ಪ್ರತಿದಿನದಂತೆ ಬೆಳಗಿನ ಕೆಲಸದ ಒತ್ತಡದ ಸಮಯದಲ್ಲಿ ಜಾಹ್ನವಿ ತನ್ನ ಅಡುಗೆಮನೆಯ ಕೆಲಸದಲ್ಲಿ ನಿರತಳಾಗಿದ್ದಳು. ಒಲೆಯ ಮೇಲೆ ಗಂಜಿ ಕುದಿಯುತ್ತಿತ್ತು, ಪಕ್ಕದಲ್ಲಿ ಸಾಂಬಾರ್ ಸಿದ್ಧವಾಗುತ್ತಿತ್ತು.
ಬೆಂದ ಇಡ್ಲಿಗಳನ್ನು ಪಾತ್ರೆಗೆ ಹಾಕುತ್ತಿರುವ ತನ್ನ ಕೆಲಸದ ನಡುವೆಯೂ ಅವಳು ಕಿಟಕಿಯ ಮೂಲಕ ಹೊರಗೆ ನೋಡುತ್ತಿದ್ದಳು. ಇನ್ನೂ ಕಾಫಿಯನ್ನೂ ತಯಾರಿಸಬೇಕು. ಅಭಿಜಿತ್ ಸ್ನಾನಕ್ಕೆ ಹೋಗಿದ್ದಾರೆ, ಮಕ್ಕಳು ಬೇಕು ಎಂದರೆ ಚಟ್ನಿಯನ್ನು ತಯಾರಿಸಬೇಕು.
ಅಭಿಜಿತ್ ಸ್ನಾನ ಮುಗಿಸಿ ಬಂದರೆ, ಆಮೇಲೆ ಕಚೇರಿಗೆ ಹೋಗುವ ತುರ್ತು ಓಟ ಆರಂಭವಾಗುತ್ತದೆ. ಶಾಲೆಗೆ ರಜೆ ಇರುವುದರಿಂದ, ಈ ಕೆಲಸಗಳಾದ ಮೇಲೆ ಮಕ್ಕಳನ್ನು ಎಬ್ಬಿಸಬೇಕಿದೆ. ಅಷ್ಟೊಂದು ಕೆಲಸದ ಒತ್ತಡವಿದ್ದರೂ ಮತ್ತೆ ಕಿಟಕಿಯತ್ತ ಕಣ್ಣಾಡಿಸಿದ ಜಾಹ್ನವಿಯ ಮುಖದಲ್ಲಿ ಭಾವಗಳು ಬದಲಾಗುತ್ತಿದ್ದವು. ಅವಳ ನೋಟ ಪಕ್ಕದ ಮನೆಯತ್ತಲೇ ಇತ್ತು.
ಒಂದು ತಿಂಗಳ ಹಿಂದೆ ಮುಕುಂದ–ಮಂಜುಳಾ ದಂಪತಿಗಳು ಅವರ ಪಕ್ಕದ ಮನೆಗೆ ವಾಸಕ್ಕೆ ಬಂದಿದ್ದರು. ಮುಕುಂದ ಯಾವುದೋ ದೊಡ್ಡ ವ್ಯವಹಾರ ನಡೆಸುವವನು ಎಂದು ಅವಳಿಗೆ ತಿಳಿದಿತ್ತು. ಆ ದಂಪತಿಗಳ ನಡುವೆ ಅಪಾರ ಅನ್ಯೋನ್ಯತೆಯಿದೆ ಎಂದು ಜಾಹ್ನವಿಗೆ ಅವರ ವರ್ತನೆಯಿಂದ ಅರಿವಾಗುತ್ತಿತ್ತು.
ಮಂಜುಳಾ ಯಾವಾಗಲೂ ಆಕರ್ಷಕವಾಗಿ ಅಲಂಕರಿಸಿಕೊಂಡು ಕಾಣಿಸಿಕೊಳ್ಳುತ್ತಿದ್ದಳು.. ಅವರ ಏಕೈಕ ಮಗಳು ಊಟಿಯಲ್ಲಿರುವ ವಸತಿ ಶಾಲೆಯಲ್ಲಿ ಓದುತ್ತಾಳೆ ಎಂಬ ವಿವರವು ಅವಳಿಗೆ ಸಿಕ್ಕಿತ್ತು. ಮುಕುಂದನಿಗೆ ತನ್ನದೇ ಕಚೇರಿ ಇರುವುದರಿಂದ ತಡವಾದರೂ ಪರವಾಗಿಲ್ಲ. ಹೊರಡುವ ಮೊದಲು ಮಂಜುಳಾಳಿಗೆ ಒಮ್ಮೆ ಮುತ್ತು ಕೊಟ್ಟು ಹೋಗುವುದು ಅವನಿಗೆ ಅಭ್ಯಾಸ ಎಂದೂ ಜಾಹ್ನವಿಗೆ ತಿಳಿದಿತ್ತು.
