ಶಿಕ್ಷಣವೆಂಬುದು ಪರಿಪೂರ್ಣತೆಯ ಕಡೆಗೆ ಸಾಗುವ ಪ್ರಕ್ರಿಯೆ. ಅತ್ಯುತ್ತಮ ವಿದ್ಯಾರ್ಥಿಯಾಗ ಬೇಕೆಂಬ ಹಂಬಲ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಅತ್ಯುತ್ತಮ ವಿದ್ಯಾರ್ಥಿಯಾಗುವಲ್ಲಿ ಉತ್ತಮ ಕಲಿಕಾ ಕ್ರಮ ಅಗತ್ಯ.
ಅಂತಿಮ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸುವುದರ ಜೊತೆಗೆ ಜೀವನ ನಿರ್ವಹಣೆಗೆ ಸಿದ್ಧತೆ, ಉದ್ಯಮಿಯಾಗಬಹುದಾದ ಸಾಧ್ಯತೆ, ಉದ್ಯೋಗ ಗಳಿಕೆಯ ಸಾಧ್ಯತೆ, ಉತ್ತಮ ಸಂವಹನ ಕೌಶಲ್ಯದ ಪಡೆಯುವಿಕೆ, ಸಂತಸದ ಶಾಲಾ ಜೀವನ ಇವು ವಿದ್ಯಾರ್ಥಿಗಳ ಗುರಿಯಾಗಿರ ಬೇಕು.
ಪ್ರಸಿದ್ಧ ಶಿಕ್ಷಣ ತಜ್ಞರು ಅತ್ಯುತ್ತಮ ವಿದ್ಯಾರ್ಥಿಗಳಾಗಳು ಕೆಲವು ಮಾನದಂಡಗಳನ್ನು ಸೂಚಿಸುತ್ತಾರೆ.
1.ಶೈಕ್ಷಣಿಕ ಅಭ್ಯಾಸಕ್ಕೆ ವಿನಿಯೋಗಿಸುವ ಸಮಯ:
ತರಗತಿಯ ಹಾಜರಾತಿ, ಮನೆಯಲ್ಲಿ ಕಲಿಕೆ, ಗ್ರಂಥಾಲಯದಲ್ಲಿ ಅಭ್ಯಾಸ, ಶಿಕ್ಷಕರೊಂದಿಗೆ ಚರ್ಚೆ ಇವೆಲ್ಲವನ್ನು ಪರಿಗಣಿಸಿದಾಗ ಉತ್ತಮ ವಿದ್ಯಾರ್ಥಿ ವಾರಕ್ಕೆ ಸುಮಾರು 55 ತಾಸುಗಳನ್ನು ವಿನಿಯೋಗಿಸಬೇಕು. ಆತ ವರ್ಷವೊಂದಕ್ಕೆ ಸುಮಾರು 2200 ತಾಸುಗಳನ್ನು ವಿನಿಯೋಗಿಸಿದಂತಾಗುತ್ತದೆ. ಕೇವಲ ಪರೀಕ್ಷೆಗಳು ಬಂದಾಗ ಓದುವುದಕ್ಕಿಂತ ವರ್ಷವಿಡೀ ಶೈಕ್ಷಣಿಕ ಅಭ್ಯಾಸ ಪದ್ಧತಿ ಅನುಸರಿಸುವುದು ಅತ್ಯುತ್ತಮ ಕ್ರಮವಾಗಿದೆ.
2.ಓದುವ ಕ್ರಮ: ಪಠ್ಯ ವಿಷಯದ ಎಲ್ಲಾ ಅಧ್ಯಾಯಗಳನ್ನು ಸಮಾನವಾಗಿ ಗಮನ ನೀಡಿ ಓದಬೇಕು. ಪರೀಕ್ಷೆಯ ದೃಷ್ಟಿಯಿಂದ ಮಾತ್ರ ಗಮನಿಸದೆ ಕೆಲವು ಮುಖ್ಯವಲ್ಲವೆಂದು ನಿರ್ಲಕ್ಷ್ಯ ಮಾಡದೆ ಓದಿ ಜ್ಞಾನ ಪಡೆಯಬೇಕು.
3. ಉತ್ತಮ ವಿದ್ಯಾರ್ಥಿ ಎಲ್ಲಾ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡುತ್ತಾನೆ. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿ ಉತ್ತರ ಸಿದ್ಧ ಪಡಿಸಿಕೊಂಡಿರಬೇಕು. ಯಾವುದೇ ಪ್ರಶ್ನೆಗೂ ಉತ್ತರಿಸುವ ಆತ್ಮ ವಿಶ್ವಾಸ ಆತನಲ್ಲಿ ಇರಬೇಕು.
4. ಉತ್ತಮ ವಿದ್ಯಾರ್ಥಿ ಒಂದು ಉತ್ತಮ ಪಠ್ಯ ಪುಸ್ತಕವನ್ನು ಸಂಪೂರ್ಣವಾಗಿ ಓದುತ್ತಾನೆ. ಇನ್ನಿತರ ಪಠ್ಯ ಪುಸ್ತಕಗಳನ್ನೂ ಓದುತ್ತಾನೆ. ವಿವಿಧ ಪುಸ್ತಕಗಳನ್ನು ಓದುವುದರಿಂದ ಯಾವ ಪುಸ್ತಕದಲ್ಲಿ ಯಾವ ವಿಷಯವನ್ನು ವಿವರಿಸಲಾಗಿದೆ ಎಂಬುದನ್ನು ಅರಿಯುತ್ತಾನೆ. ಅವನೇ ಉತ್ತಮ ನೋಟ್ಸ್ ತಯಾರಿಸುತ್ತಾನೆ. ಇನ್ನಿತರ ಗೈಡ್ ಗಳ ಅಗತ್ಯ ಅವನಿಗೆ ಇರುವುದಿಲ್ಲ.
