ಲೇಖನ- ಬದುಕಿನಲ್ಲಿ ನಾವು ಹೇಗಿರಬೇಕು?

Upayuktha
0


 

ದೊಂದು ಪುಟ್ಟ ಹಳ್ಳಿ. ಹಳ್ಳಿಯ ಅಂಚಿನಲ್ಲಿ ಒಂದು ವಿಶಾಲವಾದ ಕೆರೆಯಿದ್ದು ಅದರ ಪಕ್ಕದಲ್ಲಿಯೇ ಒಂದು ಭವ್ಯವಾದ ಕೃಷ್ಣನ ಮಂದಿರವಿತ್ತು. ಮಂದಿರದ ಪ್ರಸಿದ್ಧಿ ಎಲ್ಲೆಡೆ ಹರಡಿದ್ದು ಪ್ರತಿದಿನವೂ ನೂರಾರು ಜನ ಅಲ್ಲಿಗೆ ಭೇಟಿ ನೀಡುತ್ತಿದ್ದರು. ನಯನ ಮನೋಹರವಾದ ಭಗವಾನ್ ಶ್ರೀ ಕೃಷ್ಣನ ಮೂರ್ತಿಯನ್ನು ದರ್ಶಿಸಿ ಪುಲಕಿತಗೊಳ್ಳುತ್ತಿದ್ದರು. ಮಂದಿರದಲ್ಲಿ ಸದಾ ನಡೆಯುತ್ತಿದ್ದ ಭಜನೆ, ಕೀರ್ತನೆಗಳಲ್ಲಿ ಪಾಲ್ಗೊಂಡು ಭಕ್ತಿ ಭಾವದಲ್ಲಿ ಮಿಂದು ತೇಲುತ್ತಿದ್ದರು. ಪ್ರಸಾದ ಮಂದಿರದಲ್ಲಿ ಕೃಷ್ಣನ ಪ್ರಸಾದವನ್ನು ಸ್ವೀಕರಿಸಿ ಧನ್ಯತೆಯನ್ನು ಅನುಭವಿಸುತ್ತಿದ್ದರು.

 

ಗ್ರಾಮದಲ್ಲಿದ್ದ ಓರ್ವ ಹದಿಹರೆಯದ ಯುವಕ ತನ್ನ ವಿದ್ಯಾಭ್ಯಾಸವನ್ನು ಪೂರೈಸಿ ಹಳ್ಳಿಗೆ ಮರಳಿ ಬಂದನು. ಈಗಾಗಲೇ ಸಾಕಷ್ಟು ಕಡೆ ನೌಕರಿಗೆ ಅರ್ಜಿ ಹಾಕಿದ್ದ ಆತ ಸಂದರ್ಶನಕ್ಕೆ ಕರೆ ಬರುವವರೆಗೆ ಹಳ್ಳಿಯಲ್ಲಿ ಇದ್ದುಕೊಂಡು ಕೃಷ್ಣನ ಮಂದಿರದಲ್ಲಿ ಸೇವೆ ಸಲ್ಲಿಸುವ ಬಯಕೆಯನ್ನು ಹೊಂದಿದ್ದನು. ವರ್ಣ ಚಿತ್ರ ಕಲಾಕಾರನಾಗಿದ್ದ ಆತ ಪ್ರತಿದಿನವೂ ಅತ್ಯಂತ ತಾದಾತ್ಮಭಾವದಿಂದ ಕೃಷ್ಣನ ಮೂರ್ತಿಯನ್ನು ದಿಟ್ಟಿಸುತ್ತಾ ನಿಂತುಕೊಳ್ಳುತ್ತಿದ್ದನು. ಹಾಗೆ ಹಲವಾರು ನಿಮಿಷಗಳ ಕಾಲ ವಿಗ್ರಹವನ್ನು ದೃಷ್ಟಿಸಿ ನೋಡಿ ಆತ ದಿನದ ಅಲಂಕಾರದ ಸಮೇತ ಕೃಷ್ಣನ ವಿಗ್ರಹವನ್ನು ಅದು ಕಂಗೊಳಿಸುತ್ತಿರುವಂತೆಯೇ ವರ್ಣ ಚಿತ್ರದಲ್ಲಿ ಮೂಡಿಸುತ್ತಿದ್ದನು. ಇದು ಜನರಲ್ಲಿ ಸೋಜಿಗವನ್ನು ಉಂಟು ಮಾಡುತ್ತಿತ್ತು. ಸಾಕಷ್ಟು ಜನರು ಈತನ ವರ್ಣ ಚಿತ್ರಕಲೆಯನ್ನು ನೋಡಿ ನಿಂತು ಮೆಚ್ಚುಗೆಯನ್ನು ಸೂಸಿ ಹೋಗುತ್ತಿದ್ದರು.

