ಶ್ರೀ ಆಂಜನೇಯ ಸ್ವಾಮಿಯ ಮೂರು ಕ್ಷೇತ್ರಗಳು: ಶ್ರೀ ಭ್ರಾಂತೇಶ, ಶ್ರೀ ಕಾಂತೇಶ, ಶ್ರೀ ಶಾಂತೇಶ

Upayuktha
0

ಪುಣ್ಯ ಕ್ಷೇತ್ರಗಳ ಕಿರು ಪರಿಚಯ





ನಮ್ಮ ಭಾರತೀಯ ಸನಾತನ ಹಿಂದೂ ಧರ್ಮೀಯರಲ್ಲಿ ಭಾರತದಾದ್ಯಂತ ಇರುವ ಹಲವಾರು ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕಾಶಿ ಅಥವಾ ವಾರಣಾಸಿ ಕ್ಷೇತ್ರಕ್ಕೆ ವಿಶೇಷ ಮಹತ್ವವಿದೆ. ಹೀಗಾಗಿ ಪ್ರತಿ ಹಿಂದೂ ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಈ ಕಾಶಿಯಾತ್ರೆ ಮಾಡುವ ಅಭಿಲಾಷೆಯನ್ನು ಹೊಂದಿರುತ್ತಾರೆ. ಆದರೆ ಅನೇಕ ಕಾರಣಗಳಿಂದ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಅದಕ್ಕೆ ಪರ್ಯಾಯವಾಗಿ ನಮ್ಮ ಕರ್ನಾಟಕದಲ್ಲಿರುವ, ಅದರಲ್ಲೂ ನಮ್ಮ ಉತ್ತರ ಕರ್ನಾಟಕದ ಈ ಮೂರು ಪುಣ್ಯಕ್ಷೇತ್ರಗಳಿಗೆ ಒಂದೇ ದಿನದಲ್ಲಿ ಅಂದರೆ ಅಂದು ಸೂರ್ಯೋದಯದಿಂದ ಸೂರ್ಯಾಸ್ತವಾಗುವುದರಲ್ಲಿ ಭೇಟಿ ನೀಡಿ ದರ್ಶನ ಪಡೆದರೆ ಕಾಶಿ ಯಾತ್ರೆ ಮಾಡಿದ ಫಲ ಸಿಗುತ್ತದೆ. ಹಾಗಿದ್ದರೆ ಆ ಮೂರು ಕ್ಷೇತ್ರಗಳು ಯಾವುವು? ತಿಳಿಯೋಣ, ಬನ್ನಿ.


ಶ್ರೀರಾಮದೇವರ ಬಂಟ ಹುನುಮನ ಜನ್ಮಸ್ಥಾನ ನಮ್ಮ ಕನ್ನಡ ನಾಡು ಎಂಬುದು ನಮಗೆಲ್ಲ ಹೆಮ್ಮೆಯ ವಿಷಯ. ಅಲ್ಲದೇ ಹನುಮಂತನ ಗುಡಿಯಿಲ್ಲದ ಊರು ಇಲ್ಲ, ಹಾಗೆಯೇ ಪ್ರತಿಯೊಂದು ಊರಿನ ಹನುಮಂತ ಗುಡಿಗೆ ತನ್ನದೇ ಆದ ಪೌರಾಣಿಕ, ಐತಿಹಾಸಿಕ ಹಿನ್ನೆಲೆ & ಮಹತ್ವ ಇದ್ದೇ ಇರುತ್ತದೆ. ತಮ್ಮ ದೇಹದ ವಿವಿಧ ಭಾಗಗಳಲ್ಲಿ ಸಾಲಿಗ್ರಾಮವನ್ನು ಹೊಂದಿರುವ ಬಹಳ ವಿಶೇಷವಾದ ಆ ಮೂರು ಸುಪ್ರಸಿದ್ಧ ಆಂಜನೇಯ ದೇವಸ್ಥಾನಗಳ ಕುರಿತ ಸಂಕ್ಷಿಪ್ತ ಪರಿಚಯ ಇಲ್ಲಿದೆ.


