ಜೇಬಿನಲ್ಲಿದೆ ಡಿಜಿಟಲ್ ಶನಿ: ನಾವೇ ಅದಕ್ಕೆ ರೀಚಾರ್ಜ್ ಮಾಡುವ ಅಸಲಿ ಧಣಿ!
ನಾವು ಮೊಬೈಲ್ ಮಾಲೀಕರಾ ಅಥವಾ ಸಂಬಳವಿಲ್ಲದ ಚಾರ್ಜಿಂಗ್ ನೌಕರರಾ?
ನಾವು ಅಂದುಕೊಂಡಿರುತ್ತೀವಿ—ರಾತ್ರಿ ಇಡೀ ಒದ್ದಾಡಿ, ಕಷ್ಟಪಟ್ಟು ದುಡಿದು, ಕುತ್ತಿಗೆಗೆ ಇಎಂಐ ನೇಣು ಹಾಕಿಕೊಂಡು ಈ ಹದಿನೈದು-ಇಪ್ಪತ್ತು ಸಾವಿರದ ಮೊಬೈಲ್ ಖರೀದಿಸಿದ್ದೀವಿ, ಹಾಗಾಗಿ ಇದರ ಪರಮಾಧಿಕಾರ ನಮ್ಮದೇ ಅಂತ! ಆದರೆ ಅಸಲಿ ವಿಷಯ ಏನೆಂದರೆ, ಆ ಮೊಬೈಲ್ ಬಾಕ್ಸ್ ಮೇಲೆ ಮತ್ತು ಬಿಲ್ ಮೇಲೆ ಮಾತ್ರ ನಿಮ್ಮ ಹೆಸರಿರುತ್ತೆ. ಅದರ ಒಳಗಿರುವ ಡೇಟಾ ಎಂಬ ಜಗತ್ತಿಗೆ ಅಸಲಿ ಮಾಲೀಕರು ಅಮೆರಿಕದಲ್ಲೋ, ಚೀನಾದಲ್ಲೋ ಕುಳಿತಿರುವ ದೊಡ್ಡ ದೊಡ್ಡ ಅಡ್ವರ್ಟೈಸ್ಮೆಂಟ್ ಕಂಪನಿಗಳು.
ನಿಮಗೊಂದು ಸಣ್ಣ ಉದಾಹರಣೆ ಕೊಡುತ್ತೇನೆ; ನೀವು ಮೊಬೈಲ್ ಅನ್ನು ಪಕ್ಕದಲ್ಲಿಟ್ಟುಕೊಂಡು ಸ್ನೇಹಿತನ ಜೊತೆ "ಯಾಕೋ ದೋಸೆ ತಿನ್ನಬೇಕು ಅನ್ನಿಸ್ತಿದೆ ಮಾರಾಯ" ಎಂದು ಬಾಯಿ ತಪ್ಪಿ ಹೇಳಿ ಮುಗಿಸುವಷ್ಟರಲ್ಲಿ, ನಿಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಲ್ಲಿ ನಿಮ್ಮ ಮನೆಯ ಪಕ್ಕದ ಹೋಟೆಲ್‌ನ ಮಸಾಲೆ ದೋಸೆಯ ಕೆಂಪನೆಯ ಜಾಹೀರಾತುಗಳು ಸಾಲು ಸಾಲಾಗಿ ಪ್ರತ್ಯಕ್ಷವಾಗುತ್ತವೆ! ನಾವೇನೋ ನಮ್ಮ ಮನದ ಮಾತು ನೇರವಾಗಿ ದೇವರಿಗೆ ಕೇಳಿಸಿ ಆತನೇ ಸ್ಪಾಟ್‌ನಲ್ಲೇ ವರ ಕೊಟ್ಟ ಅಂದುಕೊಂಡರೆ, ಅಲ್ಲಿ ಬ್ಯಾಕ್‌ಗ್ರೌಂಡ್‌ನಲ್ಲಿ ಸದ್ದಿಲ್ಲದೆ ಲಡ್ಡು ತಿನ್ನುತ್ತಾ ‘ತಥಾಸ್ತು’ ಎನ್ನುತ್ತಿರುವುದು ದೇವರಲ್ಲ, ನಿಮ್ಮ ಧ್ವನಿಯನ್ನೇ ನಂಬಿ ಬದುಕುತ್ತಿರುವ ಗೂಗಲ್ ಅಥವಾ ಫೇಸ್‌ಬುಕ್‌ನ ಮೈಕ್ರೋಫೋನ್ ಅಷ್ಟೆ!