 

ಅದೊಂದು ದಿನ ಗುಡಿಯ ಮುಖ್ಯ ಅರ್ಚಕರು ಈತನ ಕಲಾವಂತಿಕೆಯನ್ನು ಕಂಡು ಮೆಚ್ಚುಗೆ ಸೂಸಿ ಕೃಷ್ಣ ಹಾಗೂ ಕಂಸರ ನಡುವಣ ಕದನದ ಒಂದು ಚಿತ್ರವನ್ನು ದೇವಾಲಯದ ಆವರಣದ ಒಂದು ಭಾಗದಲ್ಲಿ ಚಿತ್ರಿಸಲು ಹೇಳಿದರು.ನಯುವಕ ತನ್ನ ವರ್ಣ ಚಿತ್ರಕ್ಕೆ ಬೇಕಾದ ರೂಪದರ್ಶಿಯನ್ನು ಹುಡುಕಿ ಕೊಡುವಂತೆ ಕೇಳಿಕೊಂಡನು. ಗ್ರಾಮದ ಎಲ್ಲಾ ಮಕ್ಕಳನ್ನು ಅಲ್ಲಿ ಸೇರಿಸಲಾಯಿತು. ಎಲ್ಲಾ ಮಕ್ಕಳಲ್ಲಿ ಅತ್ಯಂತ ಮುಗ್ಧತೆಯನ್ನು ಸೂಸುತಿದ್ದ ಹೊಳಪು ಕಂಗಳ ಪುಟ್ಟ ಬಾಲಕನನ್ನು ಯುವಕ ಆರಿಸಿಕೊಂಡನು. ಪ್ರತಿ ದಿನ ಒಂದೆರಡು ಗಂಟೆಗಳ ಕಾಲ ಬಾಲಕ ಈತನಿಗೆ ರೂಪದರ್ಶಿಯಾಗಿ ನಿಲ್ಲಬೇಕಾಗಿತ್ತು. ಮುಂದಿನ ಕೆಲವೇ ದಿನಗಳಲ್ಲಿ ಕೃಷ್ಣನ ಚಿತ್ರವನ್ನು ಯಥಾವತ್ತಾಗಿ ಬಿಡಿಸಿದ ಯುವಕನ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆಯ ಹಾಗೂ ಅಭಿನಂದನೆಗಳ ಸುರಿಮಳೆಯಾಯಿತು. ಇನ್ನೇನು ಕಂಸನ ಚಿತ್ರಕ್ಕೆ ಓರ್ವ ಕ್ರೂರಿ ವ್ಯಕ್ತಿಯನ್ನು ರೂಪದರ್ಶಿಯನ್ನಾಗಿ ಹುಡುಕುವ ಕೆಲಸ ದೇವಸ್ಥಾನದ ಅರ್ಚಕ ಮಂಡಳಿಯವರದಾಗಿತ್ತು.

 

ನೀವು ಬೇಗನೆ ಓರ್ವ ಅತ್ಯಂತ ಕ್ರೂರ ಮುಖದ ವ್ಯಕ್ತಿಯನ್ನು ಕರೆತಂದರೆ ನಾನು ಚಿತ್ರವನ್ನು ಪೂರೈಸುತ್ತೇನೆ. ಅಲ್ಲಿಯವರೆಗೂ ನಗರದಲ್ಲಿ ನನಗೆ ದೊರೆತ ನೌಕರಿಯ ಸಂದರ್ಶನಕ್ಕೆ ಹೋಗಿ ಬರುತ್ತೇನೆ ಎಂದು ಅಲ್ಲಿಂದ ಯುವಕ ಹೊರಟು ಹೋದ.

