ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ದೇಶದ ಮೊದಲ ಐಬಿಎಂ ಎಐ ಲ್ಯಾಬ್ ಲೋಕರ್ಪಾಣೆ

Upayuktha
0


ಮೂಡುಬಿದಿರೆ: ಐಬಿಎಂ ಸಾಫ್ಟ್ವೇರ್ ಲ್ಯಾಬ್ಸ್ ಸಹಯೋಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಸ್ಥಾಪಿಸಲಾದ, ದೇಶದ ಮೊದಲ ಐಬಿಎಂ ಎಐ ಲ್ಯಾಬ್‌ನ್ನು ಬುಧವಾರ ಉದ್ಘಾಟಿಸಲಾಯಿತು.

ಉದ್ಯಮ–ಶೈಕ್ಷಣಿಕ ಸಹಯೋಗವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳ ನೇರ ಪ್ರಾಯೋಗಿಕ ಅನುಭವ ಕಲ್ಪಿಸಲು ಈ ಲ್ಯಾಬ್ ಸ್ಥಾಪಿಸಲಾಗಿದೆ. ಐಬಿಎಂ ವಾಟ್ಸನ್‌ಎಕ್ಸ್.ಎಐ, ವಾಟ್ಸನ್‌ಎಕ್ಸ್ ಆರ್ಕೆಸ್ಟ್ರೇಟ್ ಹಾಗೂ ಎಐ ಆಧಾರಿತ ಡೆವಲಪರ್ ಉಪಕರಣಗಳಿಂದ ಸಜ್ಜುಗೊಂಡಿರುವ ಈ ಲ್ಯಾಬ್, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಎಂಟರ್‌ಪ್ರೈಸ್ ಎಐ ವೇದಿಕೆಗಳು ಹಾಗೂ ನೈಜ ಕೈಗಾರಿಕಾ ಅನ್ವಯಿಕೆಗಳ ಕುರಿತು ನೇರ ಅನುಭವ ನೀಡಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಐಬಿಎಂ ಇಂಡಿಯಾದ ವಾಟ್ಸನ್‌ಎಕ್ಸ್ ಎಐ ವಿಭಾಗದ ಕಾರ್ಯಕ್ರಮ ನಿರ್ದೇಶಕ ಹಾಗೂ ಮುಖ್ಯಸ್ಥ ರತೀಶ್ ಮುರಳೀಧರನ್,  ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ದೇಶದ ಮೊದಲ ಐಬಿಎಂ ಎಐ ಲ್ಯಾಬ್ ಸ್ಥಾಪಿಸಿದ ಎಂಜಿನಿಯರಿಂಗ್ ಕಾಲೇಜಾಗಿ ಹೊಸ ಮೈಲಿಗಲ್ಲು ನಿರ್ಮಿಸಿದೆ.   ಎಐ ತಂತ್ರಜ್ಞಾನವು ಶಕ್ತಿಯುತ ಸಾಧನಗಳನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಿ ಜ್ಞಾನವನ್ನು ವ್ಯಾಪಕವಾಗಿ ತಲುಪಿಸಿದೆ. ಆದರೆ ಭವಿಷ್ಯದಲ್ಲಿ ಯಶಸ್ಸು ತಂತ್ರಜ್ಞಾನದಿAದ ಮಾತ್ರ ನಿರ್ಧಾರವಾಗುವುದಿಲ್ಲ; ಕಲಿಯುವ ಆಸಕ್ತಿ, ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಮತ್ತು ಸಮಾಜಕ್ಕೆ ಉಪಯುಕ್ತ ಪರಿಹಾರಗಳನ್ನು ಕಂಡುಹಿಡಿಯುವ ಮನೋಭಾವವೂ ಮುಖ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕೃತಕ ಬುದ್ಧಿಮತ್ತೆಯನ್ನು ಮಾನವ ಸಾಮರ್ಥ್ಯವನ್ನು ವೃದ್ಧಿಸುವ ಸಾಧನವಾಗಿ ನೋಡಬೇಕು, ಅದು ಮಾನವನನ್ನು ಬದಲಿಸುವ ತಂತ್ರಜ್ಞಾನವಲ್ಲ.  “ಮಾನವೀಯ ಸಾಮಾನ್ಯ ಜ್ಞಾನ ಮತ್ತು ಎಐ ಒಂದಾದಾಗ ವಿಶ್ವಕ್ಕೆ ಅತ್ಯುತ್ತಮ ಪರಿಹಾರಗಳನ್ನು ನೀಡಬಹುದು. ಜಾಗತೀಕರಣದಿಂದ ಹಿಡಿದು ಇಂಟರ್‌ನೆಟ್ ಕ್ರಾಂತಿಯವರೆಗೆ ಪ್ರತಿಯೊಂದು ತಂತ್ರಜ್ಞಾನ ಬದಲಾವಣೆ ಉದ್ಯೋಗಗಳ ಸ್ವರೂಪವನ್ನು ಬದಲಾಯಿಸಿದೆ ಹೊರತು ಉದ್ಯೋಗಗಳನ್ನು ಸಂಪೂರ್ಣವಾಗಿ ನಾಶ  ಪಡಿಸಿಲ್ಲ. ಎಐ ಕೂಡ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಆದ್ದರಿಂದ ಶೈಕ್ಷಣಿಕ ಸಂಸ್ಥೆಗಳು ತಮ್ಮ ಪಠ್ಯಕ್ರಮಗಳನ್ನು ಕಾಲಾನುಗುಣವಾಗಿ ಪರಿಷ್ಕರಿಸಬೇಕು ಎಂದರು. ಈ ಐಬಿಎಂ ಎಐ ಲ್ಯಾಬ್ ಮುಂದಿನ ದಿನಗಳಲ್ಲಿ ನವೀನತೆ, ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿಗೆ ಕೇಂದ್ರವಾಗಿದ್ದು, ವಿದ್ಯಾರ್ಥಿಗಳನ್ನು ಎಐ ಆಧಾರಿತ ಭವಿಷ್ಯದ ಉದ್ಯೋಗಗಳಿಗೆ ಸಜ್ಜುಗೊಳಿಸುವ ಪ್ರಮುಖ ವೇದಿಕೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಎಐಇಟಿಯ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಐಬಿಎಂ ಇಂಡಿಯಾದ ಎಐ ತಜ್ಞ ಮನೋಜ್ ಬಿ. ಶೆಟ್ಟಿ  ವಿದ್ಯಾರ್ಥಿಗಳಿಗೆ ಮಾರ್ಗದರ್ಶನ  ನೀಡಿದರು.

ಎಐಇಟಿ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಐಬಿಎಂ ಸಾಫ್ಟ್ವೇರ್ ಲ್ಯಾಬ್ಸ್ ಪ್ರತಿನಿಧಿಗಳು  ಇದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೊಠಾರಿ ಸ್ವಾಗತಿಸಿ,   ರಕ್ಷಿತಾ ರೈ ಕಾರ‍್ಯಕ್ರಮ ನಿರೂಪಿಸಿ, ಸಂಪತ್ ಶೆಟ್ಟಿ ವಂದಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top