ಮಕ್ಕಳಲ್ಲಿ ಯಥಾರ್ಥ ಜ್ಞಾನ ಮೂಡಿಸಲು ಡಿಜಿಟಲ್ ಹೆಜ್ಜೆ: 'ಪ್ರಮೇಯ ಶಿಕ್ಷಣಂ' ಜಾಲತಾಣ ಲೋಕಾರ್ಪಣೆ

Upayuktha
0

 



ಬೆಂಗಳೂರು: ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಅಬ್ಬರದ ನಡುವೆ ಮಕ್ಕಳಲ್ಲಿ ನೈತಿಕತೆ, ಸಂಸ್ಕಾರ ಮತ್ತು ಯಥಾರ್ಥ ಜ್ಞಾನವನ್ನು ಬಿತ್ತುವ ಅಪೂರ್ವ ಪ್ರಯತ್ನವೊಂದು ಆರಂಭವಾಗಿದೆ. ಮಕ್ಕಳಲ್ಲಿ ಹಾಗೂ ಯುವಜನತೆಯಲ್ಲಿ ಸನ್ಮಾರ್ಗದ ತಿಳುವಳಿಕೆ ಮೂಡಿಸುವ ಸದುದ್ದೇಶದಿಂದ ರೂಪಿಸಲಾಗಿರುವ 'ಪ್ರಮೇಯ ಶಿಕ್ಷಣಂ' ಜಾಲತಾಣವು ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ.


'ಪ್ರಮೇಯ ಶಿಕ್ಷಣಂ' ಎಂದರೆ ಯಥಾರ್ಥ ಜ್ಞಾನಕ್ಕೆ ವಿಷಯವಾದ ವಸ್ತುಗಳ ಬಗ್ಗೆ ಶಿಕ್ಷಣ ನೀಡುವುದು. ಇಂದಿನ ಪೀಳಿಗೆಗೆ ಕೇವಲ ಅಕ್ಷರ ಜ್ಞಾನವಷ್ಟೇ ಸಾಲದು, ಬದುಕಿಗೆ ದಾರಿದೀಪವಾಗುವ ನೈತಿಕ ಮೌಲ್ಯಗಳೂ ಅತ್ಯಗತ್ಯ ಎಂಬುದನ್ನು ಮನಗಂಡು ಈ ವಿಶಿಷ್ಟ ಜಾಲತಾಣವನ್ನು ವಿನ್ಯಾಸಗೊಳಿಸಲಾಗಿದೆ.


ಮಕ್ಕಳು, ಪೋಷಕರು ಹಾಗೂ ಸಮಾಜದ ಒಳಿತಿಗಾಗಿ ಸಿದ್ಧಗೊಂಡಿರುವ ಈ ಜಾಲತಾಣವನ್ನು ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿ, ಲೋಕಾರ್ಪಣೆಗೊಳಿಸಿದರು. ಜಾಲತಾಣಕ್ಕೆ ಆಶೀರ್ವಚನ ನೀಡಿದ ಶ್ರೀಗಳು, ಇಂದಿನ ಮಕ್ಕಳಿಗೆ ಕಲಿಸಲೇಬೇಕಾದ ಸತ್ಪ್ರಮೇಯಗಳನ್ನು ಈ ತಾಣ ಒಳಗೊಂಡಿದೆ, ಈ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸಿದರು.

ಒಂಬತ್ತು ವಿಭಾಗಗಳ ಮೌಲ್ಯಯುತ ಶಿಕ್ಷಣ: ಏನಿದರ ವಿಶೇಷತೆ?

ಈ ಜಾಲತಾಣದ ಪಠ್ಯಕ್ರಮದಲ್ಲಿ ಮೌಲ್ಯಗಳನ್ನು ಒಟ್ಟು ಒಂಬತ್ತು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಭಾರತದ ಭವ್ಯ ಇತಿಹಾಸ, ಪುರಾಣ ಹಾಗೂ ಆಧುನಿಕ ಜೀವನದ ಸವಾಲುಗಳನ್ನು ಒಳಗೊಂಡ ಕಥೆಗಳ ಮೂಲಕ ಮಕ್ಕಳಿಗೆ ಬೋಧಿಸಲಾಗುತ್ತದೆ. ಆ ಪ್ರಮುಖ ಅಂಶಗಳು ಹೀಗಿವೆ:


ಪುರಾಣೇತಿಹಾಸಗಳ ದಿವ್ಯ ಪಾಠ:

ಮಹಾಭಾರತ: ಯಯಾತಿಯ ಅಹಂಕಾರದ ಪತನ, ಕಷ್ಟಗಳ ನಡುವೆಯೂ ಧೃತಿಗೆಡದ ಸಾವಿತ್ರಿಯ ತಾಳ್ಮೆ ಮತ್ತು ಹೋರಾಟದ ಮನೋಭಾವ, ಕುಟುಂಬಕ್ಕಾಗಿ ಕಷ್ಟ ಸಹಿಸಿ ನಿಲ್ಲುವ ಕುಂತಿ-ದ್ರೌಪದಿಯರ ಆದರ್ಶ ಹಾಗೂ ಎಷ್ಟೇ ಸಂಕಷ್ಟ ಬಂದರೂ ಧರ್ಮ ಬಿಡದ ಪಾಂಡವರ ಕಥೆಗಳ ಮೂಲಕ ‘ಧರ್ಮದ ಕಡೆಯೇ ಪರಮಾತ್ಮನಿರುತ್ತಾನೆ’ ಎಂಬ ನೀತಿಯನ್ನು ಇಲ್ಲಿ ದಾಟಿಸಲಾಗುತ್ತಿದೆ.


