"ನಾನು ಕೆಳಗಿಳಿಯುವುದಿಲ್ಲ" ಎಂದು ಹಠ ಹಿಡಿದಿದ್ದ 'ಊಸರವಳ್ಳಿ' ಕೊನೆಗೂ ಕೆಳಗಿಳಿದು ಓಡಿ ಹೋಯಿತು...

Upayuktha
0

(ನೈಜ ಪ್ರಕರಣಕ್ಕೊಂದು ಲಘು ಬರಹ)




ಮೇಲುಕೊಪ್ಪದ ನಮ್ಮ ಪಕ್ಕದ ಮನೆಯಲ್ಲಿ (ನಮ್ಮ ಮನೆಯ ಪಶ್ಚಿಮ ಭಾಗದಲ್ಲಿನ) ಪುರಾತನ ತೆಂಗಿನ ಮರವೊಂದು ಇತ್ತು.  ಅದರ ಹಳೇ ಬೇರು ಗಟ್ಟಿ ಇದ್ದರೂ, ಹೊಸ ಚಿಗುರು ಬರಲಾಗದಂತೆ ಮರದ 'ತಲೆಗೆ ಯಾವುದೋ ಹುಳ ಹೊಕ್ಕಿ, ಕೊರೆದ ಪರಿಣಾಮ',  ಪಕ್ಕದ ಮನೆಯ 'ಜನರೆಲ್ಲ' ತೀರ್ಮಾನಿಸಿ ತೆಂಗಿನ ವೃಕ್ಷವನ್ನು ಬುಡ ಸಮೇತ ಕೀಳುವುದೆಂದು ನಿರ್ಧರಿಸಿದರು. ಒಂದು ಒಳ್ಳೆ ದಿನ ನೋಡಿ, ಮರದ ಬುಡಕ್ಕೆ ಗರಗಸ ಇಟ್ಟರು.


ಕಡಿದು ಉರುಳಿಸಿದ ತೆಂಗಿನ ಮರದಿಂದ ಒಂದಿಷ್ಟು 'ಭದ್ರವಾದ ಕುರ್ಚಿ' (ಸ್ಟೂಲ್)ಗಳನ್ನು ಮಾಡಲಾಯಿತು.


ನಮ್ಮ ಮನೆಗೂ ನಾಲ್ಕು ಕುರ್ಚಿಗಳನ್ನು ತಂದಿರಿಸಲಾಗಿದೆ.


*****


ಎಂದಿನಂತೆ ಬೆಳಗಿನ ದಿನ ಪತ್ರಿಕೆ, ಕನ್ನಡಕ, ಕಾಫಿ ಲೋಟ ಹಿಡಿದು, 'ಕುರ್ಚಿ ಬಿಡಲು ನಕಾರ' ಎಂಬ ದಪ್ಪಕ್ಷರದ ಶೀರ್ಷಿಕೆಯನ್ನೇ ನೋಡುತ್ತ (ಕನ್ನಡಕ ಇನ್ನೂ ಧರಿಸಿರಲಿಲ್ಲ. ದೂರದೃಷ್ಟಿದೋಷ!. ಪತ್ರಿಕೆಯ ಶೀರ್ಷಿಕೆ ಓದಲು ಕನ್ನಡಕ ಬೇಡ!!), ಕುಳಿತು ಓದಲು ಈ ತೆಂಗಿನ ಮರದ ಕುರ್ಚಿಯ ಬಳಿ ಹೋದರೆ...., ಸನಿಹದಲ್ಲೇ ರಂಗೋಲಿ ಹಾಕುತ್ತಿದ್ದ ಹೆಂಡತಿ ಕಿಟಾರನೆ ಕಿರುಚುತ್ತ "ಆ ಕುರ್ಚಿಯ ಮೇಲೆ ಕೂರಬೇಡಿ" ಅಂದಳು!!. "ಯಾಕೆ?" ಅನ್ನುತ್ತ ಮರದ ಕುರ್ಚಿಯ ಕಡೆ ತಿರುಗಿದರೆ.... ಒಂದು ಊಸರವಳ್ಳಿ ಕುರ್ಚಿಯ ಮೇಲೆ  ಲೋಕದ ಪರಿವೇ ಇಲ್ಲದೆ "ನಾನು ಕೆಳಗೆ ಇಳಿಯುವುದಿಲ್ಲ" ಎಂಬಂತೆ ಭದ್ರವಾಗಿ ಕುಳಿತಿದೆ!!


