ಕುಟುಂಬಗಳಲ್ಲಿನ ಸವಾಲುಗಳ ಸೂಕ್ತ ನಿರ್ವಹಣೆ

Upayuktha
0

ಇಂದಿನ ಮಕ್ಕಳೇ ಮುಂದಿನ ಜನಾಂಗ. ನಮ್ಮ ಕುಟುಂಬ ಸಂಸ್ಕೃತಿಯ ಒಂದು ಮುಖ್ಯ ಘಟಕ ಮಕ್ಕಳು. ಇಂದಿನ ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಗಟ್ಟಿಯಾಗಿ ಬೆಳೆದರೆ ಮುಂದಿನ ಜನಾಂಗ ಸುರಕ್ಷಿತ. ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವ ಬಗ್ಗೆ ಚಾಣಕ್ಯ ನೀತಿಯಲ್ಲಿ ಈ ಶ್ಲೋಕವಿದೆ. 


ಉಪಾಸ್ಯಂತು ಚತುರ್ವರ್ಷಾಣಿ ಮೈತ್ರೀಭಾವೇನ ಸೀಯತಾಂ।

ಪಂಚವರ್ಷಾಣಿ ತಥಾ ದಂಡೇನ ಶಾಸಯೇತ್।

ಷೋಡಶವರ್ಷೇಣ ನ ತರ್ಹಿ ತಾನ್ ವಿಚಾರ್ಯಂ ವಿವಿಚಿಂತ್ಯಚೇತಸಃ॥


ಇದನ್ನು ಸ್ಥೂಲವಾಗಿ ಹೀಗೆ ಅರ್ಥ ಮಾಡಿಕೊಳ್ಳಬಹುದು, ಐದು ವರ್ಷದವರೆಗೆ ಮಕ್ಕಳನ್ನು ಬಹಳ ಮುದ್ದಾಗಿ, ಸುರಕ್ಷತೆಯಿಂದ ಮತ್ತು ಪ್ರೀತಿಯಿಂದ ಬೆಳೆಸಬೇಕು. ಐದರಿಂದ ಹತ್ತು ವರ್ಷದವರೆಗೂ ಶಿಸ್ತು ಮತ್ತು ನಿಯಮಗಳನ್ನು ಪಾಲಿಸುವಂತೆ ಮಾಡುವ ಸಮಯ. ತದನಂತರ ಹದಿನಾರು ವರ್ಷದ ನಂತರ  ವಿಚಾರ ವಿಮರ್ಶೆ ಮಾಡಿ ಅವನೊಂದಿಗೆ ಗೆಳೆಯನಂತೆ ವ್ಯವಹರಿಸಬೇಕು, ಮನೆಯ ಸಾಧ್ಯವಾದಷ್ಟು ಮಟ್ಟಿನ ನಿರ್ಧಾರಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಬೇಕು. 


ಆದರೆ ಇವತ್ತಿನ ವಿಭಕ್ತ ಕುಟುಂಬಗಳಲ್ಲಿ ಮುಖ್ಯವಾಗಿ ಐದು ವರ್ಷದ ವರೆಗಿನ ಮಕ್ಕಳಿಗೆ ಸಂಪೂರ್ಣ ಪ್ರೀತಿ, ಸುರಕ್ಷತೆಯ  ಭಾವ ಸಿಗುವುದು ಕಡಿಮೆಯಾಗಿದೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ತಂದೆ ತಾಯಿ ಇಬ್ಬರು ಕೆಲಸಕ್ಕೆ ಹೋಗುವುದು ಒಂದು ಮುಖ್ಯ ಕಾರಣ. ಇದರಿಂದಾಗಿ ಅವರಿಗೆ ಅರ್ಥಪೂರ್ಣ ಸಮಯವನ್ನು ಕೊಡಲು ಸಾಧ್ಯವಾಗುತ್ತಿಲ್ಲ.