 

ಸಂದರ್ಶನದಲ್ಲಿ ಈತನ ಕಾರ್ಯ ಚತುರತೆಯನ್ನು ಮೆಚ್ಚಿದರು. ಕೂಡಲೇ ನೌಕರಿಯ ಆದೇಶ ಪತ್ರ ಈತನಿಗೆ ದೊರಕಿತು. ಈತ ರಚಿಸಿದ ವರ್ಣ ಚಿತ್ರಗಳನ್ನು ಆತ ನೌಕರಿಗಿದ್ದ ಸಂಸ್ಥೆಯು ಅತಿಹೆಚ್ಚಿನ ಮೊತ್ತಕ್ಕೆ ಖರೀದಿಸಿ ಆತನನ್ನು ವಿಶ್ವ ಪ್ರಸಿದ್ಧ ವರ್ಣ ಚಿತ್ರಕಾರನನ್ನಾಗಿಸಿತು.

 

ಹಳ್ಳಿಯ ಒಂದು ಮೂಲೆಯಲ್ಲಿ ಕುಳಿತು ಚಿತ್ರ ರಚಿಸುತ್ತಿದ್ದ ಯುವಕ ಮುಂದಿನ ಕೆಲವೇ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಯನ್ನು ಹೊಂದಿ ದೇಶ ವಿದೇಶಗಳೆಲ್ಲೆಡೆ ಓಡಾಡಿ ತನ್ನ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿ ಸಾಕಷ್ಟು ಹಣ, ಹೆಸರು, ಯಶಸ್ಸನ್ನು ಗಳಿಸಿದ.

 

ಬದುಕಿನ ಒಂದು ಹಂತದಲ್ಲಿ ಆತನಿಗೆ ಇನ್ನು ನನ್ನೂರಿಗೆ ಮರಳಿ ಅಲ್ಲಿಯೇ ಬದುಕನ್ನು ಕಟ್ಟಿಕೊಳ್ಳಬೇಕೆಂಬ ತೀವ್ರವಾದ ಬಯಕೆ ಉಂಟಾಯಿತು. ಬಯಕೆ ತೀರದ ಹಂಬಲವಾಗಿ ಬದಲಾಗುವ ಮುನ್ನವೇ ಆತ ತನ್ನೂರಿಗೆ ಮರಳಿದ. ಊರಿನಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ತನ್ನ ಊರು ಎಂಬ ಅಭಿಮಾನ ಆತನನ್ನು ಅಲ್ಲಿಯೇ ಉಳಿಯಲು ಪ್ರೇರೇಪಿಸಿತು. ಪಾಲಕರ ಪ್ರೀತಿ, ಒಡಹುಟ್ಟಿದವರ ಮಮಕಾರ ಮರಳಿ ದೊರೆತ ಭಾವ ಆತನಿಗೆ ಉಂಟಾಯಿತು.

 

ಮರುದಿನ ಮುಂಜಾನೆ ಎಂದಿನಂತೆ ಪ್ರಾತಃವಿಧಿಗಳನ್ನು ಪೂರೈಸಿ ದೇಗುಲಕ್ಕೆ ಹೋದ ಯುವಕನನ್ನು ಅಲ್ಲಿಯ ಪ್ರಧಾನ ಅರ್ಚಕರು ಗುರುತಿಸಿದರು. ಆಗ ತಾನೆ ಹದಿಹರೆಯಕ್ಕೆ ಕಾಲಿಡುತ್ತಿದ್ದ ಯುವಕ ಇದೀಗ ಪ್ರಬುದ್ಧ ವ್ಯಕ್ತಿಯಾಗಿ ಬದಲಾಗಿದ್ದನು. ಪ್ರೀತಿಯಿಂದ ಆತನನ್ನು ಆಶೀರ್ವದಿಸಿದ ಅರ್ಚಕರು ಆತನ ಕೈಹಿಡಿದು ಕರೆದೊಯ್ದು. ಇದೋ ನೋಡು ನೀನು ಅರ್ಧಕ್ಕೆ ನಿಲ್ಲಿಸಿದ ಕೆಲಸ ಎಂದು ಗೋಡೆಯತ್ತ ತೋರಿದರು. ಕೆಲವು ವರ್ಷಗಳ ಹಿಂದೆ ಆತ ರಚಿಸಿದ್ದ ಕೃಷ್ಣನ ವರ್ಣ ಚಿತ್ರ ಅದಾಗಿತ್ತು ಅರೇ! ಹೌದಲ್ಲವೇ ನಾನು ಕಂಸನ ಚಿತ್ರವನ್ನು ಬಿಡಿಸಲೇ ಇಲ್ಲ ಎಂದು ಬೇಸರ ಪಟ್ಟುಕೊಂಡ ಯುವಕ ತಪ್ಪಾಯ್ತು ಕ್ಷಮಿಸಿ ಗುರುಗಳೇ ಎಂದು ಕ್ಷಮೆ ಯಾಚಿಸಿದ.

