ರಾಮಕಥೆಯ ಮೊದಲ ಕಥೆಗಾರ ಹನುಮಂತ; ಯಕ್ಷರಂಗದಲ್ಲಿ ಜೀವಂತಗೊಂಡ ರಾಮಾಯಣ

Upayuktha
0

ಯಕ್ಷ ರಾಮಕಥಾ ಕಾರ್ಯಕ್ರಮದಲ್ಲಿ  ಮೋಹನ ಹೆಗಡೆ ಅಭಿಮತ; ವಿನಾಯಕ ಹೆಗಡೆ ಕಲಗದ್ದೆ ಅವರ ಭಾವಪೂರ್ಣ ನರ್ತನಕ್ಕೆ ಪ್ರೇಕ್ಷಕರು ಗದ್ಗದ




ಸಿದ್ದಾಪುರ: ರಾಮಕಥೆಯ ಮೊದಲ ಕಥೆಗಾರ ಹನುಮಂತ ಎಂದು ಶ್ರೀರಾಮಚಂದ್ರಾಪುರ ಮಠದ ಶಾಸನ ತಂತ್ರದ ಅಧ್ಯಕ್ಷ ಹಾಗೂ ವಾಗ್ಮಿ ಮೋಹನ ಭಾಸ್ಕರ ಹೆಗಡೆ ಹೆರವಟ್ಟ ಹೇಳಿದರು.


ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕದ ಶಿರಸಿ ಜಿಲ್ಲಾ ಹಾಗೂ ಸಿದ್ದಾಪುರ ತಾಲೂಕು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸಿದ್ದಿವಿನಾಯಕ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 'ಯಕ್ಷ ರಾಮಕಥಾ' ಯಕ್ಷನೃತ್ಯ ರೂಪಕ ಕಾರ್ಯಕ್ರಮದ ಪೂರ್ವಭಾವಿಯಾಗಿ ಅವರು ಮಾತನಾಡಿದರು.


ಆಮೇಲೆ ಮಹರ್ಷಿ ವಾಲ್ಮೀಕಿಗಳು ತಮಸಾ ನದಿಯ ತೀರದ ತಮ್ಮ ಆಶ್ರಮದಲ್ಲಿ ಪೂರ್ಣ ರಾಮಾಯಣವನ್ನು ಬರೆದು ಕುಶ ಲವರಿಗೆ ಬೋಧಿಸಿದರು. ಅವರೂ ಅದನ್ನು ರಾಮಕಥೆಯಾಗಿ ಹಾಡಿದರು ಎಂದು ವಿವರಿಸಿದರು.


ರಾಮಾಯಣವು ಕಾಲಾತೀತ ಮಹಾಕಾವ್ಯವಾಗಿದ್ದು, ಅದರ ಮೌಲ್ಯಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಯಕ್ಷಗಾನದ ಬೆಳವಣಿಗೆಗೆ ಕಲಾವಿದರು ಮತ್ತು ಅಭಿಮಾನಿಗಳು ನಿರಂತರವಾಗಿ ಕೊಡುಗೆ ನೀಡಬೇಕಿದ್ದು, ಆ ನಿಟ್ಟಿನಲ್ಲಿ 'ಯಕ್ಷ ರಾಮಕಥಾ' ಕಾರ್ಯಕ್ರಮ ನಿಜಕ್ಕೂ ಅಭಿನಂದನೀಯವಾಗಿದೆ ಎಂದು ಅವರು ಹೇಳಿದರು.


ಸೀತೆಯನ್ನು ಹುಡುಕುತ್ತ ಲಂಕೆಗೆ ತೆರಳಿದ ಹನುಮಂತನು ಅಶೋಕವನದಲ್ಲಿ ದುಃಖ ಮತ್ತು ಭಯದಲ್ಲಿದ್ದ ಸೀತಾದೇವಿಗೆ ತನ್ನ ಪರಿಚಯ ನೀಡುವ ಮೊದಲು, ಸೀತಾಪಹರಣದವರೆಗಿನ ರಾಮಕಥೆಯನ್ನು ವಿವರಿಸಿದ್ದನು. ಈ ಮೂಲಕ ಸೀತಾದೇವಿಯ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದನು. ಹೀಗಾಗಿ ರಾಮಕಥೆಯನ್ನು ಮೊಟ್ಟಮೊದಲು ಹೇಳಿದವನು ಹನುಮಂತನೆಂದು ಅವರು ವಿವರಿಸಿದರು.


ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ, ಪತ್ರಕರ್ತ ಗಂಗಾಧರ ಕೊಳಗಿ ಮಾತನಾಡಿ, ಮರೆತುಹೋಗುತ್ತಿರುವ ಹಾಗೂ ಇಂದಿಗೂ ಪ್ರಸ್ತುತವಾಗಿರುವ ಭಾರತೀಯ ಪರಂಪರೆ ಮತ್ತು ಮೌಲ್ಯಗಳನ್ನು ಪುನಃ ಸ್ಮರಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.


ಹೆಜ್ಜೆಯಲ್ಲಿ, ನೃತ್ಯದಲ್ಲೂ ರಾಮಕಥೆ ಬಿಚ್ಚಿಟ್ಟ ಕಲಾವಿದ!

ಬಳಿಕ ಪ್ರದರ್ಶನ‌ ಕಂಡ‌ ಯಕ್ಷ ರಾಮಕಥಾ' ಯಕ್ಷನೃತ್ಯ ರೂಪಕವು ಪ್ರೇಕ್ಷಕರ ಮನಸೂರೆಗೊಂಡಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಗವತ ಕೇಶವ ಹೆಗಡೆ ಕೊಳಗಿ ಅವರ ಭಾಗವತಿಕೆಯಲ್ಲಿ ರಾಮ‌ಕಥೆ ಅನುರುಣಿಸಿತು. 


ಹಿರಿಯ ಯಕ್ಷಗಾನ ಕಲಾವಿದ ಹಾಗೂ ಯಕ್ಷಗಾನ ನಾಟ್ಯ ವಿನಾಯಕ ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಅವರು ತಮ್ಮ ವಿಶಿಷ್ಟ ನರ್ತನ ಶೈಲಿ, ಭಾವಪೂರ್ಣ ಅಭಿವ್ಯಕ್ತಿ ಮತ್ತು ಪರಿಣಾಮಕಾರಿ ಸಂಭಾಷಣೆಯ ಮೂಲಕ ರಾಮಕಥೆಯನ್ನು ಜೀವಂತವಾಗಿ ಅನಾವರಣಗೊಳಿಸಿದರು. ಹೆಜ್ಜೆಗಳ ಲಯಬದ್ಧತೆ, ಆಂಗಿಕ ಅಭಿನಯಗಳ ಮೂಲಕ ಪಾತ್ರಗಳ ಭಾವಲೋಕವನ್ನು ಕಟ್ಟಿಕೊಡುವ ಸಾಮರ್ಥ್ಯ ಹಾಗೂ ಕಥಾ ಸಂದರ್ಭಗಳಿಗೆ ತಕ್ಕಂತೆ ನೃತ್ಯವನ್ನು ಹೆಣೆಯುವ ಅವರ ವಿಶೇಷತೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.


ಪಾರಂಪರಿಕ ಯಕ್ಷಗಾನ ಶೈಲಿಯಲ್ಲಿ ಅಪರೂಪವಾಗಿ ನೃತ್ಯದ ಮೂಲಕ ರಾಮಕಥೆಯನ್ನು ನಿರೂಪಿಸಿದ ಕಲಗದ್ದೆ, ಪಟ್ಟಾಭಿಷೇಕದ ಸಂಭ್ರಮ, ವನವಾಸಕ್ಕೆ ಹೊರಡುವಾಗಿನ ರಾಮನ ಸ್ಥಿತಪ್ರಜ್ಞತೆ, ಭರತನ ಭೇಟಿಯ ಭಾವನಾತ್ಮಕ ಕ್ಷಣಗಳು, ಸೀತಾನ್ವೇಷಣೆ, ರಾವಣ ವಧೆ ಹಾಗೂ ರಾಮನಿರ್ಯಾಣದ ತನಕದ ಘಟನಾವಳಿಗಳನ್ನು ಮನಮುಟ್ಟುವ ರೀತಿಯಲ್ಲಿ ಬಿಚ್ಚಿಟ್ಟರು.


