ಇದು ಸುಮಾರು ನಾಲ್ಕು ದಶಕಗಳ ಹಿಂದೆ ನಾನು ಮಂಗಳೂರು ವಿ.ವಿ.ಮಂಗಳಗಂಗೇೂತ್ರಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಆದ ಸ್ವಾನುಭವ ಪ್ರಸಂಗ. ಆ ಸಂದರ್ಭದಲ್ಲಿ ನಾನು ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿದ್ದೆ. ಎಂಬಿಎ ವಿದ್ಯಾರ್ಥಿಯಾಗಿದ್ದ ನನ್ನ ಗೆಳೆಯನೊಬ್ಬ ಅಧ್ಯಕ್ಷನಾಗಿದ್ದ. ನಾನು ಮೆಾದಲಿನಿಂದಲು ಮುಷ್ಕರ, ಪ್ರತಿಭಟನೆ, ಧರಣಿಗಳಿಂದ ಸ್ವಲ್ಪ ದೂರ ನಿಲ್ಲುವ ಜಾಯಮಾನದ ವ್ಯಕ್ತಿ. ಆದರೆ ನಮ್ಮ ಅಧ್ಯಕ್ಷ ಈ ಎಲ್ಲದರಲ್ಲೂ ಸ್ವಲ್ಪ ಮುಂದೆ. ಒಂದು ಸಂದರ್ಭ ಬಂದಿತು, ನಮ್ಮ ವಿದ್ಯಾರ್ಥಿ ಸಂಘದ ಅಧ್ಯಕ್ಷರು ವಿದ್ಯಾರ್ಥಿ ಮುಷ್ಕರಕ್ಕೆ ಕರೆಕೊಟ್ಟರು.
ಈಗ ಯೋಚಿಸಿದರೆ ಮುಷ್ಕರದ ಕಾರಣ ಕ್ಲುಲಕವಾಗಿ ಕಾಣುತ್ತದೆ. ಆದರೆ ಆಗ ನಾವು ಬರೋಬ್ಬರಿ 32 ದಿನಗಳ ಕಾಲ ಮುಷ್ಕರ ನಡೆಸಿದ್ದೆವು. ಇಷ್ಟು ದೀರ್ಘ ಕಾಲದ ಮುಷ್ಕರ ಇಡೀ ವಿ.ವಿ.ಇತಿಹಾಸದಲ್ಲೇ ಯಾರು ಮುರಿಯಲಾರದ ದಾಖಲೆ ಎಂದೇ ಹೇಳಬಹುದು. ಅದರಲ್ಲೂ ಬರೇ ಸ್ನಾತಕೋತ್ತರ ಅಧ್ಯಯನಕ್ಕಾಗಿಯೇ ಬೇರೆ ಬೇರೆ ಪ್ರದೇಶಗಳಿಂದ ವಿದ್ಯಾರ್ಥಿಗಳನ್ನು ವಿವಿಯ ಆವರಣದಲ್ಲಿ ಮುಷ್ಕರದ ನೆಪದಲ್ಲಿ ಕಟ್ಟಿ ಹಾಕುವುದು ಸುಲಭದ ಕೆಲಸವಾಗಿರಲಿಲ್ಲ. ಎಲ್ಲಾ ಸ್ನಾತಕೋತ್ತರ ವಿದ್ಯಾರ್ಥಿಗಳ ಭವಿಷ್ಯ ಅಡಗಿರುವುದು ಪ್ರೊಫೆಸರ್ಸಗಳ ಕೈಯೊಳಗೆ ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಮುಷ್ಕರಕ್ಕೆ ಎಳೆದು ತರುವುದು ಸುಲಭವಾಗಿರಲಿಲ್ಲ.