ಅವಳು ಇದನ್ನೆಲ್ಲಾ ಕೆಲವು ತಿಂಗಳುಗಳಿಂದ ಗಮನಿಸುತ್ತಿದ್ದಳು. ಮದುವೆಯ ಮೊದಲ ದಿನಗಳಲ್ಲಿ ಅಭಿಜಿತ್ ಕೂಡ ಹೊರಡುವಾಗ ಅವಳಿಗೆ ಮುದ್ದು ಕೊಟ್ಟದ್ದನ್ನು ಅವಳು ನೆನಪಿಸಿಕೊಂಡಳು.
'ಅವರ ನಡುವೆ ಈಗಲೂ ಹೊಸತನದ ಅದೇ ಬಾಂಧವ್ಯವನ್ನು ಉಳಿಸಿಕೊಳ್ಳಲು ಹೇಗೆ ಸಾಧ್ಯವಾಗಿದೆ' ಎಂದು ಒಳಗೆೊಳಗೆ ಆಲೋಚಿಸುತ್ತಾಳೆ ಜಾಹ್ನವಿ. ಒಮ್ಮೆ ಅವಳು ಅದನ್ನೇ ನೋಡುತ್ತ ನಿಂತಿದ್ದಾಗ, ಹಿಂಬದಿಯಿಂದ ಬಂದ ಅಭಿಜಿತ್ ಗಮನಿಸಿದ್ದರೂ, ಗಮನಿಸದಂತೆ ನಡೆದುಕೊಂಡು ಹೋಗಿದ್ದ.
ಪತ್ನಿ ಆ ಮನೆಯವರನ್ನು ಹೆಚ್ಚು ಗಮನಿಸುತ್ತಿದ್ದಾಳೆ ಎಂದು ಅಭಿಜಿತ್ ಗೆ ಅರಿವಾಗಿತ್ತು. ಆದರೆ ಅವನಿಗೆ ಅದರ ಬಗ್ಗೆ ಹೆಚ್ಚು ಯೋಚಿಸಲು ಸಮಯ ಸಿಗುತ್ತಿರಲಿಲ್ಲ.
ಜಾಹ್ನವಿ ಕಿಟಕಿಯಿಂದ ನೋಡಿದಾಗ ಮಂಜುಳಾ ಯಾರೊಂದಿಗೋ ಫೋನ್‌ನಲ್ಲಿ ನಗುತ್ತಾ ಮಾತನಾಡುತ್ತಿರುವುದು ಕಾಣಿಸುತ್ತಿತ್ತು. ಅವರ ಮನೆಯ ಕೆಲಸಗಳನ್ನು ನೋಡಿಕೊಳ್ಳುವ ದೇವಮ್ಮ ಎಂಬ ಹೆಂಗಸು ಇದ್ದುದರಿಂದ, ಮಂಜುಳಾಳಿಗೆ ಯಾವುದೇ ತೊಂದರೆ ಇಲ್ಲ.
ಅವಳು ಆರಾಮವಾಗಿ ಕುಳಿತು ಮಾತನಾಡುತ್ತಿರುತ್ತಾಳೆ. ಇದನ್ನೆಲ್ಲಾ ನೋಡಿದಾಗ ಜಾಹ್ನವಿಗೆ ಸ್ವಲ್ಪ ಅಸಹನೆ ಮೂಡುತ್ತಿತ್ತು. 'ಅಭಿಜಿತ್‌ನ ಸಣ್ಣ ಸಂಬಳದಲ್ಲಿ ತಮ್ಮ ಜೀವನ ಹೀಗೇ ಸಾಗುತ್ತಿದೆ… ಕೆಲಸದವಳು, ಹೊರಗಿನ ಊಟ ತಿರುಗಾಟ ಎಂದು ಬಯಸಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಹುದು ಎಂಬ ಚಿಂತೆ ಅವಳನ್ನು ಕಾಡುತ್ತಿತ್ತು ಹಾಗಾಗಿ ಮನೆಗೆಲಸವನ್ನೆಲ್ಲ ಅವಳೊಬ್ಬಳೇ ಮಾಡುತ್ತಿದ್ದಳು.
