ಶ್ರೀನಿವಾಸ ಆಸ್ಪತ್ರೆ: ಪತ್ರಕರ್ತರು, ಕುಟುಂಬ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ

Upayuktha
0

 


ಮಂಗಳೂರು:ಸಮಾಜಕ್ಕಾಗಿ ದುಡಿಯುವವರ ಆರೈಕೆಎಂಬ ಧ್ಯೇಯದೊಂದಿಗೆ ಮುಕ್ಕದ ಶ್ರೀನಿವಾಸ ಆಸ್ಪತ್ರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಮತ್ತು ಅವರ ಕುಟುಂಬ ಸದಸ್ಯರಿಗಾಗಿ ಆಯೋಜಿಸಿದ್ದ ಒಂದು ವಾರದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಜೂನ್‌ 20ರಂದು ಶನಿವಾರ ಚಾಲನೆ ನೀಡಲಾಯಿತು.


ಶ್ರೀನಿವಾಸ  ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಡೇವಿಡ್ ರೊಸಾರಿಯೊ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಕರ್ತರ ಆರೋಗ್ಯ ಕಾಪಾಡುವುದು ನಮ್ಮ ಸಾಮಾಜಿಕ ಜವಾಬ್ದಾರಿ. ಅವರ ಸಂಘದ ಜೊತೆ ಸೇವಾ ಕಾರ್ಯ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ನಮಗೆ ಅತೀವ ಸಂತಸವಿದೆ. ಮುಂದಿನ ದಿನಗಳಲ್ಲಿ ಪತ್ರಕರ್ತರ ಆರೋಗ್ಯದ ವಿಷಯದಲ್ಲಿ ಅವರಿಗೆ ವಿಶೇಷ ಆರೋಗ್ಯ ಕಾರ್ಡ್‌ ಒದಗಿಸಿ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ, ಎಂದು ಭರವಸೆ ನೀಡಿದರು.


ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ಮಾತನಾಡಿ, ಪತ್ರಕರ್ತರು, ಛಾಯಾಗ್ರಾಹಕರು, ಟಿವಿ ಮಾಧ್ಯಮದ ಕ್ಯಾಮೆರಾಮನ್ಗಳು ಸೇರಿದಂತೆ ಬಹುತೇಕರು ಸಮಯ-ಸಂದರ್ಭ ನೋಡದೆ, ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಸುದ್ದಿಯ ಬೆನ್ನುಹತ್ತಿ ಓಡುವ ನಿತ್ಯ ಜಂಜಾಟದಲ್ಲಿ ನಾವು ನಮ್ಮ ಆರೋಗ್ಯವನ್ನೇ ಮರೆತುಬಿಡುತ್ತೇವೆ. ಇದು ನಮ್ಮ ಕುಟುಂಬಕ್ಕೂ ಮಾಡುವ ಅನ್ಯಾಯ. ಇದನ್ನು ಮನಗಂಡು ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಇಂದಿನಿಂದ ಜೂನ್ 27ರವರೆಗೆ ನಡೆಯುವ ಶಿಬಿರದ ಸದುಪಯೋಗವನ್ನು ಜಿಲ್ಲೆಯ ಎಲ್ಲಾ ಪತ್ರಕರ್ತ ಬಂಧುಗಳು ಪಡೆದುಕೊಳ್ಳಬೇಕು ಎಂದರು.


ಪತ್ರಕರ್ತರ ಒಳಿತಿಗಾಗಿ ನಮ್ಮ ಮನವಿಗೆ ತಕ್ಷಣ ಸ್ಪಂದಿಸಿ ಯೋಜನೆಯನ್ನು ಅನುಷ್ಠಾನಗೊಳಿಸಿದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಅವರಿಗೆ ಸಂಘದ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು. ಜೊತೆಗೆ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ವೈದ್ಯ ವೃಂದದವರ ಸೇವಾ ಮನೋಭಾವದ ಬೆಂಬಲಕ್ಕೆ ಧನ್ಯವಾದಗಳು ಎಂದು ಅವರು ನುಡಿದರು.


ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ ಮಾತನಾಡಿ, . ಶ್ಯಾಮ ರಾವ್ ಫೌಂಡೇಶನ್ ಸೇವಾ ಮನೋಭಾವದಿಂದ ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಅದನ್ನು ಯಾರೂ ಮರೆಯುವಂತಿಲ್ಲ. ಇದೀಗ ಪತ್ರಕರ್ತರ ಸಂಘದೊಂದಿಗೆ ಶ್ರೀನಿವಾಸ ಆಸ್ಪತ್ರೆ ಕೈಜೋಡಿಸಿ ನಮ್ಮ ಸದಸ್ಯರ ಮತ್ತು ಅವರ ಕುಟುಂಬದ ಉಚಿತ ಆರೋಗ್ಯ ತಪಾಸಣೆಗೆ ಎಲ್ಲಾ ರೀತಿಯ ಸಹಕಾರ ನೀಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ,ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ , ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯದ ಪ್ರತಿನಿಧಿ ಶ್ರೀನಿವಾಸ್ ಇಂದಾಜೆ, ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲ್ ಕುಮಾರ್,  ಶ್ರೀನಿವಾಸ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ. ಉದಯ್ ಕುಮಾರ್ ರಾವ್, ಶ್ರೀನಿವಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಡೇವಿಡ್ ರೊಸಾರಿಯೊ ಸೇರಿದಂತೆ ಆಸ್ಪತ್ರೆಯ ಹಿರಿಯ ವೈದ್ಯರು, ಆಡಳಿತ ವರ್ಗದವರು  ಉಪಸ್ಥಿತರಿದ್ದರು.

ಝರೀನಾ ಅವರು ಕಾರ್ಯಕ್ರಮ ನಿರೂಪಿಸಿದರು.

  

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top