ಇಂದಿನ ವೇಗದ ಯುಗದಲ್ಲಿ ಕೆಲಸ ಮಾಡುವ ಕ್ಷೇತ್ರದಲ್ಲಿ ಸ್ಪರ್ಧೆಯ ತೀವ್ರತೆಯಿಂದ ಹೆತ್ತವರು ಬಳಲುತ್ತಿದ್ದಾರೆ. ಇದರಿಂದಾದ ಮಾನಸಿಕ ಒತ್ತಡದಿಂದ ಕುಟುಂಬದ ವ್ಯವಹಾರದಲ್ಲಿ ವ್ಯತಿರಿಕ್ತ ಪರಿಣಾಮವಾಗುತ್ತಿದೆ.


ತನ್ನ ಕುಟುಂಬದ ಸದಸ್ಯರನ್ನು ಇನ್ನೊಂದು ಕುಟುಂಬದ ಸದಸ್ಯರೊಂದಿಗೆ ಅಸಮರ್ಪಕವಾಗಿ ಹೋಲಿಕೆ ಮಾಡುವುದು, ಆಧ್ಯಾತ್ಮದ ಒಲವು ಕಡಿಮೆ ಇರುವುದು ಜೀವನದ ಗುರಿಯ ಬಗ್ಗೆ ಸ್ಪಷ್ಟ ಅರಿವು ಇಲ್ಲದಿರುವುದು ಈ ಎಲ್ಲಾ ಕಾರಣಗಳಿಂದಾಗಿ ಮಕ್ಕಳಿಗೆ ಗುಣಮಟ್ಟದ ಸಮಯ ಕೊಡುವುದು ಸಾಧ್ಯವಾಗುತ್ತಿಲ್ಲ. 


ದಾಂಪತ್ಯದ ವಿರಸ ಮನೆಯಲ್ಲಿ ಅಶಾಂತಿ ಮೂಡಿಸುತ್ತಿದೆ. ಇದು ಅವಿರತವಾಗಿ ನಡೆದಾಗ ಅದು ಮಕ್ಕಳ ಮೇಲೆ ಶಾಶ್ವತವಾದ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಇವುಗಳು ಮಕ್ಕಳನ್ನು ಅವರು ಬೆಳೆಯುವ ಪ್ರಾಯದಲ್ಲಿ ಮಂಕಾಗಿಸುತ್ತದೆ. ಅವರು ತಮ್ಮ ಮುಕ್ತವಾದ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಹಿಂಜರಿಯುತ್ತಾರೆ. 


ಪೋಷಕರ ನಿರಂತರ ಮನಸ್ತಾಪಗಳು,ಜಗಳಗಳು ಮಕ್ಕಳ ಮೇಲೆ ಬೀರುವ ಪರಿಣಾಮಗಳನ್ನು ವಿವರವಾಗಿ ನೋಡೋಣ. 


1. ಭಾವನಾತ್ಮಕ ಅಸ್ಥಿರತೆ.

ಮಕ್ಕಳಿಗೆ ಸುರಕ್ಷಿತ ಭಾವನೆ ಅಗತ್ಯ. ಪೋಷಕರು ಹೆಚ್ಚಾಗಿ ಜಗಳವಾಡುವಾಗ, ಮನೆ ಎಂಬುದು ಸುರಕ್ಷಿತ ಸ್ಥಳವೆಂಬ ಭಾವನೆ ಕಳೆದುಹೋಗುತ್ತದೆ. ಇದರಿಂದ ಮಕ್ಕಳು ಆತಂಕಗೊಳ್ಳುತ್ತಾರೆ, ಸದಾ ಭಯದಲ್ಲಿ ಇರುತ್ತಾರೆ ಅಥವಾ “ಮುಂದೇನು ಆಗಬಹುದು?” ಎಂಬ ಚಿಂತೆಯಲ್ಲಿ ಇರುತ್ತಾರೆ.


2. ಭಾವನಾತ್ಮಕ ಸಹನಶಕ್ತಿ ಕಡಿಮೆಯಾಗುವುದು.

ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವುದನ್ನು ಕಲಿಯಬೇಕಾದ ಸಮಯದಲ್ಲಿ, ಮಕ್ಕಳು ಭಯ, ತಪ್ಪಿಸಿಕೊಳ್ಳುವ ಸ್ವಭಾವ ಅಥವಾ ಭಾವನೆಗಳನ್ನು ಅಡಗಿಸಿಕೊಳ್ಳುವುದನ್ನು ಕಲಿಯುತ್ತಾರೆ. ಇದು ಕ್ರಮೇಣ ಅವರ ಆತ್ಮಸ್ಥೈರ್ಯವನ್ನು ದುರ್ಬಲಗೊಳಿಸುತ್ತದೆ.


3. ಭಾವನೆಗಳನ್ನು ವ್ಯಕ್ತಪಡಿಸಲು ಕಷ್ಟ ಪಡುತ್ತಾರೆ. 

ಕೆಲವು ಮಕ್ಕಳು ಭಾವನಾತ್ಮಕವಾಗಿ ಮುಚ್ಚಿಕೊಳ್ಳುತ್ತಾರೆ, ಭಾವನಾತ್ಮಕ ಚುರುಕುತನ ಇರುವುದಿಲ್ಲ, ಉದಾಸಿನತೆಯೇ ಹೆಚ್ಚಾಗಿರುತ್ತದೆ. ಇನ್ನೂ ಕೆಲವರು ಅತಿಯಾಗಿ ಪ್ರತಿಕ್ರಿಯಿಸುತ್ತಾರೆ  ಕೋಪ, ಅಳಲು, ಇತ್ಯಾದಿ ವರ್ತನೆಗಳನ್ನು ಬಹುಬೇಗ ವ್ಯಕ್ತಪಡಿಸುತ್ತಾರೆ. ಏಕೆಂದರೆ ಶಾಂತವಾಗಿ ಭಾವನೆಗಳನ್ನು ನಿಯಂತ್ರಿಸುವ ಮಾದರಿಯನ್ನು ಅವರು ನೋಡಿರಲ್ಲ.


4. ಸ್ವಯಂ ದೋಷಾರೋಪಣೆ ಮತ್ತು ಅಪರಾಧಭಾವ

ಪೋಷಕರ ಜಗಳಕ್ಕೆ ಮಕ್ಕಳು ತಮ್ಮನ್ನೇ ಕಾರಣವೆಂದುಕೊಳ್ಳುತ್ತಾರೆ, ಅದು ಸತ್ಯವಲ್ಲದಿದ್ದರೂ. ಇದು ನಿಧಾನವಾಗಿ ಆತ್ಮಗೌರವವನ್ನು ಕುಗ್ಗಿಸುತ್ತದೆ ಮತ್ತು “ನಾನು ಅಪ್ರಮುಖ” ಎಂಬ ಭಾವನೆಯನ್ನು ಹುಟ್ಟಿಸುತ್ತದೆ.


5. ವಯಸ್ಕ ಜೀವನದ ಸಂಬಂಧಗಳ ಮೇಲೆ ಪರಿಣಾಮ

ಇಂತಹ ಮಕ್ಕಳು ದೊಡ್ಡವರಾದ ಮೇಲೆ, ಸಂಘರ್ಷಕ್ಕೆ ಭಯಪಟ್ಟು ಎಲ್ಲವನ್ನೂ ತಪ್ಪಿಸಿಕೊಳ್ಳಬಹುದು, ಅಥವಾ ಜಗಳ ಮತ್ತು ಅಶಾಂತಿಯನ್ನು ಸಂಬಂಧಗಳ ಸಹಜ ಭಾಗವೆಂದು ಒಪ್ಪಿಕೊಳ್ಳಬಹುದು. ಇವೆಲ್ಲವೂ ಅವರು ಬಾಲ್ಯದಲ್ಲಿ ಕಂಡದ್ದರಿಂದ ಬರುತ್ತವೆ. ಇದೆಲ್ಲದರಿಂದಮಕ್ಕಳ ಭವಿಷ್ಯ ನಾಶವಾಗುತ್ತದೆ ಎಂದು ನಾವು ನಿರ್ಧಾರಕ್ಕೆ ಬರುವ ಅಗತ್ಯವಿಲ್ಲ.

