ಸಂದರ್ಭೋಚಿತ ಲೇಖನ- "ಟ್ರಿಣ್ ಟ್ರಿಣ್": ವೈದ್ಯರೂ ಎಲ್ಲರ ಹಾಗೇ ಮನುಷ್ಯರೇ

Upayuktha
0

ರಾತ್ರಿ 11.30 ರ ಸಮಯ, ನನಗೊಂದು ಕರೆ ಬಂತು. "ಮೇಡಂ, ನೀವು ಆಪರೇಷನ್ ಮಾಡಿರುವ ಯಾರಿಗೋ ಏನೋ ಸಮಸ್ಯೆ ಅಂತೇ , ನಿಮ್ಮ ನಂಬರ್ ಕೇಳ್ತಿದ್ದಾರೆ ಕೊಡುವುದಾ ??" ಎಂದರು. ನನಗೆ ಗಾಬರಿಯಾಗಿ, "ನೀವ್ಯಾರು" ಅಂದೆ, ನಮ್ಮ ಕಚೇರಿ ಸಿಬ್ಬಂದಿ, ನನ್ನಲ್ಲಿ ಅವರ ನಂಬರ್ ಇರಲಿಲ್ಲ, ಆ ರೋಗಿ ಆಫೀಸ್ ನಂಬರ್ ಗೆ ಸರಿ ರಾತ್ರಿ  ಕರೆ ಮಾಡಿ ತಲೆ ತಿನ್ನಲು ನನಗೆ ಇವರು ಕರೆಮಾಡಿದ್ದರು. ಸರಿ ಕೊಡಿ ಅಂದೆ, ಎಣಿಸಿದಂತೆ ಎರಡೇ ನಿಮಿಷಕ್ಕೆ ರೋಗಿ ಕರೆ ಬಂತು. 


ಮೇಡಂ ಅಂತ ಅವಳ ಪರಿಚಯ ಹೇಳಿ, "ಹದಿನೈದು ದಿನದ ಹಿಂದೆ ಸಿಸೇರಿಯನ್ ಆಗಿತ್ತು" ಅಂತ ಕಥೆ ಶುರು ಮಾಡಿದಳು, ಸರಿ ರಾತ್ರಿ ನನ್ನ ನಂಬರ್ ಕೇಳಿ ಕರೆ ಮಾಡುವಂಥದ್ದು ಏನಾಗಿದೆ ಇವಳಿಗೆ ? ನನ್ನ ಎದೆ ಢವ ಢವ ಎನ್ನುತ್ತಿತ್ತು. ಅವಳು ಎಲ್ಲಾ ಕಥೆ ಮುಗಿಸಿ ಕ್ಲೈಮ್ಯಾಕ್ಸ್ ಗೆ ಬಂದಳು , "ಮುಟ್ಟಿನ ಜಾಗದಿಂದ ಹೊಲಿಗೆ ದಾರ ಹೊರಬಂದಿದೆ, ನಾನು ನನ್ನ ಅಕ್ಕ ತಂಗಿ ಸ್ನೇಹಿತೆಯರನ್ನು ಕೇಳಿದೆ, ಯಾರಿಗೂ ಹೀಗೆ ಆಗಿಲ್ಲ ನನಗೆ ಮಾತ್ರ ಹೀಗಾಗಿದೆ, ಗಾಬರಿಯಾಯಿತು" ಎಂದಳು. ನಾನು "ನಾವು ನಿನಗೆ ಹೆರಿಗೆ ನಂತರ ಕಾಪರ್ ಟಿ ಹಾಕಿದ್ದೇವಾ?" ಎಂದೆ, ಅವಳು ಹೂಂ ಅಂದಳು, ಅಲ್ಲಿಗೆ ಅವಳ ಸಮಸ್ಯೆ ನನಗೆ ಅರಿವಾಯಿತು. ಪ್ರತಿ ಬಾಣಂತಿ ಡಿಸ್ಚಾರ್ಜ್ ಸಂದರ್ಭದಲ್ಲಿ ಕಾಪರ್ ಟಿ ಹಾಕಿದ್ದರೆ ಹಾಗೆ ದಾರ ಹೊರಗೆ ಬರುತ್ತೆ, "ಬಂದರೆ ಹೆದರಬೇಡಿ, ಬಂದು ದಾರ ಕತ್ತರಿಸಿಕೊಂಡು ಹೋಗಿ ಎಂದು ಹೇಳಿಯೇ ಕಳುಹಿಸುತ್ತೇವೆ, ನಿನಗೆ ಹೇಳಿಲ್ವಾ" ಎಂದೆ, ಅವಳು "ಹೂ" ಅಂದಳು , "ಮತ್ತೇಕೆ ಇಷ್ಟು ರಾತ್ರಿ ಇಷ್ಟು ಸೀನ್, ತೊಂದರೆ ಎನಿಸಿದರೆ ಆಸ್ಪತ್ರೆಗೆ ಬಂದ್ರೆ ಆಯಿತು, ಕರೆ ಮಾಡಿ ಎಲ್ಲರನ್ನೂ ಗಾಬರಿ ಮಾಡುವ ಅವಶ್ಯಕತೆ ಏನು" ರೇಗಿ ಕರೆ ಕತ್ತರಿಸಿದೆ.