ಆದರೂ ತನಗೂ ಅಂತಹ ಒಂದು ಜೀವನ ಬೇಡವೇ? ನನಗೂ ಎಲ್ಲರಂತೆ ಅಭಿಲಾಷೆಗಳು ಇವೆಯಲ್ಲ ಅದಕ್ಕೆ ಪರಿಹಾರವೇನು ಎಂಬ ಚಿಂತೆ ಕಾಡುವಾಗ ಅವಳಿಗೆ ತನ್ನ ಹಳೆಯ ದಿನಗಳು ನೆನಪಾಗುತ್ತಿದ್ದವು.
ಪದವಿ ಮುಗಿಸಿ ಮನೆಯಲ್ಲಿರುವಾಗ ಜಾಹ್ನವಿಗೆ ಹಲವು ಮದುವೆ ಮಾತುಕತೆಗಳು ಬಂದಿದ್ದವು.
"ಅವನಿಗೆ ಬಣ್ಣ ಇಲ್ಲ, ಇವನಿಗೆ ಕೂದಲು ಕಡಿಮೆ, ಮತ್ತೊಬ್ಬನ ಎತ್ತರ ಸಾಲದು…, ಈತನಿಗೆ ಕಡಿಮೆ ಸಂಬಳದ ಉದ್ಯೋಗ....' ಎಂದು ಒಬ್ಬೊಬ್ಬರನ್ನು ಒಂದೊಂದು ಕಾರಣ ಹೇಳಿ ನಿರಾಕರಿಸುತ್ತಿದ್ದಳು ಜಾಹ್ನವಿ. ಅವಳ ಇಂಥ ಮಾತುಗಳಿಂದ ತಂದೆ ಮಾಧವರಾಯರಿಗೆ ತುಂಬಾ ಇರಿಸುಮುರಿಸಾಗುತ್ತಿತ್ತು. ಆದರೂ ಜಾಹ್ನವಿ ತನ್ನ ಹಠದಿಂದ ಹಿಂದೆ ಸರಿದಿರಲಿಲ್ಲ.
ಹೀಗೆ ಒಂದೆರಡು ವರ್ಷ ಮುಂದುವರಿದಾಗ ಅವಳು ಬಯಸಿದಂತಹ ವರ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಕೊನೆಗೆ ಹುಡುಗ ಒಳ್ಳೆಯ ವ್ಯಕ್ತಿತ್ವದವನಾದರೆ ಸಾಕು ಹೆಚ್ಚು ಬೇಡಿಕೆ ಏನು ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಳು ಜಾಹ್ನವಿ.
ಆಗಲೇ ಅಭಿಜಿತ್ ನ ಮದುವೆ ಪ್ರಸ್ತಾಪ ಬಂದಿದ್ದು. ಒಂದು ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಅವನನ್ನು ಅವಳು ಒಪ್ಪಿಕೊಂಡಿದ್ದಳು. ಇಷ್ಟು ದಿನ ಯಾರನ್ನೂ ಮದುವೆಯಾಗದೆ ಕಾದ ಬಗ್ಗೆ ಅವಳಿಗೆ ತೃಪ್ತಿಯೇ ಇತ್ತು. ಅಭಿಜಿತ್ ತುಂಬಾ ಪರಿಶ್ರಮಿ. ಹೆಂಡತಿ ಮಕ್ಕಳನ್ನು ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದ. ಆದರೆ ಖಾಸಗಿ ಬ್ಯಾಂಕ್ ಆದಕಾರಣ ದೊಡ್ಡ ಮೊತ್ತದ ಸಂಬಳ ಅವನಿಗೆ ಇರಲಿಲ್ಲ. ಆದರೂ ನೆಮ್ಮದಿಯ ಬದುಕು ಅವರದ್ದು.
ಆದರೆ ಈಗ…..!!
ಇಲ್ಲಿಯವರೆಗೂ ಯಾರ ಮೇಲೂ ಅಸೂಯೆ ಪಡದ ಜಾಹ್ನವಿಗೆ, ಮಂಜುಳಾಳ ಸಂತೋಷಗಳು ಅಸಹ್ಯವಾಗತೊಡಗಿದವು. ಅವರ ಜೀವನದ ವೈಭವ, ಅವರಿಬ್ಬರ ನಡುವಿನ ಮಮತೆ, ಇವೆಲ್ಲಾ ನೋಡಿದಾಗ ಜಾಹ್ನವಿಗೆ ನಿದ್ರೆ ದೂರವಾಗ ತೊಡಗಿತು.