ಶಿಕಾರಿಪುರದ ಶ್ರೀ ಭ್ರಾಂತೇಶ ಸ್ವಾಮಿ:

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಶಿಕಾರಿಪುರದ ಶ್ರೀ ಆಂಜನೇಯ ಸ್ವಾಮಿಗೆ ಶ್ರೀ ಹುಚ್ಚರಾಯ ಸ್ವಾಮಿ ಎಂದು ಕರೆಯುತ್ತಾರೆ. ಅಂಜನಿಪುತ್ರ, ಕೇಸರಿನಂದನ, ಶ್ರೀರಾಮದೂತ, ವಾಯುಪುತ್ರ ಹೀಗೆ ಹಲವಾರು ಹೆಸರಿನಿಂದ ಕರೆಯಲ್ಪಡುವ ಹನುಮಂತ ದೇವರಿಗೆ ಇಲ್ಲಿ ಭ್ರಾಂತೇಶ ಎಂದು ಇನ್ನೊಂದು ಹೆಸರು.


ಇಲ್ಲಿನ ಭ್ರಾಂತೇಶ ಸ್ವಾಮಿಯು ವಾಯುದೇವರ ಹನುಮಾವತಾರವನ್ನು ಪ್ರತಿನಿಧಿಸುತ್ತಾರೆ. ಇದು ಸುಮಾರು 17ನೇ ಶತಮಾನದಷ್ಟು ಹಳೆಯ & ಈ ತಾಲ್ಲೂಕಿನ ಪ್ರಮುಖ ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನಗಳಲ್ಲಿ ಒಂದಾಗಿದೆ.


ಈ ದೇವಸ್ಥಾನವನ್ನು ನಿರ್ಮಾಣ ಮಾಡಿದವರು ವೀರಶೈವ ಸಮಾಜದ ಹುಚ್ಚಪ್ಪಸ್ವಾಮಿ ಎಂದು ತಿಳಿದುಬರುತ್ತದೆ. ಅವರ ಸ್ವಪ್ನದಲ್ಲಿ ಆಂಜನೇಯ ಸ್ವಾಮಿಯು ಬಂದು ಅಪ್ಪಣೆ ಮಾಡಿದಂತೆ ಊರ ಸಮೀಪದ ದೊಡ್ಡ ಕೆರೆಯಲ್ಲಿ ಸುಂದರವಾದ ಪ್ರಸನ್ನ ಆಂಜನೇಯ ವಿಗ್ರಹವು ದೊರೆತಾಗ, ಹುಚ್ಚಪ್ಪ ಸ್ವಾಮಿ ತಮ್ಮ ಮಠದಲ್ಲಿ ಪ್ರತಿಷ್ಠಾಪಿಸಲು ಸ್ಥಳಕೊಡಲು ಒಪ್ಪುತ್ತಾರೆ. ಆದರೆ ತಮ್ಮ ಹೆಸರಿನಿಂದ ಸ್ವಾಮಿಯನ್ನು ಕರೆಯಬೇಕು ಎಂಬ ಷರತ್ತಿನಂತೆ ದೇವರನ್ನು ಪ್ರತಿಷ್ಠಾಪಿಸಿ ಕಾರಣ ಹುಚ್ಚರಾಯ ಸ್ವಾಮಿ ಎಂದು ಕರೆಯಲಾಗುತ್ತದೆ.


ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣದೇವರಾಯನ ಆಸ್ಥಾನ ಗುರುಗಳು, ವ್ಯಾಸ & ದಾಸಸಾಹಿತ್ಯಗಳ ಪ್ರಮುಖ ಕೊಂಡಿಯಂತಿದ್ದ ಶ್ರೀ ವ್ಯಾಸರಾಯರು ನಾಡಿನಾದ್ಯಂತ ಸಂಚಾರ ಮಾಡುತ್ತ ಮಲೆನಾಡಿನ ಪ್ರಕೃತಿಯ ಮಡಿಲಾದ ಶಿಕಾರಿಪುರಕ್ಕೆ ಆಗಮಿಸುತ್ತಾರೆ. ಹುಚ್ಚರಾಯ ಸ್ವಾಮಿಯ ದರ್ಶನ ಪಡೆದಾಗ ಅವರು ದೇವರ ವಿಗ್ರಹ ಭಿನ್ನವಾಗಿರುವದನ್ನು ಗಮನಿಸುತ್ತಾರೆ. ಭಿನ್ನವಾದ ಮೂರ್ತಿಯ ಪೂಜೆಯನ್ನು ಮಾಡಬಾರದು ಎಂಬ ಅವರ ಸಲಹೆಯಂತೆ ಕೃಷ್ಣಾನದಿಯಲ್ಲಿ ದೊರೆತ ಸಾಲಿಗ್ರಾಮವನ್ನು ತಂದು ನಾಸಿಕ ಭಾಗದಲ್ಲಿ ಜೋಡಿಸಿ ವ್ಯಾಸರಾಯರಿಂದ ಪ್ರತಿಷ್ಠಾಪಿಸಲಾಗುತ್ತದೆ. ಈ ವ್ಯತ್ಯಾಸವನ್ನು ವಿಗ್ರಹದಲ್ಲಿ ಈಗಲೂ ನಾವು ಸ್ಪಷ್ಟವಾಗಿ ಕಾಣಬಹುದು. ಈ ಸಾಲಿಗ್ರಾಮದ ದರ್ಶನ ಮಾತ್ರದಿಂದ ಪಾಪ ಪರಿಹಾರ ಮತ್ತು ಪವಿತ್ರತೆ ಲಭಿಸುತ್ತದೆ. ಆದ್ದರಿಂದ ಈ ಸಾಲಿಗ್ರಾಮಕ್ಕೆ ತುಳಸಿ ಅರ್ಚನೆ, ಪುರುಷ ಸೂಕ್ತ, ಶ್ರೀ ಸೂಕ್ತ, ಪವಮಾನ ಅಭಿಷೇಕ, ಬೆಣ್ಣೆಯ ಅಲಂಕಾರ, ವೀಳ್ಯದೆಲೆ ಅಲಂಕಾರ ಮುಂತಾದವುಗಳು ವಿಶೇಷ ಸೇವೆಗಳಾಗಿವೆ.


ಈ ಹುಚ್ಚರಾಯ ಸ್ವಾಮಿಯು ರುದ್ರಾಂಶ ಸಂಭೂತ ಎಂದು ಶಾಸ್ತ್ರಗಳಲ್ಲಿ ಹೇಳಿರುವದರಿಂದ ಇಲ್ಲಿ ರುದ್ರಾಭಿಷೇಕಕ್ಕೆ ವಿಶೇಷ ಮಹತ್ವವಿದೆ. ಭಕ್ತರ ಭ್ರಾಂತಿಯನ್ನು ಅಂದರೆ ಭ್ರಮೆಯನ್ನು ದೂರಮಾಡುವನಾದ್ದರಿಂದ ಹುಚ್ಚರಾಯನನ್ನು ಭ್ರಾಂತೇಶ ನೆಂದೂ ಕರೆಯುತ್ತಾರೆ.

"ಜೀವೋತ್ತಮಂಚ ಭ್ರಾಂತೇಶಂ, ವ್ಯಾಸರಾಯ ಪ್ರತಿಷ್ಠಿತಾಮ್" ಎಂಬ ಶ್ಲೋಕದಿಂದ ಈ ಆಂಜನೇಯನನ್ನು ಸ್ಮರಿಸಲಾಗುತ್ತದೆ.


ಕದರಮಂಡಲಗಿ ಕಾಂತೇಶ:

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿಯ ಕಾಂತೇಶ ಸ್ವಾಮಿಯು ವಾಯುದೇವರ ಎರಡನೆಯ ಅವತಾರವಾದ ಭೀಮಾವತಾರವನ್ನು ಪ್ರತಿನಿಧಿಸುತ್ತಾರೆ. ಸಾಮಾನ್ಯವಾಗಿ ಹನುಮಂತ ದೇವರು ಒಂದು ಪಾರ್ಶ್ವಕ್ಕೆ ಮುಖಮಾಡಿದ ಭಂಗಿಯಲ್ಲಿದ್ದರೆ ಇಲ್ಲಿ ಆಂಜನೇಯ ಸ್ವಾಮಿಯ ಮುಖ ನೇರವಾಗಿರುವದು ಇಲ್ಲಿಯ ಮತ್ತೊಂದು ವಿಶೇಷತೆಯಾಗಿದೆ. ಪೌರಾಣಿಕ ಹಿನ್ನೆಲೆಯ ಪ್ರಕಾರ ಬಾಲಕ ಹನುಮನು ಸೂರ್ಯದೇವನನ್ನು ಹಿಡಿಯಲು ಧಾವಿಸುತ್ತಾನೆ. ಆಗ ಅವನ ಮೈಯಿಂದ ಹೊರಟ ತೇಜಸ್ಸು (ಕಿರಣಗಳು/ ಮಂಡಲ) ಈ ಸ್ಥಳಕ್ಕೆ ಕದರಮಂಡಲಗಿ ಎಂಬ  ಹೆಸರು ತಂದುಕೊಟ್ಟಿತು. ಸಂಸ್ಕೃತದಲ್ಲಿ 'ಕದರ್' ಎಂದರೆ 'ಕಿರಣಗಳು','ಮಂಡಲ' ಎಂದರೆ ಕಿರಣಗಳ ಗುಂಪು ಮತ್ತು 'ಗಿ' ಎಂದರೆ 'ಗಮಿಸಿದವನು' ಎಂಬರ್ಥವಿದೆ.


