ಕರ್ನಾಟಕದ ರಾಜಕೀಯ ಎಂಬ ಮೆಗಾ ಸೀರಿಯಲ್...

Upayuktha
0

 


136 ಶಾಸಕರ ಬಲದ ಬಹುಮತದೊಂದಿಗೆ ಗೆದ್ದ ಕಾಂಗ್ರೆಸ್ ಪಕ್ಷ ಆರಂಭದಲ್ಲಿ ಸರ್ಕಾರ ರಚಿಸುವಾಗಲೇ ತಿಂಗಳುಗಳ‌ ಕಾಲ ಮುಗ್ಗರಿಸುತ್ತ ಅಂತೂ ಸರ್ಕಾರ ರಚಿಸಿತ್ತು. ಆಗ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಅಲ್ಲಿಂದಲೇ ಒಳಮುನಿಸು, ವೈಮನಸ್ಸು ಈರ್ವರಲ್ಲೂ ಇತ್ತು. ಪಕ್ಷದೊಳಗೂ ಇದ್ದೇ ಇತ್ತು. ಎರಡು ಬಣಗಳಾಗಿ ಒಳಗೊಳಗೇ ವೈರಸ್ಯವಿದ್ದರೂ ಹೊರಗೆ ಮಾತ್ರ ನಾಟಕದ ಸ್ತ್ರೀಯಂತೆ ಬಿನ್ನಾಣವನ್ನು ತೋರಿಸುತ್ತಿತ್ತು. ಈ ತೋರಿಕೆಯ ಬಿನ್ನಾಣ‌ ಮೂರು ವರ್ಷಗಳ‌ ಕಾಲ ಸಾಗುತ್ತಲೇ ಬಂದು ಇಂದು‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಿದ್ಧರಾಮಯ್ಯನವರು ಬಗೆಹರಿಸಿದರೆ? ಯಾಕೆ ರಾಜೀನಾಮೆ ಕೊಡಬೇಕು ಎಂದು ಸಿದ್ಧರಾಮಯ್ಯನವರ ಬಣ ಪ್ರಶ್ನಿಸುತ್ತಿದೆ. ಅವರ ಸಮುದಾಯದವರು ನಾವು ಇದನ್ನು ವಿರೋಧಿಸುತ್ತೇವೆ ಎಂದಿದ್ದಾರೆ. ಡಿಕೆಶಿ‌ ಮುಖ್ಯಮಂತ್ರಿ ಆಗಬೇಕೆಂದು ಒಕ್ಕಲಿಗರು ಹೋರಾಟ ಮಾಡಿದ್ದರು. ಈ ಮಧ್ಯೆ ಹಲವು ಕಾಂಗ್ರೆಸ್‌ ನಾಯಕರು ತಲೆಗೊಂದರಂತೆ ಹೇಳಿಕೆಗಳನ್ನು ಇಬ್ಬರ ಪರವಾಗಿಯೂ ವಿರೋಧವಾಗಿಯೂ ಕಳೆದ ಆರು ತಿಂಗಳಿಂದ ಕೊಡುತ್ತಲೇ ಬಂದಿದ್ದಾರೆ. ಆಫ್ ಕೋರ್ಸ್ ಈಗಲೂ ಅದು ನಡೆಯುತ್ತಿದೆ. ಇದೊಂಥರ ಸೀರಿಯಲ್ ಹಾಗೆ ಸಾಗುತ್ತಿದೆ. ಇವರಿಗೆ ಓಟು ಕೊಟ್ಟು ಮಂಗನಂತೆ ಕರ್ನಾಟಕದ ಜನತೆ ನೋಡುತ್ತಿದೆ. ಒಂದು ಸಲ ಓಟು ಕೊಟ್ಟಮೇಲೆ ಮುಗೀತು, ಆ ಮೇಲಿನ ಯಾವುದೂ ಮತದಾರರ ಕೈಯಲ್ಲಿರುವುದಿಲ್ಲ. ಪ್ರಶ್ನೆ ಮಾಡುವುದಕ್ಕೂ ಅವಕಾಶ ಇಲ್ಲದ ಈ ವ್ಯವಸ್ಥೆಯ ಬಗ್ಗೆಯೇ ಅಸಹನೀಯವೂ ಬೇಸರವೂ ಹುಟ್ಟಿದೆ.  


