ಮಂಗಳೂರು, ಜೂನ್ 09: ಖ್ಯಾತ ಪತ್ರಿಕೋದ್ಯಮಿ ನವಭಾರತ ಕನ್ನಡ ದೈನಿಕ ಪತ್ರಿಕೆಯ ಸ್ಥಾಪನಾ ಸಂಪಾದಕ ಮತ್ತು ನಗರದ ಮರೋಳಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕೆನರಾ ವರ್ಕ್‌ಶಾಪ್ ಕೈಗಾರಿಕಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ದಿ| ವಿ. ಎಸ್. ಕುಡ್ವರ 127ನೇ ವಾರ್ಷಿಕ ಜನ್ಮ ದಿನಾಚರಣೆ (ಸಂಸ್ಥಾಪಕರ ದಿನಾಚರಣೆ) ಯನ್ನು ಇಂದು ಕೆನರಾ ವರ್ಕ್‌ಶಾಪ್ ಸಂಸ್ಥೆಯ ಕೈಗಾರಿಕಾ ಸಂಕೀರ್ಣದಲ್ಲಿ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಪ್ರೇಮನಾಥ ಕುಡ್ವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸ್ಥಾಪಕರ ಆಡಳಿತ ಕ್ಷಮತೆ, ಕಾರ್ಯದಕ್ಷತೆ, ಕಾರ್ಯನಿರ್ವಾಹಣೆ, ಕರ್ತವ್ಯ ನಿಷ್ಠೆ ಮತ್ತು ಸಮಯ ಪಾಲನೆ ಮತ್ತು ಪತ್ರಿಕೋದ್ಯಮ (ನವಭಾರತ ಕನ್ನಡ ದೈನಿಕ ಪತ್ರಿಕೆ) ಮತ್ತು ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಗಣನೀಯ ಸಾಧನೆಯನ್ನು ಸ್ಮರಿಸಿದರು. ಅವರ ಆದರ್ಶ, ದೂರದರ್ಶಿತ್ವ, ಸ್ಪೂರ್ತಿ, ನಮ್ಮ ಸಂಸ್ಥೆಗೆ ಇಂದಿಗೂ ಮಾರ್ಗದರ್ಶನ ಹಾಗೂ ನಮ್ಮ ಸಂಸ್ಥೆಯ ಸಿಬ್ಬಂದಿಗಳಿಗೆ ಪ್ರೇರಣೆ ಮತ್ತು ದಾರಿದೀಪವಾಗಿದೆ ಎಂದು ನುಡಿದು ದಿ| ಕುಡ್ವರ ಪುತ್ಥಳಿಗೆ ಹಾರಾರ್ಪಣೆ ಮಾಡಿ ಸಂಸ್ಥಾಪಕರಿಗೆ ಗೌರವ ಸಲ್ಲಿಸಿದರು. ಸಂಸ್ಥೆಯ ಹಿರಿಯ ಕಾರ್ಯ ನಿರ್ವಹಣಾ ಪ್ರಬಂಧಕರಾದ ಕು. ಕಾವ್ಯ ಪಿ. ಕುಡ್ವ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಿ| ವಿ.ಎಸ್. ಕುಡ್ವರ ಜೀವನ ಚರಿತ್ರೆ ಕೃತಿಯ ಲೇಖಕ ವಸಂತ ಮಲ್ಯರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ತಾಪಕರಿಗೆ ತಮ್ಮ ಗೌರವ ಸಲ್ಲಿಸಿದರು. ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ, ಕೋಡಿಯಾಲ್‌ಬೈಲ್‌ನ ಮುಖ್ಯ ಪ್ರಬಂಧಕರಾದ ಮಿಲನ್ ಗಿರಿ ಮತ್ತು ಕೆನರಾ ಬ್ಯಾಂಕ್, ಕುಲಶೇಖರ ಶಾಖೆಯ ಪ್ರಬಂಧಕರಾದ ಅಮಲ್ ಮೋಹನ್ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು.
ಸಂಸ್ಥೆಯ ನಿವೃತ್ತ ಉಪ ಮಹಾಪ್ರಬಂಧಕರಾದ ಅಬ್ದುಲ್ ಸಲೀಂ ಅವರು ಪಾಲ್ಗೊಂಡು ಸಂಸ್ಥೆಯು ಕಳೆದ 8 ದಶಕಗಳಿಂದ ಬೆಳೆದು ಬಂದ ದಾರಿಯ ವಿವರ ನೀಡಿ ಸಂಸ್ಥಾಪಕರಾದ ದಿ| ವಿ.ಎಸ್. ಕುಡ್ವರವರು ಕೈಗಾರಿಕೋದ್ಯಮದಲ್ಲಿ ಯೋಜನೆ, ಸಾಧನೆ, ಧ್ಯೇಯ ಮತ್ತು ದೂರದರ್ಶಿತ್ವದ ವಿವರ ನೀಡಿ ಉದ್ಯಮದಲ್ಲಿ ಯಶಸ್ಸು ಸಾಧಿಸಿದನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ವಿ. ಎಸ್. ಕುಡ್ವ ಕಂಪ್ಯೂಟರ್ ಅಕಾಡೆಮಿಯ ಮುಖ್ಯ ತರಬೇತುದಾರರಾದ ಕೆ. ಮುಕುಂದರಾಜ ಪೈ ರವರನ್ನು ಸನ್ಮಾನಿಸಲಾಯಿತು.
ಸಿಬ್ಬಂದಿಗಳ ಪರವಾಗಿ ಅಕ್ಷಯ್ ಪ್ರಭು ಸಹಾಯಕ ಮಹಾಪ್ರಬಂಧಕರು, ಹಿರಿಯ ಕಾರ್ಮಿಕರಾದ ಜಗದೀಶ್ ಸಾಲ್ಯಾನ್ ಮತ್ತು ನಾಗರಾಜ್, ಕಾರ್ಮಿಕರ ಸಂಘದ ಪರವಾಗಿ ಪದಾಧಿಕಾರಿಗಳು ಸಂಸ್ಥಾಪಕರ ಪುತ್ಥಳಿಗೆ ಹಾರಾರ್ಪಣೆ ಮಾಡಿ ತಮ್ಮ ಗೌರವ ಸಲ್ಲಿಸಿದರು. ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ಶ್ರೀಮತಿ ಕಿರಣ್ ಎಸ್. ಕುಲಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉತ್ಪಾದನಾ ತಾಂತ್ರಿಕಾ ತಜ್ಞ ಸುದರ್ಶನ್ ರಾವ್ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