'ನನ್ನ ಶಾಂತಿ ಯಾವಾಗ ಕಳೆದುಹೋಯಿತು?' ಎಂದು ಅವಳು ಮನದಲ್ಲಿಯೇ ಯೋಚಿಸ ತೊಡಗಿದಳು. ಮುಕುಂದ ಹಾಗೂ ಮಂಜುಳಾ ವಾಸಕ್ಕೆ ಬಂದ ಎರಡು ದಿನಗಳ ನಂತರವೇ ಅವಳು ಮುಕುಂದನನ್ನು ಮೊದಲ ಬಾರಿಗೆ ಕಂಡಿದ್ದು. ಅವನನ್ನು ಕಂಡಾಗ ಅವಳಿಗೆ ಅಸ್ಪಷ್ಟವಾದ ಯಾವುದೋ ನೆನಪು ಮೂಡಿ ಎದೆಯಲ್ಲಿ ತಲ್ಲಣವಾಗ ತೊಡಗಿತ್ತು.
ಅವಳ ನೆನಪುಗಳು ಹಿಂದಕ್ಕೆ ಹರಿದವು…
ಅಂದಿನ ದಿನಗಳಲ್ಲಿ ಬ್ರೋಕರ್ ಕುಞ್ಞಪ್ಪಣ್ಣ ಎಂಬ ಅಡ್ಡ ಹೆಸರಿನಿಂದ ಕರೆಯುವ ಕೇಶವ ರಾಯರು ಅವಳ ತಂದೆಯ ಸ್ನೇಹಿತರಾಗಿದ್ದರು.
ಒಮ್ಮೆ ಒಬ್ಬ ಹುಡುಗನನ್ನು ಜಾಹನವ್ಯ ಮನೆಗೆ ಕರೆದುಕೊಂಡು ಬಂದಿದ್ದರು. ಅವರ ಮನೆಯ ಪರಿಸ್ಥಿತಿಗೆ ಹೊಂದಿಕೊಳ್ಳುವಂತಹ ಸರಿಯಾದ ಸಂಬಂಧವೇ ಆಗಿತ್ತು ಅದು. ಪರಿಚಯ ಮುಗಿದು ಹೊರಡುವಾಗ ಕುಞ್ಞಪ್ಪಣ್ಣ ಒಳಗೆ ಬಂದು ಜಾಹ್ನವಿಯಲ್ಲಿ "ಹುಡುಗ ಇಷ್ಟವಾದನೇ? ಅವನಿಗೆ ನಿನ್ನನ್ನು ಇಷ್ಟವಾದಂತಿದೆ ನಿನ್ನ ಅಭಿಪ್ರಾಯವೂ ಕೇಳಿ ಮುಂದುವರಿಯೋಣ ಎಂಬುದು ನಮ್ಮ ಯೋಚನೆ" ಎಂದು ಹೇಳಿದರು.
ಆಗ ಮದುವೆ ಮಾತುಕತೆಗಳ ಪ್ರಾರಂಭದ ಕಾಲ. ಜಾಹ್ನವಿಯ ಕನಸುಗಳು ವಿಸ್ತಾರವಾಗಿದ್ದವು. ಸಾಮಾನ್ಯ ಯುವಕರೆಲ್ಲ ಅವಳ ಕಣ್ಣಿಗೆ ಬೀಳುತ್ತಲೇ ಇರಲಿಲ್ಲ.
“ನನಗೆ ಇದು ಬೇಡ ಕುಞ್ಞಪ್ಪಣ್ಣ! ನಾನು ಹೇಳಿದಂತ ಹುಡುಗನಾ ಇವನು? ಕಪ್ಪು ಬಣ್ಣ, ಕೂದಲು ಇಲ್ಲ… ಮೇಲೆ ಸಣ್ಣ ತಿಂಡಿ ವ್ಯಾಪಾರ ಮಾಡ್ತಾನೆ… ನನಗೆ ಸರಿಯಾದ ಉದ್ಯೋಗ ಇರುವವನೇ ಬೇಕು ಅಂತ ಹೇಳಿದ್ದಲ್ಲವೇ? ನೀವು ಎಂತಹ ಹುಡುಗನನ್ನು ಕರೆದುಕೊಂಡು ಬಂದಿದ್ದೀರಿ" ಎಂದು ಸ್ವಲ್ಪ ಸಿಟ್ಟಿನಿಂದಲೇ ಹೇಳಿದಳು.