'ಕುರ್ಚಿ ಬಿಡಲು ನಕಾರ' ಎಂಬ ಶೀರ್ಷಿಕೆಯ ಪತ್ರಿಕೆಯನ್ನೂ, ಕಾಫಿ ಲೋಟವನ್ನೂ ಬದಿಗಿಟ್ಟು, ಒಳಗೆ ಹೋಗಿ ಮೊಬೈಲ್ ಕ್ಯಾಮರ ತಂದೆ. ಅಷ್ಟು ಹೊತ್ತಿಗೆ ರಂಗೋಲಿ ಡಬ್ಬಿ ಹಿಡಿದ ಹೆಂಡತಿ "ಹಾಂ, ಇವತ್ತು ಎಲ್ಲ ಗ್ರೂಪಲ್ಲೂ ಓತಿಕ್ಯಾತ ಹರಿದಾಡುತ್ತೆ!" ಅಂತ ಹೇಳಿ ಒಳಗೆ ಹೋದಳು.


ಇಷ್ಟೆಲ್ಲ ಆದರೂ... ಊಸರವಳ್ಳಿ ಕುರ್ಚಿಯ ಮೇಲೆ ಕುಳಿತೇ ಇತ್ತು.


****


ಒಂದು ಸ್ಮಾಲ್ ಇಂಟರ್‌ವ್ಯೂವ್ ಮಾಡೋಣ ಅಂತ, ಕ್ಯಾಮರ ಜೂಮ್ ಮಾಡಿ ಫೋಕಸ್ ಮಾಡಿ, ಒಂದೊಂದೇ ಪ್ರಶ್ನೆ ಕೇಳಿ, ಉತ್ತರ ಪಡೆಯಲಾಯ್ತು.


 


ಸಂದರ್ಶನದ ಆಯ್ದ ಭಾಗ:


"ಹೇಳಿ, ಇಲ್ಲಿ ಯಾಕೆ ಬಂದು ಕೂತಿದ್ದೀರಿ?"


"ನಾನು ಕಳೆದ 15 ವರ್ಷಗಳಿಂದ ಇದೇ ತೆಂಗಿನ ಮರದಲ್ಲಿ ವಾಸವಾಗಿದ್ದೆ. ಈಗ ಬೇರು ಸಮೇತ ಮರ ಕಡಿದರೆ ನಾನು ಏನು ಮಾಡುವುದು? ನನಗೆ ಮೋಸ ಆಗಿದೆ" ಊಸರವಳ್ಳಿ ಉಸುರಿತು.


"ಮರ ಕಡಿಯುವ ಅನಿವಾರ್ಯ ಪರಿಸ್ಥಿತಿ ಬಂದಿದ್ದರಿಂದ ಮರ ಕಡಿಯಲಾಗಿದೆ. ಮರ ಕಡಿಯದೇ ಹೋಗಿದ್ದರೆ... ಭವಿಷ್ಯದ ಗಾಳಿ, ಮಳೆಗೆ ಪ್ರಕ್ಷುಬ್ದ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇತ್ತು."


"ಏನು ಅಂತಹ ಪ್ರಕ್ಷುಬ್ದ ಪರಿಸ್ಥಿತಿ?" (ಸಂದರ್ಶನ ಮಾಡುವವನಿಗೇ ಪ್ರಶ್ನೆ!!!)


"ಮರದ ತಲೆ ಭಾಗದಲ್ಲಿ ಯಾವುದೂ ದುಷ್ಟ ನುಸುಳುಕೋರ ಕೀಟಗಳು ಒಳ ನುಸುಳಿ, ಹೊಸ ಸುಳಿ ಬೆಳೆಯದಂತೆ ಮರದ ತಲೆಯೇ ಶಿಥಿಲಗೊಳ್ಳುವಂತೆ ಆಗಿತ್ತಲ್ಲ!!?"


