ಲಘು ಹಾಸ್ಯ ಬರಹ
ಗ್ರೇಟರ್ ಬೆಂಗಳೂರಿನ ಗೃಹ ಪ್ರವೇಶ ಸಂದರ್ಭದಲ್ಲಿ ರಸ್ತೆ ಗುಂಡಿಗಳಿಗೆ 'ನವರತ್ನಗಳನ್ನು' ಹಾಕಿ ಮುಚ್ಚಲಾಗಿದೆ!!
ಗೃಹ ಪ್ರವೇಶದ ಸಂದರ್ಭದಲ್ಲಿ ಮುಖ್ಯ ದ್ವಾರದ ಬಳಿ ಸಣ್ಣ ಗುಂಡಿ ತೆಗೆದು, ನವರತ್ನಗಳನ್ನು ಹಾಕಿ ಪ್ರತಿಷ್ಠಾಪಿಸುವುದು ವಾಸ್ತುಶಾಸ್ತ್ರ ನಂಬಿಕೆಗಳ ಪ್ರಕಾರ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಇದಕ್ಕೆ ಕಾರಣಗಳು:
1) ನಕಾರಾತ್ಮಕ ಶಕ್ತಿಯ ನಿರ್ಮೂಲನೆ,
2) ವಾಸ್ತು ದೋಷ ನಿವಾರಣೆ,
3) ಸುರಕ್ಷತೆ ಮತ್ತು ಸಮೃದ್ಧಿ.
ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಮಾಡಿ, ಗೃಹ ಪ್ರವೇಶ ಮಾಡುತ್ತಿರುವ ಸಂದರ್ಭದಲ್ಲಿ, ಗುಂಡಿಗಳನ್ನು ಮುಚ್ಚುವಾಗಲೂ ನವರತ್ನಗಳನ್ನು ಹಾಕಿ ಮುಚ್ಚುತ್ತಿರುವುದರಿಂದ, ಪ್ರತೀ ಗುಂಡಿ ಮುಚ್ಚಲು ಒಂದು ಲಕ್ಷ ರೂಪಾಯಿ ಖರ್ಚು ಬರುತ್ತದೆ.
ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಎಂದು ವಿಭಾಗಿಸಿ, ಸಂಯೋಜಿಸಿ, ಹೊಸ ಗ್ರೇಟರ್ ಬೆಂಗಳೂರನ್ನು ನಿರ್ಮಿಸುವಾಗ ಇರಬಹುದಾದ ವಾಸ್ತು ದೋಷ ನಿವಾರಣೆ, ಆಗಾಗ ವಿಜ್ರಂಭಿಸುವ ನಕಾರಾತ್ಮಕ ಶಕ್ತಿಗಳ ನಿರ್ಮೂಲನೆ, ಮುಂದಿನ ಹವಾಮಾನ ವೈಪರಿತ್ಯದಿಂದ ರಸ್ತೆಗಳು ಹಾಳಾಗದಂತೆ ಸುರಕ್ಷತೆ ಮತ್ತು ಸಮೃದ್ಧಿ ಯನ್ನು ಕಾಪಾಡುವುದು, ನವರತ್ನಗಳನ್ನು ಬಳಸಿ ಗುಂಡಿ ಮುಚ್ಚುವುದರ ಹಿಂದಿನ ಪರಮ ಉದ್ದೇಶ.
ಪ್ರತೀ ರಸ್ತೆ ಗುಂಡಿಗೂ ಲಕ್ಷಾಂತರ ರೂಪಾಯಿಗಳ ಖರ್ಚು ಮಾಡಿ, ನವರತ್ನಗಳಾದ ಮಾಣಿಕ್ಯ, ಮುತ್ತು, ಹವಳ, ಪಚ್ಚೆ, ಪುಷ್ಯರಾಗ, ವಜ್ರ, ನೀಲ, ಗೋಮೇಧಿಕ ಮತ್ತು ವೈಢೂರ್ಯಗಳನ್ನು ತುಂಬಿ, ಗುಂಡಿ ಮುಚ್ಚುವುದರಿಂದ, ಮುಂದಿನ ದಿನಗಳಲ್ಲಿ ಬೆಂಗಳೂರಿನ ರಸ್ತೆಗಳು ಹಿಂದೆಂದಿಗಿಂತಲೂ ಹೆಚ್ಚು ಸುಭದ್ರವಾಗಿರುತ್ತದೆ ಎಂದು ಭಾವಿಸಲಾಗಿದೆ.
ಗುಂಡಿ ಮುಚ್ಚುವಾಗ, ನವರತ್ನಗಳ ಜೊತೆ ವರುಣ ದೇವರಿಗೆ ಪ್ರಿಯವಾದ ತಾಮ್ರ, ಬೆಳ್ಳಿ, ಚಿನ್ನ, ಹಿತ್ತಾಳೆಗಳನ್ನು ಗುಂಡಿಗೆ ಹಾಕಿ ಮುಚ್ಚಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಎಷ್ಟೇ ಅಕಾಲಿಕ ಮಳೆ, ಅತಿವೃಷ್ಟಿ ಮಳೆ ಬಂದು, ರಸ್ತೆಗಳೇ ಚಿರಂಡಿ-ರಾಜ ಕಾಲುವೆಯಾದರೂ, ರಸ್ತೆಗಳಲ್ಲಿ ಗುಂಡಿಗಳು ಬೀಳುವುದಿಲ್ಲ ಎಂದು 'ಗ್ಯಾರಂಟಿ'ಯಾಗಿ ನಂಬಲಾಗಿದೆ!!
