ಭಗವಾನ್ ಮಹಾವೀರ ಜೈನ್ ಕಾಲೇಜು: ವ್ಯಾಸಪೂರ್ಣಿಮೆ ಆಚರಣೆ

Upayuktha
0




ಬೆಂಗಳೂರು: ಭಗವಾನ್ ಮಹಾವೀರ ಜೈನ್ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ವ್ಯಾಸಪೂರ್ಣಿಮೆ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಯಿತು. 


ಖ್ಯಾತ ವಾಗ್ಮಿ, ಸಂಸ್ಕೃತ ಪ್ರವಚನಕಾರ ಹಾಗೂ ತಂತ್ರಜ್ಞಾನ ಕ್ಷೇತ್ರದ ಸಾಧಕ ಡಾ. ನಾಗರಾಜ್ ಮುಖ್ಯ ಅತಿಥಿಯಾಗಿ ಮಾತನಾಡಿ ವೇದವ್ಯಾಸರ ಜೀವನ, ಅವರ ಉಪದೇಶಗಳ ಮಹತ್ವ, ಗುರುಪೂರ್ಣಿಮೆಯ ಆಚರಣೆಯ ಹಿನ್ನೆಲೆ ಹಾಗೂ ಭಾರತೀಯ ಜ್ಞಾನಪರಂಪರೆಯ ವೈಭವವನ್ನು ಮನೋಜ್ಞವಾಗಿ ವಿವರಿಸಿದರು. ವ್ಯಾಸರ ಸಂದೇಶಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಹೇಗೆ ದಾರಿದೀಪವಾಗುತ್ತವೆ ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೈನ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ  ರವೀಂದ್ರ ಭಂಡಾರಿ ಮಾತನಾಡಿ ಇಂದಿನ ಸಮಾಜದಲ್ಲಿ ನಿಧಾನವಾಗಿ ಮರೆಯಾಗುತ್ತಿರುವ ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ಒತ್ತಿಹೇಳಿದರು. ವಿಶೇಷವಾಗಿ ಯುವಜನತೆ ಹಾಗೂ ವಿದ್ಯಾರ್ಥಿಗಳು ಗುರುಗಳು, ಹಿರಿಯರು ಮತ್ತು ಮಾರ್ಗದರ್ಶಕರ ಸಲಹೆ-ಸಹಕಾರವನ್ನು ಜೀವನದ ಪ್ರತಿಯೊಂದು ಹಂತದಲ್ಲೂ ಅಳವಡಿಸಿಕೊಳ್ಳಬೇಕಾದ ಅಗತ್ಯವನ್ನು ಸುಂದರ ಉದಾಹರಣೆಗಳ ಮೂಲಕ ವಿವರಿಸಿ ಸಭಿಕರನ್ನು ಚಿಂತನೆಗೆ ಹಚ್ಚಿದರು.


ವಿದ್ಯಾರ್ಥಿಗಳು ಸಂಗೀತ, ನೃತ್ಯ ಹಾಗೂ ಭಾಷಣಗಳ ಮೂಲಕ ವೇದವ್ಯಾಸರ ವ್ಯಕ್ತಿತ್ವ, ಗುರುಗಳ ಮಹಿಮೆ ಮತ್ತು ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಅಭಿವ್ಯಕ್ತಿ ಪಡಿಸಿದರು. 


ಸಂಸ್ಕೃತ ವಿಭಾಗದ ಅಧ್ಯಕ್ಷ ಡಾ. ಸುನಿಲ್, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಅತಿಥಿಗಳಾದ ವಿಜಯೇಂದ್ರ ಹಾಗೂ ಗುರುರಾಜ್ ಚನ್ನಗಿರಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.


ಸಹ-ಸಂಯೋಜಕ ಡಾ. ಹೇಮಂತ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಶಾಂತಿಮಂತ್ರದ ಪಠಣದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top