ವಿಶೇಷವಾಗಿ, ಸೀತಾದೇವಿಯ ಮೇಲೆ ಲೋಕೋಪವಾದ ವ್ಯಕ್ತವಾದಾಗ ಅವರನ್ನು ಅರಣ್ಯಕ್ಕೆ ಕಳುಹಿಸುವ ಸಂದರ್ಭದಲ್ಲಿಯೂ ತಾನು ಇಷ್ಟೊಂದು ಸಂಕಷ್ಟ ಅನುಭವಿಸಿರಲಿಲ್ಲ. ಆದರೆ ಮಾತೆ ಸುಮಿತ್ರೆಗೆ ನೀಡಿದ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆ ವಿಧಿಸಬೇಕಾದ ಪ್ರಸಂಗದಲ್ಲಿ "ನಾಲಿಗೆ ಹೊರಳುತ್ತಿಲ್ಲ" ಎಂಬ ರಾಮನ ಅಂತರಂಗದ ವೇದನೆ ಹಾಗೂ ಧರ್ಮಸಂಕಟವನ್ನು ವಿನಾಯಕ ಹೆಗಡೆ ಕಲಗದ್ದೆ ಅವರು ಅತ್ಯಂತ ಭಾವಪೂರ್ಣವಾಗಿ ಅಭಿವ್ಯಕ್ತಿಸಿದರು. ಕರ್ತವ್ಯ ಮತ್ತು ಸಂಬಂಧಗಳ ನಡುವಿನ ಸಂಘರ್ಷದಲ್ಲಿ ತೊಳಲಾಡುವ ರಾಮನ ಮನಸ್ಥಿತಿಯನ್ನು ಅವರು ಜೀವಂತವಾಗಿ ಕಟ್ಟಿಕೊಟ್ಟ ರೀತಿ ಪ್ರೇಕ್ಷಕರನ್ನು ಗದ್ಗದರನ್ನಾಗಿಸಿತು. 


ಮಾತು ಮತ್ತು ನೃತ್ಯದ ಸಮನ್ವಯದ ಮೂಲಕ ಪ್ರತಿಯೊಂದು ಪ್ರಸಂಗಕ್ಕೂ ಜೀವ ತುಂಬಿದ ಕಲಗದ್ದೆ ಅವರ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂತು.


ಮದ್ದಲೆ ವಾದಕ ಶರತ್ ಜಾನಕೈ ಹಾಗೂ ಚಂಡೆ ವಾದಕ ಭಾರ್ಗವ ಹೆಗ್ಗೋಡು ಅವರ ವಾದನ ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಿತು.

ಕಾರ್ಯಕ್ರಮದ ಆರಂಭದಲ್ಲಿ ಯೋಗ ಸಮಿತಿ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಜಿ.ಎಲ್. ಹೆಗಡೆ ಕುಮಟಾ, ಮಾಯಾ ಹೆಗಡೆ, ಅಶೋಕ ಭಟ್ಟ ಸಿದ್ದಾಪುರ, ನಾಗರಾಜ ಜೋಶಿ, ಮಾರುತಿ ನಾಯ್ಕ, ವಿ.ಎಂ. ತ್ಯಾಗಲಿ, ತುಳಸಿ ಹೆಗಡೆ, ಸಂಧ್ಯಾ ಶಾಸ್ತ್ರಿ ಸೇರಿದಂತೆ ಸಾಹಿತ್ಯಾಸಕ್ತರು, ಯಕ್ಷಗಾನ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top