ರಾಮಾಯಣ: ಶ್ರೀರಾಮನ ಧೀಮಂತ ವ್ಯಕ್ತಿತ್ವ, ತನ್ನದಲ್ಲದ ರಾಜ್ಯ ಬೇಡವೆನ್ನುವ 'ಅಪರಿಗ್ರಹ' ಗುಣ, ಭರತನ ಭ್ರಾತೃ ವಾತ್ಸಲ್ಯ ಹಾಗೂ ಅತ್ತಿಗೆಯನ್ನು ಕಣ್ಣೆತ್ತಿಯೂ ನೋಡದ ಲಕ್ಷ್ಮಣನ ಧೀಮಂತಿಕೆಯನ್ನು ಕಥೆಗಳ ರೂಪದಲ್ಲಿ ಕಟ್ಟಿಕೊಡಲಾಗಿದೆ.


ಆಧ್ಯಾತ್ಮಿಕ ಮತ್ತು ಯೋಗ ಸೂತ್ರಗಳು: ಉಪನಿಷತ್ತಿನ ಮೌಲ್ಯಯುತ ಕಥೆಗಳ ಜೊತೆಗೆ, ಪತಂಜಲಿ ಋಷಿಮುನಿಗಳ ಯೋಗಸೂತ್ರದಲ್ಲಿ ಉಲ್ಲೇಖಿಸಲಾದ ಯಮ-ನಿಯಮಗಳಾದ ಸತ್ಯ, ಅಹಿಂಸೆ, ಅಪರಿಗ್ರಹ ಹಾಗೂ ಕರುಣೆ, ಕ್ಷಮೆ, ತಾಳ್ಮೆ, ತ್ಯಾಗದಂತಹ ಗುಣಗಳನ್ನು ಉದಾಹರಣೆ ಸಮೇತ ವಿವರಿಸಲಾಗಿದೆ.


ಜಾಗತಿಕ ಮತ್ತು ಸಾಮಾಜಿಕ ಮೌಲ್ಯಗಳು: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬದುಕುವ ನಮಗೆ ಇರಬೇಕಾದ ಸಾಮಾಜಿಕ ಜವಾಬ್ದಾರಿ, ತಂಡದ ಕೆಲಸ (Team Work) ಹಾಗೂ ಇಂದಿನ ಜಾಗತೀಕರಣದ ಯುಗಕ್ಕೆ ತಕ್ಕಂತೆ ಜಗತ್ತಿನ ವೈವಿಧ್ಯತೆಯನ್ನು ಒಪ್ಪಿಕೊಳ್ಳುವ ಮನೋಭಾವ, ಸ್ನೇಹ, ಪ್ರೀತಿ, ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಇಲ್ಲಿ ಬೋಧಿಸಲಾಗುತ್ತದೆ.


'ಫೈಟಿಂಗ್ ಹರ್ಡಲ್ಸ್' (Fighting Hurdles) – ಹೊಸ ಆಯಾಮ: ಇಂದಿನ ಮಕ್ಕಳಿಗೆ ಬಾಹ್ಯ ಸವಾಲುಗಳಿಗಿಂತ ಮನಸ್ಸಿನಲ್ಲಿ ಮೂಡುವ ಭಾವನೆಗಳು ಹಾಗೂ ಗೊಂದಲಗಳೇ ದೊಡ್ಡ ಅಡೆತಡೆಗಳಾಗಿವೆ. ಜೀವನದ ಇಂತಹ ಅಡೆತಡೆಗಳ ವಿರುದ್ಧ ಹೇಗೆ ಹೋರಾಡಬೇಕು, ಸವಾಲುಗಳನ್ನು ಎದುರಿಸಿ ಹೇಗೆ ಸರಿಯಾದ ದಾರಿಯಲ್ಲಿ ನಡೆಯಬೇಕು ಎಂಬುದನ್ನು ಕಲಿಸಲು ಈ ವಿಶೇಷ ವಿಭಾಗವನ್ನು ಸೇರಿಸಲಾಗಿದೆ.


ಸಂಬಂಧಗಳ ಗೌರವ ಮತ್ತು ಭಗವದ್ಗೀತೆ: ತಂದೆ-ತಾಯಿ, ಹಿರಿಯರು, ಗುರುಗಳು ಮತ್ತು ದೀನದಲಿತರನ್ನು ಗೌರವಿಸುವ ಪ್ರಾಮುಖ್ಯತೆಯನ್ನು ತಿಳಿಸುವುದರ ಜೊತೆಗೆ, ಭಗವದ್ಗೀತೆಯ ಕರ್ಮಸಿದ್ಧಾಂತ, ನಿಷ್ಕಾಮ ಕರ್ಮ ಹಾಗೂ ಸ್ಥಿತಪ್ರಜ್ಞತೆಯ ಆಳವಾದ ಬೋಧನೆಯನ್ನು ಸರಳ ಕಥೆಗಳ ಮೂಲಕ ನೀಡಲಾಗಿದೆ.


