ಪ್ರಧಾನ ಮಂತ್ರಿ ಜೆಜೆಬಿವೈ ಮತ್ತು ಎಸ್.ಬಿ.ವೈ. ಲಾಭ ಎಲ್ಲರಿಗೂ ತಲುಪಲಿ: ಡಾ. ವಿಶಾಲ್ ಆರ್

Upayuktha
0


 

ಉಡುಪಿ: ಸಾಮಾಜಿಕ ಭದ್ರತೆಯನ್ನು ಒದಗಿಸುವ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳು ಪ್ರತಿಯೊಬ್ಬರ ಕುಟುಂಬಕ್ಕೆ ಕನಿಷ್ಠ ವೆಚ್ಚದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಇವುಗಳನ್ನು ಪ್ರತಿಯೊಬ್ಬರೂ ಹೊಂದುವ ಹಾಗೆ ನೋಡಿಕೊಳ್ಳಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಇದರ ಕಾರ್ಯದರ್ಶಿ ಡಾ. ವಿಶಾಲ್ ಆರ್ ಸೂಚನೆ ನೀಡಿದರು.

    ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ಜೀವನದ ಅನಿಶ್ಚಿತತೆಯ ವಿರುದ್ಧ ರಕ್ಷಣೆಗಾಗಿಯೇ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳನ್ನು ಸರಕಾರ ಜಾರಿಗೆ ತಂದಿದೆ. ಯೋಜನೆಗಳು ಸಾಮಾಜಿಕ, ಆರ್ಥಿಕ ಸ್ಥಿತಿಯ ಅಡೆತಡೆಗಳನ್ನು ಮೀರಿ ಜೀವನದ ಎಲ್ಲಾ ಹಂತಗಳಲ್ಲಿ ವ್ಯಕ್ತಿಗಳಿಗೆ ಸುರಕ್ಷತಾ ಜಾಲವನ್ನು ವಿಸ್ತರಿಸುತ್ತದೆ. ಅಲ್ಪ ವಿಮಾ ಮೊತ್ತವನ್ನು ಪಾವತಿಸುವುದರೊಂದಿಗೆ ಯೋಜನೆಗಳ ಮೂಲಕ ತ್ವರಿತವಾಗಿ ಕವರೇಜ್ಗಳನ್ನು ಪಡೆಯಬಹುದು, ಅನಿರೀಕ್ಷಿತ ಅಪಘಾತಗಳು ಮತ್ತು ಅಂಗವೈಕಲ್ಯಗಳ ವಿರುದ್ಧ ಆರ್ಥಿಕ  ರಕ್ಷಣೆಯನ್ನು ಒದಗಿಸುತ್ತದೆ. ಇದನ್ನು ಪ್ರತಿಯೊಬ್ಬರೂ ಹೊಂದಬೇಕು ಎಂದರು.

   ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಹಾಗೂ ಸರಕಾರಿ ನೌಕರರು ಕಡ್ಡಾಯವಾಗಿ ಯೋಜನೆಗಳ ನೋಂದಣಿ ಮಾಡಿಸಿಕೊಳ್ಳಬೇಕು. ಒಂದೊಮ್ಮೆ ಅಪಘಾತದಲ್ಲಿ ಮರಣ ಸಂಭವಿಸಿದ್ದಲ್ಲಿ 40 ಲಕ್ಷ ಕ್ಕೂ ಹೆಚ್ಚು ಹಣ ತಮ್ಮ ಕುಟುಂಬದವರಿಗೆ ದೊರೆಯುತ್ತದೆ ಎಂದ ಅವರು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರುಗಳು, ವ್ಯಾಪ್ತಿಯಲ್ಲಿ ಬರುವಂತೆ ನೋಡಿಕೊಳ್ಳಬೇಕು. ಜಿಲ್ಲಾ ಅಗ್ರಗಣ್ಯ ಬ್ಯಾಂಕ್ ವ್ಯವಸ್ಥಾಪಕರು ಬಗ್ಗೆ ಅನುಕರಣೆ ಮಾಡಬೇಕೆಂದು ಸೂಚನೆ ನೀಡಿದರು.

   ಪ್ರವಾಸೋದ್ಯಮವು ಸ್ಥಳೀಯ ಜನರಿಗೆ ಹೆಚ್ಚು ಉದ್ಯೋಗಾವಕಾಶಗಳನ್ನು ಸುಲಭವಾಗಿ ದೊರಕುವಂತಾಗುತ್ತದೆ. ಪೂರಕವಾಗಿ ನಮ್ಮಲ್ಲಿನ ಕಡಲ ಕಿನಾರೆಗಳು, ಧಾರ್ಮಿಕ ಕೇಂದ್ರಗಳು, ನೈಸರ್ಗಿಕ ಸ್ಥಳಗಳು ಇವೆ. ಇವು ಜನರನ್ನು ಹೆಚ್ಚು ಆಕರ್ಷಿಸುತ್ತವೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.

   ಧಾರ್ಮಿಕ ಕೇಂದ್ರಗಳಿಗೆ ಆಗಮಿಸುವ ಭಕ್ತರುಗಳಿಗೆ ದೇವರ ದರ್ಶನ ಹಾಗೂ ಪ್ರಸಾದದ ವ್ಯವಸ್ಥೆಗಳು ವ್ಯವಸ್ಥಿತವಾಗಿ ಲಭ್ಯವಾಗುವಂತೆ ನೋಡುವುದರ ಜೊತೆಗೆ, ಅವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದ ಅವರು, ದೇವಸ್ಥಾನಗಳಲ್ಲಿರುವ ಅನುದಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಇದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

   ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಕೇಂದ್ರ ಭಾಗದಲ್ಲಿರುವ ಸ್ಥಳವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಪಡಿಸಬೇಕು. ಇಲ್ಲಿಗೆ ಬರುವ ವಾಹನಗಳ ನಿಲ್ದಾಣಕ್ಕೆ ಅನುಕೂಲವಾಗಲು ವರ್ಟಿಕಲ್ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಬೇಕು ಎಂದರು.

   ಕುಡಿಯುವ ನೀರನ್ನು ಒದಗಿಸುವ ಜಲ್ ಜೀವನ್ ಮಿಷನ್ ಯೋಜನೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದ ಅವರು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಬಾಕಿ ಉಳಿದಿರುವ ವಾರಾಹಿ ಯೋಜನೆಯ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಲು ತಿಳಿಸಿದರು.

    ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಇವು ಪ್ರತಿಯೊಬ್ಬರಿಗೂ ತಲುಪಬೇಕು. ಜಿಲ್ಲೆಯಲ್ಲಿ ವಿಶೇಷವಾಗಿ ಕೊರಗ ಸಮುದಾಯದವರಿಗೆ ಆರೋಗ್ಯ ಸೇವೆಗಳ ಲಾಭ ಪಡೆಯುವಂತೆ ಆಶಾ ಹಾಗೂ ಆರೋಗ್ಯ ಸಿಬ್ಬಂದಿಗಳು ನೋಡಿಕೊಳ್ಳಬೇಕು ಎಂದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಎಎಸ್ಪಿ ಸುಧಾಕರ್ ನಾಯಕ್, ಸಹಾಯಕ ಕಮೀಷನರ್ ರಶ್ಮಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

 

 

Post a Comment

0 Comments
Post a Comment (0)
To Top