ಮುಖ್ಯವಾಗಿ, ಕಾಂಗ್ರೆಸ್ ಹೈಕಮಾಂಡ್ ಚುನಾವಣಾ ಪೂರ್ವದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಣೆ ಮಾಡಬೇಕಿತ್ತು.‌ ಆಗ ಮಾಡಲಿಲ್ಲ. ಹೋಗಲಿ, ಗೆದ್ದುಬಂದ ಮೇಲೆ ಸರ್ಕಾರ ರಚಿಸುವ ಹೊತ್ತಲ್ಲಿ‌ ಮಾಡಬೇಕಿತ್ತು. ಆಗ ಸಿದ್ಧರಾಮಯ್ಯರನ್ನು ಮುಖ್ಯಮಂತ್ರಿ ಮಾಡಿದರು. ಆದರೆ ಎಷ್ಟು ಅವಧಿಯವರೆಗೆ ಎಂದು ನಿರ್ದಿಷ್ಟಪಡಿಸದೆ, ಅಧಿಕಾರ ಹಂಚಿಕೆಯ ನಿಬಂಧನೆಯನ್ನು ಕರ್ನಾಟಕದ ಜನತೆಗೆ ಹೇಳದೆ ಮುಚ್ಚಿಟ್ಟರು. ಆದರೆ, ಡಿಕೆಶಿಯವರು ಮಾತ್ರ ಅಧಿಕಾರ ಹಂಚಿಕೆಯ ವಿಷಯವನ್ನು ಕಳೆದ ಆರು ತಿಂಗಳಿಂದ ಹೈಕಮಾಂಡಿಗೆ ಹೇಳುತ್ತಲೇ ಇದ್ದರು. ಈ ಆರು ತಿಂಗಳಲ್ಲಿ ಎರಡೂವರೆ ವರ್ಷಕ್ಕೆ‌ ಮುಖ್ಯಮಂತ್ರಿ ಅಧಿಕಾರ ಹಂಚಿಕೆಯ ವಿಚಾರವನ್ನು ಒಮ್ಮೆಯೂ ಕಾಂಗ್ರೆಸ್ ಹೈಕಮಾಂಡ್ ಹೇಳಲಿಲ್ಲ. ಆಫ್ ಕೋರ್ಸ್ ಈಗಲೂ ಹೇಳಲಿಲ್ಲ. ರಾಹುಲ್ ಗಾಂಧಿಯವರ ಮಾತಿಗೆ ಒಪ್ಪಿ ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಾರೆಂದೇ ಸುದ್ದಿಯಾಗಿದೆ. ಹಾಗಾದರೆ, ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರು ಯಾರು? ಕಾಂಗ್ರೆಸ್ ಹೈಕಮಾಂಡ್ ಅಂದ್ರೆ ಕೇವಲ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇವರಿಬ್ಬರಿಗೇ ಸೀಮಿತವಾಗಿದೆಯೇ?


ಅಂತೂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಾಗಿದೆ. ಇದರಲ್ಲಿ ದೊಡ್ಡಸ್ಥಿಕೆಯಂತೂ ಏನೇನೂ ಇಲ್ಲ. ಯಾವ ಮಣ್ಣಾಂಗಟ್ಟಿ ತ್ಯಾಗವೂ ಇಲ್ಲ. ಅವರನ್ನು ದೇವರಂತೆ ನೋಡುವ ಅಗತ್ಯವಂತೂ ಇಲ್ಲವೇ ಇಲ್ಲ. ಔದಾರ್ಯವಂತೂ ಖಂಡಿತ ಅಲ್ಲವೇ ಅಲ್ಲ. ಅವರ ಅಭಿಮಾನಗಳ ವಿರೋಧವಿಲ್ಲ, ಗಲಾಟೆಯಿಲ್ಲ, ಬೆಂಬಲಿಗರ ಸದ್ದಿಲ್ಲ ಅದು ಇದು ಅಂತ ಅವರನ್ನು ಹೊಗಳುವ ಮೂಲಕ ಅವರ ಋಣವನ್ನು ತೀರಿಸಿಕೊಂಡಿರಬಹುದು. ಒಪ್ಪಂದದ ಪ್ರಕಾರ ಎರಡೂವರೆ ವರ್ಷ ಮುಗಿಯುತ್ತಿದ್ದಂತೆ ಕೊಟ್ಟಿದ್ದರೆ ಅವರ ಘನತೆ ಬೇರೆಯದೇ ಆಗಿ ಉಳಿಯುತ್ತಿತ್ತು. ಆದರೆ ಅಧಿಕಾರಯುತವಾಗಿ ಕೊಡಲೇಬೇಕಾದ ಸ್ಥಿತಿಯನ್ನು ತಂದುಕೊಂಡ ಸಿದ್ಧರಾಮಯ್ಯನವರಿಗೆ ತಾನೇ ಸದಾಕಾಲ ಮುಖ್ಯಮಂತ್ರಿ ಎಂಬ ಭ್ರಮೆಯಂತೂ ಇದ್ದೇ ಇದೆ. ಇರಲಿ, ಇನ್ನೂ ಎರಡು ವರ್ಷ ಸರ್ಕಾರಕ್ಕೆ ಅಧಿಕಾರದ ಅವಧಿಯಿದೆ. ತಾನೊಬ್ಬ ಫ್ಯಾಷನ್ನೇಟ್ ರಾಜಕಾರಣಿ ಎಂದುಕೊಳ್ಳುವ ಡಿಕೆಶಿಯವರು ಏನು ಮಾಡುತ್ತಾರೆಂಬ ಕುತೂಹಲ ಇದ್ದೇ ಇದೆ.


