ಮುಂದೊಂದು ಕಾಲ ಬರಬಹುದು ಮನೆಯ ಗೋಡೆಯ ಮೇಲಿನ ಚಿತ್ರಗಳಲ್ಲಿ ಮಾತ್ರ ಕಾಣುವ ಸೈಕಲ್ಲನ್ನು ಮುಂದಿನ ತಲೆಮಾರಿನ ಮಗು ಏನೋ ವಿಚಿತ್ರ ವಸ್ತು ಎಂಬಂತೆ ಕಾಣಬಹುದು. ಏಕೆಂದರೆ ಹಿಂದೆ ಎಲ್ಲರೂ ಸಂಚರಿಸುತ್ತಿದ್ದ, ಬರಬರುತ್ತಾ, ಕೆಲವರು ಮಾತ್ರ ಸವಾರಿ ಮಾಡುತ್ತಿದ್ದ ಸೈಕಲ್ ಇಂದು ಕೇವಲ ಬಡವರು, ಶ್ರಮಜೀವಿಗಳು, ಕ್ರೀಡಾಪಟುಗಳು, ಬೊಜ್ಜು ಕರಗಿಸಲು ಹಲವರು ಬಳಸುತ್ತಿರುವ ವಾಹನವಾಗಿದೆ.
ನಾನು ನೀವೆಲ್ಲಾ ಚಿಕ್ಕಂದಿನಲ್ಲಿ, ಅಪ್ಪ, ಅಣ್ಣ, ಅವರ ಗೆಳೆಯರು ಸೈಕಲ್ ಓಡಿಸುತ್ತಿದ್ದುದ್ದನ್ನು ಬೆರಗಾಗಿ ಕಂಡು, ನಾನು ಎಂದು ಸೈಕಲ್ ಓಡಿಸುತ್ತೇನೋ ಎಂದು ತುಂಬಾ ಆಸೆ, ಕಾತುರಗಳಿಂದ ಕಾಯುತ್ತಿದ್ದ ಆ ದಿನಗಳು ನಿಮಗೆ ನೆನಪಿದೆಯೇ? ಅಣ್ಣ, ಅಪ್ಪ, ಮಾವ, ಚಿಕ್ಕಪ್ಪ, ಸೈಕಲ್ಲಿನಲ್ಲಿ ಹೊರಟರೆ, ಆಗಾಗ ಮಕ್ಕಳಾದ ನಮ್ಮನ್ನು ಸೈಕಲ್ ಬಾರ್ ಮೇಲೆ (ಮುಂದುಗಡೆ) ಅಥವಾ ಕ್ಯಾರಿಯರ್ (ಸೈಕಲ್ ಹಿಂಭಾಗ) ಕೂರಿಸಿಕೊಂಡು ಹೋಗುವ ಗಳಿಗೆಗಾಗಿ ಅತ್ಯಂತ ಆಸಕ್ತಿ, ಕುತೂಹಲಗಳಿಂದ ಕಣ್ಣು ದೊಡ್ಡದಾಗಿ ತೆಗೆದು ಕಾಯುತ್ತಿದ್ದ ಆ ನಮ್ಮ ನಿಮ್ಮ ಬಾಲ್ಯದ ನೆನಪುಗಳು ಈಗ ಫೋಟೋದಲ್ಲಿ ಮಾತ್ರ ನೋಡ ಸಿಗುವಂತಹ ದೃಶ್ಯವಾಗಿದೆ.
ಹಿಂದೆ ಇಂದಿನ ಅನೇಕ ವಾಹನಗಳು ರಸ್ತೆಗೆ ಬಂದಿರದ ಕಾಲದಲ್ಲಿ, ಸೈಕಲ್ ಎಲ್ಲ ಜನರ ದಿನನಿತ್ಯದ ಆವಶ್ಯಕತೆಯ ವಸ್ತುವಾಗಿತ್ತು. ಕಾಲ ಬದಲಾದಂತೆ, ಜನರ ಆಸೆ, ಆಸಕ್ತಿ, ಬಯಕೆ, ಬದಲಾದಂತೆ, ಜನರ ಕೈಯಲ್ಲಿ ಹೆಚ್ಚು ಹೆಚ್ಚು ಹಣ ಕುಣಿದಾಡಿದಂತೆ ಸೈಕಲ್ಗೆ ಪರ್ಯಾಯವಾದ ಅನೇಕ ವಾಹನಗಳು ಬಂದಿವೆ. ಸುಮಾರು ಎಪ್ಪತ್ತು ವರ್ಷಗಳ ಕೆಳಗೆ ನನಗೆ ಐದು ವರ್ಷವಾಗಿದ್ದಾಗ, ನಾನು ನನ್ನ ತಂದೆಯ ಸೈಕಲ್ಲಿನ ಮುಂಭಾಗದಲ್ಲಿ ಕುಳಿತು ಹೋಗುತ್ತಿದ್ದಾಗ ಬಲಗೈಗೆ ಸಿಗುತ್ತಿದ್ದ ಸೈಕಲ್ ಬೆಲ್ ಅನ್ನು ಟಣ್ ಟಣ್ ಎಂದು ಬಾರಿಸಿದ್ದು ಈಗಲೂ ನನ್ನ ಕಣ್ಣ ಮುಂದೆ ಕಟ್ಟಿದಂತಿದೆ. ಆ ಕಾಲದಲ್ಲಿ ನಡೆದು ಹೋಗುವವರಿಗಿಂತ, ಬಸ್ಸಿನಲ್ಲಿ ಹೋಗುವವರಿಗಿಂತ ಸೈಕಲ್ ಇಟ್ಟಿದ್ದವರೇ ಸಾಹುಕಾರರು.