ಇನ್ನು ನೀವು ಹೋಗುವ ಸ್ಥಳಗಳ ಕಥೆಯಂತೂ ಮುಗಿದೇ ಹೋಯಿತು. ಹೆಂಡತಿಗೆ ಸುಳ್ಳು ಹೇಳಿ ಅಥವಾ ಆಫೀಸ್‌ಗೆ ಚಕ್ಕಿ ಹೊಡೆದು ಯಾರಿಗೂ ತಿಳಿಸದೆ ಎಲ್ಲೋ ರಹಸ್ಯವಾಗಿ ಹೋದರೂ, ನಿಮ್ಮ ಜೇಬಿನಲ್ಲಿರುವ ಈ ‘ಡಿಜಿಟಲ್ ಶನಿ’ ಮಾತ್ರ ಪ್ರತಿ ಹೆಜ್ಜೆಯನ್ನೂ ಜಿಪಿಎಸ್ ಮೂಲಕ ಅಳೆದು ಆ ಡೇಟಾವನ್ನು ಕಂಪನಿಗಳಿಗೆ ಲೈವ್ ಅಪ್‌ಡೇಟ್ ಕೊಡುತ್ತಿರುತ್ತದೆ. ನೀವು ಬಟ್ಟೆ ಅಂಗಡಿಯ ಮುಂದೆ ಸುಮ್ಮನೆ ನಿಂತು ಗಾಳಿ ಸೇವಿಸುತ್ತಿದ್ದರೂ ಸಾಕು, "ನಮ್ಮಲ್ಲಿ ಶೇ. ೫೦ ರಿಯಾಯಿತಿ ಇದೆ ಬನ್ನಿ ಜಿಜ್ಞಾಸುಗಳೇ" ಎಂದು ಮೊಬೈಲ್ ಟಿಂಗ್ ಎಂದು ಕೂಗುತ್ತದೆ. ಇನ್ನು ಮೆಡಿಕಲ್ ಶಾಪ್ ಹತ್ತಿರ ಹೋದರೆ, ನಿಮಗೆ ತಲೆನೋವು ಬರುವ ಮೊದಲೇ ತಲೆನೋವಿನ ಮಾತ್ರೆಗಳ ಜಾಹೀರಾತು ಸ್ಕ್ರೀನ್ ಮೇಲೆ ಮೂಡುತ್ತದೆ! ಅಂದರೆ, ನೀವು ಎಲ್ಲಿದ್ದೀರಿ, ಏನು ಮಾಡುತ್ತಿದ್ದೀರಿ, ಯಾರ ಜೊತೆ ನಿಂತು ಗಾಸಿಪ್ ಹೊಡೆಯುತ್ತಿದ್ದೀರಿ ಎಂಬ ಪ್ರತಿಯೊಂದು ಹಸಿಬಿಸಿ ವಿವರವೂ ಆ ಕಂಪನಿಗಳ ಪಾಲಿಗೆ ಕೋಟಿ ಬೆಲೆಬಾಳುವ ಹಲ್ವಾ ಇದ್ದಂತೆ. ನಿಮ್ಮ ಇಷ್ಟಗಳು, ಕಷ್ಟಗಳು, ನಿಮ್ಮ ಆಳವಾದ ರಹಸ್ಯಗಳು ಎಲ್ಲವೂ ಆ ಅಡ್ವರ್ಟೈಸ್ಮೆಂಟ್ ಕಂಪನಿಗಳ ಸರ್ವರ್‌ನಲ್ಲಿ ನಿಮ್ಮ ಜಾತಕಕ್ಕಿಂತ ಭದ್ರವಾಗಿರುತ್ತವೆ. ಇಲ್ಲಿ ಅಸಲಿ ವಿಚಾರ ಏನೆಂದರೆ, ನೀವು ಮೊಬೈಲ್ ಅನ್ನು ನಿಯಂತ್ರಿಸುತ್ತಿಲ್ಲ, ಬದಲಿಗೆ ನಿಮ್ಮ ಆಲೋಚನೆಗಳನ್ನು, ನಿಮ್ಮ ಇಡೀ ದಿನಚರಿಯನ್ನು ಮೊಬೈಲ್ ಮೂಲಕ ಆ ಕಂಪನಿಗಳೇ ಕಂಟ್ರೋಲ್ ಮಾಡುತ್ತಿವೆ. ಹಾಗಾಗಿ, ಕೈಯಲ್ಲಿ ಐಫೋನೇ ಹಿಡಿದಿದ್ದರೂ "ಇದು ನನ್ನದೇ ಫೋನ್" ಎಂದು ಕಾಲರ್ ಎಗರಿಸಬೇಡಿ; ನಾವು ಕೇವಲ ಆ ಫೋನಿಗೆ ಹೊತ್ತಿಗೆ ಸರಿಯಾಗಿ ಚಾರ್ಜಿಂಗ್ ಉಸ್ತುವಾರಿ ನೋಡಿಕೊಳ್ಳುವ ಮತ್ತು ಪ್ರತಿ ತಿಂಗಳು ಜಿಬಿಗೆ ಕತ್ತರಿ ಹಾಕಿಕೊಂಡು ರೀಚಾರ್ಜ್ ಮಾಡುವ ಸಂಬಳವಿಲ್ಲದ ಮೂರ್ಖ ನೌಕರರು, ಅಷ್ಟೇ!
ಇದಕ್ಕೆಲ್ಲ ಮೂಲ ಕಾರಣ, ನಾವು ಮುಖಪುಟದಲ್ಲೇ ನೋಡುವ ಉಚಿತದ ಆಮಿಷ. ಈ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಅಥವಾ ಗೂಗಲ್ ಮ್ಯಾಪ್ಸ್‌ಗಳು ನಮಗೆ ಪುಕ್ಕಟೆಯಾಗಿ ಸಿಗುತ್ತಿವೆ ಎಂದರೆ, ನೆನಪಿರಲಿ—ಅಲ್ಲಿ ಮಾರಾಟವಾಗುತ್ತಿರುವುದು ಆ ಆ್ಯಪ್‌ಗಳಲ್ಲ, ಬದಲಿಗೆ ನಮ್ಮದೇ ವೈಯಕ್ತಿಕ ಪ್ರೈವೇಟ್ ಲೈಫ್! ಇದನ್ನೇ ಡಿಜಿಟಲ್ ಜಗತ್ತಿನಲ್ಲಿ ‘ಡೇಟಾ ಬ್ರೋಕಿಂಗ್’ ಅಥವಾ ಡೇಟಾ ದಲ್ಲಾಳಿ ತನ ಎನ್ನುತ್ತಾರೆ. ಯಾವುದಾದರೂ ಆ್ಯಪ್ ಡೌನ್‌ಲೋಡ್ ಮಾಡುವಾಗ, ಕನ್ಯೆ ನೋಡಲು ಹೋದಾಗ ಒಪ್ಪಿಗೆ ಕೊಡುವ ಗಂಡಿನಂತೆ ಕೊಂಚವೂ ಓದದೆಯೇ ಕಣ್ಣು ಮುಚ್ಚಿ ‘Agree’ ಎಂದು ಒತ್ತುತ್ತೇವಲ್ಲ, ಆ ಕ್ಷಣದಲ್ಲೇ ನಮ್ಮ ಇಡೀ ಪ್ರೈವೆಸಿಯನ್ನು ಅವರ ಸರ್ವರ್‌ಗೆ ದಾನಪತ್ರ ಬರೆದುಕೊಟ್ಟಿರುತ್ತೇವೆ. ಅಲ್ಲಿಂದ ಈ ಡೇಟಾ ಜಗತ್ತಿನ ಅಸಲಿ ಸರ್ಕಸ್ ಶುರುವಾಗುತ್ತದೆ. ಮೊದಲು ಮೈಕ್ರೋಫೋನ್ ಧ್ವನಿ ಕೇಳಿಸಿಕೊಳ್ಳುತ್ತದೆ, ಜಿಪಿಎಸ್ ದಾರಿ ಪತ್ತೆ ಮಾಡುತ್ತದೆ ಮತ್ತು ಬ್ರೌಸಿಂಗ್ ಹಿಸ್ಟರಿ ನಿಮ್ಮ ಆಸೆಗಳನ್ನು ತೂಕ ಮಾಡುತ್ತದೆ. ನೀವು ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದಾದರೂ ಒಂದು ರೇಷ್ಮೆ ಸೀರೆಯ ಅಥವಾ ಕಾರಿನ ಫೋಟೋ ಮೇಲೆ ಕೇವಲ ಎರಡು ಸೆಕೆಂಡ್ ಜಾಸ್ತಿ ಕಣ್ಣಿಟ್ಟು ನಿಟ್ಟುಸಿರು ಬಿಟ್ಟರೆ ಸಾಕು, ಆ ಆ್ಯಪ್‌ನ ಅಲ್ಗಾರಿದಮ್ ತಕ್ಷಣ ಅದನ್ನು ತನ್ನ ಡೈರಿಯಲ್ಲಿ ಕೆಂಪು ಶಾಯಿಯಲ್ಲಿ ಬರೆದಿಟ್ಟುಕೊಳ್ಳುತ್ತದೆ.
ಹೀಗೆ ಸಂಗ್ರಹಿಸಿದ ಕೋಟ್ಯಂತರ ಜನರ ಭಿನ್ನ ವಿಭಿನ್ನ ಮಾಹಿತಿಯನ್ನು ಈ ಕಂಪನಿಗಳು ತಮ್ಮ ಸೂಪರ್ ಕಂಪ್ಯೂಟರ್‌ಗಳ ಮೂಲಕ ಮಿಕ್ಸಿಗೆ ಹಾಕಿ ರುಬ್ಬಿ, ನಿಮಗೇ ತಿಳಿಯದಂತೆ ನಿಮ್ಮದೊಂದು ‘ಡಿಜಿಟಲ್ ಜಾತಕ’ವನ್ನು ಸಿದ್ಧಪಡಿಸುತ್ತವೆ. ಇದರಲ್ಲಿ ನಿಮ್ಮ ವಯಸ್ಸು, ಹವ್ಯಾಸಗಳು, ಇಷ್ಟದ ಬಣ್ಣ, ನಿಮ್ಮ ರಾಜಕೀಯ ಒಲವು ಮತ್ತು ನಿಮ್ಮ ಜೇಬಿನಲ್ಲಿ ಸದ್ಯಕ್ಕೆ ಚಿಲ್ಲರೆ ಸೇರಿ ಎಷ್ಟು ದುಡ್ಡರಬಹುದು ಎಂಬ ಬ್ರಹ್ಮನಿಗೂ ತಿಳಿಯದ ವಿವರಗಳಿರುತ್ತವೆ! ಇದರ ಮುಂದಿನ ಹಂತವೇ ಅತ್ಯಂತ ರೋಚಕವಾದ ಆನ್‌ಲೈನ್ ಹರಾಜು ಪ್ರಕ್ರಿಯೆ. ಈಗ ಯಾವುದೋ ಒಂದು ಶಾಂಪೂ ಕಂಪನಿಗೆ ತನ್ನ ಹೊಸ ಪ್ರಾಡಕ್ಟ್ ಅನ್ನು ಮಾರಬೇಕಿರುತ್ತದೆ. ಅದು ನೇರವಾಗಿ ಈ ಡೇಟಾ ದಲ್ಲಾಳಿಗಳ ಹತ್ತಿರ ಬಂದು, ತನಗೆ ಬೇಕಾದ ನಿಖರ ಬಕ್ಕತಲೆಯುಳ್ಳ ಗ್ರಾಹಕರ ಪಟ್ಟಿಯನ್ನು ಕೇಳುತ್ತದೆ. ಆಗ ಇಂಟರ್ನೆಟ್‌ನ ಬ್ಯಾಕ್‌ಗ್ರೌಂಡ್‌ನಲ್ಲಿ ಮಿಲಿಸೆಕೆಂಡ್‌ಗಳ ವೇಗದಲ್ಲಿ ಒಂದು ಡಿಜಿಟಲ್ ಹರಾಜು ನಡೆದು, ಜಾಹೀರಾತು ನೀಡುವ ಕಂಪನಿ ಇಟ್ಟ ಕಾಸಿಗೆ ನಿಮ್ಮ ಡಿಜಿಟಲ್ ಪ್ರೊಫೈಲ್ ಮಾರಾಟವಾಗಿಬಿಡುತ್ತದೆ! ತಕ್ಷಣವೇ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಆ ಶಾಂಪೂ ಪ್ರತ್ಯಕ್ಷವಾಗುತ್ತದೆ. ಅಂತಿಮವಾಗಿ ಹೇಳಬೇಕೆಂದರೆ, ಈ ಬೃಹತ್ ಡೇಟಾ ಸಂತೆ ಒಳಗೆ ನಾವ್ಯಾರೂ ಕೇವಲ ಗ್ರಾಹಕರಲ್ಲ, ನಾವೇ ಆ ಕಂಪನಿಗಳ ಪಾಲಿಗೆ ಅತ್ಯಂತ ಲಾಭದಾಯಕವಾಗಿ ತಕ್ಕಡಿಯಲ್ಲಿ ತೂಗುವ ಅಸಲಿ ‘ಬಕರಾ’ ಅಥವಾ ‘ಉತ್ಪನ್ನ’!
ಆದರೆ ಧೃತಿಗೆಡಬೇಕಾಗಿಲ್ಲ, ಈ ಡಿಜಿಟಲ್ ಕಾವಲುಗಾರರ ಕಣ್ಣಿಗೆ ಮಣ್ಣೆರಚಿ ಸಂಪೂರ್ಣವಾಗಿ ಅಡಗಿ ಕುಳಿತುಕೊಳ್ಳುವುದು ಇಂದಿನ ಕಾಲದಲ್ಲಿ ಹಿಮಾಲಯಕ್ಕೆ ಓಡಿಹೋದಷ್ಟೇ ಕಷ್ಟವಾದರೂ, ನಮ್ಮ ದೂರವಾಣಿಯ ಮಾಲೀಕತ್ವವನ್ನು ಆ ಜಾಹೀರಾತು ಸಂಸ್ಥೆಗಳ ದೌರ್ಜನ್ಯದಿಂದ ಕಿತ್ತುಕೊಂಡು ಮತ್ತೆ ನಮ್ಮ ಕೈಗೆ ಪಡೆದುಕೊಳ್ಳಲು ಕೆಲವು ಚಾಣಾಕ್ಷ ಬುದ್ಧಿವಂತ ಮಾರ್ಗಗಳಿವೆ. ಮೊದಲನೆಯದಾಗಿ, ನಾವು ಮಾಡಬೇಕಾದ ಅತಿ ದೊಡ್ಡ ಸರ್ಜರಿ ಎಂದರೆ ನಮ್ಮ ಮೊಬೈಲ್‌ನಲ್ಲಿರುವ ಅಪ್ಲಿಕೇಶನ್‌ಗಳ ‘ಪರ್ಮಿಷನ್’ ಅಥವಾ ಅನುಮತಿ ವಿಭಾಗಕ್ಕೆ ಹೋಗಿ, ಯಾವುದಕ್ಕೆ ಎಷ್ಟು ಸ್ವಾತಂತ್ರ್ಯ ಕೊಡಬೇಕು ಎಂಬುದನ್ನು ನಾವೇ ಮಾಲೀಕರಾಗಿ ನಿರ್ಧರಿಸುವುದು. ಒಂದು ಕತ್ತಲೆಯಲ್ಲಿ ಬೆಳಕು ಕೊಡುವ ಟಾರ್ಚ್‌ಲೈಟ್ ಆ್ಯಪ್‌ಗಾಗಲಿ ಅಥವಾ ಮುಖದ ಮೇಲಿನ ಗುಳ್ಳೆಗಳನ್ನು ಎಡಿಟ್ ಮಾಡುವ ಬ್ಯೂಟಿ ಕ್ಯಾಮೆರಾಗಾಗಲಿ ನಮ್ಮ ಲೊಕೇಶನ್ ಮತ್ತು ಮೈಕ್ರೋಫೋನ್‌ನ ಅಗತ್ಯ ಏನಿರುತ್ತದೆ? ಅವರು ನಿಮ್ಮ ಧ್ವನಿ ಕೇಳಿ ಏನು ಮಾಡಬೇಕಿದೆ? ಖಂಡಿತ ಇರುವುದಿಲ್ಲ.
