ಅಡುಗೆ ಮಾಡುವುದು ನನಗೆ ನಿಜವಾದ ಸಂತೋಷದ ಚಿಕಿತ್ಸೆಯಾಗಿದೆ. ಅಡುಗೆ ಮಾಡುವುದೆಂದರೆ ನನಗೆ ಎಂದಿಗೂ ಬೇಸರವಾಗುವುದಿಲ್ಲ. ನಾನು ಅಡುಗೆ ಮಾಡುವಾಗ ಶೇ.100ರಷ್ಟು ಮನಸ್ಸು ಮತ್ತು ಶ್ರಮವನ್ನು ಅದಕ್ಕೆ ಮೀಸಲಿಡುತ್ತೇನೆ. ಕೆಲವೊಮ್ಮೆ ಅರ್ಧ ದಿನವನ್ನೇ ಅಡುಗೆಯಲ್ಲಿ ಕಳೆಯುತ್ತೇನೆ. ಅಡುಗೆ ನಮಗೆ ತಾಳ್ಮೆ, ಸ್ವಚ್ಛತೆ ಮತ್ತು ಸೃಜನಶೀಲತೆಯನ್ನು ಕಲಿಸುತ್ತದೆ. ಅಡುಗೆ ಮಾಡುವಾಗ ಹೊಸ ಹೊಸ ಆಲೋಚನೆಗಳು ಬರುತ್ತವೆ. ದಿನದಿಂದ ದಿನಕ್ಕೆ ನಮ್ಮ ಆಸಕ್ತಿ ಹೆಚ್ಚುತ್ತಾ, ಹೊಸ ಹೊಸ ಪ್ರಯೋಗಗಳನ್ನು ಮಾಡುವ ಉತ್ಸಾಹವೂ ಬೆಳೆಯುತ್ತದೆ. ಹೊರಗಿನ ಆಹಾರಕ್ಕಿಂತ ಮನೆಯಲ್ಲೇ ಮಾಡಿದ ಆಹಾರ ಉತ್ತಮ, ತಾಜಾ ಮತ್ತು ಸುರಕ್ಷಿತ. ಏಕೆಂದರೆ ಅದು ನಮ್ಮವರಿಗಾಗಿ ಪ್ರೀತಿಯಿಂದ ತಯಾರಿಸಲ್ಪಟ್ಟಿರುತ್ತದೆ. ಅನೇಕ ಜನರು ಅಡುಗೆಯನ್ನು ತಮ್ಮ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ, ಏಕೆಂದರೆ ಅದು ಅವರಿಗೆ ಸಂತೋಷ ಮತ್ತು ನೆಮ್ಮದಿಯನ್ನು ನೀಡುತ್ತದೆ.
ಅಡುಗೆ ಕಣ್ಣಿಗೆ ಕಾಣುವ ಚಿಕಿತ್ಸೆಯಂತಿರುವುದರಿಂದ ನನಗೂ ಅಡುಗೆ ತುಂಬಾ ಇಷ್ಟ. ನನಗೆ ಈ ಆಸಕ್ತಿ ಹೇಗೆ ಬೆಳೆಯಿತು ಎಂಬುದು ನನಗೂ ಗೊತ್ತಿಲ್ಲ. ಎಲ್ಲರೂ ಒಟ್ಟಾಗಿ ಕೂತು ಊಟ ಮಾಡುವುದನ್ನು ನಾನು ತುಂಬಾ ಇಷ್ಟಪಡುತ್ತೇನೆ. ಮನೆಯಲ್ಲೇ ತಯಾರಿಸಿದ ತಿಂಡಿಗಳು ನನಗೆ ಹೆಚ್ಚು ಇಷ್ಟ. ನನ್ನ ಅಡುಗೆಗಿಂತಲೂ ನನ್ನ ತಂದೆಯ ಅಡುಗೆ ನನಗೆ ಅತ್ಯಂತ ಪ್ರಿಯ. ಏಕೆಂದರೆ ಅವರು ವೃತ್ತಿಯಿಂದ ಒಬ್ಬ ಬಾಣಸಿಗರು. ಸಿಹಿ ಪದಾರ್ಥಗಳನ್ನು ಮಾಡುವುದರಲ್ಲಿ ಅವರು ಪರಿಣತರು. ಅವರ ಕೈಯಲ್ಲಿ ತಯಾರಾಗುವ ಮನೆಯ ಹೋಳಿಗೆ ನನಗೆ ತುಂಬಾ ಇಷ್ಟ. ಅನೇಕ ಕಾರ್ಯಕ್ರಮಗಳಲ್ಲಿ ಹೋಳಿಗೆ ಸಾಮಾನ್ಯವಾಗಿ ಇರುತ್ತದೆ. ಆದರೆ ಅದು ನನ್ನ ತಂದೆಯ ಕೈಯಿಂದ ತಯಾರಾದರೆ ಮಾತ್ರ ನಾನು ಸಂತೋಷದಿಂದ ತಿನ್ನುತ್ತೇನೆ.