ನನ್ನದು ಸ್ವಲ್ಪ ವಿಚಿತ್ರ ಮನಸ್ಸು, ಯಾರಿಗಾದರೂ ರೇಗಿದರೆ ನನಗೇ ವಿಚಿತ್ರ ಸಂಕಟ. ಮತ್ತೆ ಯೋಚಿಸಿದೆ, ಅವಳಿಗೆ ಸಿಸೇರಿಯನ್ ಮಾಡಿದ್ದು, ಕೆಮ್ಮು ಹೆಚ್ಚಾಗಿ ಶ್ವಾಸಕೋಶ ಸೋಂಕಾಗಿ ಸುಮಾರು ಐದಾರು ದಿನ ಐ ಸಿ ಯು ಅಲ್ಲಿ ಇಟ್ಟು ಚಿಕಿತ್ಸೆ ಮಾಡಿ ನಾಕು ದಿನದ ಹಿಂದೆ ಕಳುಹಿಸಿದ್ದೆ. ಮನೆಗೆ ಹೋದ ಮೇಲೆ ಏನೋ ದಾರ ಹೊರಗೆ ಬಂತು ಎಂದಾಗ, ನಾನು ವೈದ್ಯೆ ಕಾಪರ್ ಟಿ ದಾರ ಎಂದು ನನಗೆ ಅರ್ಥ ಆಗುತ್ತೆ,  ಆದರೆ ಅವಳಿಗೆ ಸೋಂಕಾಗಿತ್ತು, ಹೊಲಿಗೆ ದಾರ ಬಿಟ್ಟು ಬಂತಾ ಎಂದು ಹೆದರಿರುತ್ತಾಳೆ. ಅವಳು ಸಾಮಾನ್ಯ ಹೆಣ್ಣು, ವಿಷಯ ತಜ್ಞೆಯಾಗಿ ನನಗೆ ಅದು ಸಾಮಾನ್ಯ ಇರಬಹುದು ಅವಳಿಗೆ ಅದು ಹೆದರಿಸುವ ಅಂಶವೇ... ರೇಗಿದ್ದಕ್ಕೆ ಬೇಸರಿಸಿದೆ. 


ನನಗೆ ಒಂದು ಕೇಸ್ ದಿನ ಪೂರ್ತಿ ಕಾಂಪ್ಲಿಕೇಟೆಡ್ ಇತ್ತು, ದಿನವೆಲ್ಲಾ ಅವಳ ತಲೆ ನೋವಿತ್ತು, ಅದರ ಮಧ್ಯೆ ರಾತ್ರಿ ಬಂದ ಎರಡು ಕರೆ ಪಿತ್ತ ನೆತ್ತಿಗೇರಿತು, ಆದರೆ ಸಹನೆ ಕಳೆದುಕೊಂಡು ರೇಗಿದರೆ ಅದು ಅಪರಾಧ ಎಂದೆನಿಸಿ ನಾನು ಮತ್ತೆ ಅವಳಿಗೆ ಕರೆ ಮಾಡಿ "ಆ ರೀತಿ ಕಾಪರ್ ಟಿ ದಾರ ಹೊರಬರುವ ಸಾಧ್ಯತೆ ಇದೆ, ಗಾಬರಿಯಾಗಬೇಡಿ, ಬೆಳಿಗ್ಗೆ ಬನ್ನಿ, ನಾನು ನೋಡುವೆ" ಎಂದು ಅವಳಿಗೆ ಧೈರ್ಯ ಹೇಳಿ ಅವಳಿಗೂ ಸಮಾಧಾನ ಮಾಡಿ ನಾನು ಸಮಾಧಾನ ಮಾಡಿಕೊಂಡು ಮಲಗಿದೆ