ಗುಂಡಿ ಮುಚ್ಚಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರ ಹಿಂದೆ ಯಾವುದೇ ಕೃತ್ರಿಮತೆ, ಅವ್ಯವಹಾರ, ಭ್ರಷ್ಟಾಚಾರ, ಪರ್ಸಂಟೇಜ್‌ಗಳು ನೆಡೆದಿಲ್ಲ ಎಂದು ಅನೇಕ ಅಧಿಕಾರಸ್ತ ಜನಪ್ರತಿನಿಧಿಗಳು ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಪ್ರಮಾಣ ಮಾಡಲು ಸಿದ್ದರಾಗಿದ್ದಾರೆ!!
ಈ ಹಿಂದೆ ಜನಪ್ರತಿನಿಧಿಗಳು ಆಯ್ಕೆಗೊಳ್ಳುವಾಗ ಅಥವಾ ಆಯ್ಕೆಗೊಂಡಾಗ ಮಾಡಲ್ಪಟ್ಟ :
".................................. (ಹೆಸರು) ಆದ ನಾನು, ಕಾನೂನಿನ ಮೂಲಕ ಸ್ಥಾಪಿತವಾದ ನಿಯಮಗಳ ವಿಷಯದಲ್ಲಿ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು, ನಾನು ಸಾರ್ವಭೌಮತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯುತ್ತೇನೆಂದು, ಮತ್ತು ನಾನು ಕೈಗೊಳ್ಳಲಿರುವ ನನ್ನ ಕರ್ತವ್ಯವನ್ನು ಯಾವುದೇ ಭ್ರಷ್ಟಾಚಾರ, ಕೃತ್ರಿಮತೆ, ಅವ್ಯವಹಾರಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಪಾಲುಗೊಳ್ಳದೆ, ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆಂದು, ದೇವರ/ಪಕ್ಷದ ವರಿಷ್ಠರ(!?)/ಗುರುಗಳ.... ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ. ಸತ್ಯ, ನಿಷ್ಠೆಯಿಂದ ದೃಢೀಕರಿಸುತ್ತೇನೆ." ಎಂದು ಮಾಡಲ್ಪಟ್ಟ ಪ್ರಮಾಣವಚನವನ್ನು ಮತ್ತೊಮ್ಮೆ ಟೆಂಪಲ್ ರನ್ ಮಾಡಿ, ಮಾಡುವುದಕ್ಕೆ ಪಕ್ಷದ ನಾಯಕರು ತಮ್ಮ ಪಕ್ಷದ ಹಿಂಬಾಲಕರೊಂದಿಗೆ ಸಿದ್ಧರಾಗಿದ್ದಾರೆ.
ಈ ಟೆಂಪಲ್ ರನ್ ಪ್ರಮಾಣವಚನದೊಂದಿಗೆ, ರಸ್ತೆಯ ಪ್ರತೀ ಗುಂಡಿ ಮುಚ್ಚಲು ಲಕ್ಷಾಂತರ ರೂಪಾಯಿ ಖರ್ಚಾಗಿರುವುದರ ಹಿಂದಿನ ಊಹಾಪೋಹಗಳಿಗೆ, ಯಾವುದೇ ಲಾಬಿ ನೆಡೆದಿಲ್ಲ ಎಂದು ದೃಢೀಕರಿಸಿ ಸಾರ್ವಜನಿಕರಿಗೆ, ತನಿಖಾ ಮಾಧ್ಯಮಗಳಿಗೆ ಮತ್ತು ವಿರೋಧ ಪಕ್ಷಗಳಿಗೆ ಮನದಟ್ಟು ಮಾಡಿ, ಒಪ್ಪಿಸಲಾಗುತ್ತದೆ.
ಗ್ರೇಟರ್ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚಿದ ಮೇಲೆ ಇನ್ನು ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಸಾರ್ವಜನಿಕರು ನಂಬಬೇಕು. ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ, ನವರತ್ನಾದಿಗಳೊಂದಿಗೆ ಮುಚ್ಚಿದ, ಗುಂಡಿಗಳಿಲ್ಲದ ರಸ್ತೆಗಳು ಸುದೀರ್ಘ ಕಾಲದ ಶಾಶ್ವತ ಪರಿಹಾರವಾಗಿರುತ್ತದೆ (ಅನ್‌ಲೆಸ್ ಬೆಸ್ಕಾಮ್, ಒಳಚರಂಡಿ, ಬಿಎಸ್‌ಎನ್‌ಎಲ್, ಫುಟ್‌ಪಾತ್ ಮರು ನಿರ್ಮಾಣ, ರಸ್ತೆ ಅಗಲೀಕರಣ.... ಮಾಡುವ ಕಾಮಗಾರಿಯವರು ಕಾಮಗಾರಿಗೆ ಅಗೆಯದೇ ಹೋದಲ್ಲಿ!!
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