5.ಉತ್ತಮ ವಿದ್ಯಾರ್ಥಿ ವಿಷಯದ ಸಂಪೂರ್ಣ ಅಥೈ೯ಸುವಿಕೆಗೆ ಪ್ರಯತ್ನಿಸುತ್ತಾನೆ. ಬರೇ ಕಂಠಪಾಠಕ್ಕೆ ಸೀಮಿತವಾಗಿರುವುದಿಲ್ಲ. ತನ್ನ ತರಗತಿಯ ವಿದ್ಯಾರ್ಥಿಗಳೂ ಹಾಗೂ ಶಿಕ್ಷಕರ ಜೊತೆ ಚರ್ಚಿಸುತ್ತಾನೆ.
6. ಕಲಿಯುವುದು ಕೇವಲ ಪರೀಕ್ಷೆಗೆ ಮಾತ್ರ ಅಲ್ಲ, ಕಲಿಕೆಯ ಮುಂದುವರಿಕೆಯ ಸಂದರ್ಭದಲ್ಲಿ ಅದು ನೆರವಿಗೆ ಬರಬೇಕು. ಸಂದರ್ಶನ ಗಳು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಇದು ಸಹಾಯವಾಗಬೇಕು.
7. ಗ್ರಂಥಾಲಯಗಳ ಪ್ರಯೋಜನವನ್ನು ವಿದ್ಯಾರ್ಥಿ ಪಡೆದುಕೊಳ್ಳ ಬೇಕು. ಗ್ರಂಥಗಳು, ಲೇಖನಗಳು, ಮಾಹಿತಿ ತಂತ್ರಜ್ಞಾನದ ಬಳಕೆ ಯಿಂದ ದೊರೆಯುವ ಮಾಹಿತಿಗಳು ಆತನ ಜ್ಞಾನ ವಿಸ್ತರಣೆಗೆ ಸಹಕಾರಿಯಾಗಿರುತ್ತದೆ.
8. ಕಲಿಕೆ ಎಂಬುದು ಹೊರೆಯಲ್ಲ. ಸಂತಸ ಮತ್ತು ಜ್ಞಾನವನ್ನು ಉತ್ತೇಜಿಸುವ ವಿಚಾರಗಳೆಂದು ತಿಳಿದಿರಬೇಕು. ಕಲೆ, ಸಂಸ್ಕೃತಿ, ಕ್ರೀಡೆ, ಸಾಹಿತ್ಯ ಎಲ್ಲ ವಿಚಾರಗಳ ಕುರಿತಾಗಿ ಆಸಕ್ತಿಯುಳ್ಳವನ್ನಾಗಿರಬೇಕು.
9. ಉತ್ತಮ ವಿದ್ಯಾರ್ಥಿ ತನ್ನ ಆಯ್ಕೆಯ ವಿಷಯದಲ್ಲಿ ಪ್ರಬಂಧ ಬರೆಯಬಹುದು. ಯೋಜನಾ ವರದಿ, ಕಿರು ಸಂಶೋಧನ ಪ್ರಬಂಧ ಬರೆಯ ಬಹುದು. ಸೃಜನಾಶೀಲ ಸಂಶೋಧನೆ, ಬರವಣಿಗೆ ಆತನಿಗೆ /ಳಿಗೆ ಆತ್ಮ ತೃಪ್ತಿ, ಆತ್ಮ ವಿಶ್ವಾಸ ತಂದು ಕೊಡಬಲ್ಲುದು.
10. ಒಬ್ಬ ವಿದ್ಯಾರ್ಥಿ ಬದುಕಿನ ಉದ್ದಕ್ಕೂ ವಿದ್ಯಾರ್ಥಿಯೇ. ಶಿಕ್ಷಕರನ್ನು, ಸಾಹಿತಿಗಳನ್ನು, ವಿಜ್ಞಾನಿಗಳನ್ನು, ಯೋಧರನ್ನು ತಮ್ಮ ಆಸಕ್ತಿ ಯ ಕ್ಷೇತ್ರದ ಸಾಧಕರನ್ನು ಆದರ್ಶ ಮಾದರಿ (Role Model) ಎಂದು ಪರಿಗಣಿಸಬಹುದು.
11. ಉದಾತ್ತ ಧ್ಯೇಯವನ್ನು ಇರಿಸಿಕೊಂಡು ಮುನ್ನಡೆದಾಗ ಯಶಸ್ವಿ ವಿದ್ಯಾರ್ಥಿಯಾಗಲು ಸಾಧ್ಯ.
12. ಶಿಕ್ಷಕರ ಜೊತೆಗೆ ಉತ್ತಮ ಸಂಬಂಧ ಇರಿಸಿ ಕೊಂಡಿರಬೇಕು. ಪ್ರತಿಯೊಂದು ತರಗತಿಯು ಅಮೂಲ್ಯವಾದುದು ಎಂಬ ಭಾವನೆ ಇರಬೇಕು ಬೇಕು. ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ಪರಿಪಾಠ ಪರಿಪೂರ್ಣತೆಯ ಕಡೆಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತದೆ.
ವಿದ್ಯಾರ್ಥಿಗಳಿಗ ಜ್ಞಾನದ ಹಂಬಲ, ಅವುಗಳನ್ನು ಪಡೆದುಕೊಳ್ಳ ಬೇಕೆಂಬ ಉತ್ಸಾಹ, ಸಾಧನೆಯ ಬದ್ಧತೆ ಇದ್ದಾಗ ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯವಾಗುತ್ತದೆ.
- ಕೃಷ್ಣಮೂರ್ತಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


