ಸುರತ್ಕಲ್: ಮನಸ್ಸು, ಮಾತು ಮತ್ತು ಕೃತಿಗಳಲ್ಲಿ ಸಮನಯ್ವ ಸಾಧಿಸಿ ಆದರ್ಶಪ್ರಾಯರಾಗಿ ಶತಮಾನದ ಬಾಳನ್ನು ಬಾಳಿದ ಕಯ್ಯಾರರ ಸಾಧನೆಗಳು ಅನನ್ಯ ಎಂದು ಹಿರಿಯ ಸಂಘಟಕ ಭುವನ ಪ್ರಸಾದ್ ಹೆಗ್ಡೆ ನುಡಿದರು. ಅವರು ಸುರತ್ಕಲ್ ನ ಎಸ್. ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಕವಿ ಕಯ್ಯಾರ ಕಿಞ್ಞಣ್ಣ ರೈ ನೂರಹನ್ನೊಂದರ ಹುಟ್ಟು ಹಬ್ಬದ ನೆನಪು ಸಮಾರಂಭದಲ್ಲಿ ನುಡಿದರು.
ನಿವೃತ್ತ ಪ್ರಾಧ್ಯಾಪಕ ಹಾಗೂ ಕಯ್ಯಾರರ ಪುತ್ರ ಡಾ. ಪ್ರಸನ್ನ ರೈ ಮಾತನಾಡಿ ಶಿಕ್ಷಕರಾಗಿ, ಕೃಷಿಕರಾಗಿ, ಆಡಳಿತಗಾರರಾಗಿ, ಸ್ವಾತಂತ್ಯ ಹೋರಾಟಗಾರರಾಗಿ, ಸಾಹಿತಿಯಾಗಿ ಕಯ್ಯಾರರು ಆದರ್ಶ ಪಥದಲ್ಲಿ ಮುನ್ನಡೆದವರು. ಕರ್ನಾಟಕ ಸರಕಾರದ ಅನುದಾನದ ಸಹಾಯದೊಂದಿಗೆ ಕಯ್ಯಾರರ ನೆನಪಿನ ಕಲಾ ಭವನ ಪೆರಡಾಲದಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದರು.
ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಮಾತನಾಡಿ ಕಯ್ಯಾರರ ಲೇಖನಗಳ ಸಮಗ್ರ ಸಂಪುಟ ಪ್ರಕಟವಾಗಬೇಕಾಗಿದ್ದು ನಿರಂತರ ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಕಯ್ಯಾರರು ಆದರ್ಶ ಮಾದರಿಯಾಗಿದ್ದಾರೆ ಎಂದರು.
ಪ್ರಾಧ್ಯಾಪಕಿ ಜ್ಯೋತಿ ರೈ ಮಾತನಾಡಿ ಮಾವನಾಗಿ ಕಯ್ಯಾರರು ಸ್ತೀ ಸಮಾನತೆಯ ಆದರ್ಶವನ್ನು ಪಾಲಿಸಿ ಅಕ್ಕರೆಯಿಂದ ಕಂಡವರು ಎಂದರು.
ರಂಗಭೂಮಿ ಕಲಾವಿದೆ ಗೀತಾ ಸುರತ್ಕಲ್, ಲೇಖಕಿ ದೇವಿಕಾ ನಾಗೇಶ್, ಕವಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಕಯ್ಯಾರರ ಕವನಗಳನ್ನು ವಾಚಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ. ಗುಣಕರ, ತುಳುವ ಮಹಾ ಸಭಾ ಮೂಲ್ಕಿ ವಲಯ ಅಧ್ಯಕ್ಷೆ ಕಕ್ವಗುತ್ತು ಬಾನುಮತಿ, ಗೋವಿಂದ ದಾಸ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಡಾ.ಸುಧಾ ಶೆಟ್ಟಿ ಕಯ್ಯಾರರ ಕುರಿತು ಅನುಭವಗಳನ್ನು ಹಂಚಿಕೊಂಡರು. ಕವಿ ಸುಬ್ರಾಯ ಭಟ್ ಸ್ವರಚಿತ ಕವನ ವಾಚಿಸಿದರು.
ವಿಮರ್ಶಕ ಡಾ. ವಾಸುದೇವ ಬೆಳ್ಳೆ ಮತ್ತು ಕವಿ ರಘು ಇಡ್ಕಿದು ಕಯ್ಯಾರರ ಕವಿತೆಗಳ ಅರ್ಥವಂತಿಕೆಯನ್ನು ನಿರೂಪಿಸಿದರು. ಕಯ್ಯಾರರ ಪುತ್ರಿ ದೇವಕಿ ದೇವಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಹಾಗೂ ಹಿರಿಯ ಸಂಶೋದಕಿ ಡಾ. ಇಂದಿರಾ ಹೆಗ್ಗಡೆಯವರು ಕಯ್ಯಾರರು ಕಿರಿಯ ಸಾಹಿತಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹವನ್ನು ತಿಳಿಸಿದರು.
ಡಾ. ಜ್ಯೋತಿ ಚೇಳ್ಯಾರು ಸ್ವಾಗತಿಸಿದರು. ಬೆನ್ನೆಟ್ ಅಮ್ಮನ್ನ ವಂದಿಸಿದರು. ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಶಕೀಲಾ, ಸಚಿತ, ಸತೀಶ್, ಲಕ್ಶ್ಮೀನಾರಾಯಣ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