ಹಾಗಾಗಿ, ಇಂತಹ ಕಿಲಾಡಿ ಅಪ್ಲಿಕೇಶನ್‌ಗಳಿಗೆ ನೀಡಿರುವ ಧ್ವನಿಗ್ರಾಹಕ, ಚಿತ್ರಗ್ರಾಹಕ ಮತ್ತು ಸ್ಥಳದ ಅನುಮತಿಗಳನ್ನು ತಕ್ಷಣವೇ ಕಟ್ ಮಾಡಬೇಕು. ಅದರಲ್ಲೂ ಮುಖ್ಯವಾಗಿ ಜಿಪಿಎಸ್ ಸೆಟ್ಟಿಂಗ್ಸ್‌ನಲ್ಲಿ ‘ಯಾವಾಗಲೂ ಅನುಮತಿಸು’ (Always Allow) ಎಂಬ ಉದಾರತೆ ತೋರುವ ಬದಲಿಗೆ, ‘ಕೇವಲ ಆ ಅಪ್ಲಿಕೇಶನ್ ಬಳಸುವಾಗ ಮಾತ್ರ’ (While using the app) ಎಂಬ ಜಿಪುಣತನದ ಆಯ್ಕೆಯನ್ನು ಆಯ್ದುಕೊಳ್ಳುವುದು ಜಾಣತನ.
ಇದರ ಜೊತೆಗೆ ನಮ್ಮ ಮೊಬೈಲ್‌ನ ಸೆಟ್ಟಿಂಗ್ಸ್ ಒಳಗೆ ‘ಖಾಸಗಿತನ’ ಅಥವಾ ಪ್ರೈವೆಸಿ ವಿಭಾಗಕ್ಕೆ ಲಗ್ಗೆ ಇಟ್ಟರೆ ಅಲ್ಲಿ ‘ಮಾಹಿತಿ ಮತ್ತು ಖಾಸಗಿತನ’ ಎಂಬ ಗುಪ್ತ ನಿಧಿ ಸಿಗುತ್ತದೆ. ಅದರೊಳಗೆ ನಮಗೆ ತಿಳಿಯದಂತೆ ೨೪ ಗಂಟೆಯೂ ಚಾಲ್ತಿಯಲ್ಲಿರುವ ‘ಅಂತರ್ಜಾಲದ ಚಟುವಟಿಕೆಗಳು’ ಹಾಗೂ ‘ಸ್ಥಳದ ಇತಿಹಾಸ’ವನ್ನು (Location History) ಕೈಯಾರೆ ಸ್ಥಗಿತಗೊಳಿಸಬಹುದು. ಇದರ ಜೊತೆಗೆ ಅಲ್ಲೇ ಕೆಳಗಡೆ ‘ವೈಯಕ್ತಿಕ ಜಾಹೀರಾತುಗಳು’ (Personalized Ads) ಎಂಬ ಆಯ್ಕೆ ಇರುತ್ತದೆ, ಅದನ್ನು ಆಫ್ ಮಾಡುವುದರಿಂದ ಕಂಪನಿಗಳು ನಮ್ಮ ಜಾತಕ ನೋಡಿ ಮೂಗಿಗೆ ಹಗ್ಗ ಹಾಕುವುದನ್ನು ತಡೆಯಬಹುದು. ಹಾಗೆಯೇ ಪ್ರತಿ ಫೋನಿನಲ್ಲೂ ನಮಗೊಂದು ‘ಜಾಹೀರಾತು ಐಡಿ’ ಇರುತ್ತದೆ, ಅದನ್ನು ರೀಸೆಟ್ ಮಾಡುವುದರಿಂದ ಅಥವಾ ಡಿಲೀಟ್ ಮಾಡುವುದರಿಂದ ನಮ್ಮ ಹಳೆಯ ಡಿಜಿಟಲ್ ಹೆಜ್ಜೆಗುರುತುಗಳು ಒದ್ದೆ ಬಟ್ಟೆಯಲ್ಲಿ ಒರೆಸಿದಂತೆ ಅಳಿಸಿಹೋಗುತ್ತವೆ.
