ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಕೇಶವ ಸಂಕಲ್ಪ ಸಭಾಂಗಣದಲ್ಲಿ 10BN National Disaster Response Force (NDRF) ಬೆಂಗಳೂರು, ಇದರ ವತಿಯಿಂದ ವಿದ್ಯಾರ್ಥಿಗಳಲ್ಲಿ ಸುರಕ್ಷತೆ, ತುರ್ತು ಪರಿಸ್ಥಿತಿಯಲ್ಲಿ ಜವಾಬ್ದಾರಿಯುತ ನಡೆ ಹಾಗೂ ವಿಪತ್ತು ನಿರ್ವಹಣೆಯ ಅರಿವು ಮೂಡಿಸುವ ಉದ್ದೇಶದಿಂದ ʻಸುರಕ್ಷತೆ ಹಾಗೂ ವಿಪತ್ತು ನಿರ್ವಹಣಾ' ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಜಿಲ್ಲೆಯ ವಿಪತ್ತು ನಿರ್ವಹಣಾ ಉಸ್ತುವಾರಿ ಅಧಿಕಾರಿಗಳಾದ ಶಾಂತಿಲಾಲ್ ಜಟಿಯ ಇವರು NDRF ತಂಡದ ಕಾರ್ಯಚಟುವಟಿಕೆಗಳು, ದೇಶ ಸೇವೆ ಹಾಗೂ ಜೀವ ರಕ್ಷಣೆಯಲ್ಲಿ ಅವರ ಕೊಡುಗೆಗಳು, ವಿಪತ್ತುಗಳ ವಿಧ, ಅವುಗಳ ಪರಿಣಾಮ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತಾಗಿ ಸವಿವರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.
NDRF ನ ಸಹಾಯಕ ಸಬ್‌ಇನ್ಸ್ಪೆಕ್ಟರ್ ಸುಭಾಷ್ ಶಿಂಧೆ ಇವರ ನೇತೃತ್ವದಲ್ಲಿ ವಿಪತ್ತು ನಿರ್ವಹಣೆ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಅಣಕು ಪ್ರದರ್ಶನ ನಡೆಸಲಾಯಿತು. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡುವ, ಸುರಕ್ಷಿತ ಸ್ಥಳಾಂತರ ಕ್ರಮಗಳು, ಕಟ್ಟಡ ಕುಸಿತ ಹಾಗೂ ಇತರ ತುರ್ತು ಸಂದರ್ಭಗಳಲ್ಲಿ ಹೇಗೆ ತಕ್ಷಣ ಪ್ರತಿಕ್ರಿಯಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲಾಯಿತು. ಜೊತೆಗೆ ತುರ್ತು ಸಹಾಯವಾಣಿ ಸೇವೆಗಳ ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.NDRF ತಂಡದ ರಕ್ಷಕರಾದ ಸೆಲ್ವಕುಮಾರ್, ಬಾಲಕೃಷ್ಣ ಹಾಗೂ ವಿ. ಶ್ರೀನಿವಾಸಲು ಅಣಕು ಪ್ರದರ್ಶನದಲ್ಲಿ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ಎನ್ , ದ್ವಿತೀಯ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಮಮತಾ ಶೆಟ್ಟಿ ಕಾರ್ಯಕ್ರಮವನ್ನು ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.