ಕ್ರಮೇಣ ಕಾಲ ಸರಿದಂತೆ ಸೈಕಲ್ ಹಿನ್ನೆಲೆಗೆ ಹೋಗಿ ನಾನಾ ತರಹದ ವಿವಿಧ ಕಂಪನಿಗಳ ಸ್ಕೂಟರ್, ಬೈಕ್, ಕಾರುಗಳು ಬಂದು ಸೈಕಲ್ ಈಗ ಬೊಜ್ಜು ಇಳಿಸಲು ಜನ ಬಳಸುವ ಒಂದು ಸಾಧನವಾಗಿದೆ. ಕ್ರೀಡಾಪಟುಗಳು ಹಾಗೂ ಶಾರೀರಿಕ ವ್ಯಾಯಾಮ ಬೇಕೆಂದವರು ಇನ್ನೊಮ್ಮೆ ಸೈಕಲ್ಲಿನ ಬೆನ್ನು ಹತ್ತಿದ್ದಾರೆ. ಮಕ್ಕಳಿಗೆ ಮೂರು ಚಕ್ರದ ಸೈಕಲ್ಗಳು ಹಿಂದೆ ಜನಪ್ರಿಯವಾಗಿದ್ದವು. ಆಗ ಮದುವೆಯಲ್ಲಿ ಮಾವ ಬಲುಕಷ್ಟಪಟ್ಟು ಅಳಿಯನಿಗೆ ಕೊಡುತ್ತಿದ್ದ ಸೈಕಲ್ ಉಡುಗೊರೆ ಆಗಿನ ಕಾಲದಲ್ಲಿ ಅದೇ ಬೆಲೆಬಾಳುವ ಕಾಣಿಕೆಯಾಗಿತ್ತು. ಈಗ ಒಮ್ಮೆ ಹೇಳಿ ನೋಡಿ - ಹತ್ತು ವರ್ಷ ದಾಟಿದ ಮಗು ಸಹ, ತನಗೆ ಲೈಸೆನ್ಸ್ ಸಿಗದಿದ್ದರೂ ಬೈಕ್ ಓಡಿಸಲು ಮುಂದೆ ನುಗ್ಗುತ್ತಾನೆ ಹೊರತು ಸೈಕಲ್ ಕಂಡರೆ “ತೂ ಇದರಲ್ಲಿ ನಾನು ಹೋಗುವುದಿಲ್ಲ.” ಟಿ.ವಿಯಲ್ಲಿ, ರಸ್ತೆ ಬೋರ್ಡುಗಳಲ್ಲಿ, ಆಕರ್ಷಕ ಬ್ಯಾನರ್ಗಳಲ್ಲಿ, ಸಿನಿಮಾ ಟಾಕೀಸಿನ ಜಾಹೀರಾತಿನಲ್ಲಿ ಕಂಡು ಬರುವ ಚಲನಚಿತ್ರ ನಟ-ನಟಿಯರು, ಖ್ಯಾತ ಕ್ರೀಡಾಪಟುಗಳು, ಬೈಕ್-ಕಾರ್ ಓಡಿಸುವ ರೋಲ್ ಮಾಡಲ್ಗಳು ಇವರನ್ನು ಕಂಡು ಮರುಳಾಗಿ, ತಾವು ಯಾವಾಗ ಲಕ್ಷ ಲಕ್ಷ ರೂಪಾಯಿ ಕೊಟ್ಟು ಇಂತಹ ಬೈಕ್ ಕೊಂಡು ಸ್ನೇಹಿತ ಅಥವಾ ಸ್ನೇಹಿತೆ, ಪ್ರಿಯತಮ-ಪ್ರಿಯತಮೆಯೊಂದಿಗೆ ಜಿಗಿದು, ಹಾರಿ, ಓವರ್ ಸ್ಪೀಡಿನಲ್ಲಿ ಯರ‍್ಯಾರಿಗೋ, ಯಾವ್ಯಾವುದಕ್ಕೋ, ಡಿಕ್ಕಿ ಹೊಡೆಯುವ ವೇಗದಲ್ಲಿ ಹಾರುತ್ತೇವೆಯೋ ಎಂಬ ಭ್ರಮಾ ಲೋಕದಲ್ಲಿದ್ದಾರೆ. ಜೇಬಿನಲ್ಲಿ ದುಡ್ಡು ಇಲ್ಲದಿದ್ದರೂ. ಓದು, ಕೆಲಸ, ಇಲ್ಲದಿದ್ದರೂ ಬೈಕ್-ಕಾರುಗಳ ಹಗಲು ಕನಸು ಕಾಣುವ ಕನಸುಗಾರರ ಪ್ರಪಂಚ ಇಂದು ಎಲ್ಲೆಡೆ ಇದೆ.