ಈವರೆಗಿನ ಕರ್ನಾಟಕದಲ್ಲಿ ಆಗಿಹೋದ ಮುಖ್ಯಮಂತ್ರಿಗಳಲ್ಲಿ ಸಿದ್ಧರಾಮಯ್ಯನವರನ್ನು ದೂರದೃಷ್ಟಿಯ,  ಸಮಷ್ಟಿ ಹಿತಚಿಂತಕ ರಾಜಕಾರಣಿ ಅಂತ ಭಾವಿಸಲು ನನಗೆ ಸಾಧ್ಯವಿಲ್ಲ. ಜನಸೇವೆಯನ್ನು ಮಾಡಬೇಕಾದ ಒಬ್ಬ ರಾಜಕಾರಣಿ ಹೇಗೆ ಇರಬಾರದು ಎಂಬುದಕ್ಕೆ ಸಿದ್ದರಾಮಯ್ಯನವರು ಉದಾಹರಣೆ ಆಗಬಹುದೇನೋ! ಈ ಮೂರು ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯ ಮಾಡಿದ ಒಂದೇ ಒಂದು ಅಭಿವೃದ್ಧಿ ಯೋಜನೆಯನ್ನು ಹೇಳಲು ಸಾಧ್ಯವಿದೆಯೇ? ಗೊತ್ತಾಗುತ್ತಿಲ್ಲ. ಆದರೆ, ಯಾರನ್ನು ಹೇಗೆ ತುಳಿಯಬೇಕು, ಯಾರನ್ನು ಚುನಾವಣೆಯಲ್ಲಿ ಸೋಲಿಸಬೇಕು, ಯಾರನ್ನು ನಿಯಂತ್ರಿಸಿದರೆ ತನ್ನ ಸ್ಥಾನ ಭದ್ರವಾಗಿರುತ್ತದೆ, ಯಾರು ಮೇಲೆ ಬರಬಾರದು, ಬೆಂಬಲಿಗರನ್ನು ಹೇಗೆ ಬೆಳೆಸಬೇಕು, ಸ್ವಜನ ಪಕ್ಷಪಾತ, ಗುಂಪುಗಾರಿಕೆ, ಬ್ಲ್ಯಾಕ್ ಮೇಲ್, ಯಾರು ತನ್ನ ಬಗ್ಗೆ ಚೆನ್ನಾಗಿ ಬರೆಯುತ್ತಾರೆ, ಹೊಗಳುತ್ತಾರೆ, ಬಾಲ ಬಡಿಯುತ್ತಾರೆ, ಅವರಿಗೆ ಹೇಗೆ ಅನುಕೂಲ ಮಾಡಿಕೊಡಬೇಕು..ಎಂಬಿತ್ಯಾದಿ ನೆಗೆಟಿವ್ ಸಂಗತಿಗಳಿಗೆ ಬೇಕಾದಷ್ಟು ಉದಾಹರಣೆಗಳು ಸಿದ್ದರಾಮಯ್ಯನವರ ಸುತ್ತ ಗಿರಕಿ ಹೊಡೆಯುತ್ತವೆ.


ನೆಗೆಟಿವ್ ಚಾಣಾಕ್ಷತನ ಮತ್ತು ಅಧಿಕಾರದ ದರ್ಪವನ್ನು ತೋರಿಸಿದ ಉದಾಹರಣೆಗಳು ಸಿದ್ದರಾಮಯ್ಯನವರ ಬಳಿ ಬೇಕಾದಷ್ಟಿದೆ. ಆದರೆ, ಇಡಿಯ ಸಮಾಜಕ್ಕೆ ಒಳ್ಳೆಯದು ಮಾಡಿದ ಉದಾಹರಣೆಯಿಲ್ಲ. ಅವರು ಮಾಡಿದ ಯೋಜನೆಗಳಲ್ಲಿ ಸಮುದಾಯಗಳನ್ನು ಒಡೆಯುವ (ಲಿಂಗಾಯತ ಧರ್ಮವನ್ನು ವಿಭಜನೆ) ಕೆಲಸ ಅಥವಾ ಒಂದಷ್ಟು ಸಮುದಾಯಗಳನ್ನು ಓಲೈಸುವ (ಮುಸ್ಲಿಂ ಓಲೈಕೆ) ಕೆಲಸವೇ ಎದ್ದು ಕಾಣುತ್ತದೆ. ಅವರ ‘ಜನಪ್ರಿಯತೆ’ಯ ರೇಖೆ ಕೂಡ ಹಾಗೆಯೇ ಇದೆ. ಜೆಡಿಎಸ್‌ನಲ್ಲಿ ಅಧಿಕಾರ ಅನುಭವಿಸಿ ಕಾಂಗ್ರೆಸ್ಸಿಗೆ ಬಂದಾಗ ಅವರು ವರ್ಚಸ್ಸಿನ ನಾಯಕ. ಕಾಂಗ್ರೆಸ್ಸಿನಲ್ಲಿ ಗದ್ದುಗೆ ಸಿಗುವವರೆಗೂ ಅವರು ಜನಪ್ರಿಯರಾಗಿಯೇ ಇದ್ದರು. ಆದರೆ, ಅಧಿಕಾರ ಸಿಕ್ಕಿದ ಮೇಲೆ ಅವರ ಜನಪ್ರಿಯತೆ ಕುಸಿಯತೊಡಗಿತು. ಅದಕ್ಕವರ ಆಲೋಚನೆ, ಮೊಂಡು ಸ್ವಭಾವ, ಅಧಿಕಾರ ದರ್ಪ ಮತ್ತು ಧೋರಣೆಯೇ ಕಾರಣ ಬಿಟ್ಟರೆ ಬೇರೆ ಯಾವುದೂ ಅಲ್ಲ.