ಅವಳು ಸಿಟ್ಟಿನಿಂದ ಮಾತನಾಡುವಾಗ ದನಿ ಅರಿವಿಲ್ಲದೆ ಏರಿ ಹೋಗಿತ್ತು. ಹಾಗಾಗಿ ಅವಳ ಮಾತುಗಳು ಹೊರಗಡೆ ಕುಳಿತಿದ್ದ ಆ ಹುಡುಗನಿಗೂ ಕೇಳಿಸಿತು. ಕುಞ್ಞಪ್ಪಣ್ಣ ಮನಸ್ಸಿಗೆ ನೋವಾಗಿ, ಹುಡುಗನನ್ನು ಕರೆದುಕೊಂಡು ಹೊರಟುಹೋದರು. ನಂತರ ಅವರು ಆ ಮನೆಗೆ ಮತ್ತೆ ಕಾಲಿಟ್ಟಿರಲಿಲ್ಲ.
ಅಂದು ಜಾಹ್ನವಿ ನಿರಾಕರಿಸಿದ ಆ ಹುಡುಗನೇ ಇಂದಿನ ಮುಕುಂದ.....!!
ಆ ದಿನದ ಅವಮಾನ ಅವನ ಮನಸ್ಸಿನಲ್ಲಿ ಹಠವಾಗಿ ಬೇರೂರಿತು. ದಿನರಾತ್ರಿ ಶ್ರಮಿಸಿ ಸಣ್ಣ ಆಹಾರ ಉದ್ಯಮವನ್ನು ಆರಂಭಿಸಿದ್ದ. ಅದು ಕ್ರಮೇಣ ದೊಡ್ಡದಾಗಿ ಬೆಳೆದಿತು. ನಂತರ ಅವನು ಮಂಜುಳಾಳನ್ನು ಮದುವೆಯಾಗಿದ್ದ. ಇಂದು ಅವನು ಕೋಟ್ಯಾಂತರ ವ್ಯಾಪಾರ ಹೊಂದಿದ ಯಶಸ್ವಿ ಉದ್ಯಮಿ.
ತನ್ನ ಯಶಸ್ಸಿಗೆ ಕಾರಣವಾದುದು ಜಾಹ್ನವಿಯ ಮಾತುಗಳೇ ಎಂದು ಅವನು ಕೆಲವೊಮ್ಮೆ ನೆನಪಿಸಿಕೊಳ್ಳುತ್ತಿದ್ದ. ದ್ವೇಷವಿಲ್ಲದೆ, ಆತ್ಮೀಯತೆಯಿಂದಲೇ ಅವಳನ್ನು ಒಮ್ಮೆ ನೋಡಬೇಕು, ಮಾತನಾಡಿಸಬೇಕು ಎಂಬ ಹಂಬಲವಿದ್ದರೂ ಅವಳನ್ನು ಹುಡುಕಿಕೊಂಡು ಅವನು ಹೋಗಿರಲಿಲ್ಲ. ಆಕೆಯೇ ತನ್ನ ಪಕ್ಕದ ಮನೆಯಲ್ಲಿರುವುದು ಅವನಿಗೆ ತಿಳಿದಿರಲಿಲ್ಲ.