ಅವಳು ಬೆಳಿಗ್ಗೆ ಬಂದಳು, ಕಾಪರ್ ಟಿ ದಾರವೇ ಆಗಿತ್ತು, ಕತ್ತರಿಸಿ ಎಲ್ಲಾ ಇನ್ನೊಮ್ಮೆ ಪರೀಕ್ಷಿಸಿ ಕಳುಹಿಸಿದೆ. "ವಿಷಯ ಜ್ಞಾನ ನಮಗೆ ಅತೀ ಸಾಮಾನ್ಯ ವಿಷಯ, ಅದೇ ಬೇರೆಯವರಿಗೆ ಎಷ್ಟು ಭಯಾನಕ"  ಎಂದು ಎಣಿಸಿ ನಕ್ಕು ಸುಮ್ಮನಾದೆ.


ಮತ್ತೆ ಮಧ್ಯಾಹ್ನ ಊಟಕ್ಕೆ ಹೊರಡುವ ಸಮಯ, ಇನ್ನೊಂದು ಕರೆ, "ಮೇಡಂ, ನೀವು ಆಪರೇಷನ್ ಮಾಡಿರುವ ಒಬ್ಬರಿಗೆ ಪೂರ್ತಿ ಸೋಂಕಾಗಿದೆ" ಎಂದರು, ನಾನು "ನೀವ್ಯಾರು" ಅಂದೆ, "ನಾನು ಅವರ ಊರಿನವರು" ಅಂದರು. "ನಾನು ತಿಂಗಳಿಗೆ ಹತ್ತಾರು ಆಪರೇಷನ್ ಮಾಡುತ್ತೇನೆ, ಯಾರು ಏನು ನೋಡದೆ ನಾನು ಏನು ಹೇಳಲಿ, ರೋಗಿಯನ್ನು ಕಳುಹಿಸಿ ನೋಡುತ್ತೇನೆ" ಎಂದೆ. ಆ ವ್ಯಕ್ತಿ ಒಂದು ಸ್ಕ್ಯಾನಿಂಗ್ ರಿಪೋರ್ಟ್ ವಾಟ್ಸ್ ಆ್ಯಪ್ ಮಾಡಿದ, ಅದರಲ್ಲಿ ನನಗೇನು ತೊಂದರೆ ಅನಿಸಿಲ್ಲ, ಆದರೂ ನೆಮ್ಮದಿಯಾಗಿ ಊಟ ಸೇರುತ್ತಿಲ್ಲ, ಯಾರಿಗೆ ಏನಾಗಿದೆ, ಯಾವ ಕೇಸ್, ಗಾಯ ಸೋಂಕಾ?? ಇಲ್ಲಾ ಏನಾದರೂ ದೊಡ್ಡ ತೊಂದರೆಯಾ?? ಒಂದು ಶಸ್ತ್ರಚಿಕಿತ್ಸೆ ನಂತರ ಆಗಬಹುದಾದ ಎಲ್ಲಾ ತೊಂದರೆ ತಾಪತ್ರಯಗಳು ಒಂದು ಕಾಮನಬಿಲ್ಲಂತೆ ಕಣ್ಮುಂದೆ ಚಿತ್ತಾರಗೊಂಡು ನರ್ತಿಸಲು ಒಂದು ಕಳವಳ, ಆತಂಕ, ನೆಮ್ಮದಿಯೇ ಇರಲಿಲ್ಲ. ಈ ಮಧ್ಯೆ ಆ ವ್ಯಕ್ತಿಯ ಕರೆಗಳು ಮೆಸ್ಸೇಜ್ ಗಳು ನನಗೆ ಹಿಂಸೆ ಅನಿಸಿತು.