ನನ್ನ ತಂದೆ ಏಳನೇ ತರಗತಿಯಲ್ಲೇ ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತು. ಕುಟುಂಬದ ಆರ್ಥಿಕ ಪರಿಸ್ಥಿತಿ ತುಂಬಾ ಕಷ್ಟಕರವಾಗಿದ್ದರಿಂದ ಅವರು ಕೆಲಸದ ಹುಡುಕಾಟಕ್ಕೆ ಹೊರಟರು. ಮೊದಲಿಗೆ ಅವರಿಗೆ ತರಕಾರಿ ಕತ್ತರಿಸುವ ಕೆಲಸ ಸಿಕ್ಕಿತು. ಅದೇ ಅವರ ಅಡುಗೆ ಜೀವನದ ಮೊದಲ ಹೆಜ್ಜೆಯಾಯಿತು. ನಂತರ ಅವರ ಜೀವನದಲ್ಲಿ ಬದಲಾವಣೆ ಕಂಡುಬಂತು. ಅವರ ಸಹೋದ್ಯೋಗಿ ಹಾಗೂ ಮೊದಲ ಗುರು ಅವರು ಅಡುಗೆ ಮಾಡುವ ಅವಕಾಶವನ್ನು ನೀಡಿದರು. ಅಲ್ಲಿಂದ ಆರಂಭವಾದ ಅವರ ಪಯಣ ಇಂದಿಗೂ ಯಶಸ್ವಿಯಾಗಿ ಮುಂದುವರಿದಿದೆ.
ರಜೆ ದಿನಗಳಲ್ಲಿ ಅಥವಾ ಭಾನುವಾರಗಳಲ್ಲಿ ನಮ್ಮ ಮನೆಯ ಬಾಣಸಿಗ ನಾನು. ಬೆಳಿಗ್ಗೆ 11 ಗಂಟೆಯೊಳಗೆ ಅಡುಗೆಯನ್ನು ಮುಗಿಸಲು ಪ್ರಯತ್ನಿಸುತ್ತೇನೆ. ನನ್ನ ಅಡುಗೆ ಹೋಟೆಲ್‌ನಷ್ಟು ರುಚಿಯಾಗದೇ ಇರಬಹುದು. ಆದರೆ ನನ್ನ ಕೈಲಾದಷ್ಟು ಉತ್ತಮವಾಗಿ ಮಾಡಲು ಪ್ರಯತ್ನಿಸುತ್ತೇನೆ. ಸಂಜೆ ತಿಂಡಿಗಾಗಿ ಯೂಟ್ಯೂಬ್ ನೋಡಿ ಹೊಸ ಹೊಸ ಅಡುಗೆಗಳನ್ನು ಮಾಡುತ್ತೇನೆ. ನನ್ನ ಚಿಕ್ಕಮ್ಮನಿಗೆ ನನ್ನ ಅಡುಗೆ ತುಂಬಾ ಇಷ್ಟ. ನಾನು ಅವರ ಮನೆಗೆ ಹೋದರೆ ಆ ದಿನ ಅಡುಗೆ ಮನೆಯ ಜವಾಬ್ದಾರಿ ನನ್ನದೇ. ನನಗೆ ಅಡುಗೆ ಒಂದು ಹವ್ಯಾಸ ಮಾತ್ರ. ಅದು ನನ್ನ ಮನೆಯ ಮಟ್ಟಿಗೆ ಮಾತ್ರ ಸೀಮಿತವಾಗಿದೆ. ಇನ್ನೊಂದು ವಿಶೇಷವೆಂದರೆ, ನಾನು ಅಡುಗೆ ಮಾಡುವಾಗ ಸಂಗೀತ ಕೇಳಲೇಬೇಕು. ಸಂಗೀತವಿಲ್ಲದೆ ಅಡುಗೆ ಮಾಡಲು ನನಗೆ ಮನಸ್ಸೇ ಬರುವುದಿಲ್ಲ.
ಅಡುಗೆ ಒಂದು ವಿಶೇಷ ಕಲೆ. ಎಲ್ಲಾ ಪದಾರ್ಥಗಳು ಸರಿಯಾದ ಪ್ರಮಾಣದಲ್ಲಿ ಸೇರಿಕೊಂಡಾಗ ಮಾತ್ರ ಒಂದು ತಿನಿಸು ರುಚಿಯಾಗುತ್ತದೆ. ಅಡುಗೆ ಕೂಡ ಒಂದು ಕೌಶಲ್ಯ. ಒಂದು ಒಳ್ಳೆಯ ಚಹಾ ತಯಾರಿಸುವುದೂ ಒಂದು ಕಲೆ. ಅಡುಗೆ ಕಲಿತರೆ ನಮ್ಮನ್ನು ನಾವು ಮತ್ತು ನಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವುದನ್ನು ಕಲಿಯುತ್ತೇವೆ. ಆಸಕ್ತಿಯಿಂದ ಮಾಡಿದ ಅಡುಗೆ ಒಂದು ಸುಂದರ ಕಲಾಕೃತಿಯಂತಿರುತ್ತದೆ. ಅಡುಗೆಯ ಮೇಲಿನ ಆಸಕ್ತಿಯನ್ನು ಮುಂದುವರಿಸಿದರೆ ಅದು ಉತ್ತಮ ವೃತ್ತಿಯಾಗಿಯೂ ರೂಪುಗೊಳ್ಳಬಹುದು. ಪ್ರತಿಯೊಬ್ಬರೂ ಬದುಕಿನಲ್ಲಿ ಕನಿಷ್ಠ ಮಟ್ಟದ ಅಡುಗೆಯನ್ನು ಕಲಿತಿರಬೇಕು. ಏಕೆಂದರೆ ಅದರ ಪ್ರಯೋಜನ ಕೊನೆಗೆ ನಮಗೇ ಸಿಗುತ್ತದೆ.
- ಅಂಜಲಿ ಮುಂಡಾಜೆ
ತ್ರತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ
ಎಸ್ ಡಿ ಯಂ ಕಾಲೇಜು ಉಜಿರೆ