 “ನೀವು ಸಿಎಂ ಹುದ್ದೆ ಬಿಟ್ಟುಕೊಡಬೇಕು” ಎಂದು ರಾಹುಲ್ ಗಾಂಧಿ ಹೇಳಿದ್ದಕ್ಕೆ ಅಧಿಕಾರ ಬಿಟ್ಟು ಕೊಡುತ್ತಿದ್ದೇನೆ ಎಂದು ವಂದಿ ಮಾಗಧರರ್ಪಿತ “ದಿಟ್ಟ ರಾಜಕಾರಣಿ” ಎಂಬ ಅಭಿದಾನವನ್ನು ಕಾಲಡಿಗೆ ಹಾಕಿದ ಸಿದ್ದರಾಮಯ್ಯ ಒಬ್ಬ ಪುಕ್ಕಲ ರಾಜಕಾರಣಿಯಾದರೆ ಎಂದೆನಿಸುತ್ತಿದೆ. “ಆರ್ಥಿಕ ತಜ್ಞ” ಎಂಬ ಬಿರುದಂತೂ ಬಿಟ್ಟಿ ಭಾಗ್ಯಗಳ ಪ್ರವಾಹದಲ್ಲಿ ಕೊಚ್ಚಿಹೋಗಿ ಬೊಕ್ಕಸ ಬರಿದಾಯ್ತು. ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆಯಿಂದ ಆದ ಪ್ರಯೋಜನವಾದರೂ ಏನು? ಹೋಗಲಿ ಈವರೆಗಿನ ರಾಜಕಾರಣವಾದರೂ ಮೌಲ್ಯಾಧಾರಿತವೇ? ಒಪ್ಪಲು ಬಹುಕಷ್ಟವಾಗುತ್ತದೆ. ಯಾಕೆಂದರೆ, ಸುತ್ತಲೂ ಹೊಗಳುಭಟರನ್ನು, ವಂದಿ ಮಾಗಧರನ್ನು ಸಾಕಿಟ್ಟುಕೊಂಡು ಅವರಿಂದ ಕಾಲಕಾಲಕ್ಕೆ ಹೊಗಳಿಸಿಕೊಂಡು ಆಯಕಟ್ಟಿನ ಹುದ್ದೆಯಲ್ಲಿ ಕೂತುಕೊಳ್ಳಲು ಸೂಕ್ತ ಅವಕಾಶ ಸೃಷ್ಟಿಸಿಕೊಂಡಿದ್ದು ಮತ್ತು ಅವರಿಗೂ ಆಯಕಟ್ಟಿನ ಜಾಗದಲ್ಲಿ ಕೂರಿಸಿದ್ದು ಬಿಟ್ಟರೆ ಯಾವ ಮೌಲ್ಯವೂ ಕಾಣುವುದಿಲ್ಲ. ಈಗಲೂ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಮತ್ತು ಮಂತ್ರಿ ಪದವಿ ಕೇಳಿದ್ದು ಯಾವ ಮೌಲ್ಯದಿಂದ ಕೂಡಿದ ರಾಜಕಾರಣದಿಂದ? ಜಾತಿ ಮತ್ತು ಸೇಡಿನ ರಾಜಕಾರಣ ಮೊದಲಿಂದಲೂ ಇದ್ದೇ ಇತ್ತು. ಸಂಘ ಪರಿವಾರಕ್ಕೆ ಸೇರಿದ ೨೪ ಜನರ ಕೊಲೆ ದುರ್ಘಟನೆಗಳು ನಡೆದುಹೋಗಿದ್ದು ಸಿದ್ಧರಾಮಯ್ಯನವರ ಮೊದಲ ಅವಧಿಯ ಸರ್ಕಾರ ಇರುವಾಗಲೇ ತಾನೆ? ಈ ಮೂರು ವರ್ಷದ ಅಧಿಯಲ್ಲಿ ಅದು ಪರಮಾವಧಿಯನ್ನು ತಲುಪಿ ಕಾಂಗ್ರೆಸ್ಸಿನ ಚಹರೆಯನ್ನು ಮಸಿಗೊಳಿಸಿತು. ಇದಕ್ಕೆ ಸಿದ್ಧರಾಮಯ್ಯನವರ ಆಡಳಿತದ ವೈಖರಿಯೂ ಕಾರಣವಲ್ಲವೇನು?


