ಕಾಸರಗೋಡು: ಯಕ್ಷಗಾನ ರಂಗದ ಪ್ರಸಕ್ತ ವಿದ್ಯಮಾನಗಳು, ಕಲೆಯ ಸಾಂಸ್ಕೃತಿಕ ಮೌಲ್ಯಗಳ ಉಳಿವು ಹಾಗೂ ಕಲಾವಿದ-ಪ್ರೇಕ್ಷಕರ ನಡುವಿನ ಬಾಂಧವ್ಯದ ಕುರಿತು ಸಮಗ್ರ ಆತ್ಮಾವಲೋಕನ ನಡೆಸುವ ಉದ್ದೇಶದಿಂದ, ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಜೂನ್ 14ರಂದು ವಿಶೇಷ ದಿನಪೂರ್ತಿ ಚಿಂತನಗೋಷ್ಠಿಯನ್ನು ಆಯೋಜಿಸಲಾಗಿದೆ.
ಇಲ್ಲಿನ "ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರ"ದಲ್ಲಿ ಆದಿತ್ಯವಾರ ಬೆಳಗ್ಗೆ 10:00 ಗಂಟೆಯಿಂದ ಈ ವೈಚಾರಿಕ ಮಂಥನ ಜರುಗಲಿದೆ.
'ಯಕ್ಷಗಾನದ ದೀಪಕ್ಕೆ ತೈಲಧಾರೆ': ಕಲೆಯ ಉಳಿವಿಗಾಗಿ ಮಂಥನ
"ಯಕ್ಷಗಾನ ಕ್ಷೇತ್ರ ಎತ್ತ ಸಾಗುತ್ತಿದೆ? ಇಂದಿನ ಹತ್ತು ಹಲವು ವಿದ್ಯಮಾನಗಳ ನಡುವೆ ಸಂಸ್ಕೃತಿಯನ್ನು ಉಳಿಸಿಕೊಂಡು ಕಲೆಯು ಬೆಳೆಯುತ್ತಿದೆಯೇ? ಪ್ರೇಕ್ಷಕ-ಕಲಾವಿದರ ಸಾಮರಸ್ಯ ಇಲ್ಲದಂತಾಗಿದೆಯೇ? ರಂಗಭೂಮಿ ಕೇವಲ ಪ್ರಚಾರವನ್ನಷ್ಟೇ ಬಯಸುತ್ತಿದೆಯೇ?" ಎಂಬಿತ್ಯಾದಿ ಪ್ರಸ್ತುತ ಸವಾಲುಗಳ ಕುರಿತು ಕಲಾವಿದ - ಪ್ರೇಕ್ಷಕ - ಮಾಧ್ಯಮ - ಸಂಘಟಕ ಎಂಬ ನಾಲ್ಕು ಪ್ರಮುಖ ಆಯಾಮಗಳಲ್ಲಿ ಈ ಗೋಷ್ಠಿ ನಡೆಯಲಿದೆ.
ಬೆಳಗ್ಗೆ 9:45 ಕ್ಕೆ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಯಕ್ಷಗಾನ ವಲಯದ ಹಿರಿಯ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ ಹಾಗೂ ಶ್ರೀ ರಾಘವ ನಂಬಿಯಾರ್ ಅವರು ವಿಷಯ ಮಂಡನೆ ಮಾಡಲಿದ್ದಾರೆ. ವಿಭಿನ್ನ ಕ್ಷೇತ್ರಗಳ 50ಕ್ಕೂ ಹೆಚ್ಚು ಗಣ್ಯರು ಹಾಗೂ ವಿದ್ವಾಂಸರು ಇಡೀ ದಿನದ ಗೋಷ್ಠಿಯಲ್ಲಿ ಪಾಲ್ಗೊಂಡು ಸಮಾಲೋಚನೆ ನಡೆಸಲಿದ್ದಾರೆ ಮತ್ತು ಈ ಚರ್ಚೆಗಳ ದಾಖಲೀಕರಣ ನಡೆಯಲಿದೆ.
ಸಂಜೆ ಯಕ್ಷಗಾನ ಬಯಲಾಟ:
ವಿಚಾರಗೋಷ್ಠಿಯ ಬಳಿಕ, ಸಂಜೆ 5:00 ಗಂಟೆಯಿಂದ ಕೀರ್ತಿಶೇಷ ಪಣಂಬೂರು ವೆಂಕಟರಾಯ ಐತಾಳರ ನೆನಪಿನಾರ್ಥವಾಗಿ, ಉಡುಪಿಯ ಪಣಂಬೂರು ವೆಂಕಟರಾಯ ಐತಾಳ ಪ್ರತಿಷ್ಠಾನದ ವತಿಯಿಂದ 'ಗುರುದಕ್ಷಿಣೆ- ಅಸಿಕಾ ಪರಿಣಯ' ಎಂಬ ಭವ್ಯ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಯಕ್ಷಗಾನ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಪೂರಕವಾದ ಈ ಅಪರೂಪದ ವೈಚಾರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು, ಸಂಶೋಧಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಸಿರಿಬಾಗಿಲು ಪ್ರತಿಷ್ಠಾನವು ಪ್ರಕಟಣೆಯಲ್ಲಿ ವಿನಂತಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