ಊಟ ಮುಗಿಸಿ ಬಂದವಳೇ ರೋಗಿಗಳ ಹನುಮಂತ ಬಾಲದಷ್ಟು ಉದ್ದ  ಚೀಟಿ ನೋಡಿದೆ, ಮೊದಲಿಗೆ ಆ  ಸ್ಕ್ಯಾನಿಂಗ್ ಹೆಸರಿಲ್ಲಿದ್ದ ರೋಗಿಯ ಹೆಸರಿನ ಚೀಟಿ ಇದೆಯಾ ಕೇಳಿದೆ, ಹೂ ಅಂದ ನನ್ನ ಪಿಜಿಗೆ ಮೊದಲು ಅವಳನ್ನು ಕರೆ ಎಂದೆ. ಅವಳು ಬಂದಳು . ನನಗೆ ರೇಗಿ ಹೋಯ್ತು, ಎರಡು ದಿನದ ಹಿಂದೆ  ಹೆರಿಗೆ ನಂತರ ಹಾಕಿರುವ ಕಾಪರ್ ಟಿ ತೆಗೆಸಲು ಒಂದಿಲ್ಲೊಂದು ಕಾರಣ ಹೇಳಿಕೊಂಡು ನನ್ನ ಬಳಿ ಬಂದಿದ್ದಳು, ನೀನಾ? ಅಂದೆ. ಹೊಟ್ಟೆ ನೋವು , ಆ ನೋವು ಅಂತ ಶುರು ಮಾಡಿದಳು, ನಾನು ನಿನ್ನ ತಲೆಯಲ್ಲಿ ಕೂತಿರುವ ಕಾಪರ್ ಟಿ ವಿಷಯದ ಸುಳ್ಳು ನಂಬಿಕೆಗಳು ಆ ಕಾಪರ್ ಟಿ ತೆಗೆಯುವವರೆಗೂ ನಿನ್ನ ನೋವು ಸರಿ ಮಾಡಲ್ಲ ಎಂದು, ಒಳಗೆ ನಡಿ ಎಂದೆ. ಎರಡು ದಿನದ ಹಿಂದೆ ಅವಳಿಗೆ ಸ್ವಲ್ಪ ಮೂತ್ರ ಸೋಂಕಿತ್ತು, ಅದಕ್ಕೆ ಹೊಟ್ಟೆ ನೋವಿದೆ ಎಂದು ಚಿಕಿತ್ಸೆ ಮಾಡಿ ಪರೀಕ್ಷೆ ಮಾಡಿ ಸ್ಕ್ಯಾನಿಂಗ್ ಮಾಡಿ ಕಾಪರ್ ಟಿ ವಿಷಯ ಏನೂ ತೊಂದರೆ ಇಲ್ಲ ಎಲ್ಲವನ್ನೂ ಸವಿವರವಾಗಿ ಹೇಳಿ ಮನದಟ್ಟು ಮಾಡಿ ಕಳುಹಿಸಿದ್ದೆ. ಆದರೂ ತಲೆಯಲ್ಲಿರುವ ಕಾಪರ್ ಟಿ ಭೂತ ಅವಳ ನೋವು ಹೆಚ್ಚಿಸಿತ್ತು. ನಾನು ಮತ್ತೆ ಪರೀಕ್ಷೆ ಮಾಡಿದೆ,  ಕಾಪರ್ ಟಿ ಇಂದ ಆಗಬಹುದಾದ ಯಾವ ಸಮಸ್ಯೆಯೂ ನನಗೆ ಕಾಣಲಿಲ್ಲ, ಗರ್ಭಕೋಶ ಸಂಪೂರ್ಣ ಆರೋಗ್ಯವಾಗಿತ್ತು, ಅವಳು ಹೇಳುವ ಯಾವ ಸಮಸ್ಯೆ ಲಕ್ಷಣವೂ ಇರಲಿಲ್ಲ, ಆದರೂ ಅವಳ ವಿಚಿತ್ರ ವರ್ತನೆಗೆ ಬೇಸತ್ತು ಕಾಪರ್ ಟಿ ತೆಗೆದು ಅವಳ ಕಣ್ಮುಂದೆ ಅದನ್ನು ಕಸಕ್ಕೆ ಹಾಕಿ ಇನ್ನು ನಿನಗೆ ಯಾವ ನೋವು ಬರಲ್ಲ ಬಿಡು ಅಂದೆ.