ಇಷ್ಟು ದೊಡ್ಡ ಬಹುಮತ ಬಂದಾಗ, ಮೊದಲೇ ನಿರೀಕ್ಷಿಸಿದಂತೆ ಅಲ್ಲಲ್ಲಿ ಮುಸ್ಲಿಮರ ಅಟಾಟೋಪಗಳು, ಪಾಕ್ ಬಾವುಟಗಳ ಹಾರಾಟ, ಪಾಕಿಸ್ತಾನ್ ಜಿಂದಾಬಾದ್ ಕೂಗು ಆರಂಭದಲ್ಲೇ ಅಶುಭಕಾರಕವಾಗಿ ನಡೆದವು. ಅಕ್ಕಿ ವಿಚಾರದಲ್ಲಿ ಕೇಂದ್ರದೊಂದಿಗೆ ಸಂಘರ್ಷ, ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಆಗ್ರಹದೊಂದಿಗೆ ಕೇಂದ್ರದ ವಿರುದ್ಧ ದೆಹಲಿಯಲ್ಲಿ ನಡೆಸಿದ ಪ್ರತಿಭಟನೆ, ಪ್ರಧಾನಿ ಮತ್ತು ವಿತ್ತಸಚಿವೆಯ ವಿರುದ್ಧ ನೀಡಿದ ಅತಿರೇಕದ ಏಕವಚನದ ಹೇಳಿಕೆಗಳು, ಜಿಎಸ್ಟಿಗೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯ ತೀರ್ಪು, ಶಿವಮೊಗ್ಗದ ರಾಗಿಗುಡ್ಡದ ಕಲ್ಲು ತೂರಾಟದ ಗಲಭೆ, ಕೋಲಾರದಲ್ಲಿ ದೊಂಬಿ, ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ, ಕಾಲೇಜೊಂದರ ಆವರಣದಲ್ಲಿ ನೇಹಾಳ ಭೀಕರ ಕೊಲೆ, ಕೊಲೆಯ ಚಾರ್ಜ್ ಷೀಟ್ ಬಗ್ಗೆ ಆಕ್ಷೇಪ ಮತ್ತು ವಿರೋಧ, ನೇಹಾ ಹತ್ಯೆಯಂಥದ್ದೇ ಅಂಜಲಿ ಹತ್ಯಾ ಪ್ರಕರಣ, ಇತ್ತೀಚೆಗಿನ ಲವ್ ಜಿಹಾದ್, ಯುವಬ್ರಿಗೇಡ್ ಕಾರ್ಯಕರ್ತನ ಹತ್ಯೆ, ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರ ಕೇಸ್ ವಾಪಸಾತಿಗೆ ರಾಜಕೀಯ ಒತ್ತಡ, ಎರಡು ಭೀಕರ ಕೊಲೆಗಳಿಗೆ ಸರ್ಕಾರ ನೀಡಿದ ಹೇಳಿಕೆ ಮತ್ತು ಸ್ಪಂದಿಸಿದ ರೀತಿ, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸರ್ಕಾರ ಆಡಳಿತ ಯಂತ್ರ ಕಾರ್ಯನಿರ್ವಹಿಸಿದ ಬಗೆ, ಬಣ ರಾಜಕೀಯದ ಮೂಸೆಯಲ್ಲಿ ಈವರೆಗೆ ನಡೆದ ಇನ್ನೂ ನಡೆಯುತ್ತಿರುವ ವಿದ್ಯಮಾನಗಳು, ಅಧಿಕಾರ ರಾಜಕೀಯದ ಅಮಲು, ಕೃಷಿ ಇಲಾಖೆಯಲ್ಲಿ ಹಗರಣದ ಆರೋಪ, ರಾಜ್ಯ ಹೆದ್ದಾರಿ ಯೋಜನೆಯ ಟೆಂಡರ್‌ ಫಿಕ್ಸಿಂಗ್ ಆರೋಪ, ವಕ್ಫಬೋರ್ಡ್ ಅಕ್ರಮದ ಆರೋಪ, ವಕ್ಫಬೋರ್ಡ್ ಭೂ ಆಕ್ರಮಣ ಗಲಾಟೆ, ಭಾರತೀಯ ಸಂಸ್ಕೃತ ವಾಙ್ಮಯದ ಮಹಾಕವಿಯಾದ ವಾಲ್ಮೀಕಿ ಹೆಸರಿನ ನಿಗಮವೊಂದರಲ್ಲಿ ಆಗಿದೆಯೆನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರ, ನಿಗಮದ ಅಧಿಕಾರಿಯೊಬ್ಬ ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆ, ಉರುಳಿದ ನಾಗೇಂದ್ರರ ಮಂತ್ರಿಗಿರಿ, ಇಡಿಯಿಂದ ನಾಗೇಂದ್ರರ ಬಂಧನ, ಅದೇ ನಿಗಮದ ಅಧ್ಯಕ್ಷ, ಶಾಸಕ ದದ್ದಲರ ಈಡಿ ವಿಚಾರಣೆ, ನೆಪಮಾತ್ರದ ಎಸ್ ಐಟಿಯ ಅಸ್ತಿತ್ವ ಮತ್ತು ಎಲ್ಲಕ್ಕೂ ಶಿಖರಪ್ರಾಯವಾಗಿ ಮಿಸ್ಟರ್ ಕ್ಲೀನ್ ಎಂದೇ  ಹೆಸರು ಮಾಡಿರುವ ಸಿದ್ಧರಾಮಯ್ಯನವರ ಹೆಗಲಿನ ಮೇಲೆ ಮುಡಾ ಅಕ್ರಮದ ಬೇತಾಳ, ಅಪೆಕ್ಸ್ ಬ್ಯಾಂಕ್ ಹಗರಣ, ಪಿಎಸ್ಐ ಪರಶುರಾಮ ಸಾವು, ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು, ಉದಯಗಿರಿ ದೊಂಬಿ, ಮೆಟ್ರೋ ಪ್ರಯಾಣ ದರ ಏರಿಕೆ, ಪ್ರತಿಯೊಂದಕ್ಕೂ ಕೇಂದ್ರದ ಮೇಲೆ ಆರೋಪ, ಹನಿಟ್ರ್ಯಾಪ್, ಸಂವಿಧಾನ ಬದಲಾವಣೆ ಹೇಳಿಕೆ, ನಾಕು ಶೇಕಡಾ ಮುಸ್ಲಿಂ ಮೀಸಲಾತಿ, ಮಹಾ ಕುಂಭಮೇಳದ ಕುರಿತಾದ ಅವಹೇಳನದ ಟೀಕೆಗಳು, ಹಿಂದಿ ವಿರೋಧ, ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಆರ್ಥಿಕ ಬೊಕ್ಕಸ ಹೆಚ್ವುತ್ತದೆಂಬ ಎಂಬ ಹಸಿಸುಳ್ಳನ್ನು ಸರ್ಕಾರವೇ ಮತ್ತೆ ಮತ್ತೆ ಬೆಲೆಯೇರಿಕೆ ಮಾಡಿ ಮಾಡಿ ಪ್ರೂವ್ ಮಾಡುತ್ತಿರುವುದನ್ನು ಕಂಡರೆ ಈ ಸಂಪತ್ತಿಗೆ ಇಷ್ಟು ದೊಡ್ದ ಬಹುಮತದ ಸರ್ಕಾರ ಬೇಕಿತ್ತಾ? ಅಥವಾ ಇಷ್ಟು ದೊಡ್ದ ಬಹುಮತದ ಸರ್ಕಾರ ಬಂದಾಗ ಇಂಥವುಗಳನ್ನೆಲ್ಲ ನೋಡುವ ದುಃಸ್ಥಿತಿ ಬರುತ್ತದೆಯೇ ಎಂಬುದು!


