ಮಂಗಳೂರು: ಜೂನ್ 22ರಂದು ಮಂಗಳೂರಿನ ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನ ಆರೋಗ್ಯ, ಸ್ವಚ್ಛತೆ ಮತ್ತು ಕ್ಷೇಮಾಭಿವೃದ್ಧಿ ಕ್ಲಬ್ ಸಂಘದವತಿಯಿಂದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಮುಖ್ಯ ಅತಿಥಿ ಆರ್ಟ್ ಆಫ್ ಲಿವಿಂಗ್ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕಿ ರಜನಿ ಟಿ. ರೈ ಯೋಗದ ಮಹತ್ವದ ಕುರಿತು ಮಾತನಾಡಿ, ಯೋಗ ಮತ್ತು ಧ್ಯಾನವು ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು. ನಿಯಮಿತ ಯೋಗಾಭ್ಯಾಸದಿಂದ ಒತ್ತಡ ಕಡಿಮೆಯಾಗುವುದಲ್ಲದೆ ಏಕಾಗ್ರತೆ ವೃದ್ಧಿಯಾಗಿ ಶಿಸ್ತುಬದ್ಧ ಹಾಗೂ ಸಮತೋಲನಯುತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು. ಅಲ್ಲದೆ ಪತಂಜಲಿ ಯೋಗ ಸೂತ್ರಗಳ ಮಹತ್ವವನ್ನು ವಿವರಿಸಿ, ಆತ್ಮಶಾಂತಿ, ಆತ್ಮನಿಗ್ರಹ ಹಾಗೂ ಜೀವನದಲ್ಲಿ ಸಾಮರಸ್ಯ ಸಾಧಿಸಲು ಅವುಗಳ ಪ್ರಸ್ತುತತೆಯನ್ನು ತಿಳಿಸಿದರು.
ವಕೀಲೆ ಹಾಗೂ ನೊಟರಿ, ಕಾನೂನು ಸಲಹಾಗಾರ್ತಿ ಎಸ್ ಸಿ ಎಸ್ ಸಮೂಹ ಶಿಕ್ಷಣ ಸಂಸ್ಥೆ ಶ್ರೀದೇವಿ ಆರ್. ಅಮೀನ್ ಮಾತನಾಡಿ, ಯೋಗವು ಕೇವಲ ದೇಹವನ್ನು ಸದೃಢಗೊಳಿಸುವುದಲ್ಲ, ಮನಸ್ಸನ್ನು ಸಮತೋಲನಗೊಳಿಸುವ ಸಾಧನವೂ ಆಗಿದೆ. ಯೋಗವು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ; ಎಲ್ಲರೂ ಧರ್ಮಭೇದವಿಲ್ಲದೆ ಅಳವಡಿಸಿಕೊಳ್ಳಬೇಕಾದ ಜೀವನ ಪದ್ಧತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾಣ್ ವಹಿಸಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ಸರಸ್ವತಿ ಚಿನ್ನಕಟ್ಟಿ ಅವರು ಈ ವರ್ಷದ ಯೋಗ ದಿನಾಚರಣೆಯ ಧ್ಯೇಯವಾಕ್ಯ “ಆರೋಗ್ಯಕರ ವಯೋವೃದ್ಧಿಗಾಗಿ ಯೋಗ" ಇದರ ಉದ್ದೇಶವನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಒಟ್ಟು 25 ಮಂದಿ ಅಧ್ಯಾಪಕರು ಭಾಗವಹಿಸಿ ವಿವಿಧ ಯೋಗಾಸನಗಳು ಹಾಗೂ ಉಸಿರಾಟದ ಅಭ್ಯಾಸಗಳನ್ನು ಪ್ರದರ್ಶಿಸಿದರು. ಯೋಗದ ಮೂಲಕ ಆರೋಗ್ಯಕರ ಜೀವನಶೈಲಿ ಹಾಗೂ ಸುಂದರ ವಯೋವೃದ್ಧಿಯನ್ನು ಸಾಧಿಸುವ ಕುರಿತು ಉಪಯುಕ್ತ ಮಾಹಿತಿಯನ್ನು ಕಾರ್ಯಕ್ರಮವು ಒದಗಿಸಿತು.
ವಾಣಿಜ್ಯ ವಿಭಾಗದ ಉಪನ್ಯಾಸಕಿ ದೀಕ್ಷಿತಾ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕಿ ಸಂಗೀತಾ ಶಾನುಭೋಗ ವಂದಿಸಿದರು. ಇಂಟೀರಿಯರ್ ಡಿಸೈನ್ ಉಪನ್ಯಾಸಕಿ ಫಾತಿಮತುಲ್ ಅಜ್ಮಿಯಾ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