ವಿಶ್ವದಲ್ಲಿ ಒಂದೆಡೆ ಹೆಚ್ಚುತ್ತಿರುವ ಜನಸಂಖ್ಯೆಯ ಅಪಾರ ಬೇಡಿಕೆ, ಪೂರೈಸಲಾಗದ ಬೇಡಿಕೆ, ಕಂಡು ಬರುತ್ತಿದೆ. ಅದರಲ್ಲೂ ಈಗ ವಿಶ್ವದಲ್ಲಿ ಹಲವಾರು ತಿಂಗಳುಗಳಿಂದ ನಡೆದಿರುವ ಯುದ್ಧ, ವಿವಿಧ ದೇಶಗಳ ಮಧ್ಯದ ಸಂಘರ್ಷ, ಈ ರೀತಿ ಪರಸ್ಪರ ಹೊಂದಾಣಿಕೆ ಇಲ್ಲದೇ, ತಿಂಗಳಾನುಗಟ್ಟಲೆ ನಡೆದ ಯುದ್ಧ, ಪ್ರತಿಕ್ಷಣ ಏನಾಗುವುದೋ ಎಂಬ ಆತಂಕ, ಭಯ ನಮ್ಮನ್ನೆಲ್ಲಾ ಆವರಿಸಿದೆ. ದೇಶದಲ್ಲಿಯ ಮಿತಿಮೀರಿದ ಬೇಡಿಕೆಯ ಇಂಧನ ಪೂರೈಕೆಗೆ ಅತ್ಯಂತ ಕಷ್ಟದಿಂದ ಪೂರೈಸಬೇಕಾದ ಸ್ಥಿತಿ
ಇದೆ. ಪ್ರಧಾನ ಮಂತ್ರಿಗಳು, ತೈಲ ಇಂಧನ ಪೂರೈಸುವ ಕಂಪನಿಗಳು, ಇದಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ಇಲಾಖೆಗಳು ಹಗಲೂ ರಾತ್ರಿ ಪ್ರಯತ್ನಿಸಿದರೂ ಸಂಪೂರ್ಣ ಬೇಡಿಕೆ ಬಯಸಿದ ಕ್ಷಣದಲ್ಲಿ ಕೆಲವು ಕಡೆಗಳಲ್ಲಿ ಸಿಗುತ್ತಿಲ್ಲ. ಆಗ ಅನೇಕ ಸಾಮಾನ್ಯ ಜನ ಸರ್ಕಾರವನ್ನು ಟೀಕಿಸುತ್ತಾರೆ. ಆದರೆ 99% ಪ್ರತಿಶತ 99 ಜನ ಪರ್ಯಾಯ ಮಾರ್ಗಗಳನ್ನು ಬಳಸಲು ಮನಸಾರೆ ಪ್ರಯತ್ನ ಮಾಡುತ್ತಿಲ್ಲ. ವ್ಯಕ್ತಿಗಳು ತಮ್ಮ ಕುಟುಂಬದಲ್ಲೀಯ ಹಣಕಾಸು ಸೇರಿದಂತೆ ವಿವಿಧ ವಸ್ತುಗಳ ಕೊರತೆಯಾದಾಗ ಬಹಳಷ್ಟು ಬಾರಿ ಇದ್ದುದ್ದಕ್ಕೇ, ಇದ್ದಷ್ಟಕ್ಕೇ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಆದರೆ ದೇಶದಲ್ಲಿ ಇಂಧನ ಸಮಸ್ಯೆಯಾದಾಗ ಅದಕ್ಕೆ ತಕ್ಷಣ ಹೊಂದಿಕೊಳ್ಳಲು ನಿರಾಕರಿಸುತ್ತಾರೆ.
