ಸಂಘದ ಶತಮಾನೋತ್ಸವ ಹಿನ್ನೆಲೆ ಮಂಗಳೂರಿನಲ್ಲಿ ಪ್ರಬುದ್ಧ ನಾಗರಿಕರ ಗೋಷ್ಠಿ
ಮಂಗಳೂರು: ವಿಶ್ವವು ಇಂದು ಬಹುಧ್ರುವೀಯ (ಮಲ್ಟಿಪೋಲಾರ್) ವ್ಯವಸ್ಥೆಯತ್ತ ಸಾಗುತ್ತಿದ್ದು, ಡಿಜಿಟೈಸೇಶನ್, ಡಿ-ಗ್ಲೋಬಲೈಸೇಶನ್, ಡಿ-ಕಾರ್ಬನೈಸೇಶನ್ ಹಾಗೂ ಜನಸಂಖ್ಯಾ ಪರಿವರ್ತನೆಗಳಂತಹ ಮಹತ್ವದ ಬದಲಾವಣೆಗಳನ್ನು ಎದುರಿಸುತ್ತಿದೆ. ಇಂತಹ ಜಾಗತಿಕ ಸವಾಲುಗಳಿಗೆ ಹಿಂದೂ ಧರ್ಮ, ಸಂಸ್ಕೃತಿ ಮತ್ತು ಮೌಲ್ಯಗಳಲ್ಲಿ ಅಡಗಿರುವ ಜೀವನದೃಷ್ಟಿಯೇ ಸಮತೋಲನದ ಪರಿಹಾರವನ್ನು ಒದಗಿಸಬಲ್ಲದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಸರಕಾರ್ಯವಾಹ ಮುಕುಂದ ಅವರು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಲಾದ ‘ಸಂಘದ ಶತಮಾನೋತ್ಸವ ಮತ್ತು ಜಾಗತಿಕ ಗ್ರಹಿಕೆಗಳು’ ವಿಷಯದ ಪ್ರಮುಖ ನಾಗರಿಕರ ಗೋಷ್ಠಿಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಸಂಘವು ಕೇವಲ ಒಂದು ಸಂಘಟನೆಯಲ್ಲ; ಅದು ಸಿದ್ಧಾಂತ, ಸಂಘಟನೆ, ಆಂದೋಲನ ಹಾಗೂ ಜೀವನ ವಿಧಾನವೂ ಆಗಿದೆ ಎಂದು ಅವರು ಹೇಳಿದರು. ಕಳೆದ ನೂರು ವರ್ಷಗಳಲ್ಲಿ ಸಂಘವು ವ್ಯಕ್ತಿ ನಿರ್ಮಾಣದ ಮೂಲಕ ಸಮಾಜದಲ್ಲಿ ಮೌಲ್ಯಾಧಾರಿತ ಕಾರ್ಯಶಕ್ತಿಯನ್ನು ರೂಪಿಸಿದೆ. ಈ ಕಾರ್ಯಶಕ್ತಿಯೇ ಸಮಾಜ ಮತ್ತು ವ್ಯವಸ್ಥಾ ಪರಿವರ್ತನೆಗೆ ಕಾರಣವಾಗಿದೆ ಎಂದರು.
ಸಂಘದ ಸಾಧನೆಗಳನ್ನು ವಿವರಿಸಿದ ಅವರು, ಕಾಶ್ಮೀರದ 370ನೇ ವಿಧಿ ರದ್ದು, ಅಯೋಧ್ಯೆಯ ರಾಮಮಂದಿರ ನಿರ್ಮಾಣ, ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಆತ್ಮನಿರ್ಭರ ಭಾರತದಂತಹ ಉಪಕ್ರಮಗಳನ್ನು ವ್ಯವಸ್ಥಾ ಪರಿವರ್ತನೆಯ ಉದಾಹರಣೆಗಳಾಗಿ ಉಲ್ಲೇಖಿಸಿದರು. ಆದರೆ ಇವುಗಳಿಗಿಂತಲೂ ಮುಖ್ಯವಾದುದು ಸಾಮಾಜಿಕ ಪರಿವರ್ತನೆ ಎಂದು ಪ್ರತಿಪಾದಿಸಿದರು.
ಸಮರಸತೆ, ಸ್ವದೇಶಿ, ಪರಿಸರ ಸಂರಕ್ಷಣೆ, ಕುಟುಂಬ ಪ್ರಬೋಧನ ಹಾಗೂ ನಾಗರಿಕ ಕರ್ತವ್ಯಗಳಂತಹ ವಿಷಯಗಳಲ್ಲಿ ವ್ಯಕ್ತಿ ಮತ್ತು ಕುಟುಂಬದ ಮಟ್ಟದಲ್ಲಿ ಬದಲಾವಣೆ ಆಗಬೇಕಿದೆ. ಸಮಾಜದ ಮನಸ್ಥಿತಿಯಲ್ಲಿ ಬದಲಾವಣೆ ಇಲ್ಲದೆ ಯಾವುದೇ ವ್ಯವಸ್ಥಾ ಬದಲಾವಣೆ ಶಾಶ್ವತವಾಗುವುದಿಲ್ಲ ಎಂದು ಅವರು ಹೇಳಿದರು.
