ಮಂಗಳೂರು: ನಾಗರಿಕ ಸೇವಾ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸೂಕ್ತ ಮಾರ್ಗದರ್ಶನ, ಪ್ರೇರಣೆ ಮತ್ತು ಸ್ಪಷ್ಟ ದಿಕ್ಕುನಿರ್ದೇಶನ ನೀಡುವ ಉದ್ದೇಶದಿಂದ ನಗರದಲ್ಲಿ ವಿಶೇಷ ನಾಗರಿಕ ಸೇವಾ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ.
ಮಂಗಳೂರು IAS, ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಹಾಗೂ ರಾಮಕೃಷ್ಣ ಮಿಷನ್ ಮಂಗಳೂರು ಇವರ ಜಂಟಿ ಸಹಯೋಗದಲ್ಲಿ “ಮಾರ್ಗದರ್ಶಿ – Cracking the UPSC Examination” ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಜೂನ್ 28ರ ಭಾನುವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಿಷನ್ ಸಭಾಂಗಣದಲ್ಲಿ ಈ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದು ಆಯೋಜಕರು ಮಂಗಳವಾರ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
"Different but NOT Difficult Exams" ಎಂಬ ಪ್ರಮುಖ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮವು ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ರೊಯ್ ಕ್ಯಾಸ್ಟೆಲಿನೊ ಹಾಗೂ ಮಂಗಳೂರು IAS ಸಂಸ್ಥಾಪಕ ಸಂತೋಷ್ ರಾವ್ ಅವರ ನೇತೃತ್ವದಲ್ಲಿ ಮೂಡಿಬರುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಆತ್ಮವಿಶ್ವಾಸದಿಂದ ಎದುರಿಸಲು ಅಗತ್ಯವಾದ ಸರಿಯಾದ ತಯಾರಿ ವಿಧಾನ ಮತ್ತು ಸ್ಪಷ್ಟತೆಯನ್ನು ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿಗಳಾದ ಸ್ವಾಮಿ ಜಿತಕಾಮಾನಂದಜಿ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅರುಣ್ ಜೇಜಿ ಚಕ್ರವರ್ತಿ (IPS), ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ (IPS) ಹಾಗೂ ಮಂಗಳೂರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಕಾಂತ್ ಸೋಮನಾಥ್ ವಿಭೂತೆ (IFS) ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅಭ್ಯರ್ಥಿಗಳಿಗೆ ಪ್ರೇರಣೆ ನೀಡಲಿದ್ದಾರೆ.
ಅಲ್ಲದೆ, ವಿಷಯ ತಜ್ಞರಾಗಿ UPSC ಮಾಸ್ಟರ್ ಟ್ರೈನರ್ʼಗಳಾದ ಮೋಹನ್ ಕೃಷ್ಣಮೂರ್ತಿ ಮತ್ತು ಚಂದ್ರಮೋಹನ್ ಇನಗಂಟಿ, ಬಲ್ಮಠದ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುಮನಾ ಬಿ., ಜಾಗತಿಕ ಮಟ್ಟದ ಗೂಗಲ್ ಹಾಗೂ ಮೈಕ್ರೋಸಾಫ್ಟ್ ಪ್ರಮಾಣಿತ ಶಿಕ್ಷಣ ತಜ್ಞರಾದ ಡಾನ್ ಪ್ರಕಾಶ್ ಮತ್ತು ಮಂಗಳೂರು IAS ಸಂಸ್ಥಾಪಕರಾದ ಸಂತೋಷ್ ರಾವ್ ಅವರುಗಳು ಭಾಗವಹಿಸಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸಗಳ ಮೂಲಕ ಮಾರ್ಗದರ್ಶನ ನೀಡಲಿದ್ದಾರೆ.
ಈ ಕಾರ್ಯಾಗಾರದಲ್ಲಿ ಮುಖ್ಯವಾಗಿ UPSC ಪರೀಕ್ಷೆಯ ಮಾದರಿ, ಪರಿಣಾಮಕಾರಿ ಅಧ್ಯಯನ ತಂತ್ರಗಳು, ಸಮಯ ನಿರ್ವಹಣೆ ಮತ್ತು ಉತ್ಪಾದಕತೆ ವೃದ್ಧಿಯ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಗುವುದು. ಇದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಸಾಮಾನ್ಯವಾಗಿ ಮಾಡುವ ತಪ್ಪುಗಳ ಕುರಿತು ಜಾಗೃತಿ ಮೂಡಿಸಿ, ತಜ್ಞರೊಂದಿಗೆ ನೇರ ಪ್ರಶ್ನೋತ್ತರ ಹಾಗೂ ವೃತ್ತಿ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಬೆಳಕು ಚೆಲ್ಲಲಾಗುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಎಲ್ಲಾ ಅಧಿವೇಶನಗಳಿಗೆ ಉಚಿತ ಪ್ರವೇಶ, ಊಟದ ವ್ಯವಸ್ಥೆ ಹಾಗೂ ಇ-ಪ್ರಮಾಣಪತ್ರವನ್ನು ನೀಡಲಾಗುವುದು. ಜೊತೆಗೆ ಭವಿಷ್ಯದ ವಿದ್ಯಾರ್ಥಿವೇತನ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳ ಸೌಲಭ್ಯಗಳೂ ಲಭ್ಯವಾಗಲಿವೆ.
ನಾಗರಿಕ ಸೇವೆ ಹಾಗೂ ಸರ್ಕಾರಿ ಉದ್ಯೋಗ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಆಸನಗಳು ಸೀಮಿತವಾಗಿರುವುದರಿಂದ ಮೊದಲಿಗೆ ನೋಂದಾಯಿಸುವವರಿಗೆ ಆದ್ಯತೆ ನೀಡಲಾಗುತ್ತಿದ್ದು, ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ನೋಂದಣಿ ಶುಲ್ಕ 200 ರೂಪಾಯಿಗಳಾಗಿರುತ್ತದೆ. ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಐಎಎಸ್ ಸಂಸ್ಥಾಪಕ ಸಂತೋಷ್ ರಾವ್, ಸಂದೇಶ ಫೌಂಡೇಶನ್ ನಿರ್ದೇಶಕ ಫಾ. ರೋಶನ್ ರೊಸಾರಿಯೊ, ರಚನಾ ಸಂಸ್ಥೆಯ ಅಧ್ಯಕ್ಷ ರೊಯ್ ಕ್ಯಾಸ್ಟೆಲಿನೊ ಮತ್ತು ಕಾರ್ಯದರ್ಶಿ ಆ್ಯಲ್ರನ್ ರೊಡ್ರಿಗಸ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