ಬಹುಶಃ ಅದಕ್ಕೇ ಏನೋ, ಪ್ರಕೃತಿ ಮೌನವಾಗಿ ಗಹಗಹಿಸಿ ನಗುತ್ತಾ “ನನ್ನ ಮಕ್ಕಳೇ, ನೀವು ಹೀಗೆಯೇ ಜೀವನ ಕೇವಲ ಮೋಜು ಮಸ್ತಿ ಎಂದು ತಿಳಿದುಕೊಂಡು ಭೂಮಿಯ ಮೇಲೆ ಭೂಮಿಯ ಅಂತರಾಳದಲ್ಲಿ ಇರುವ ಎಲ್ಲಾ ಸಂಪನ್ಮೂಲಗಳನ್ನೂ ದೆವ್ವ ಕಬಳಿಸುವಂತೆ ರಾಕ್ಷಸವೇಗದಲ್ಲಿ ಕಬಳಿಸುತ್ತಾ ಬರುತ್ತಿದ್ದೀರಲ್ಲವೇ? ನಾನು ನಿಮ್ಮ ವೇಗವನ್ನು ತಡೆಯ ಬಯಸಿದರೇ, ನಿಮ್ಮ ಮಧ್ಯೆ ಇರುವ ಅನುಭವಿ ಹಿರಿಯರು, ದೇಶ ಕಟ್ಟುವವರು, ಹೇಳುವ ಕಿವಿ ಮಾತನ್ನು ಅಲಕ್ಷಿಸಿಸುತ್ತಿದ್ದೀರಿ. ನನ್ನ ಎಚ್ಚರಿಕೆಯ ಮಾತುಗಳ ಗಂಟೆ ನಿಮಗೆ ಕೇಳಿಸುತ್ತಿಲ್ಲ. ಎಚ್ಚರ...” ಬಹುಶಃ ಭೂದೇವಿ ಹೀಗೆ ಕಿವಿ ಕೇಳಿಸುವವರಿಗೆ ಮಾತ್ರ ಹೇಳುತ್ತಿರಬಹುದು. ನನ್ನಂತವರಿಗೆ ಈ ಕರೆ ಕೇಳಿಸಿದೆ.
ಪ್ರಿಯ ಯುವಜನರೇ, ನನ್ನ ಮಾತುಗಳನ್ನು ದಯವಿಟ್ಟು ಕೇಳಿ “ಭೂಗರ್ಭದೊಳಗಿಂದ ಅಗೆದು ತೆಗೆದ, ಹೂತು ಹೋಗಿದ್ದ, ಪಳೆಯುಳಿಕೆ ಇಂಧನವಾದ ಪೆಟ್ರೋಲ್, ಡೀಸಲ್, ಮುಂತಾದ ಕಚ್ಛಾತೈಲ ಹಂತ ಹಂತವಾಗಿ ಕರಗುತ್ತಾ ಬರುತ್ತಿದೆ. ಎಂಬ ಲಕ್ಷಣಗಳನ್ನು ನಿಮ್ಮ ಕಣ್ಣಿಗೆ ಕಾಣುವಂತೆ ವಿವಿಧ ರೀತಿ ಭೂದೇವಿ ನಮಗೆ ತೋರಿಸುತ್ತಿದ್ದಾಳೆ.”