ಈ ಕಾಂತೇಶ ಸ್ವಾಮಿಯ ಮುಖದ ಮೇಲಿರುವ ಹೊಳಪು & ಕಾಂತಿ ಭಕ್ತರನ್ನು ದಿಗ್ಭ್ರಮೆಗೊಳಿಸುತ್ತದೆ. ಕಾರಣ ವಿಗ್ರಹದ ಕಣ್ಣುಗಳಲ್ಲಿ ಸೂರ್ಯ ಸಾಲಿಗ್ರಾಮಗಳಿದ್ದು ಸದಾ ಕಾಂತಿಯನ್ನು ಹೊರಸೂಸುತ್ತವೆ. 


ಈ ಕಾಂತೇಶ ಸ್ವಾಮಿಯ ಮೂರ್ತಿಯನ್ನು ದ್ವಾಪರ ಯುಗದಲ್ಲಿ ಜನಮೇಜಯ ರಾಜ ಪ್ರತಿಷ್ಠಾಪಿಸಿದ್ದಾರೆ. ಅಲ್ಲದೇ ದಾಸಶ್ರೇಷ್ಠರಾದ ಕನಕದಾಸರು ಇಲ್ಲಿಯೇ ನೆಲೆಸಿ ತಮ್ಮ ವಿಶಿಷ್ಟವಾದ ಕೃತಿ 'ಮೋಹನ ತರಂಗಿಣಿ' ಕಾವ್ಯವನ್ನು ರಚಿಸಿ ಈ ಕ್ಷೇತ್ರದ ಮಹಿಮೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.


ಇಲ್ಲಿಯ ಆಂಜನೇಯ ಸ್ವಾಮಿಗೆ ಒಂದೇ ದಿನದಲ್ಲಿ ಮೂರು ವಿಭಿನ್ನ ರೂಪಗಳಲ್ಲಿ ಪೂಜೆಯನ್ನು ಮಾಡುವದು ವಿಶೇಷ. ಶ್ರೀ ವ್ಯಾಸರಾಯರಿಂದ ನಾಡಿನಾದ್ಯಂತ ಪ್ರತಿಷ್ಠಾಪಿಸಿದ ಕ್ಷೇತ್ರಗಳಲ್ಲಿ ಇದೂ ಕೂಡ ಒಂದು ಎಂದು ಹೇಳುತ್ತಾರೆ. ಕನಕದಾಸರು, ಹಿರೇ ಆಚಾರ್ಯರು, ಅಡವಿ ರಾಮದಾಸರು, ಮೈಸೂರು ಭೀಮದಾಸರು, ಶ್ರೀನಿವಾಸದಾಸರು ಮುಂತಾದ ಅನೇಕ ದಾಸರು ಕಾಂತೇಶನ ಅನುಗ್ರಹಕ್ಕೆ ಪಾತ್ರರಾಗಿ, ಸ್ವಾಮಿಯ ಕುರಿತು ಅನೇಕ ಸುಂದರ ರಚನೆಗಳಿಂದ ಕೊಂಡಾಡಿದ್ದಾರೆ. ಈ ಗ್ರಾಮವು ನೇಯ್ಗೆಗೆ ಹೆಸರುವಾಸಿಯಾಗಿದ್ದು, ಇದು ಮುಖ್ಯ ಕಸುಬಾಗಿದೆ.