"ಅದೆಲ್ಲ ಸುಳ್ಳು, ನಾನು ದಶಕಗಳಿಂದ ಆ ಮರದ ಮನೆಯಲ್ಲೇ ಇದ್ದೆನಲ್ಲ. ಯಾವ ಕೀಟಗಳೂ 'ನುಸುಳಿರಲಿಲ್ಲ'. ಅದೆಲ್ಲ ಸುಳ್ಳು, ಕಟ್ಟು ಕತೆ"


"ಇಲ್ಲ ಊಸರವಳ್ಳಿ, ತಜ್ಞ ಮರ ಪರಿಶೋಧಕ ಕಾರ್ಮಿಕರು, ಮರ ಹತ್ತಿ ವಿಶೇಷ ತೀವ್ರ ಪರಿಷ್ಕರಣೆ ಮಾಡಿ, "ಅಯ್ಯ, ಇದು ಮರ ಹೋಗಿದೆ. ಕೀಟಗಳು ಮರವನ್ನು ಧ್ವಂಸ ಮಾಡುತ್ತಿವೆ. ಇದನ್ನು ಕಡಿದಿಲ್ಲ ಅಂದ್ರೆ, ಮುಂದಿನ ಮಳೆಗಾಲಕ್ಕೆ ನಿಮ್ಮ ಮನೆಗೂ, ಪಕ್ಕದ ಮನೆಗೂ ಅಪಾಯ ಇದೆ. ಕಡಿಯುವುದು ಒಳ್ಳೆಯದು" ಅಂತ ಹೇಳಿದ ಮೇಲೆ ಮರ ಕಡಿದಿದ್ದು. ಸರಿ, ಈ ಕುರ್ಚಿಯ ಮೇಲೇ ಕೂತಿರು"  ಅಂತ ಹೇಳಿ, ಪೇಪರ್ ಓದಲು ಮತ್ತೊಂದು ಕುರ್ಚಿ ಆಯ್ದುಕೊಂಡರೆ... ಅಲ್ಲಿಯವರೆಗೆ ಕುಳಿತು ಪಿಳ ಪಿಳ ಕಣ್ಣು ಬಿಡುತ್ತಿದ್ದ ಊಸರವಳ್ಳಿ ಕುರ್ಚಿಯಿಂದ ಹಾರಿ ತೋಟದ ಕಡೆಗೆ ಹೋಯ್ತು. 


ನಾನು ಕೆಳಗಿಳಿಯುವುದಿಲ್ಲ" ಎಂದು ಹಠ ಹಿಡಿದಿದ್ದ 'ಊಸರವಳ್ಳಿ' ಕೊನೆಗೂ ಕೆಳಗಿಳಿದು ಓಡಿ ಹೋಯಿತು.


ಕ್ಯಾಮರದಲ್ಲಿ ದೃಶ್ಯ ಸಿಕ್ಕಿ ಬಿತ್ತು!!!


******


ಊಸರವಳ್ಳಿ (Chameleon): ಪರಿಸರಕ್ಕೆ ತಕ್ಕಂತೆ ತನ್ನ ಮೈಬಣ್ಣವನ್ನು ಬದಲಿಸಿಕೊಳ್ಳುವ ವಿಶಿಷ್ಟ ಹಲ್ಲಿ ಜಾತಿಗೆ ಸೇರಿದ ಪ್ರಾಣಿ. ಇವು ಮುಖ್ಯವಾಗಿ ಶತ್ರುಗಳಿಂದ ರಕ್ಷಿಸಿಕೊಳ್ಳಲು, ತಾಪಮಾನ ನಿಯಂತ್ರಿಸಲು ಮತ್ತು ಮನಸ್ಥಿತಿಯನ್ನು (ಕೋಪ/ಭಯ) ಪ್ರದರ್ಶಿಸಲು ಬಣ್ಣ ಬದಲಿಸುತ್ತವೆ. ದೀರ್ಘವಾದ ನಾಲಿಗೆ (ಇವುಗಳ ನಾಲಿಗೆ ಮೈಯ ಉದ್ದಕ್ಕಿಂತ ಹೆಚ್ಚಿರುತ್ತದೆ!) ಸ್ವತಂತ್ರವಾಗಿ ಚಲಿಸುವ ಕಣ್ಣುಗಳು ಇವುಗಳ ವಿಶೇಷತೆ. (ಗೂಗಲ್ ಮಾಹಿತಿ)


*****


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top