ನುಡಿ ತೋರಣ ಸಮಾರೋಪ ಸಮಾರಂಭ: ಸಾಹಿತ್ಯ, ಪರಿಸರ ಮತ್ತು ಗ್ರಾಮೀಣ ಬದುಕಿನ ಮಹತ್ವಕ್ಕೆ ಒತ್ತು

Upayuktha
0


ಉಡುಪಿ: ನುಡಿ ತೋರಣ ಬಳಗದ ಸಮಾರೋಪ ಸಮಾರಂಭವು ವಿಜಯಲಕ್ಷ್ಮಿ ಮತ್ತು ತಂಡದವರ ಆಶಯಗೀತೆಯೊಂದಿಗೆ ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ತ ನಾ ಶಿವಕುಮಾರ ಅವರ ವಿಶೇಷ ಉಪಸ್ಥಿತಿಯೊಂದಿಗೆ ನರೇಂದ್ರ ರೈ ದೇರ್ಲ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರಾದ ವೇಣುಗೋಪಾಲ್ (ಚಿನ್ನು ಪ್ರಿಯ), ಕ್ಷಮಾ ರಘುರಾಮ್, ನುಡಿ ತೋರಣದ ಹಿತೈಷಿ ರಘುರಾಮ್ ಉಪಾಧ್ಯಾಯ ಹಾಗೂ ಜಯಂತಿ ಎಂಕೆ ಉಪಸ್ಥಿತರಿದ್ದರು. ಶ್ರೀಮತಿ ವೀಣಾ ಸ್ವಾಗತಿಸಿ ಪರಿಚಯಿಸಿದರು.


ಕಾರ್ಯಕ್ರಮದಲ್ಲಿ ಅಂಕಣಕಾರರು ಹಾಗೂ ವಾರ್ಷಿಕೋತ್ಸವ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರನ್ನು ಸನ್ಮಾನಿಸಲಾಯಿತು. ಸ್ಪರ್ಧೆಗಳ ಆಯೋಜನೆ ಮತ್ತು ತೀರ್ಪುಗಾರರಾಗಿ ಸಹಕರಿಸಿದವರಿಗೆ ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಲಾಯಿತು.


ಅತಿಥಿಗಳು ಮಾತನಾಡಿ, ನುಡಿ ತೋರಣ ಕಾರ್ಯಕ್ರಮವು ಕುಟುಂಬದ ಸಮಾಗಮದಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಾಹಿತ್ಯವು ಉತ್ತಮ ಚಿಂತನೆಗೆ ದಾರಿ ತೋರಿಸುವ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಬರಹಗಾರನಿಗೆ ಸೂಕ್ಷ್ಮ ಅವಲೋಕನಶಕ್ತಿ ಅತ್ಯಗತ್ಯ ಎಂದರು. ಸಾಹಿತಿ ಕಾರಂತರ ಸಾಹಸಪ್ರವೃತ್ತಿಯನ್ನು ಉಲ್ಲೇಖಿಸಿ, ಸೃಜನಶೀಲತೆಗೆ ಹೊಸ ಅನುಭವಗಳು ಪ್ರೇರಣೆಯಾಗುತ್ತವೆ ಎಂದು ಹೇಳಿದರು.


ಕೊರೊನಾ ಬಳಿಕ ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆ ಉಂಟಾಗಿದ್ದು, ಮೊಬೈಲ್ ಪ್ರಭಾವದ ನಡುವೆ ಸಾಹಿತ್ಯವು ಮನುಷ್ಯರನ್ನು ಉತ್ತಮ ಚಿಂತನೆಯತ್ತ ಕೊಂಡೊಯ್ಯಬಲ್ಲ ಮಾಧ್ಯಮವಾಗಿದೆ ಎಂದು ಅಭಿಪ್ರಾಯಪಟ್ಟರು. ಗ್ರಾಮೀಣ ಪ್ರದೇಶಗಳೇ ಕಥೆಗಳ ಹುಟ್ಟೂರಾಗಿದ್ದು, ಸಾಹಿತ್ಯವು ಮತ್ತೆ ನಿಸರ್ಗ ಮತ್ತು ಪರಿಸರದತ್ತ ಮುಖ ಮಾಡಬೇಕಾಗಿದೆ ಎಂದು ಕರೆ ನೀಡಿದರು. ಮುಂದಿನ ದಿನಗಳಲ್ಲಿ ನುಡಿ ತೋರಣದ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸಬೇಕೆಂಬ ಸಲಹೆಯನ್ನೂ ನೀಡಿದರು.


ಹಿರಿಯ ಸಾಹಿತಿ ತ ನಾ ಶಿವಕುಮಾರ ಮಾತನಾಡಿ, ಅನುಭವ ಮತ್ತು ಅನುಭಾವಗಳ ಮಹತ್ವವನ್ನು ವಿವರಿಸಿದರು. “ಅನುಭೂತಿ ಇದ್ದಾಗಲೇ ಒಬ್ಬನು ನಿಜವಾದ ಸಾಹಿತಿಯಾಗುತ್ತಾನೆ” ಎಂದು ಹೇಳಿದ ಅವರು, ರಾಮಾಯಣದ ಉದಾಹರಣೆಯ ಮೂಲಕ ಮಾತೃ ಹೃದಯದ ಸೂಕ್ಷ್ಮತೆಯನ್ನು ವಿವರಿಸಿದರು. ನುಡಿ ತೋರಣ ಬಳಗದ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು.


ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ ಕ್ಷಮಾ ರಘುರಾಮ್ ದಂಪತಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top