ಇದಕ್ಕೆ ಪರ್ಯಾಯವಾಗಿ ಜಲಜನಕ ಆಧರಿಸಿದ ಇಂಧನ ಸಮೃದ್ಧವಾಗಿ ಉತ್ಪಾದಿಸಲು ಪ್ರಯತ್ನ ನಡೆಸಿರುವ ಕೆಲವು ವಿಜ್ಞಾನಿಗಳ ಸಂಶೋಧನೆಗಳನ್ನು ನಾನು ಗಮನಿಸಿದ್ದೇನೆ. ಆದರೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಜನಸಂಖ್ಯೆ, ಮತ್ತು ಕರಗಲಾರದ ಪರ್ವತದಂತೆ ಹಬ್ಬುತ್ತಿರುವ ಮಾನವರ ಆಸೆಯನ್ನು ಗಮನಿಸಿದಾಗ ಇಂತಹ ಪ್ರಯತ್ನಗಳು ಎಷ್ಟೇ ನಡೆದರೂ ಬಳಕೆದಾರ ಮಾನವರ ಬೇಡಿಕೆ ಕಡಿಮೆಯಾಗುತ್ತಿಲ್ಲ. ಇಂಧನದ ಬೆಲೆ ಎಷ್ಟೇ ಹೆಚ್ಚಾಗಲೀ, ನಾವು ಕೊಂಡೇ ಕೊಳ್ಳುತ್ತೇವೆ ಎಂಬ ಹಠ, ಚೆನ್ನಾಗಿ ಸಂಪಾದಿಸುವ ಯುವಜನರದು. ಮಕ್ಕಳು ಕಣ್ಣು ಬಿಟ್ಟ ತಕ್ಷಣ ಅವರ ತಂದೆ-ತಾಯಿ ಈ ವಾಹನಗಳ ಮೇಲೆ ಕೂರಿಸಿಕೊಂಡು ಹೋಗುವುದರಿಂದ, ನೋಡ ನೋಡುತ್ತಾ ಬೆಳೆದ ಈ ಮಕ್ಕಳು ಯುವ ಜನರಾದ ತಕ್ಷಣ ತಂದೆ-ತಾಯಿಯರನ್ನೂ ಬೈಕ್ಗಾಗಿ ಪೀಡಿಸುತ್ತಾರೆ.
ಸದ್ಯದಲ್ಲಿ ವಿಶ್ವದಲ್ಲಿರುವ ಮುಂದೇನು? ಎಂಬ ಒತ್ತಡದ, ಹೆದರಿಕೆಯ ವಾತಾವರಣದಲ್ಲಿ ನಾನು ಯೋಚಿಸುತ್ತಾ ಕುಳಿತ್ತಿದ್ದಾಗ, ಒಬ್ಬ ವೃದ್ಧರು ಸೈಕಲ್ ಹೊಡೆಯುತ್ತಾ ಬಂದು ನನ್ನ ಬಳಿ ನಿಂತು ಕೇಳಿದರು. “ ನನ್ನ ಹಾಗೆ ನಿನಗೂ ಸೈಕಲ್ ಹೊಡೆಯೋಕೆ ಬರುತ್ತಾ!?” ನಾನು ನಗುತ್ತಾ ಅಂದೆ, “ಅಜ್ಜಾ, ನಾನೂ ನಿನ್ನಂತೆಯೇ ಸೈಕಲ್ ಹೊಡೆಯುತ್ತೇನೆ, ನಡೆದು ಹೋಗುತ್ತೇನೆ,” ಆ ವೃದ್ಧರು ನಗುತ್ತಾ ಆಶ್ಚರ್ಯದಿಂದ ಕೇಳಿದರು “ಯಾಕೆ ನಿನಗೆ ಬೈಕ್ ಕಾರು ಚಾಲನೆ ಮಾಡಲು ಬರುವುದಿಲ್ಲವೇ” ನಾನು ಉತ್ತರಿಸಿದೆ. “ಬರುತ್ತಿತ್ತು ಹಿಂದೆ. ನನ್ನ ಯೌವ್ವನದ ಕಾಲದಲ್ಲಿ ನಾನೂ ಮೋಪೆಡ್ ಕಲಿತು 26 ವರ್ಷ ಓಡಿಸಿದ್ದೇನೆ. ಆದರೆ ವಯಸ್ಸಾಗುತ್ತಿದ್ದಂತೆ, ರಸ್ತೆಯಲ್ಲಿಯ ಜನರ ಹಾಗೂ ವಾಹನ ದಟ್ಟಣೆ, ಆಗಾಗ ಸಂಭವಿಸುವ ರಸ್ತೆ ಅಪಘಾತಗಳನ್ನು ಕಂಡು ವಾಹನ ಪ್ರಯಾಣವನ್ನು 2011ರ ಡಿಸೆಂಬರ್ ಒಂದರಿಂದ ನಿಲ್ಲಿಸಿದ್ದೇನೆ. ಹೀಗಾಗಿ ಸೈಕಲ್ ಓಡಿಸುತ್ತೇನೆ. ಅದಕ್ಕಿಂತ ಹೆಚ್ಚಾಗಿ ವಾಕಿಂಗ್ ಹೋಗುತ್ತೇನೆ.”
ಎನ್.ವ್ಹಿ.ರಮೇಶ್.
ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು
ಆಕಾಶವಾಣಿ, ಮೈಸೂರು
ಮೊ:9845565238
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