ತಾನು ಮಾತ್ರ ಅಹಿಂದ ಸಮುದಾಯದ ನೇತಾರನೆಂದೇ ಈ ಹೊತ್ತಿಗೂ ಬಿಂಬಿತಗೊಂಡು ಜನಪ್ರೀತಿಯನ್ನು ಬೊಗಸೆಯಲ್ಲಿ ಮೊಗೆಮೊಗೆದು ಪಡೆದೆನೆಂಬ ಸಮಾಜವಾದಿ ಸಿದ್ಧರಾಮಯ್ಯನವರ ಸರ್ಕಾರ ಹೀಗೂ ನಡೆಯುತ್ತಾ ಅಥವಾ ಸಮಾಜವಾದಿ ಸರ್ಕಾರ ನಡೆಯುವುದೇ ಹೀಗೆನಾ ಎಂಬಷ್ಟರಮಟ್ಟಿಗೆ ಜನರಲ್ಲಿ ಅಸಹನೆ, ಸಿಟ್ಟು, ವಿರೋಧ, ಅಸಹ್ಯ ಹುಟ್ಟಿಕೊಂಡಿದೆಯೆಂದರೆ ಅಚ್ಚರಿಯಾಗಬೇಕಿಲ್ಲ! ಬಗೆಹರಿಯದ ಬೆಳಗಾವಿ ಗಡಿತಂಟೆ, ತೀರಲಾಗದ ಮಹದಾಯಿ ಪ್ರಕರಣ, ನಿಂತುಹೋದ ಮೇಕೆದಾಟು ಯೋಜನೆ, ಕುಂಟುತ್ತಿರುವ ಎತ್ತಿನಹೊಳೆ ಪ್ರಾಜೆಕ್ಟ್, ಸುಪ್ರೀಂಕೋರ್ಟ್‌ನಲ್ಲಿ ಸೋತು ಕ್ಯೂಸೆಕ್ಸ್‌ಗಟ್ಟಲೆ ಕಾವೇರಿ ನೀರು ಬಿಟ್ಟಿರುವ ಪ್ರಕರಣಗಳು (ಕೇಂದ್ರದ ಹಿಂದಿ ಹೇರಿಕೆಯ ತಮಿಳುನಾಡಿನ ಭ್ರಮೆಗೆ ಕೈಜೋಡಿಸುವ ಸಿದ್ಧರಾಮಯ್ಯನವರು ಕಾವೇರಿ ವಿಚಾರವನ್ನು, ಮೇಕೆದಾಟು ವಿಚಾರವನ್ನು ಯಾಕೆ ಸೌಹಾರ್ದದಲ್ಲಿ ಪರಿಹರಿಸುವುದಿಲ್ಲ?) ಅ-ರಾಜಕೀಯ ಚಾಣಾಕ್ಷತನಕ್ಕೆ ಜ್ವಲಂತ ಸಾಕ್ಷಿಯಾಗಿವೆ. ದುಡಿಯುವ ಜನರ ಶ್ರಮ ಸಂಸ್ಕೃತಿಯನ್ನು ಸಾಯಿಸಿ, ಗ್ಯಾರಂಟಿಗಳ ಅನುಷ್ಠಾನದ ಕಾರಣವಿಟ್ಟು ಅಭಿವೃದ್ಧಿಯಿಲ್ಲದೆ ಮಾಡಿದ ಮಿತಿಮೀರಿದ ಬೆಲೆಯೇರಿಕೆ, ರಸ್ತೆ ಹೊಂಡಗಳು, ಧರಣಿಗಳು, ಇಲಾಖಾ ಹಗರಣಗಳು, ಎರಡೆರಡು ಗಣತಿಗಳು, ಚಿನ್ನಸ್ವಾಮಿ ಕಾಲ್ತುಳಿತ ದುರಂತ, ಅಧಿಕಾರಿಗಳ ಆತ್ಮಹತ್ಯೆಗಳೇ ಕೈಗನ್ನಡಿ. ಸಮಾಜವಾದಿ ಎಂಬ ಸೋಗಿನ ಕೈಯಲ್ಲಿ ದುಬಾರಿ ವಾಚ್‌ ರಾಜ್ಯದ ಕಣ್ಣಿಗೆ ರಾಚಿತ್ತಲ್ಲವೆ? ಕುಟುಂಬ ರಾಜಕಾರಣಕ್ಕೆ ಸಾಕ್ಷಿಯಾಗಿ ಮಗ ಯತೀಂದ್ರನ ಅಟಾಟೋಪ ಹೇಗೆ ಮರೆಯಲು ಸಾಧ್ಯ?