 

ಪೋಷಕರ ಸಂಘರ್ಷಕ್ಕಿಂತ ಮುಖ್ಯವಾದುದು ಎಂದರೆ ಅದು ಎಷ್ಟು ಬಾರಿ ನಡೆಯುತ್ತದೆ, ಎಷ್ಟು ತೀವ್ರವಾಗಿರುತ್ತದೆ, ಶಾಂತವಾಗಿ ಪರಿಹಾರವಾಗುತ್ತದೆಯೇ ಎಂಬುದು. ಪೋಷಕರು ಜಗಳವಾಡಿ ನಂತರ ಶಾಂತವಾಗಿ ಒಪ್ಪಂದಕ್ಕೆ ಬರುವುದನ್ನು ಮಕ್ಕಳು ನೋಡಿದರೆ, ಅದು ಅವರ ಭಾವನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ — ಸಂವಹನ, ಕ್ಷಮೆ, ಮತ್ತು ನಂಬಿಕೆಯನ್ನು ಕಲಿಸುತ್ತದೆ. ಭಿನ್ನಾಭಿಪ್ರಾಯಗಳೂ, ವಿರಸವು ಇದ್ದರೂ ಅದನ್ನು ಮಕ್ಕಳ ಎದುರೇ ನ್ಯಾಯವಾಗಿ ಪರಿಹರಿಸಿದಲ್ಲಿ  ಅವರಿಗೆ ಅದರಿಂದ ಭಾವನಾತ್ಮಕ ಸ್ತೈರ್ಯ ಬರುತ್ತದೆ. ಉತ್ತರ ಕಾಣದ ಚರ್ಚೆಗಳಿಂದಾಗಿ ಮಕ್ಕಳು ಆತಂಕ ಮತ್ತು ಅಸುರಕ್ಷತೆಯ ಭಾವವನ್ನು ಹೊಂದುತ್ತಾರೆ.


ಸಹಜವಾಗಿ ಚಿಕ್ಕ ಮಕ್ಕಳು ತಂದೆ ತಾಯಂದಿರು ಹೇಳಿದ್ದನ್ನು ಕೇಳುವುದರಿಂದ ಆ ಪ್ರಾಯದಲ್ಲಿ ಅಷ್ಟು ತೊಂದರೆ  ಕಾಣುವುದಿಲ್ಲ. ಆದರೆ ಮಕ್ಕಳು ಹದಿಹರೆಯಕ್ಕೆ ಬಂದಾಗ ಈ ತೊಂದರೆಗಳು ಉಲ್ಬಣಗೊಂಡು ಇದು ಬೇರೆ ಬೇರೆ ವರ್ತನೆಗಳ ಬದಲಾವಣೆಗಳ ಮೂಲಕ ಕಾಣಲು ಶುರುವಾಗುತ್ತದೆ. ಅಗತ್ಯಕ್ಕೂ ಹೆಚ್ಚಾದ ಮೊಬೈಲು ಉಪಯೋಗ ,ಕೋಣೆಯಲ್ಲಿ ಬಾಗಿಲು ಹಾಕಿ ಒಬ್ಬನೇ ಕೂತುಕೊಳ್ಳುವುದು, ಹೆತ್ತವರೊಂದಿಗೆ ಒರಟಾದ ಮಾತುಕತೆ, ಊಟಕ್ಕೆ ಒಟ್ಟಿಗೆ ಕೂತುಕೊಳ್ಳಲು ಬಾರದಿರುವುದು, ದುರಾಭ್ಯಾಸಗಳು, ವಿದ್ಯಾಭ್ಯಾಸದಲ್ಲಿ ಕುಂಠಿತ, ಇದೆಲ್ಲವೂ ಹೆಚ್ಚಾಗಿ ಅಸಂಗತ ಬಾಲ್ಯದ ಪರಿಣಾಮವಾಗಿರುತ್ತದೆ.


