ಆಸಕ್ತಿ ಮತ್ತು ವೃತ್ತಿಯ ನಡುವೆ ಸಮತೋಲನ ಅಗತ್ಯ: ಯುವಜನತೆಗೆ ನಮ್ರತಾ ಮೋಹನ್ ಕಿವಿಮಾತು

Upayuktha
0

 


ಮೂಡುಬಿದಿರೆ: ಜೀವನದಲ್ಲಿ ವೃತ್ತಿ ಹಾಗೂ ವೈಯಕ್ತಿಕ ಆಸಕ್ತಿಗಳ ನಡುವೆ ಸಮತೋಲನ ಕಾಪಾಡಿಕೊಂಡು ನಿರಂತರ ಪ್ರಯತ್ನ ಮಾಡಿದಾಗ ಮಾತ್ರ ದೊಡ್ಡ ಸಾಧನೆ ಸಾಧ್ಯ ಎಂದು ಆಧ್ಯಾತ್ಮಿಕ ಕಂಟೆಂಟ್ ಕ್ರಿಯೇಟರ್ ‘ಟೆಂಪಲ್ ಗರ್ಲ್' ಖ್ಯಾತಿಯ  ನಮೃತಾ ಮೋಹನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ಬೆಳಂದಿಗಳ ಚಿಂತನಾ ಆವೃತ್ತಿಯ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಕಂಟೆಂಟ್ ಸೃಷ್ಟಿ, ವೃತ್ತಿ ಆಯ್ಕೆ, ಆಧ್ಯಾತ್ಮಿಕತೆ ಹಾಗೂ ಸಮಕಾಲೀನ ಸಾಮಾಜಿಕ ವಿಚಾರಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ವೃತ್ತಿ ಮತ್ತು ಆಸಕ್ತಿಯ ನಡುವಿನ ಸಮತೋಲನದ ಕುರಿತು ಮಾತನಾಡಿದ ಅವರು, ತಮ್ಮ ಆರಂಭಿಕ ಜೀವನದ ಹೋರಾಟವನ್ನು ಹಂಚಿಕೊಂಡು,  19ನೇ ಪ್ರಯತ್ನದಲ್ಲಿ ಜೆ.ಪಿ. ಮಾರ್ಗನ್ ಸಂಸ್ಥೆಯಲ್ಲಿ ಉದ್ಯೋಗ ದೊರೆತಿದ್ದು, ಬಳಿಕ ಸಿಟಿಬ್ಯಾಂಕ್ ಹಾಗೂ ವಾಲ್ಟ್ ಡಿಸ್ನಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ ಪ್ರಸಂಗವನ್ನು ವಿವರಿಸಿದರು.

ವಿಡಿಯೋ ನಿರ್ಮಾಣದ ಯಾವುದೇ ಹಿನ್ನೆಲೆಯಿಲ್ಲದಿದ್ದರೂ, ಬಳಿಕ ಪತಿಯೊಂದಿಗೆ ಕಾರ್ಪೊರೇಟ್ ಜೀವನ ತೊರೆದು ದೇವಾಲಯಗಳ ಕುರಿತ ಡಿಜಿಟಲ್ ವಿಷಯಗಳನ್ನು ಸೃಷ್ಟಿಸಲು ಆರಂಭಿಸಿದ ಪರಿಯನ್ನು ವಿವರಿಸಿದರು.  ಮೊದಲ ವಿಡಿಯೋ ಕೇವಲ 50 ಮಂದಿ ವೀಕ್ಷಿಸಿದ್ದರೂ, ನಿರಂತರ ಪರಿಶ್ರಮದ ಫಲವಾಗಿ ಇಂದು 21 ಲಕ್ಷಕ್ಕೂ ಹೆಚ್ಚು  ವೀಕ್ಷಕರನ್ನು ಹೊಂದಿರುವ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದರು.

ಡಿಜಿಟಲ್ ಮಾಧ್ಯಮಗಳಲ್ಲಿ ಕಂಟೆಂಟ್‌ನ ನಿರ್ಮಾಣ ಅತ್ಯಂತ ಜವಾಬ್ದಾರಿಯ ಕಾರ್ಯವಾಗಿದ್ದು, ಅದರ ಯಶಸ್ಸು ನಿಖರತೆ ಮತ್ತು ವಿಶ್ವಾಸಾರ್ಹತೆಯ  ಮೇಲೆ  ಅವಲಂಬಿತವಾಗಿದೆ. ತಮ್ಮ ಚಾನೆಲ್‌ನಲ್ಲಿ ಪ್ರತಿ ವಿಷಯವನ್ನೂ ಸಮಗ್ರ ಅಧ್ಯಯನ ಮತ್ತು ಸಂಶೋಧನೆಯ ಬಳಿಕವೇ ಪ್ರಕಟಿಸಲಾಗುತ್ತದೆ ಎಂದರು.  ಕಲಿಕೆಗೆ ಎಂದಿಗೂ ಅಂತ್ಯವಿಲ್ಲ; ಬದಲಾಗುತ್ತಿರುವ ಜಗತ್ತಿನಲ್ಲಿ ಪ್ರತಿದಿನ ಹೊಸ ವಿಷಯಗಳನ್ನು ಕಲಿಯುತ್ತಾ, ತಮ್ಮ ಜ್ಞಾನವನ್ನು ನಿರಂತರವಾಗಿ ವಿಸ್ತರಿಸಿಕೊಳ್ಳಬೇಕು ಎಂದರು.  