ಮುಷ್ಕರದ ಪ್ರಮುಖ ಬೇಡಿಕೆಯ ಬಗ್ಗೆ ಹೇಳಬೇಕೆಂದರೆ, "ನಮಗೆ ಪಠ್ಯೇತರ ಚಟುವಟಿಕೆಗಳ ಸಂಘ ಬೇಡ ವಿದ್ಯಾರ್ಥಿ ಸಂಘ ಬೇಕು" ಇಷ್ಟೇ ನಮ್ಮ ಬೇಡಿಕೆ. ಈ ಬೇಡಿಕೆಯನ್ನು ಒಪ್ಪಲು ಅಂದಿನ ಕುಲಪತಿಗಳು ಸಿದ್ಧರಿಲ್ಲ. ಆದರೂ ನಾವು ನಮ್ಮ ಬೇಡಿಕೆ ಸಡಿಲಿಸಲೇ ಇಲ್ಲ; ಈ ಸಂದರ್ಭದಲ್ಲಿ ನಮ್ಮೆಲ್ಲರನ್ನು ಮಂಗಳೂರು ನಗರ ಪೊಲೀಸ್ ಠಾಣೆಯವರು ಬಂಧಿಸಿ ಕರೆದುಕೊಂಡು ಹೇೂಗಿ ನಮ್ಮ ಹೆಸರು ಕೇಳಿ ಪಡೆದುಕೊಂಡು, ಗದರಿದ್ದು ನೆನಪಿದೆ. ಆ ಸಂದರ್ಭದಲ್ಲಿ ನಮ್ಮ ಹುಡುಗಾಟದ ಬುದ್ಧಿಯಿಂದ ನಾವು ಯಾವ ವಿದ್ಯಾರ್ಥಿಗಳು ಮುಷ್ಕರಕ್ಕೆ ಬರಲಿಲ್ಲ ಅವರ ಹೆಸರನ್ನು ಠಾಣೆಯಲ್ಲಿ ನಮೂದಿಸಿ ಬಂದಿದ್ದು ಯೋಚಿಸಿದರೆ ಇಂದಿಗೂ ನಗು ಬರುತ್ತದೆ.
ಈ ನಮ್ಮ ಸುದೀರ್ಘ ಕಾಲದ ಧರಣಿಯ ಸುದ್ದಿ ಅಂದಿನ ಮುಖ್ಯ ಮಂತ್ರಿಗಳಾದ ರಾಮಕೃಷ್ಣ ಹೆಗ್ಗಡೆ ಅವರ ಕಿವಿಗೂ ಬಿತ್ತು. ಅವರು ಮಂಗಳೂರಿಗೆ ಬಂದ ಸಂದರ್ಭದಲ್ಲಿ ನಾವು ಮುಷ್ಕರ ನಡೆಸುತ್ತಿದ್ದ ಕೊಣಾಜೆಗು ಬಂದರು.
ಅವರು ಈ ಸಂದರ್ಭದಲ್ಲಿ ನಮಗೆ ಹೇಳಿದ ಮಾತು ಇನ್ನೂ ನನಗೆ ನೆನಪಿದೆ. "ವಿದ್ಯಾರ್ಥಿಗಳು ಮುಷ್ಕರ ಮಾಡಬಾರದು ಅನ್ನುವ ವ್ಯಕ್ತಿಗಳಲ್ಲಿ ನಾನು ಕೊನೆಯ ಮನುಷ್ಯ ಆದರೆ ಮುಷ್ಕರ ಮಾಡುವ ಕಾರಣಕ್ಕೊಂದು ತೂಕ ಬೇಕು, ಘನತೆ ಬೇಕು.." ವಿ.ಸಿ.ಯವರನ್ನು ಅಲ್ಲಿಯೇ ಕರೆದು ವಿದ್ಯಾರ್ಥಿಗಳಿಗೆ ಹೇಗೂ ಬುದ್ಧಿ ಕಡಿಮೆ ಇದೆ. ನಿಮಗೂ ಕಡಿಮೆಯಾಗ ಬಾರದು, ತಕ್ಷಣವೇ ಇವರ ಬೇಡಿಕೆ ಈಡೇರಿಸಿ ಎಂದು ಸೂಚನೆ ನೀಡಿದರು.
ಅಂದು ನಾವು ಮಾಡಿದ ಮುಷ್ಕರವನ್ನು ಯೋಚಿಸಿದಾಗ ಇಂದಿಗೂ ನಗು ಬರುತ್ತದೆ. ಅದು ಅಂದಿನ ವಿದ್ಯಾರ್ಥಿಗಳ ಮುಗ್ಧ ಮನಸ್ಸಿನ ಹೇೂರಾಟ. ಅದರಲ್ಲಿ ಯಾವುದೇ ರಾಜಕೀಯವಾಗಲಿ, ಜಾತಿಯಾಗಲಿ, ಧಮ೯ದ ಲೇಪನವಾಗಲಿ ಇರಲೇ ಇಲ್ಲ ಅನ್ನುವುದು ನಮಗೆ ನೀಡಿದ ಸಂತೃಪ್ತಿಯ ಅನುಭವ.
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