ತನ್ನ ಹೊಗಳು ಭಟರಿಗೆ, ವಂದಿ ಮಾಗಧರಿಗೆ ದುಡ್ಡು ಮಾಡುವುದಕ್ಕೆ, ಅಧಿಕಾರ ಅನುಭವಿಸುವುದಕ್ಕೆ ಬೇಕಾದ ಹಾಗೆಯೇ ನಡೆದುಕೊಂಡು ಎಲ್ಲರ ತೋರಿಕೆಯ ಮೆಚ್ಚುಗೆ ಗಳಿಸಿ ನಿಃಸ್ವಾರ್ಥ ರಾಜಕಾರಣಿ, ಬಡವರ ಬಂಧು, ಸಮಾಜವಾದಿ ಸಿದ್ಧರಾಮಯ್ಯ ಎಂದು ಪ್ರಚಾರ ಪಡೆಯುವಲ್ಲಿ ತಲ್ಲೀನವಾಗಿದ್ದರ ಪರಿಣಾಮ ಅಭಿವೃದ್ಧಿ ಚಿಂತನೆಯ ಮನಃಸ್ಥಿತಿ ಅಭಿವ್ಯಕ್ತವಾಗಲೇ ಇಲ್ಲವೇನೋ! ಉಚಿತವಾಗಿ ಕೊಡುವ ಸವಲತ್ತುಗಳಿಂದ ನಿತ್ಯ ಬದುಕಿನ ದುಡಿಮೆಗೆ ಬೇಕಾದ ಶಕ್ತಿಯನ್ನು ದುಡಿಮೆಯಿಂದಲೇ ಮತ್ತೆ ಸಂಚಯ ಮಾಡಿಕೊಳ್ಳುವ ಅವಕಾಶವನ್ನೇ ಸರ್ಕಾರ‌ ಕಸಿದುಕೊಳ್ಳಬಾರದು ಎಂಬ ಪ್ರಜ್ಞೆ ಸಮಾಜವಾದದ ಸಿದ್ಧರಾಮಯ್ಯನವರಿಗೆ ಇಲ್ಲವೆನ್ನಲು ಸಾಧ್ಯವೆ? ಆದರೂ ಉಚಿತದ ಆಮಿಷ ಯಾಕೆ? ಈ ಸರ್ಕಾರಕ್ಕೆ ಮತ್ತು ಕಾಂಗ್ರೆಸ್ಸಿಗೆ ಮಾತ್ರ ಈ ಪ್ರಶ್ನೆ ಸಂಬಂಧಿಸಿದ್ದಲ್ಲ. ಉಚಿತಗಳನ್ನು ಕೊಡುವ ಯಾರೇ ಆದರೂ ಅಥವಾ ಉಚಿತಗಳನ್ನು ಘೋಷಿಸುವ ಯಾವುದೇ ಪಕ್ಷಕ್ಕೂ ಇದೇ ಪ್ರಶ್ನೆ ಸಂಬಂಧಿಸುತ್ತದೆ.  


ಅಹಿಂದ ಹೆಸರೆತ್ತಿ ಓಟು ಗಿಟ್ಟಿಸಿಕೊಂಡಿದ್ದಷ್ಟೇ ಬಂತು, ರಾಜ್ಯದ ಶ್ರೇಯೋಭಿವೃದ್ಧಿಗೆ ಅಂತ ಮಾಡಿದ ಯಾವ ಕೆಲಸವೂ ಗಹನವಾಗಿ ಕಾಣಿಸುವುದಿಲ್ಲ. ಮೂಗಿಗೆ ತುಪ್ಪ ಸವರುವ ನಾಲ್ಕಾರು ಸ್ಕೀಮ್‌ಗಳು ಕಾಣಿಸುತ್ತವೆಯೇ ವಿನಾ. ಆಮೂಲಾಗ್ರವಾಗಿ ಅವರನ್ನು ಸಮಾಜದ ಕೆಳಸ್ತರದಿಂದ ಮೇಲಕ್ಕೆತ್ತಿದ ನಿದರ್ಶನಗಳಾಗಿ ಅಂಥಾದ್ದೇನೂ ಕಾಣುವುದಿಲ್ಲ. ಗ್ಯಾರಂಟಿ ಗ್ಯಾರಂಟಿ ಅಂತ ಗಂಟಲು ಹರಿದುಕೊಂಡದ್ದೇ ಬಂತು ಬಿಟ್ಟರೆ ಬೇರೆ ಯಾವ ಮಹತ್ತರವಾದ ಕಾರ್ಯಕ್ರಮಗಳು ಕಾಣುವುದೇ ಇಲ್ಲ. ಕೊರಳ ಸೆರೆಯನ್ನು ಉಬ್ಬಿಸಿಕೊಂಡು, ಭಯಂಕರ ಪ್ರತಿವಾದಿಯಂತೆ ಧಾರ್ಷ್ಟ್ಯದೊಂದಿಗೆ ಅಧಿವೇಶನದಲ್ಲಿ ರೋಷಾವೇಷದ ಮಾತುಗಳನ್ನಾಡುವ ಸಮಾಜವಾದಿ ಸಿದ್ಧರಾಮಯ್ಯರಿಗೆ ಆಗ ರಾಜ್ಯದ ಸರಿಹೊತ್ತಿನ ಸಂಪನ್ಮೂಲ ಮತ್ತು ಆರ್ಥಿಕತೆಯ ಕುರಿತಾದ ನಿಖರ ಪ್ರಜ್ಞೆಯಿಲ್ಲವಾಗಿತ್ತೆ? ನೋ ಚಾನ್ಸ್. ಉಚಿತವಾಗಿ ಕೊಡುವುದರಿಂದ ಯಾವ ಸಂಪನ್ಮೂಲವು ಸರ್ಕಾರದ ಬೊಕ್ಕಸವನ್ನು ತುಂಬಿಸಲಾರದೆಂಬ ಪರಮಸತ್ಯ ಅವರಿಗೆ ಗೊತ್ತಿಲ್ಲವೆಂದರೆ ನಂಬುವುದು ಹೇಗೆ ಸಾಧ್ಯ? ಹಾಗಿದ್ದೂ ಗ್ಯಾರಂಟಿಗಳ ಅಸ್ತ್ರವನ್ನು ಬಳಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದರೆ? ಯಾವ ಬಗೆಯ ರಾಜಕೀಯಕ್ಕೆ ನಾಂದಿ ಹಾಕಿದ ಕೀರ್ತಿಗೆ ಕರ್ನಾಟಕ ಭಾಜನವಾಯಿತು? ಇದಕ್ಕೆ ಹೊರತಾದ ನಿಖರ ಪ್ರಜ್ಞೆ ಈ ಪ್ರಮಾಣದ ಗೆಲುವನ್ನು ತಂದುಕೊಡುವಲ್ಲಿ ಶ್ರಮಿಸಿಲ್ಲವೆ? ಅನುಮಾನವಿದೆ.


