ಒಂದು ಊರಿನಲ್ಲಿ ರಾಜು ಎಂಬ ಹುಡುಗನಿದ್ದನು. ಅವನು ಸಣ್ಣವನಿದ್ದಾಗಲಿಂದಲೇ ತಂದೆ-ತಾಯಿಯರ ಪ್ರೀತಿಯ ಮಗನಾಗಿದ್ದ. ಇವನು ಆ ಕುಟುಂಬದ ಮೊದಲ ಕೂಸಾಗಿದ್ದರಿಂದ ಅವನ ಮೇಲೆ ಎಲ್ಲರಿಗೂ ಒಂದು ಪಾಲು ಪ್ರೀತಿ ಹೆಚ್ಚೇ ಇತ್ತು. ಇಷ್ಟೆಲ್ಲ ಇದ್ದರೂ ಸಹ ರಾಜು ತುಂಬಾ ಸೋಂಬೇರಿ ಯುವಕನಾಗಿದ್ದ. ಅವನ ತಂದೆ ಅವನಿಗೆ ಎಷ್ಟೇ ಬುದ್ಧಿಮಾತು ಹೇಳಿದ್ದರು ಸಹ ಅವನಿಗೆ ಅದು ಅರ್ಥವಾಗುತ್ತಿರಲಿಲ್ಲ. ಅವನಿಗಿದ್ದ ಕೆಟ್ಟ ಚಟವೆಂದರೆ ಹಗಲು ಕನಸು ಕಾಣುವುದು. ಅವನು ಯಾವುದೇ ಕೆಲಸ ಮಾಡದಿದ್ದರೂ ಹಗಲು ಕನಸು ಕಾಣುವ ಅಭ್ಯಾಸವನ್ನು ಬಿಡದೆ ನಿರ್ವಹಿಸುತ್ತಿದ್ದ.
ಒಂದು ದಿನ ಹೀಗೆ ತನ್ನ ಕೈಯಲ್ಲಿ ಉದ್ಯೋಗವಿಲ್ಲದಿದ್ದರೂ ಸಹ ತಾನೇನಾದರೂ ಮಾಡಬೇಕೆಂದು ವಿಶೇಷ ಹಂಬಲ ರಾಜುವಿನ ಮನದಲ್ಲಿ ಹುಟ್ಟಿತು. ಇದನ್ನರಿತ ಆತನ ತಂದೆ ತನ್ನಲ್ಲಿದ್ದ ಸ್ವಲ್ಪ ಹಣವನ್ನು ರಾಜುವಿಗೆ ನೀಡಿ ಅದರಿಂದ ಏನಾದರೂ ವ್ಯಾಪಾರ ಮಾಡು ಎಂದು ಹೇಳಿದರು. ಆದರೆ ಅಲ್ಲಿ ಸಹ ಅವನ ಹಗಲು ಕನಸಿನ ಬುದ್ಧಿಯನ್ನು ಬಿಡದೆ, ತನ್ನಲ್ಲಿದ್ದ ಆ ಸ್ವಲ್ಪ ಹಣದಿಂದ ಅಲ್ಪ ಸಮಯದಲ್ಲಿ ಶ್ರೀಮಂತನಾಗಬೇಕೆಂಬ ಕನಸು ಕಾಣತೊಡಗಿದ. ಇದರಿಂದಾಗಿ ಅವನು ಆ ಹಣದಲ್ಲಿ ಒಂದು ಸಣ್ಣ ಅಂಗಡಿಯನ್ನು ಆರಂಭಿಸಿ ದಿನಸಿ ಸಾಮಾನುಗಳನ್ನು ಮಾರಲು ಪ್ರಾರಂಭಿಸಿದ. ಆದರೆ ಅವನ ಕನಸು ಕಾಣುವ ಚಟದಿಂದ ವ್ಯಾಪಾರದಲ್ಲಿ ಮೋಸವಾಗಿ ಆ ಸಣ್ಣ ಅಂಗಡಿಯನ್ನು ಸಹ ಆತ ಮುಚ್ಚಬೇಕಾಯಿತು.
ಒಂದು ದಿನ ಅವನು ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದರೆ ಅವನಿಗೆ ಶ್ರೀಮಂತ ವ್ಯಕ್ತಿಯೊಬ್ಬ ತನ್ನ ಕುಟುಂಬದೊಂದಿಗೆ ಕಾಲ ಕಳೆಯುವುದನ್ನು ನೋಡಿದ ರಾಜು ಅವರಂತೆ ತಾನು ಆಗಬೇಕೆಂದು ಹುಸಿ ಕನಸು ಕಾಣತೊಡಗಿದ. ಆದರೆ ಅದು ಅವನ ಕನಸಿಗೆ ಮಾತ್ರ ಸೀಮಿತವಾಗಿತ್ತು ಹೊರತು ನಿಜ ಜೀವನಕ್ಕಲ್ಲ. ಹೀಗೆ ಕನಸಿನಲ್ಲೇ ಎಲ್ಲಾ ಸುಖಗಳನ್ನು ಕಾಣುತ್ತಿದ್ದ ರಾಜು ಮುಂದೆ ಯಾವುದೇ ಸಾಧನೆ ಮಾಡಲಾರದಾದ.
ನೀತಿ: ನಮ್ಮ ಆಸೆ ಆಕಾಂಕ್ಷೆಗಳನ್ನು ಕೇವಲ ಕನಸಿಗೆ ಸೀಮಿತವಾಗಿರಿಸದೆ ಅದನ್ನು ನಿಜ ಜೀವನಕ್ಕೂ ಅಳವಡಿಸಲು ತಿಳಿದಿರಬೇಕು.
- ಹರ್ಷಿತಾ ದೋಲ್ಪಾಡಿ
ಪ್ರಥಮ ಜೆಎಂಸಿ
ವಿವೇಕಾನಂದ ಸ್ನಾತಕೋತ್ತರ ವಿಭಾಗ