ಇಷ್ಟೇ ಅಲ್ಲದೆ, ಅಂತರ್ಜಾಲದಲ್ಲಿ ಹುಡುಕಾಟ ನಡೆಸುವಾಗ ಸಾಮಾನ್ಯ ಬ್ರೌಸರ್‌ಗಳ ಬದಲಿಗೆ ಖಾಸಗಿತನಕ್ಕೆ ಪ್ರಾಮುಖ್ಯತೆ ನೀಡುವ ಪರ್ಯಾಯ ಸುರಕ್ಷಿತ ಬ್ರೌಸರ್‌ಗಳನ್ನು ಬಳಸಿದರೆ, ಅವು ನಮ್ಮನ್ನು ಹಿಂಬಾಲಿಸುವ ಡಿಜಿಟಲ್ ಗೂಢಚಾರರನ್ನು ದಾರಿಯಲ್ಲೇ ಅಡ್ಡಗಟ್ಟಿ ಕಪಾಳಮೋಕ್ಷ ಮಾಡಿ ನಿಲ್ಲಿಸುತ್ತವೆ. ಕೊನೆಯದಾಗಿ, ಯಾವುದೇ ಹೊಸ ಆ್ಯಪ್ ನೋಡಿದ ತಕ್ಷಣ ಸಿಗುವ ಆತುರದ ‘ಒಪ್ಪಿಗೆ’ (Agree) ಗುಂಡಿಯನ್ನು ಪ್ರೇಮ ನಿವೇದನೆ ಒಪ್ಪಿಕೊಳ್ಳುವಂತೆ ಆತುರವಾಗಿ ಒತ್ತುವ ಮುನ್ನ ಕೊಂಚ ಯೋಚಿಸಬೇಕು. ಮತ್ತು ಅತಿ ಮುಖ್ಯವಾಗಿ, ಬಸ್ ಸ್ಟ್ಯಾಂಡ್‌ಗಳಲ್ಲೋ, ಹೋಟೆಲ್‌ಗಳಲ್ಲೋ ಉಚಿತವಾಗಿ ಸಿಗುವ ಸಾರ್ವಜನಿಕ ವೈ-ಫೈ (Wi-Fi) ಸಂಪರ್ಕಗಳಿಗೆ ಕನೆಕ್ಟ್ ಆಗಿ ನಮ್ಮ ಬ್ಯಾಂಕಿಂಗ್ ಅಥವಾ ರಹಸ್ಯ ಚಾಟಿಂಗ್ ಕೆಲಸಗಳನ್ನು ಮಾಡಲೇಬಾರದು; ನೆನಪಿಡಿ, ಫ್ರೀಯಾಗಿ ಸಿಗುವ ಗಿಣ್ಣು ಕೇವಲ ಇಲಿ ಬೋನಿನಲ್ಲಿ ಮಾತ್ರ ಇರುತ್ತದೆ! ನಾವು ಕೊಂಚ ಜಾಗರೂಕರಾಗಿ ಇಂತಹ ಡಿಜಿಟಲ್ ಶಿಸ್ತು ಪಾಲಿಸಿದರೆ, ನಮ್ಮ ಜೇಬಿನಲ್ಲಿರುವ ಫೋನ್ ನಮಗೆ ನಿಷ್ಠಾವಂತ ಆಳು ಆಗಿ ಇರುತ್ತದೆಯೇ ಹೊರತು ಪರರ ಕೈಯ ಗೂಢಚಾರನಾಗಲು ಖಂಡಿತ ಸಾಧ್ಯವಿಲ್ಲ.
- ಪ್ರಸನ್ನ ಹೊಳ್ಳ ತೀರ್ಥಹಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