ಇದುವರೆಗೆ ಕುಟುಂಬದ ಮುಖ್ಯ ಘಟಕವಾದ ಮಗುವಿನ ಬೆಳವಣಿಗೆಯ ಬಗ್ಗೆ ತಿಳಿಕೊಂಡೆವು. ಇದಲ್ಲದೆ ಕುಟುಂಬದಲ್ಲಿ ಬರುವ ಸಾಧಾರಣ ಸವಾಲುಗಳೆಂದರೆ, ಹಳ್ಳಿಯಲ್ಲಿರುವ ಅಣ್ಣತಮ್ಮಂದಿರಗಳೊಂದಿಗೆ ಪೇಟೆಯಲ್ಲಿರುವವರ ಸಂಬಂಧ, ಅತ್ತೆ ಸೊಸೆಯ ಸಂಬಂಧ, ಪ್ರಾಯಕ್ಕೆ ಬಂದ ಮಗನಿಗೆ ಆಸ್ತಿಯ ಜವಾಬ್ದಾರಿ ಕೊಡದಿರುವುದು, ಹಿರಿಯರೊಂದಿಗೆ ವ್ಯವಹಾರ ಇತ್ಯಾದಿ. ಇವೆಲ್ಲವೂ ಕುಟುಂಬದ ಮಾನಸಿಕ ಆರೋಗ್ಯದಮೇಲೆ ಪರಿಣಾಮವನ್ನು ಬೀರುತ್ತದೆ.


ಪ್ರತಿಯೊಬ್ಬ ಮನುಷ್ಯನಿಗೂ ತಾನು ಜೀವನದಲ್ಲಿ ವಿಕಾಸ ಹೊಂದಬೇಕು ಬೆಳವಣಿಗೆಯಾಗಬೇಕು ಎಂಬ ಮನಸ್ಥಿತಿ ಇರುತ್ತದೆ. ಅಂತಹ ಮನಸ್ಥಿತಿ ಪ್ರಬಲವಾಗಿ ಇದ್ದವರು ತನ್ನ ಕುಟುಂಬದಲ್ಲಿ ಇರುವ ತೊಂದರೆಯನ್ನು ಪರಿಹರಿಸಲು ಏನಾದರೂ ಮಾರ್ಗವಿದೆಯಾ ಎಂದು ಚಿಂತಿಸುತ್ತಾರೆ. ಆದರೆ ಋಣಾತ್ಮಕವಾಗಿ ಯೋಚಿಸುವ ಕುಟುಂಬದ ಸದಸ್ಯರು ತಮ್ಮ ಪಟ್ಟ ಭದ್ರ ಹಿತಾಸಕ್ತಿ ಗಳಿಗೆ ತೊಂದರೆ ಬರಬಹುದು ಎಂದು ಬದಲಾವಣೆಗೆ ಹೆದರಿಕೊಂಡು, ಇದು ಎಲ್ಲಾ ಮನೆಯಲ್ಲಿಯೂ ಇರುವ ತೊಂದರೆಯೇ ನಾವು ಅನುಭವಿಸಿಯೇ ತೀರಬೇಕು, ಎಲ್ಲಾ ಮನೆಯ ದೋಸೆಯೂ ತೂತೇ ಎಂದೆಲ್ಲ  ಸಾಬೂಬು ಕೊಡುತ್ತಾರೆ. ಆದರೆ ಧನಾತ್ಮಕವಾಗಿ ಚಿಂತಿಸುವ ಕುಟುಂಬದ ಸದಸ್ಯನು  ಬಂದ ಸವಾಲಿನ ಪರಿಹಾರಕ್ಕಾಗಿ   ಬೇರೆ ಬೇರೆ ದಾರಿಗಳನ್ನು ಉಪಾಯಗಳನ್ನು ಕಂಡುಕೊಳ್ಳುತ್ತಾನೆ ಮತ್ತು ಅವುಗಳಿಂದ ಪರಿಹಾರಗಳನ್ನು ಪಡೆಯುತ್ತಾನೆ.