ಒಮ್ಮೆ ಮುಕುಂದ, ಮಂಜುಳಾ ಜಾಹ್ನವಿಯ ಮನೆಗೆ ಬಂದಿದ್ದರು. ದೂರದಿಂದಲೇ ಮುಕುಂದನನ್ನು ಕಂಡ ಜಾಹ್ನವಿ, ಅಭಿಜಿತ್‌ನನ್ನು ಅವರ ಜೊತೆ ಮಾತನಾಡಲು ಬಿಟ್ಟು, ತಾನು ಒಳಗೆ ನಿಂತುಬಿಟ್ಟಿದ್ದಳು. ಅವರಿಗೆ ಟೀ ಮಾಡಿ ಅಭಿಜಿತ್ ಮುಖಾಂತರವೇ ಕೊಟ್ಟು ಒಳಗೆ ಹೋದ ಅವಳು ಅವರು ಹೋದ ಬಳಿಕವೇ ಹೊರಬಂದಿದ್ದು. ಮುಕುಂದ ಹಾಗೂ ಮಂಜುಳಾ ಅಭಿಜಿತ್ ನ ಪತ್ನಿ ಮನೆಯಲ್ಲಿ ಇಲ್ಲ ಎಂದೇ ಭಾವಿಸಿದ್ದರು. ಹಾಗಾಗಿ ಅವಳು ಒಳಗೆ ಉಳಿದುಕೊಂಡಿದ್ದು ಎಂಬ ವಿಚಾರವನ್ನು ಹೆಚ್ಚು ಗಮನಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಅವಳಿಗೆ ಅರಿವಾಗಿತ್ತು. ಆದರೂ ಅವಳ ಮನಸ್ಸಿನಲ್ಲಿ ಏನೂ ತಳಮಳ ಮೂಡುತ್ತಿತ್ತು. ತಾನು ತಪ್ಪು ಮಾಡಿದ್ದೇನೆ ಎಂಬ ಭಾವ ಅವಳನ್ನು ಕಾಡುತ್ತಿತ್ತು.
ಒಂದು ಸಂಜೆ, ಅಭಿಜಿತ್ ಬರುವ ನಿರೀಕ್ಷೆಯಲ್ಲಿ ಕುಳಿತಿದ್ದಾಗ, ಕರೆಗಂಟೆ ಬಾರಿಸಿತು. ಬಾಗಿಲು ತೆರೆದ ಜಾಹ್ನವಿ ಬೆಚ್ಚಿಬಿದ್ದಳು. ಅಲ್ಲಿ ಮುಕುಂದ ನಿಂತಿದ್ದ.
ಅನಿರೀಕ್ಷಿತವಾಗಿ ಜಾಹ್ನವಿಯನ್ನು ಕಂಡ ಮುಕುಂದನಿಗೂ ಅಚ್ಚರಿಯಾಗಿತ್ತು. ಅವನು ಅವಳನ್ನು ಅಲ್ಲಿ ನಿರೀಕ್ಷಿಸಿರಲಿಲ್ಲ.
ಅವನ ಮಾತು ನಿಂತುಹೋಯಿತು.
ಜಾಹ್ನವಿ ಮಾತಾಡಲಾರದೆ ತಲೆ ತಗ್ಗಿಸಿದಳು. ಏನು ಮಾತನಾಡಬೇಕೆಂದೆ ಅವಳಿಗೆ ತಿಳಿಯದಂತಾಗಿತ್ತು.
"ನಿನ್ನನ್ನು ನೋಡಬೇಕೆಂದು ಬಹಳ ದಿನಗಳಿಂದ ಆಸೆ ಇತ್ತು" ಎಂದು ಮುಕುಂದ ಹೇಳಿದಾಗ ಯಾಕೆ ಇರಬಹುದು ಎಂಬ ಪ್ರಶ್ನೆ ಮನದಲ್ಲಿ ಮೂಡಿದರೂ ಅವಳು ಮೌನವಾಗಿಯೇ ನಿಂತಳು.
"ನನ್ನ ಬದುಕಿನ ಈ ಬೆಳವಣಿಗೆಗೆ ಕಾರಣ… ನೀನು ಅಂದು ಹೇಳಿದ ಮಾತುಗಳೇ. ಅದಕ್ಕಾಗಿ ನಿನಗೆ ಧನ್ಯವಾದಗಳು….! ನೀನು ಅಂದು ಹಾಗೆ ಹೇಳದಿರುತ್ತಿದ್ದರೆ ನಾನು ಇಂದು ಯಶಸ್ವಿ ಉದ್ಯಮಿಯಾಗುತ್ತಿರಲಿಲ್ಲ ಅದೇ ಕೆಲಸದಲ್ಲಿ ಮುಂದುವರಿಯುತ್ತಿದ್ದೆ ನನ್ನ ಮನಸ್ಸಿನಲ್ಲಿ ನಿಮಗೆ ಬಹಳ ಎತ್ತರದ ಸ್ಥಾನವಿದೆ ಎಂದು ಅವನು ಕೈ ಮುಗಿದು ಹೇಳಿದಾಗ ಜಾಹ್ನವಿಯ ಕಣ್ಣುಗಳು ತುಂಬಿ ಬಂದವು.
ಅವಳಿಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ. ಅವನು ತನ್ನ ತಿರಸ್ಕಾರವನ್ನು ಪುರಸ್ಕಾರವೆಂದು ಭಾವಿಸಿದ್ದಾನೆ ಎಂಬ ಭಾವ ಅವಳ ಮನಸ್ಸಿನಲ್ಲಿ ಪಶ್ಚಾತ್ತಾಪ ಮೂಡಿಸಿತು. ಅಷ್ಟರಲ್ಲಿ ಅಭಿಜಿತ್‌ನ ಸ್ಕೂಟರ್ ಬಂದು ನಿಂತಿತು. ಜಾಹ್ನವಿ ಕಣ್ಣೀರನ್ನು ಒರೆಸಿಕೊಂಡಳು.
"ಆಹಾ... ಮುಕುಂದ! ಒಳಗೆ ಬನ್ನಿ...., ಅವರನ್ನು ಒಳಗೆ ಕರೆಯದೆ ಅಲ್ಲೇ ನಿಲ್ಲಿಸಿ ಬಿಟ್ಟಿದ್ದೀಯಲ್ಲ" ಎಂದು ಮಡದಿಯನ್ನು ಪ್ರೀತಿಯಿಂದ ಆಕ್ಷೇಪಿಸುತ್ತಾ ಮುಕುಂದನನ್ನು ಒಳಗೆ ಕರೆದ ಅಭಿಜಿತ್.
ಮಕ್ಕಳು ಟಿವಿ ಆಫ್ ಮಾಡಿ ಒಳಗೆ ಹೋಗಿದ್ದರು. ಮುಕುಂದ ಹಾಗೂ ಅಭಿಜಿತ್ ಮಾತುಕತೆಯಲ್ಲಿ ತೊಡಗಿದರು. ಅವರಿಬ್ಬರ ನಡುವೆ ಒಂದು ಒಳ್ಳೆಯ ಬಾಂಧವ್ಯ ಬೆಳೆಯಿತು.
“ಜಾಹ್ನವಿ, ಚಹಾ ತಂದುಕೊಡು…” ಎಂದು ಅಭಿಜಿತ್ ಅಲ್ಲಿಂದಲೇ ಕೂಗಿದಾಗ ಜಾತ್ರೆ ಬೇಗನೆ ಚಹಾ ತಯಾರಿಸಿ ಕೊಟ್ಟಳು. ಈಗ ಅವಳ ಮನಸ್ಸಿನಲ್ಲಿ ಆತಂಕವಿರಲಿಲ್ಲ.
"ಅಭಿಜಿತ್, ನಾನು ಒಂದು ವಿಷಯ ಹೇಳಬೇಕು. ನಾನು ಅದಕ್ಕಾಗಿ ಇಲ್ಲಿಗೆ ಬಂದಿದ್ದು" ಮುಕುಂದ ನಿಧಾನವಾಗಿ ಹೇಳಿದ. “ಏನು ಹೇಳಿ?” ಎಂದು ಅಭಿಜಿತ್ ಆಶ್ಚರ್ಯದಿಂದ ಕೇಳಿದ.
“ನಮ್ಮ ರೆಸಿಡೆನ್ಸಿಯಲ್ ಸಂಘದ ರಾಘವಯ್ಯ ಅವರು ನಿಮ್ಮ ಬಗ್ಗೆ ಬಹಳ ಮೆಚ್ಚುಗೆ ಮಾತಾಡಿದರು. ನೀವು ಅಕೌಂಟ್ ಸೆಕ್ಷನ್ ನಲ್ಲಿ ತುಂಬಾ ಚುರುಕಾಗಿದ್ದೀರಿ ಎಂದು ಹೇಳಿದರು. ನನ್ನ ಕಂಪನಿಯಲ್ಲಿ ಚೀಫ್ ಅಕೌಂಟೆಂಟ್ ಹುದ್ದೆ ಖಾಲಿಯಿದೆ. ನಿಮಗೆ ಆಸಕ್ತಿ ಇದ್ದರೆ… ಈಗ ನಿಮಗೆ ಇರುವ ಸಂಬಳಕ್ಕಿಂತ ಎರಡು ಪಟ್ಟು ಕೊಡುತ್ತೇನೆ. ನಿಮಗೆ ಅಗತ್ಯವಿರುವ ತರಬೇತಿಯನ್ನು ಕೊಡಿಸುವೆ. ದಯವಿಟ್ಟು ನಮ್ಮ ಕಂಪನಿ ಸೇರುವಿರಾ ನಿಮ್ಮ ಸೇವೆ ನಮ್ಮ ಕಂಪನಿ ಗೆ ತುಂಬಾ ಅಗತ್ಯವಿದೆ ಮುಕುಂದ ಅಭಿಜಿತ್ ನ ಕೈ ಹಿಡಿದು ಕೇಳಿದಾಗ ಅಭಿಜಿತ್ ಮುಖದಲ್ಲಿ ಸಂತೋಷ ಮಿನುಗಿತು.
