ಮಂಗಳೂರು: ಅಂತಾರಾಷ್ಟ್ರೀಯ ಆರ್ಯಭಟ ಹಾಗೂ ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ, ಸಾಹಿತಿ ಮತ್ತು ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಬರೆದ ತುಳು- ಕನ್ನಡ ಭಕ್ತಿಗೀತೆಗಳ ಸಂಕಲನ 'ನೀರಾಜನ' ದೈವ- ದೇವರ ಭಕ್ತಿ ಸುಗಿಪು ಇದೇ 2026 ಆಗಸ್ಟ್ 3 ರಂದು ಸೋಮವಾರ ಸಂಜೆ ಗಂಟೆ 5:30ಕ್ಕೆ ನಗರದಲ್ಲಿ ಬಿಡುಗಡೆಗೊಳ್ಳಲಿದೆ.
ಕರಾವಳಿ ಕರ್ನಾಟಕದ ಪ್ರಪ್ರಥಮ ತುಳು ವಾರ್ತಾ ವಾಹಿನಿ ನಮ್ಮ ಕುಡ್ಲದ ದಿ|ಬಿ.ಪಿ. ಕರ್ಕೆರ ಮತ್ತು ಲಕ್ಷ್ಮೀ ಕರ್ಕೇರ ಸಭಾಂಗಣದಲ್ಲಿ ನಡೆಯುವ ಸಮಾರಂಭವನ್ನು ಪಾಲೆಮಾರ್ ಸಮೂಹ ಸಂಸ್ಥೆಗಳ ಚೇರ್ಮನ್, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಉದ್ಘಾಟಿಸುವರು. ಅಹಮದ್ ನಗರದ ಉದ್ಯಮಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ 'ನೀರಾಜನ' ಭಕ್ತಿ ಸಂಕಲನವನ್ನು ಬಿಡುಗಡೆಗೊಳಿಸುವರು. ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿಕಟ ಪೂರ್ವ ಯೋಜನಾ ನಿರ್ದೇಶಕ ಡಾ. ಬಿ. ಶಿವರಾಮ ಶೆಟ್ಟಿ ಕೃತಿ ಪರಿಚಯ ಮಾಡುವರು.
ಪುಸ್ತಕವನ್ನು ಪ್ರಕಟಿಸಿದ ಆಕೃತಿ ಆಶಯ ಪಬ್ಲಿಕೇಷನ್ಸ್ ನ ಕಲ್ಲೂರು ನಾಗೇಶ್, ಕೃತಿಕರ್ತ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
'ಪುರಾಣ ಲೋಕ'ಕ್ಕೆ ಚಾಲನೆ:
ಸಮಾರಂಭದಲ್ಲಿ 'ನಮ್ಮ ಕುಡ್ಲ ವಾಹಿನಿ'ಯ ವರ್ಷಾಕಾಲದ ವಿಶೇಷ ಕಾರ್ಯಕ್ರಮ 'ಪುರಾಣ ಲೋಕ' ಪುರಾಣ ಕಾವ್ಯಗಳ ವಾಚನ - ಪ್ರವಚನ ಸಾಪ್ತಾಹಿಕ ಪ್ರಸಾರಕ್ಕೆ ಕೃಷ್ಣ ಜೆ.ಪಾಲೆಮಾರ್ ವಿಧ್ಯುಕ್ತ ಚಾಲನೆ ನೀಡುವರು. ಸಂತ ಕವಿ ಕನಕದಾಸರ 'ನಳ ಚರಿತ್ರೆ' ಕಾವ್ಯದ ತುಳು- ಕನ್ನಡ ಆವೃತ್ತಿಗಳನ್ನು ಯಕ್ಷಗಾನ ಭಾಗವತ ದೇವಿಪ್ರಸಾದ ಆಳ್ವ ತಲಪಾಡಿ ಮತ್ತು ಹರಿಕಥಾ ವಿದುಷಿ ಮಂಜುಳಾ ಜಿ. ರಾವ್ ಇರಾ ವಾಚಿಸಲಿದ್ದು ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ನೀಡುವರು.
ಮುಂದಿನ ವಾರದಿಂದ ಪ್ರತಿ ಭಾನುವಾರ ಬೆಳಿಗ್ಗೆ ನಮ್ಮ ಕುಡ್ಲದಲ್ಲಿ 'ಪುರಾಣ ಲೋಕ' ಸರಣಿಯ ಅರ್ಧ ತಾಸಿನ ಸಂಚಿಕೆಗಳು ಅನುಕ್ರಮವಾಗಿ ಪ್ರಸಾರವಾಗುವುದಲ್ಲದೆ ವಾರದ ನಡುವೆ ಸಾಂದರ್ಭಿಕ ಮರುಪ್ರಸಾರ ಕಾಣಲಿದೆ ಎಂದು ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ತಿಳಿಸಿದ್ದಾರೆ. ಈ ಎರಡೂ ಕಾರ್ಯಕ್ರಮಗಳ ಲೋಕಾರ್ಪಣೆಯ ವಿಶೇಷ ಕಾರ್ಯಕ್ರಮ ಆ.3ರಂದು ಸಂಜೆ ಗಂ.5.30ರಿಂದ 'ನಮ್ಮ ಕುಡ್ಲ'ದಲ್ಲಿ ನೇರ ಪ್ರಸಾರವಾಗುವುದೆಂದು ವಾಹಿನಿಯ ಪ್ರಕಟಣೆ ತಿಳಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