ಆ ಕರೆಯ ನಂತರ ನನ್ನ ಊಟದ ಸಮಯ ಪೂರ್ತಿ ನನ್ನ ಯಾವ ರೋಗಿಗೆ ಏನು ತೊಂದರೆ ಆಯ್ತು ಎಂದು ನಾನು ಹೆದರಿ ಬೆದರಿ  ಗಾಬರಿಯಾಗಿದ್ದೆ. ಆ ಒದ್ದಾಟ ನನ್ನ ಸಹನೆ ಕಟ್ಟೆ ಒಡೆಯಿತು, ಗರ್ಭಿಣಿಯಿಂದ ಹೆರಿಗೆವರೆಗೂ ಏನೇ ಬೇಕಿದ್ದರೂ ಎಷ್ಟು ಹೊತ್ತಿಗೆ ಬಂದರೂ ನಾನು ನಿಮಗೆ ಸ್ಪಂದಿಸುವೆ, ಬಡವ ಶ್ರೀಮಂತ ಜಾತಿ ರೀತಿ ಏನೂ ಭೇದ ಭಾವ ಮಾಡದೇ ಸರಿ ರಾತ್ರಿ ಬಂದರೂ ನಾನು ಹಾಜರಾಗಿ ಚಿಕಿತ್ಸೆ ಮಾಡುವೆ, ನಿನಗೆ ಸಮಸ್ಯೆ ಎಂದರೆ ನೀನೇ ಬಂದು ತೋರಿಸಿದರೆ ನಾನು ನೋಡಲ್ಲ ಅಂತೀನಾ?? ಮೂರನೇ ವ್ಯಕ್ತಿಯಿಂದ ಕರೆ ಮಾಡಿಸಿ ಅರ್ಧಬರ್ಧ ವಿಷಯ ತಿಳಿದ ವ್ಯಕ್ತಿ ಏನೋ ಅಸಂಬದ್ಧ ವಿವರಣೆ ಕೇಳಿದರೆ ನಮಗೆ ಎಷ್ಟು ಗಾಬರಿಯಾಗುತ್ತೆ? ಏನೂ ಇನ್ಫ್ಲುಯೆನ್ಸ್ ಮಾಡಿಸುವ ರೋಗಿಗಳಿಗೆ ಮಾತ್ರ ನಾನು ಚಿಕಿತ್ಸೆ ಮಾಡುತ್ತೇನಾ?? ದಿನ ಹತ್ತಾರು ರೋಗಿಗಳನ್ನು ನೋಡುತ್ತೇವೆ, ನೀವು ನೋಡಿರುವ ರೋಗಿಗೆ ಏನೋ ಆಗಿದೆ ಎಂದರೆ ನಮ್ಮ ಹೃದಯವೇ ಬಾಯಿಗೆ ಬರುತ್ತೆ, ಅದರ ಬದಲು ನೀವೇ ಏನು ಸಮಸ್ಯೆ ಎಂದು ಬಂದು ತೋರಿಸಿದರೆ ಮುಗಿಯಿತು, ಎಲ್ಲರನ್ನೂ ಗಾಬರಿಗೊಳಿಸಿ ದೊಡ್ಡ ಡ್ರಾಮಾ ಮಾಡುವ ಅವಶ್ಯಕತೆ ಏನು? ರಾತ್ರಿಯಿಂದ ಬರುತ್ತಿರುವ ನಿಮ್ಮ ಕರೆಗಳಿಗೆ ಜೀವ ಸತ್ತು ಸತ್ತು ಬದುಕುತ್ತಿದೆ, ನಾವು ಹಗಲು ರಾತ್ರಿ ನಿಮ್ಮ ಒಳಿತಿಗೆ ದುಡಿದರೆ ನಿಮ್ಮ ಅಸಂಬದ್ಧ ವರ್ತನೆಯಿಂದ ವೈದ್ಯರಿಗೆ ರೋಗಿಗಳ ಬಗ್ಗೆ ವಿನಾಕಾರಣ ಮಾನವೀಯ ನೋಟವೇ ಸತ್ತು ಹೋಗುವಂತೆ ನೀವೇ ಮಾಡುತ್ತೀರಾ ಅಂತ ಚೆನ್ನಾಗಿ ಬೈದೆ.


