಿರಲಿ ಎಂದು ಜ್ಞಾನ ಸಂಸ್ಕೃತಿಯ ಮಹತ್ವವನ್ನು ತಿಳಿಸಿದರು.


ಹಿರಿಯ ಸಾಹಿತಿ ಗೊರೂರು ಅನಂತರಾಜು ಅವರು ತಮ್ಮ ವಿದ್ಯಾರ್ಥಿ ದೆಸೆಯ ಓದಿನ ಹವ್ಯಾಸವೇ ತಮ್ಮನ್ನು ಸಾಹಿತಿಯನ್ನಾಗಿ ರೂಪಿಸಿತು ಎಂದು ನೆನಪಿಸಿಕೊಂಡು, ನಿರಂತರ ಓದು ಎಂದಿಗೂ ವ್ಯರ್ಥವಾಗುವುದಿಲ್ಲ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಎಂ. ಶಂಕರ್ ಅವರು ವಿದ್ಯಾರ್ಥಿನಿಯರ ಪ್ರಸ್ತುತಿಯನ್ನು ಶ್ಲಾಘಿಸಿ, 'ಸಿರಿ ಭೂವಲಯ' ಸೇರಿದಂತೆ ಕನ್ನಡದ ಪ್ರಮುಖ ಕೃತಿಗಳನ್ನು ಓದುವಂತೆ ಸಲಹೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಜಿ.ಡಿ. ಅನ್ನಪೂರ್ಣ ಅವರು ಇಂತಹ ವಿದ್ವಾಂಸರ ಅನುಭವದ ಮಾತುಗಳು ನಮ್ಮ ವಿದ್ಯಾರ್ಥಿನಿಯರಿಗೆ ಅತ್ಯಂತ ಉಪಯುಕ್ತವಾಗಿವೆ ಎಂದು ಹರ್ಷ ವ್ಯಕ್ತಪಡಿಸಿದರು.


ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅತ್ಯುತ್ತಮವಾಗಿ ಮಾತನಾಡಿದ ವಿದ್ಯಾರ್ಥಿನಿಯರಾದ ನಿಖಿತ್ ಎಂ.ಹೆಚ್., ಜಾನ್ಸಿ ರಾಣಿ, ಪೂನಂ, ಅಂಜಲಿ, ಗುಣವತಿ, ಸುರಕ್ಷ, ಶೃತಿ, ಮೋಕ್ಷ ಹಾಗೂ ಯಶೋಧ ಅವರಿಗೆ ಪುಸ್ತಕ ಮತ್ತು ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು.


ವೇದಿಕೆಯಲ್ಲಿ ಹಿರಿಯ ಕನ್ನಡ ಉಪನ್ಯಾಸಕ ವೆಂಕಟೇಶ್, ಸಾಹಿತಿಗಳಾದ ಡಾ. ಬರಾಳು ಶಿವರಾಮ, ಸುಂದರೇಶ್ ಡಿ. ಉಡುವಾರೆ, 'ಸಿರಿಕನ್ನಡ' ದಿನಪತ್ರಿಕೆಯ ಸಂಪಾದಕ ಆನಂದ ಪಟೇಲ್ ನೆಲ್ಲಿಗೆರೆ ಹಾಗೂ ಕವಿ ಎನ್.ಎಲ್. ಚನ್ನೇಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಯಶಸ್ವಿನಿ ಪ್ರಾರ್ಥಿಸಿದರೆ, ಅರ್ಥಶಾಸ್ತ್ರ ಉಪನ್ಯಾಸಕಿ ಪ್ರಭಾ ಆರ್. ವಂದಿಸಿದರು. ಇತಿಹಾಸ ಉಪನ್ಯಾಸಕಿ ಮಂಜುಳ ಆರ್. ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top