"ಇದು ನನ್ನ ಕನಸಿನ ಕೆಲಸ! ಈ ಕೆಲಸ ಬಿಟ್ಟರೆ ಬೇರೆ ಸಿಗಲಾರದು ಹಾಗೂ ಕುಟುಂಬವನ್ನು ಬಿಟ್ಟು ದೂರ ಹೋಗಿ ಕೆಲಸ ಮಾಡಲು ಕಷ್ಟ ಎಂಬ ಕಾರಣಕ್ಕಾಗಿ ನಾನು ಬೇರೆಲ್ಲೂ ಅಪ್ಲೈ ಮಾಡಿರಲಿಲ್ಲ ನೀವು ಇಷ್ಟು ಹೇಳಿದ ಮೇಲೆ ನನಗೆ ನೆಮ್ಮದಿಯಾಯಿತು. ಖಂಡಿತವಾಗಿ ನಾಳೆ ಬರುತ್ತೇನೆ" ಎಂದ.
ಮುಕುಂದನ ಮಾತುಗಳನ್ನು ಕೇಳಿದಾಗ ಜಾಹ್ನವಿಯ ಮನಸ್ಸಿನಲ್ಲಿ ಅನಿರ್ವಚನೀಯ ಸಂತಸ ಮೂಡಿತು. ಮುಕುಂದನ ಒಳ್ಳೆಯ ಮನಸ್ಸಿಗೆ ಅವಳು ಮನದಲ್ಲಿಯೇ ಮಣಿದಳು.
ಸ್ವಲ್ಪ ಹೊತ್ತಿನ ಮಾತುಕತೆಯ ನಂತರ ಮುಕುಂದ ಹೊರಟಿದ್ದ. ಅಭಿಜಿತ್ ತುಂಬಾ ಸಂತೋಷದಿಂದ ಜಾಹ್ನವಿಯ ಬಳಿ ಈ ವಿಚಾರವನ್ನು ಹೇಳಿದಾಗ ಅವನನ್ನು ಅಪ್ಪಿ ಅಭಿನಂದನೆ ತಿಳಿಸಿದಳು ಜಾಹ್ನವಿ.
ಅಭಿಜಿತ್ ಕೆಲಸಕ್ಕೆ ಸೇರಿದ ಮೇಲೆ ಆ ಮನೆಯಲ್ಲಿ ಮತ್ತೆ ಸಂತಸದ ಅಲೆಗಳು ಆವರಿಸತೊಡಗಿದವು. ಅಭಿಜಿತ್‌ಗೆ ಜಾಹ್ನವಿಯ ಹಳೆಯ ಕಥೆ ತಿಳಿಯಲೇ ಇಲ್ಲ. ಮುಕುಂದನಿಗೆ ಅದು ಉದ್ದೇಶಪೂರ್ವಕವಾಗಿರಲಿಲ್ಲದರೂ, ಇದು ದೇವರ ಒಂದು ವಿಚಿತ್ರ ನ್ಯಾಯವೇ ಆಗಿರಬಹುದು ಎಂದೆನಿಸಿದ ಕಾರಣ ಅದನ್ನು ಯಾರ ಬಳಿಯೂ ಹೇಳಿರಲಿಲ್ಲ.
ಅಂದಿನಿಂದ ಜಾಹ್ನವಿಗೆ ಮುಕುಂದ ಮಂಜುಳಾಳ ಮೇಲೆ ಯಾವ ಅಸಹನೆಯೂ ಮೂಡಲಿಲ್ಲ. ಅವರ ನಡುವೆ ಅತ್ಯುತ್ತಮ ಸ್ನೇಹಪೂರ್ಣ ವಾತಾವರಣ ನಿರ್ಮಾಣವಾಯಿತು.
ಶುಭಂ
- ಪ್ರಸನ್ನಾ ವಿ. ಚೆಕ್ಕೆಮನೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