ಒಂಬತ್ತು ತಿಂಗಳು ಒಡನಾಟ ಇದ್ದು ಹೆರಿಗೆ ಮಾಡಿಸಿಕೊಂಡು ಅದಾಗಿ ಎರಡು ತಿಂಗಳು ಏನೇ ಬಂದರೂ ಬಂದು ಚಿಕಿತ್ಸೆ ಪಡೆದವಳು ಇಂದು ಅನವಸರ ಅನವಶ್ಯ ಮೂರನೇ ವ್ಯಕ್ತಿಯಿಂದ ಕರೆ ಮಾಡಿಸಿ ರೋಗಿಯ ಸ್ಪಷ್ಟ ಮಾಹಿತಿ ಇಲ್ಲದೆ ನನ್ನ ಮನಸ್ಸು ವಿಲ ವಿಲ ಒದ್ದಾಡಿಬಿಟ್ಟಿತ್ತು. ನನ್ನ ಮನಸ್ಸು ನಿಯಂತ್ರಣ ಮೀರಿ ಅವಳ ಮೇಲೆ ರೇಗಿತು. ಆದರೆ ಯಾರಿಗಾದರೂ ಜೋರು ಮಾಡುವುದು ನನಗೆ ನಾನು ಕೊಟ್ಟುಕೊಳ್ಳುವ ಶಿಕ್ಷೆ, ಅದಕ್ಕೆ ನಾನು ಇನ್ನೂ ಬೇಸರಿಸುವೆ.  ಎರಡು ನಿಮಿಷ ಸಮಾಧಾನ ಮಾಡಿಕೊಂಡು ಅವಳನ್ನು ಮತ್ತೆ ಕೂರಿಸಿ ಕಾಪರ್ ಟಿ ತೆಗೆದರೆ ಮತ್ತೆ ಮೂರೇ ದಿನಕ್ಕೆ ಮಗು ಮಾಡಿಕೊಂಡು ಬರಬಾರದು ಬುದ್ಧಿ ಹೇಳಿ, ಮೂತ್ರ ಸೋಂಕು ಮಾತ್ರೆ ನಿಲ್ಲಿಸದಂತೆ ಹೇಳಿ ಸಮಾಧವಾಗಿ ಕಳುಹಿಸಿದೆ. 


ಆದರೂ ಕೋಪದ ಕೈಗೆ ಬುದ್ಧಿ ಕೊಟ್ಟಿದಕ್ಕೆ ಮನಸ್ಸು ಗಲಿಬಿಲಿ, ದಿನ ಪೂರ್ತಿ ಬೇಸರ


ರೋಗಿಗಳೇ ಹೀಗೆ, ತಲೆ ಇದೆಯೋ ಇಲ್ಲವೋ, ಸಮಸ್ಯೆ ಎನಿಸಿದರೆ ನಮ್ಮ ಬಳಿ ಬಂದರೆ ಮುಗಿಯಿತು, ಏನು ಎತ್ತ ನೋಡಿ ಚಿಕಿತ್ಸೆ ಮಾಡಿ ಮುಗಿಸುತ್ತೇವೆ. ಅದು ಮಾಡಲ್ಲ, ಸುಮ್ಮನೆ ಹೊತ್ತಲ್ಲದ ಹೊತ್ತಲ್ಲಿ ಕರೆ ಮಾಡುವುದು, ಮೆಸೇಜ್ ಮಾಡುವುದು, ಯಾರಿಗಾದರೂ ಅರ್ಧಬರ್ಧ ವಿಷಯ ತಿಳಿಸಿ ಕರೆ ಮಾಡಿಸುವುದು , ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುವ ಆತುರ.


ಮೊದಲೇ ದಿನ ಪೂರ್ತಿ ಜೀವ ಕೈಲಿ ಇಟ್ಟುಕೊಂಡು ಕೆಲಸ ಮಾಡುವ ನಮಗೆ ಇಲಿ ಹೋಯ್ತು ಅಂದ್ರೆ ಹುಲಿ ಹೋಯಿತು ಅನ್ನೋ ಬದುಕು, ಅದರಲ್ಲಿ ಕರೆಯಲ್ಲಿ ಅರ್ಧ ಏನೋ ಹೇಳಿ ತಲೆಗೆ ಹುಳ ಬಿಟ್ರೆ ಊಟ ನಿದ್ದೆ ಇಲ್ಲದೇ ಮನಸ್ಸು ಎಲ್ಲಾ ಅಪಾಯಗಳ ಪಟ್ಟಿ ಮುಂದಿಟ್ಟು ಜೀವ ಹಿಂಡಿಬಿಡುತ್ತೆ. 


