ಮಂಗಳೂರು: ವಯಸ್ಸು ಐವತ್ತರ ನಂತರ ತಾವು ಕಲಿತ ಒಂದು ವಿಷಯದ ಬಗ್ಗೆ ಪಿ.ಹೆಚ್.ಡಿ. ಮಾಡುವಂಥ ಸಾಹಸಕ್ಕೆ ಕೈಹಾಕುವ ಮಹಿಳೆಯರು ವಿರಳಾತಿ ವಿವರ. ಆದರೆ ಡಾ.ಸರಸ್ವತಿ ಎಸ್.ರಾವ್ ಅಂಥ ವಿರಳರಲ್ಲಿ ಒಬ್ಬರು. ಅವರು ಸಂಶೋದನೆಗೆ ನನ್ನ ಬಳಿ ಬಂದು ನೋಂದಾಯಿಸಿಕೊಂಡಾಗ ನಾನು ಬೆಚ್ಚಿ ಬಿದ್ದಿದ್ದೆ. ಆದರೆ ಅವರ ಬೌದ್ಧಿಕ ಸಾಮರ್ಥ್, ಛಲ, ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ, ಪರಿಶ್ರಮ ಪಡುವ ಗುಣಗಳನ್ನು ಕಂಡು ನಾನು ಆಶ್ಚರ್ಯಗೊಂಡೆ. ಯುವಕರನ್ನೂ ನಾಚಿಸುವಂತೆ ನಿರಂತರವಾಗಿ ದುಡಿದು ನಿಗದಿತ ಅವಧಿಯಲ್ಲಿ ನ್ಯಾನೋ ತಂತ್ರಜ್ಞಾನದಂಥ ಕ್ಲಿಷ್ಟ ವಿಷಯದ ಮೇಲೆ ಮಹಾಪ್ರಬಂಧವನ್ನು ಸಿದ್ಧಪಡಿಸಿ ಕೊಟ್ಟದ್ದು ನೋಡಿ ನಾನು ಅಕ್ಷರಶಃ ಬೆರಗಾದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ವಸ್ತುವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ.ಮಂಜುನಾಥ ಪಟ್ಟಾಭಿ ಹೇಳಿದರು.
ಅವರು ಇಲ್ಲಿನ ಬಾಳಂಭಟ್ಟ ಹಾಲಿನಲ್ಲಿ ನಡೆದ , ಇತ್ತೀಚೆಗೆ ನಿಧನರಾದ ಸಂತ ಆಗ್ನೆಸ್ ಕಾಲೇಜಿನ ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕಿ ಡಾ.ಸರಸ್ವತಿ ಎಸ್.ರಾವ್ (ಪ್ರಸಿದ್ಧ ಸಮಾಜಶಾಸ್ತ್ರ ಪಠ್ಯಪುಸ್ತಕ ಲೇಖಕರಾದ ಚ.ನ.ಶಂಕರ ರಾವ್ ಅವರ ಧರ್ಮಪತ್ನಿ) ಅವರ ನುಡಿನಮನ
ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಗಳು ದೀಪ್ತಿ ರಾಹುಲ್ ಸರಸ್ವತಿಯವರ ಸೌಮ್ಯ ಸ್ವಭಾವ, ನಗುಮುಖ, ಕಾಲೇಜಿನ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದ ಅವರ ಬೋಧನಾ ವೈಖರಿ, ಸಾಂಸಾರಿಕ ಜವಾಬ್ದಾರಿಗಳನ್ನು ಉದ್ಯೋಗವನ್ನೂ ಸರಿದೂಗಿಸಿಕೊಂಡು ಎಲ್ಲವನ್ನೂ ಯಶಸ್ವಿಯಾಗಿ ನಿರ್ವಹಿಸಿದ ಅವರ ಕಾರ್ಯಕ್ಷಮತೆ, ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಬಂಧಗಳನ್ನು ಪ್ರಕಟಿಸುವುದರ ಜತೆಗೆ ನಮ್ಮ ಹೆಮ್ಮೆಯ ಭಾರತೀಯ ವಿಜ್ಞಾನಿಗಳು, ನ್ಯಾನೋ ತಂತ್ರಜ್ಞಾನ ವಿಷ್ಣು, ಸಹಸ್ರಮಾನದ ಶ್ಲೋಕಗಳ ವ್ಯಾಖ್ಯಾನ ಮೊದಲಾದ ಪುಸ್ತಕಗಳನ್ನು ಪ್ರಕಟಿಸಿದ ಅವರ ಬರವಣಿಗೆಯ ಪ್ರತಿಭೆಗಳ ಬಗ್ಗೆ ಮಾತನಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಡಾ.ವಿಶಾಲ, ಡಾ.ಸುಶೀಲಾ ರಾವ್, ಪ್ರದೀಪ ಪೈ, ಡಾ.ಪಾರ್ವತಿ ಜಿ.ಐತಾಳ್ ಉಪಸ್ಥಿತರಿದ್ದರು.
ದೀಪ್ತಿ ಎಸ್.ರಾವ್ ಪ್ರಾರ್ಥನೆ ಹಾಡಿದರು. ಡಾ.ಮಾಧವ ಎಂ.ಕೆ.ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ದೇಹಾನ್ತೇ ತವ ಸಾಯುಜ್ಯಂ... ಸರಸ್ವತಿ ಎಸ್.ರಾವ್ ಅವರು ಅನಾಯಾಸೇನ ಮರಣಂ ಎಂಬ ವಿಷಯದಲ್ಲಿ ಸ್ವಲ್ಪ ಮಟ್ಟಿನ ಸೋಲುಂಡರೂ ಶ್ಲೋಕದ ಅನಂತರದ ವಾಕ್ಯಗಳ ಸಾರ್ಥಕತೆಯನ್ನು ಸಾಧಿಸಿ ಸಾಯುಜ್ಯ ಪಡೆಯುವುದರಲ್ಲಿ ಅನುಮಾನವಿಲ್ಲ.ಅವರ ಸಾಧನಾಯುಕ್ತ ಮತ್ತು ಅನುಕರಣೀಯ ಬದುಕಿನ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅವರಿಗೆ ನಾವು ಸಲ್ಲಿಸಬಹುದಾದ ಶ್ರದ್ಧಾಂಜಲಿ.
ಕಜಂಪಾಡಿ ಸುಬ್ರಹ್ಮಣ್ಯ ಭಟ್, ರಾ.ಸ್ವ.ಸಂಘ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