 

ಕೂಡಲೇ ನನಗೆ ಅತ್ಯಂತ ಕ್ರೂರ ವ್ಯಕ್ತಿಯ ಚಹರೆಯನ್ನು ತೋರಿಸಿ ನಾನು ಚಿತ್ರವನ್ನು ಪೂರ್ಣಗೊಳಿಸುತ್ತೇನೆ ಎಂದು ಗುರುಗಳನ್ನು ಕೇಳಿಕೊಂಡ. ಇದೀಗ ಇಡೀ ಊರಿನ ಜನರಲ್ಲಿ ಅತ್ಯಂತ ವಿರೂಪಗೊಂಡ ಕ್ರೂರ ಮುಖವನ್ನು ಹೊತ್ತ ಜನರು ಆತನ ಮುಂದೆ ಸಾಲುಗಟ್ಟಿ ನಿಂತರು. ಆದರೆ ಯಾರೊಬ್ಬರೂ ಆತನಿಗೆ ಒಪ್ಪಿಗೆಯಾಗಲಿಲ್ಲ.

 

ಇದೀಗ ಅನಿವಾರ್ಯವಾಗಿ ಗುರುಗಳು ಊರಿನ ಮತ್ತೊಂದು ಭಾಗದಲ್ಲಿದ್ದ ಬಂಧೀಖಾನೆಯೊಂದಕ್ಕೆ ಆತನನ್ನು ಕರೆದೊಯ್ದರು. ಬಂಧೀಖಾನೆಯಲ್ಲಿದ್ದ ಎಲ್ಲಾ ಜನರನ್ನು ಕೂಲಂಕುಶವಾಗಿ ಪರಿಶೀಲಿಸಿದ ಯುವಕ ಅಂತಿಮವಾಗಿ ಒಬ್ಬ ವ್ಯಕ್ತಿಯನ್ನು ಆರಿಸಿದ. ಬಿಗಿ ಭದ್ರತೆಯಲ್ಲಿ ಆತನನ್ನು ದೇಗುಲದ ಆವರಣಕ್ಕೆ ಕರೆತರಲಾಯಿತು. ಕೆಲವೇ ದಿನಗಳಲ್ಲಿ ಕಂಸನ ವರ್ಣ ಚಿತ್ರವು ಪೂರ್ಣಗೊಂಡಿತು. ಕಂಸ ವಧೆಯ ಚಿತ್ರವನ್ನು ನೋಡಿ ಜನರು ಚಪ್ಪಾಳೆ ಬಾರಿಸುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಚಿತ್ರವು ಪೂರ್ಣಗೊಳ್ಳುತ್ತಿದ್ದಂತೆ ಜೈಲಿನಿಂದ ಬಂದ ಕೈದಿ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ. ಆತನ ಅಳುವನ್ನು ನೋಡಿ ವರ್ಣ ಚಿತ್ರಕಾರನು ಆತನ ಬೆನ್ನ ಮೇಲೆ ಮೆದುವಾಗಿ ಕೈಯಿಟ್ಟು ಏಕೆ ಅಳುತ್ತಿರುವೆನೀನು ವರ್ಣ ಚಿತ್ರದ ತಯಾರಿಯ ಮುಖ್ಯ ಪಾತ್ರಧಾರಿಯಾಗಿರುವೆ ಎಂದು ನಿನಗೆ ಸಂತೋಷವಾಗಬೇಕಾಗಿತ್ತು ಅಲ್ಲವೇ? ಆದರೆ ನೀನು ಹೀಗೇಕೆ ಅಳುತ್ತಿರುವೆ? ಎಂದು ಅಚ್ಚರಿಯಿಂದ  ಕೇಳಿದನು.