ಅದಕ್ಕೆ ಸಾಮಾನ್ಯ ವೈದ್ಯರು ರೋಗಿಗಳಿಗೆ ನಂಬರ್ ಕೊಡುವುದಿಲ್ಲ, ಆದರೆ ಈಗಿನ ಜಗತ್ತು ಯಾರ ನಂಬರ್ ಪಡೆಯುವುದು ಅಷ್ಟು ಕಷ್ಟವಲ್ಲ. ನಾವೇ ಮತ್ತೊಬ್ಬ ವೈದ್ಯರಿಗೆ ಏನಾದರೂ ಕೇಳೋಕೆ ಕರೆ ಮಾಡಲು ಮೀನಾ ಮೇಷ ಎಣಿಸಿ ಬೇಕೋ ಬೇಡವೋ ಸಮಯ ನೋಡಿ ಕರೆ ಮಾಡುತ್ತೇವೆ. ಆದರೆ ಈ ಜನಸಾಮಾನ್ಯರಿಗೆ ನಮ್ಮ ನಂಬರ್ ಆಟದ ಸಾಮಗ್ರಿ, ಆಸ್ಪತ್ರೆಯಲ್ಲಿ ಇದ್ದೀರಾ ಇಲ್ವಾ ಇಂದ, ಅದು ತಿನ್ಲಾ, ಇದು ತಿನ್ಲಾ, ಬಸ್ ಅಲ್ಲಿ ಹೋಗಲಾ ಕಾರು ಬೇಕಾ ಅನ್ನೋ ತನಕ ಎಲ್ಲಾ ಹುಚ್ಚು ಪ್ರಶ್ನೆಗಳಿಗೆ ಕರೆ ಮಾಡೋದಲ್ಲದೇ ಊರಲ್ಲಿ ಇರೋ ಒಬ್ಬ ಆಸಾಮಿ ಅವನು ಕರೆ ಮಾಡಿದ್ರೆ ಮಾತ್ರ ಆ ಊರು ಡಾಕ್ಟ್ರು ರೋಗಿಗಳನ್ನು ನೋಡೋದು ಅನ್ನೋ ಹಾಗೇ ಇನ್ಫ್ಲುಯೆನ್ಸ್ ಮಾಡೋಕೆ ದಬಾಯಿಸೋಕೆ ಅವನೇ ಡಾಕ್ಟರ್ ಅನ್ನೋ ಹಾಗೇ ನಮ್ಮನ್ನ ಮರುವಿಚಾರಣೆ ಮಾಡೋಕೆ ಕರೆ ಮಾಡೋದು. ಸಾಕು ಸಾಕು ಮಾಡಿ ಬಿಡ್ತಾರೆ.


ಅಯ್ಯೋ ಸ್ವಾಮಿ, ನಾವು ವೈದ್ಯರು ಮನುಷ್ಯರೇ,  ಕರೆ ಮಾಡುವ ಮುನ್ನ ಸ್ವಲ್ಪ ಸಮಯ ಸಂದರ್ಭ ಯೋಚಿಸಿ. ಕರೆಯಲ್ಲಿ ಅರ್ಧ ವಿಚಾರ ಮಾತಾಡುವ ಬದಲು ನೇರಾ ಬಂದು ಬಗೆಹರಿಸಿಕೊಳ್ಳಿ. ನಮ್ಮ ರೋಗಿಗಳ ಹಿತಕ್ಕೆ ದುಡಿಯುವ ನಮಗೆ ಒಂದು ವಿಷಯ ಅಳತೆ ಮೀರಿ ಆ ಕಡೆ ಈ ಕಡೆ ಆದರೂ ಅರ್ಧ ಜೀವ ಆಗ್ತೀವಿ, ಸುಮ್ಮನೆ ನಿಮ್ಮ ವಿಚಿತ್ರ ಕರೆಗಳಿಂದ ನಮ್ಮನ್ನು ಕೊಲ್ಲಬೇಡಿ. ಕರೆಯೇ ಹೊರೆ ಮಾಡಬೇಡಿ, ಮುಂದೊಂದು ದಿನ ಅಗತ್ಯ ನಿಮಗೆ ಅವಶ್ಯ ಬಿದ್ದರೂ ವೈದ್ಯರು ಕರೆ ತೆಗೆಯದೇ ನೀವು ಅಪಾಯಕ್ಕೆ ಸಿಲುಕುವ ಅನಾಹುತಕ್ಕೆ ನೀವೇ ಅಡಿಪಾಯ ಹಾಕಬೇಡಿ. ಇದು ವಿನಂತಿಯ ಜೊತೆಗೆ ಎಚ್ಚರಿಕೆ ಕೂಡ.


- ಡಾ ಶಾಲಿನಿ ವಿ ಎಲ್ 

ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು 

ಸಾರ್ವಜನಿಕ ಆಸ್ಪತ್ರೆ,  ಸುಳ್ಯ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top