ಅವನು ತರಬೇತಿ ಪಡೆದ ಆಪ್ತ ಸಲಹಾಕಾರದಿಂದ ಸರಿಯಾದ ಸಲಹೆ ಪಡೆದು ತನ್ನ ಕುಟುಂಬದ ವ್ಯವಸ್ಥೆಯನ್ನು ಸಕಾರಾತ್ಮಕವಾಗಿ ಬದಲಿಸಿಕೊಳ್ಳಬಹುದು. ತಾನು ತನ್ನ ನಡತೆಯಲ್ಲಿ ಮಾಡಿಕೊಂಡ ಸಣ್ಣಪುಟ್ಟ ಬದಲಾವಣೆ ಇಡೀ ಕುಟುಂಬದ ವಾತಾವರಣವನ್ನು ತಿಳಿಯಾಗಿಸಬಹುದು. 


ಇದಕ್ಕೆ ಒಂದು ದೃಢ ಮನಸ್ಸು ಮಾಡಬೇಕು ಮತ್ತು ಸಹಾಯಪಡುಕೊಳ್ಳುವಲ್ಲಿ ಹಿಂಜರಿಯಬಾರದು. ಮಾನಸಿಕ ಅನಾರೋಗ್ಯ ಒಂದು ಕಳಂಕ ಎಂದು ತಿಳಿಯಬಾರದು. ಅದು ಕೂಡ ನಮ್ಮ ದೇಹದ ಅಂಗವಾದ ಮೆದುಳಿನಲ್ಲಿ ಸ್ರವಿಸುವ ಹಾರ್ಮೋನುಗಳ ವೈಪರೀತ್ಯದಿಂದ ಉಂಟಾಗುವ ಒಂದು ತೊಂದರೆ. ಅಂದರೆ ಮನಸ್ಸಿನ ಖಿನ್ನತೆ ಅಥವಾ ಆತಂಕ ನಮ್ಮ ಮೆದುಳಿನಲ್ಲಿ ಸ್ರವಿಸುವ ಹಾರ್ಮೋನುಗಳ ಏರುಪೇರಿಂದಾಗಿ ಉಂಟಾಗುತ್ತದೆ.  ಆ ದೃಷ್ಟಿಯಿಂದ ಅದನ್ನೂ ಒಂದು ದೈಹಿಕ ತೊಂದರೆ ಎಂದೇ ತಿಳಿದುಕೊಳ್ಳಬೇಕು.


ತಾನು ಮಾನಸಿಕ ತೊಂದರೆಯಿಂದ ಹೊರ ಬರಬೇಕು,ಎಂದು ಗುರಿಯಿಟ್ಟು ಪ್ರಯತ್ನ ಮಾಡಿದರೆ ಉತ್ತಮ ಫಲ ಖಂಡಿತಾ ಸಿಗುತ್ತದೆ. ಆ ಕುಟುಂಬ ಸವಾಲನ್ನು ಸಮರ್ಥವಾಗಿ ಎದುರಿಸಿ ಸುಖ ಶಾಂತಿಯಿಂದ ಮುಂದಿನ ಜೀವನವನ್ನು ಸಾಗಿಸಬಹುದು.


ಉದಯಶಂಕರ ಪದ್ಯಾಣ 

ಆಪ್ತ ಸಲಹಾ ಕೇಂದ್ರ, ಬೆಂಗಳೂರು.

ಉಚಿತ ಸಹಾಯವಾಣಿ ಸಂಖ್ಯೆ-6632055380


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top