ವಿದ್ಯಾರ್ಥಿಯೊಬ್ಬರು ಟೀಕೆ ಮತ್ತು ನಕಾರಾತ್ಮಕತೆಯನ್ನು ಹೇಗೆ ಎದುರಿಸಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಒಳ್ಳೆಯ ಕೆಲಸ ಮಾಡಿದರೂ ಜನ ಮಾತನಾಡುತ್ತಾರೆ, ಕೆಟ್ಟದ್ದು ಮಾಡಿದರೂ ಮಾತನಾಡುತ್ತಾರೆ, ಏನೂ ಮಾಡದಿದ್ದರೂ ಮಾತನಾಡುತ್ತಾರೆ. ಆದರೆ ನಾವು ಮಾಡುವ ಕೆಲಸದಿಂದ ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತಿದೆಯೇ ಎಂಬುದೇ ಮುಖ್ಯ. ನಮ್ಮ ಆತ್ಮಸಾಕ್ಷಿಗೆ ನಾವು ಪ್ರಾಮಾಣಿಕರಾಗಿದ್ದರೆ, ಬೇರೆಯವರ ಅಭಿಪ್ರಾಯಕ್ಕೆ ಹೆಚ್ಚು ಮಹತ್ವ ನೀಡಬೇಕಾಗಿಲ್ಲ" ಎಂದರು.

ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ಸ್ಪಷ್ಟಪಡಿಸಿ, ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಕೇವಲ ಪ್ರಚಾರಕ್ಕಾಗಿ ಪ್ರಶ್ನಿಸುವುದು ಸರಿಯಲ್ಲ.  ದೇಶದ ಅಭಿವೃದ್ಧಿಗೆ ನೆರವಾಗುವ ವಿಜ್ಞಾನ, ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳ ಕಡೆಗೆ ಯುವಜನರು ತಮ್ಮ ಶಕ್ತಿಯನ್ನು ಕೇಂದ್ರೀಕರಿಸಬೇಕು. ಸಮಾಜದ ಬೆಳವಣಿಗೆಗೆ ನೆರವಾಗುವ ಕ್ಷೇತ್ರಗಳಲ್ಲಿ ಸವಾಲುಗಳನ್ನು ಸ್ವೀಕರಿಸುವುದು ಹೆಚ್ಚು ಅರ್ಥಪೂರ್ಣ ಎಂದರು.

ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದ ಭಸ್ಮಾರತಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಅನುಸರಿಸಲಾಗುವ ಆಚರಣೆಗಳನ್ನು ಉಲ್ಲೇಖಿಸಿ, ಯಾವುದೇ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಅಲ್ಲಿನ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ.
ಋತುಚಕ್ರದ ಸಂಧರ್ಭದಲ್ಲಿ ಹೆಣ್ಣು ದೇವಾಲಯ ಪ್ರವೇಶ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ದೇವಾಲಯಗಳ ಸಂಪ್ರದಾಯಗಳು ಮತ್ತು ಆಚರಣೆಗಳು ಆಯಾ ಕ್ಷೇತ್ರಗಳ ನಂಬಿಕೆಗಳ ಮೇಲೆ ಆಧಾರಿತವಾಗಿದ್ದು, ಅವುಗಳನ್ನು ಅನುಸರಿಸುವುದೋ ಅಥವಾ ಅನುಸರಿಸದಿರುವುದೋ ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆಯಾಗಿದೆ ಎಂದರು. 


ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯಿಂದ ಬಳಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು, ನಿರಂತರವಾಗಿ ಕಲಿಯುತ್ತಾ ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡುವ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು. ಭಗವದ್ಗೀತೆಯ ಸಂದೇಶವನ್ನು ಉಲ್ಲೇಖಿಸಿ, ಫಲಾಪೇಕ್ಷೆಯಿಲ್ಲದೆ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದೇ ಯಶಸ್ಸಿನ ನಿಜವಾದ ಮಾರ್ಗ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ಸಂವಾದ ನಡೆಸುವ ಅವಕಾಶಗಳು ವಿದ್ಯಾರ್ಥಿಗಳಲ್ಲಿ ಹೊಸ ಹುರುಪು ಹಾಗೂ  ಪ್ರೇರಣೆಯನ್ನು ನೀಡಬಲ್ಲವು. ನಮೃತಾ ಮೋಹನ್‌ರವರು ತಮ್ಮ ಆಸಕ್ತಿಯನ್ನೇ ವೃತ್ತಿಯನ್ನಾಗಿ ರೂಪಿಸಿಕೊಂಡು, ದೃಢಸಂಕಲ್ಪ ಮತ್ತು ಪರಿಶ್ರಮದ ಮೂಲಕ ಯಶಸ್ವಿ ಬದುಕು ಕಟ್ಟಿಕೊಂಡಿರುವುದು ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದರು.  

ಕಾರ್ಯಕ್ರಮದಲ್ಲಿ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್‌ನ ಸಂಯೋಜಕಿ ಡಾ ದೀಪಾ ಕೊಠಾರಿ, ಕಾರ್ಯಕ್ರಮ ಸಂಯೋಜಕ ಡಾ ಯೋಗೀಶ್ ಕೈರೋಡಿ ಇದ್ದರು.  ವಿದ್ಯಾರ್ಥಿನಿ ಮಧು ನಿರೂಪಿಸಿ, ನಿಯತಿ ಅಮೀನ್ ಅತಿಥಿಯನ್ನು ಪರಿಚಯಿಸಿ, ಲಿಖಿತಾ ವಂದಿಸಿದರು.  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top