ಸಾತೇನಹಳ್ಳಿಯ ಶಾಂತೇಶ

ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನಲ್ಲಿರುವ ಈ ದೇವಾಲಯವು ಕರ್ನಾಟಕದ ಅತ್ಯಂತ ಪ್ರಸಿದ್ಧ, ಪವಿತ್ರ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಸಂತಾನ ಭಾಗ್ಯ, ಇಷ್ಟಾರ್ಥ ಸಿದ್ಧಿ ಹಾಗೂ ನಂಬಿದ ಭಕ್ತರ ಕಷ್ಟಗಳನ್ನು ಪರಿಹಾರ ಮಾಡುವ ಪವಾಡ ಪುರುಷನೆಂದು ಶಾಂತೇಶ ಸ್ವಾಮಿಯು ಪ್ರಸಿದ್ಧನಾಗಿದ್ದಾನೆ.


ವಾಯುದೇವರ ಮೂರನೆಯ ಅವತಾರವಾದ ಮಧ್ವಾವತಾರವನ್ನು ಪ್ರತಿನಿಧಿಸುವ ಈ ಶಾಂತೇಶ ಸ್ವಾಮಿಯ ನೆತ್ತಿಯ ಮೇಲೆ ಶಕ್ತಿಶಾಲಿಯಾದ ಸಾಲಿಗ್ರಾಮವನ್ನು ಧರಿಸಿದ್ದಾನೆ. ಈ ವಿಗ್ರಹವನ್ನು ವ್ಯಾಸರಾಯರ ಗುರುಗಳಾದ ಬ್ರಹ್ಮಣ್ಯತೀರ್ಥರು ಪ್ರತಿಷ್ಠಾಪಿಸಿದ್ದಾರೆ. ಮಹಾ ಮಹಿಮಾನ್ವಿತ ಸ್ವಾಮಿಯೆಂದೇ ಕರೆಯಲ್ಪಡುವ ಶಾಂತೇಶ ಸ್ವಾಮಿಯ ವಿಶೇಷ ಪೂಜೆಗಳು ಪ್ರತಿ ವರ್ಷ ವಿಜಯದಶಮಿಯಂದು ನಡೆಯುತ್ತವೆ. ಈ ದಿನ ಮಕ್ಕಳಾಗದ ಮಹಿಳೆಯರಿಗೆ ವಿಶೇಷ ತೀರ್ಥ ಅಥವಾ ಅನೇಕ ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ  ಔಷಧವನ್ನು ನೀಡಲಾಗುತ್ತದೆ. ಶಾಂತೇಶ ಸ್ವಾಮಿಯನ್ನು ಸ್ಮರಿಸಿ, ಇದನ್ನು ಸೇವನೆ ಮಾಡಿ ಮಕ್ಕಳನ್ನು ಪಡೆದ ಹಲವಾರು ನಿದರ್ಶನಗಳು ಸಿಗುತ್ತವೆ. ಸಾಡೇಸಾತಿ, ಅಷ್ಟಮ ಶನಿ ಮುಂತಾದ ಕಾಟ ಇರುವವರು ಶಾಂತೇಶ ಸ್ವಾಮಿಯ ದರ್ಶನ ಪಡೆದರೆ ಎಲ್ಲ ತೊಂದರೆಗಳು ನಿವಾರಣೆಯಾಗುತ್ತವೆ.


ಈ ರೀತಿಯಿಂದ ಅನೇಕಾನೇಕ ವಿಶೇಷತೆಯನ್ನು ಹೊಂದಿರುವ ಮೂರು ಕ್ಷೇತ್ರ ದರ್ಶನವನ್ನು ಆಷಾಢ, ಶ್ರಾವಣ ಮಾಸದ ಶನಿವಾರದಂದು ಅದರಲ್ಲೂ ವಿಶೇಷವಾಗಿ ಅಧಿಕ ಮಾಸದಲ್ಲಿ ಮಾಡುವ ದರ್ಶನ ಅಧಿಕ ಫಲವನ್ನು, ಕಾಶಿ ಯಾತ್ರೆಯ ಫಲವನ್ನು ನೀಡಿ ಹರಸುತ್ತಾರೆ ಎಂಬುದಕ್ಕೆ ಇಲ್ಲಿಗೆ ಹರಿದು ಬರುವ ಅಪಾರವಾದ ಭಕ್ತ ಸಮೂಹವೇ ಸಾಕ್ಷಿಯಾಗಿದೆ.


- ಶ್ರೀಮತಿ ವೀಣಾ ಬರಗಿ, ಹುಬ್ಬಳ್ಳಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top