 

ಕೂಡಲೇ ಕೈದಿಯು 'ನನ್ನ ಹಿಂದಿನ ದಿನಗಳ ನೆನಪಾಯಿತು. ಚಿತ್ರಕ್ಕೆ ನೀವು ಭಗವಾನ್ ಶ್ರೀ ಕೃಷ್ಣನ ರೂಪದರ್ಶಿಯಾಗಿ ನನ್ನನ್ನು ಆರಿಸಿಕೊಂಡಿರಿ. ಇದೀಗ ಜೈಲಿನಲ್ಲಿರುವ ನನ್ನನ್ನು ಕಂಸನ ರೂಪದರ್ಶಿಯಾಗಿಯೂ ಆಯ್ಕೆ ಮಾಡಿಕೊಂಡಿರಿ ಎಂದು ಹೇಳಿದಾಗ ವರ್ಣ ಚಿತ್ರಕಾರನಿಗೆ ಇನ್ನಿಲ್ಲದ ಅಚ್ಚರಿಯಾಯಿತು.

ನೋಡಿದಿರಾ ಸ್ನೇಹಿತರೆ! ಭೂಮಿಗೆ ಪುಟ್ಟ ಮಗುವಿನ ರೂಪದಲ್ಲಿ ಬಂದಾಗ ನಾವೆಲ್ಲರೂ ಮುಗ್ಧರೆ! ಆದರೆ ನಾವು ನಮ್ಮ ಕರ್ಮಾನುಸಾರವಾಗಿ ಬದಲಾಗುತ್ತೇವೆ. ನಮ್ಮಲ್ಲಿ ಪ್ರೀತಿ, ವಿಶ್ವಾಸ, ಕರುಣೆ, ನಂಬಿಕೆ, ಸಂಯಮ ಎಲ್ಲವನ್ನು ತುಂಬಿರುವ ದೇವರು ಕೋಪ, ಅಹಂಕಾರ, ಅಸಹನೆ, ಅಸಮಾಧಾನ, ಅಶಾಂತಿಗಳನ್ನು ಕೂಡ ತುಂಬಿರುತ್ತಾನೆ.... ಯಾವುದನ್ನು ನಾವು ಹೆಚ್ಚು ಬಳಸುತ್ತೇವೆಯೋ ಹಾಗೆಯೇ ನಾವಾಗುತ್ತೇವೆ. ಭೂಮಿಗೆ ತಂದ ಭಗವಂತನಿಗೆ ತನ್ನ ಮಕ್ಕಳೆಲ್ಲರೂ ಒಳ್ಳೆಯವರಾಗಿರಲಿ ಎಂಬ ಆಶಯವಿರುತ್ತದೆ ನಿಜ, ಆದರೆ ನಾವು ಮಾಡುವ ಕರ್ಮಗಳು ನಮ್ಮನ್ನು ಬೆಳೆಸುತ್ತವೆ. ಒಳ್ಳೆಯ ಕರ್ಮಗಳು ನಮ್ಮನ್ನು ಸುಸಂಸ್ಕೃತರನ್ನಾಗಿ ಮಾಡಿದರೆ ನಮ್ಮ ಕೆಟ್ಟ ಕರ್ಮಗಳು ನಮ್ಮನ್ನು ವಿಕಾರಿಯನ್ನಾಗಿಸುತ್ತವೆ.

 

 ಈಗ ಹೇಳಿ! ನಾವು ಯಾರಾಗಬೇಕು ಎಂಬುದನ್ನು ?

 

ವೀಣಾ ಹೇಮಂತ್ ಗೌಡ ಪಾಟೀಲ್

ಮುಂಡರಗಿ ಗದಗ್ 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

Post a Comment

0 Comments
Post a Comment (0)
To Top