ಆಡಳಿತ ಮಾಡಿದ್ದಕ್ಕಿಂತ ಅನಾಹುತ ಮಾಡಿದ್ದೆ ಜಾಸ್ತಿ. ಜನರ ಅವಹಾಲು ಕೇಳೋದಕ್ಕಿಂತ ಅಹಂಕಾರದಲ್ಲಿ ಮೆರೆದಿದ್ದೆ ಜಾಸ್ತಿ. ಒಗ್ಗಟ್ಟಿಗಿಂತ ಒಡೆದಾಳುವ ನೀತಿ ಮಾಡಿದ್ದೆ ಜಾಸ್ತಿ ಎಂಬಂತೆ ಮುಸ್ಲಿಮರ ಓಲೈಕೆಯಂತೂ ಮಿತಿಮೀರಿ ಮುಸ್ಲಿಮರೇ ನಾಚುವಂತಾಗಿತ್ತು. ಮುಡಾ ಹಗರಣದ ತನಿಖೆಗೆ ಹೈಕೋರ್ಟ್, ಜನಪ್ರತಿನಿಧಿಗಳ ಕೋರ್ಟುಗಳಿಂದ ಆದೇಶ ಬಂದಾಗಲೂ ಅಪ್ಪಟ ಸಮಾಜವಾದಿ ಸಿದ್ಧರಾಮಯ್ಯನವರು ರಾಜೀನಾಮೆ ಕೊಡದೆ ಎದುರಿಸಿದ್ದು ಸಮಾಜವಾದದ ನೈತಿಕತೆ ಇದೇನಾ ಎಂದು ವಿಪಕ್ಷಗಳು ಬೊಬ್ಬಿಟ್ಟಿದ್ದವು! ಸಿದ್ಧರಾಮಯ್ಯ ಅಂದರೆ ಮುಸ್ಲಿಂ ತುಷ್ಟೀಕರಣ, ಅಧಿಕಾರದ ದರ್ಪ, ದುರಹಂಕಾರಿ ಸ್ವಭಾವ, ತಾನು ಮಾತ್ರ ಶ್ರೇಷ್ಠ ಎಂಬ ಗರ್ವ, ಪಕ್ಕಾ ಜಾತಿವಾದಿ ರಾಜಕಾರಣಿ ಎಂಬ ಇಮೇಜು ತಟ್ಟನೆ ಕಣ್ಣಮುಂದೆ ನಿಲ್ಲುತ್ತದೆಯೇ ಹೊರತು, ಕಾಂಗ್ರೆಸ್ಸಿನಲ್ಲಿ ಈ ಹಿಂದೆ, ಒಂದಷ್ಟು ಗಮನಾರ್ಹ ಅವಧಿಗೆ ಸಿಎಂ ಆಗಿ ಹೋದ ಬಹುತೇಕ ಎಲ್ಲರೂ ರಾಜ್ಯದಲ್ಲಿ ಒಂದಷ್ಟು ಯೋಜನೆಗಳ ಮೂಲಕ ಹೆಸರು ಮಾಡಿದವರ ಪೈಕಿಯಲ್ಲಿ ಸಿದ್ದರಾಮಯ್ಯನವರೂ ಒಬ್ಬರಾಗಿ ನೆನಪಾಗುವುದಿಲ್ಲ ಅಥವಾ ಕಣ್ಣಿಗೆ ಕಟ್ಟುವುದಿಲ್ಲ. ಸಿಎಂ ಗದ್ದುಗೆಯನ್ನು ಎಂಟು ವರ್ಷ ಬಿಸಿ ಮಾಡಿದರೂ, ಒಂದೇ ಒಂದು ಧನಾತ್ಮಕ ಯೋಜನೆ ಸಿಗದೇ ಇರುವಂಥ ರಾಜಕಾರಣಿ ಇವರೊಬ್ಬರೇನೋ! ಹಾಗಂತ ಬೇರೆ ಪಕ್ಷದಲ್ಲಿರುವ ರಾಜಕಾರಣಿಗಳ ಪರಿಸ್ಥಿತಿಯೂ ಇದಕ್ಕಿಂತ ಉತ್ತಮ ಸ್ಥಿತಿಯಲ್ಲೇನೂ ಇಲ್ಲ ಎಂಬುದನ್ನು ಮರೆಯಬಾರದು. ಎಲ್ಲರ ಮನೆಯ ದೋಸೆಯಲ್ಲೂ ತೂತಿದೆ. ಆದರೆ, ಕೆಲವರ ಮನೆಯಲ್ಲಿ ಕಾವಲಿಯಲ್ಲೇ ತೂತಿದೆ!


-ಟಿ. ದೇವಿದಾಸ್


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top