ಮನೋವೈಜ್ಞಾನಿಕ ಸಂವಾದ ಶೈಲಿ:

'ಪ್ರಮೇಯ ಶಿಕ್ಷಣಂ' ಜಾಲತಾಣದ ಅತ್ಯಂತ ಆಕರ್ಷಕ ವಿಷಯವೆಂದರೆ, ಇಲ್ಲಿನ ಕಥೆಗಳು ಕೇವಲ ಏಕಮುಖವಾಗಿಲ್ಲ. ಇವೆಲ್ಲವೂ ಸಂವಾದ ರೂಪದಲ್ಲಿದ್ದು, ಕಥೆಯ ಮಧ್ಯೆ ಮಕ್ಕಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಮೌಲ್ಯಗಳನ್ನು ಪಾಲಿಸದಿದ್ದರೆ ಅಥವಾ ಇತರರ ಭಾವನೆಗಳಿಗೆ ಬೆಲೆ ಕೊಡದಿದ್ದರೆ ಸಮಾಜದಲ್ಲಿ ಏನಾಗಬಹುದು ಎಂಬುದನ್ನು ಮಕ್ಕಳು ತಾವಾಗಿಯೇ ಯೋಚಿಸಿ, ಪಾತ್ರಗಳನ್ನು ವಿಶ್ಲೇಷಿಸುವಂತೆ ಮನೋವೈಜ್ಞಾನಿಕವಾಗಿ ಈ ಸಂವಾದಗಳನ್ನು ರೂಪಿಸಲಾಗಿದೆ.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಶಿಕ್ಷಣತಜ್ಞ ಶ್ರೀ ರೋಹಿತ್ ಚಕ್ರತೀರ್ಥ ಮಾತನಾಡಿ, "ಮೌಲ್ಯಯುತ ಶಿಕ್ಷಣವು ಕೇವಲ ಬೋಧನೆಯಾಗುಳಿಯದೆ, ನಮ್ಮ ನಡವಳಿಕೆಯ ಮೂಲಕ ಮಕ್ಕಳಿಗೆ ಮಾದರಿಯಾಗುವಂತಹ ವಾತಾವರಣ ಸೃಷ್ಟಿಯಾಗಬೇಕು. ನಾವೂ ಮೌಲ್ಯಗಳನ್ನು ಅನುಸರಿಸಿ ಬದುಕಬೇಕು, ಮಕ್ಕಳಿಗೂ ಕಲಿಸಬೇಕು" ಎಂದರು.


'ಪ್ರಮೇಯ ಶಿಕ್ಷಣಂ' ಸಲಹಾ ಮಂಡಳಿಯ ಪಂಡಿತ ಪೂಜ್ಯ ಜಿ.ಪಿ. ನಾಗರಾಜಾಚಾರ್ಯರು ಮಾತನಾಡಿ, "ಉತ್ತಮ ಮೌಲ್ಯಗಳು ಮಗು ಈ ಪ್ರಪಂಚಕ್ಕೆ ಬರುವ ಮುನ್ನವೇ, ಅಂದರೆ ತಾಯಿಯ ಗರ್ಭದಿಂದಲೇ ಅಭ್ಯಾಸವಾಗಬೇಕು. ಅದಕ್ಕಾಗಿ ಪೋಷಕರು ಮೊದಲು ಈ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು" ಎಂದು ಪೋಷಕರ ಜವಾಬ್ದಾರಿಯನ್ನು ನೆನಪಿಸಿದರು.


ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಮೃದುಲಾ ವಿಜಯೀಂದ್ರ ಉಪಸ್ಥಿತರಿದ್ದು, ಜಾಲತಾಣದ ಮೂಲ ಉದ್ದೇಶ ಹಾಗೂ ಭವಿಷ್ಯದ ಗುರಿಗಳನ್ನು ಸಭೆಯ ಮುಂದಿಟ್ಟರು. ಜಾಲತಾಣವನ್ನು ಸುಂದರವಾಗಿ ವಿನ್ಯಾಸಗೊಳಿಸಿಕೊಟ್ಟ ಶ್ರೀ ಸಂದೀಪ್ ಹೆಗಡೆ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದ ಪ್ರಾರ್ಥನೆ ಹಾಗೂ ನಿರೂಪಣೆಯನ್ನು ಪದ್ಮಶ್ರೀ ಮೂರ್ತಿ ನಿರ್ವಹಿಸಿದರೆ, ರಾಘವೇಂದ್ರ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಜ್ಯೋತಿ ವಂದನಾರ್ಪಣೆ ಮಾಡಿದರು.


ವರದಿ: ಮಾಧುರಿ ದೇಶಪಾಂಡೆ, ಬೆಂಗಳೂರು


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top