ಜಾಗತಿಕ ಬೆಳವಣಿಗೆಗಳ ಕುರಿತು ಮಾತನಾಡಿದ ಮುಕುಂದ ಅವರು, ವಿಶ್ವ ಈಗ ಅಮೆರಿಕ-ರಷ್ಯಾ ಅಥವಾ ಅಮೆರಿಕ-ಚೀನಾ ಕೇಂದ್ರಿತ ವ್ಯವಸ್ಥೆಯಿಂದ ಹೊರಬಂದು ಅಸಮತೋಲನದ ಬಹುಧ್ರುವೀಯ ವ್ಯವಸ್ಥೆಯತ್ತ ಸಾಗುತ್ತಿದೆ ಎಂದರು. ತಂತ್ರಜ್ಞಾನ, ವ್ಯಾಪಾರ ಸರಪಳಿ, ಇಂಧನ, ಪರಿಸರ ಹಾಗೂ ಜನಸಂಖ್ಯಾ ರಚನೆಯಲ್ಲಿ ಸಂಭವಿಸುತ್ತಿರುವ ವೇಗದ ಬದಲಾವಣೆಗಳು ಹೊಸ ಸವಾಲುಗಳನ್ನು ಸೃಷ್ಟಿಸುತ್ತಿವೆ ಎಂದು ವಿಶ್ಲೇಷಿಸಿದರು.
ವಿಶೇಷವಾಗಿ ಜನಸಂಖ್ಯಾ ಪರಿವರ್ತನೆ ಮತ್ತು ಜನಸಂಖ್ಯಾ ಅಸಮತೋಲನದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಭಾರತದಲ್ಲಿಯೂ ಈ ವಿಚಾರದ ಬಗ್ಗೆ ಗಂಭೀರ ಚಿಂತನೆ ಅಗತ್ಯವಿದೆ ಎಂದರು. ಕುಟುಂಬ ವ್ಯವಸ್ಥೆ ಮತ್ತು ಸಮಾಜದ ಸಮತೋಲನ ಕಾಪಾಡಲು ಆರೋಗ್ಯಕರ ಜನಸಂಖ್ಯಾ ರಚನೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಹಿಂದೂ ಜೀವನದೃಷ್ಟಿಯು ‘ವಸುಧೈವ ಕುಟುಂಬಕಂ’, ‘ಕೃಣ್ವಂತೋ ವಿಶ್ವಮಾರ್ಯಂ’ ಮುಂತಾದ ತತ್ವಗಳ ಮೂಲಕ ವಿಶ್ವಮಾನವೀಯ ಸಂದೇಶ ನೀಡಿದೆ. ಪ್ರಕೃತಿಯನ್ನು ಶೋಷಿಸುವುದಲ್ಲ, ಸಹಜೀವನ ನಡೆಸುವುದು ಭಾರತೀಯ ಸಂಸ್ಕೃತಿಯ ಮೂಲ ತತ್ವವಾಗಿದೆ. ಇಂದು ಜಗತ್ತು ‘ಸಸ್ಟೇನಬಲ್ ಡೆವಲಪ್ಮೆಂಟ್’ ಎಂದು ಕರೆಯುತ್ತಿರುವ ಚಿಂತನೆಗಳನ್ನು ಭಾರತೀಯ ಋಷಿಮುನಿಗಳು ಸಾವಿರಾರು ವರ್ಷಗಳ ಹಿಂದೆಯೇ ಪ್ರತಿಪಾದಿಸಿದ್ದರು ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ವಿವಿಧ ದೇಶಗಳ ಚಿಂತಕರು ಮತ್ತು ನೀತಿ ರೂಪಕಾರರು ಸಂಘದ ಕಾರ್ಯ ಹಾಗೂ ಹಿಂದೂ ಮೌಲ್ಯಗಳ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. ವಿವಿಧ ದೇಶಗಳಿಂದ ಬಂದ ಪ್ರತಿನಿಧಿಗಳು ಸಂಘದ ಕಾರ್ಯಪದ್ಧತಿಯನ್ನು ಮೆಚ್ಚಿಕೊಂಡಿದ್ದು, ತಮ್ಮ ದೇಶಗಳಲ್ಲಿಯೂ ಇಂತಹ ಮೌಲ್ಯಾಧಾರಿತ ಸಾಮಾಜಿಕ ಸಂಘಟನೆಗಳ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಸಂಘದ ಶತಮಾನೋತ್ಸವವು ಸಂಭ್ರಮಾಚರಣೆಯ ಸಂದರ್ಭವಲ್ಲ; ಸಮಾಜ ಪರಿವರ್ತನೆಯ ಕಾರ್ಯವನ್ನು ಇನ್ನಷ್ಟು ವೇಗವಾಗಿ ಮುಂದುವರಿಸುವ ಸಂಕಲ್ಪದ ಸಂದರ್ಭವಾಗಿದೆ. ರಾಜಕೀಯ ಬದಲಾವಣೆಗಿಂತ ಸಾಮಾಜಿಕ ಬದಲಾವಣೆಯೇ ಶಾಶ್ವತವಾಗಿದ್ದು, ಮೌಲ್ಯಯುತ, ಸಮರಸ ಮತ್ತು ಶಕ್ತಿಯುತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ತಮ್ಮ ಕೊಡುಗೆ ನೀಡಬೇಕಾಗಿದೆ ಎಂದು ಮುಕುಂದ ಅವರು ಕರೆ ನೀಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


