ಉಡುಪಿ: ನುಡಿ ತೋರಣ ಸಮಾವೇಶದ ಭಾಗವಾಗಿ ಸಾಹಿತಿ ಸಂತೋಷ್ ಕುಮಾರ ಮೆಹಂದಳೆ ಅವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಾಹಿತ್ಯ, ಸೃಜನಶೀಲತೆ, ಐತಿಹಾಸಿಕ ಕಾದಂಬರಿಗಳು ಹಾಗೂ ಎಐ ತಂತ್ರಜ್ಞಾನದ ಕುರಿತು ಚರ್ಚೆ ನಡೆಯಿತು. ಕಾರ್ಯಕ್ರಮವನ್ನು ಶ್ರೀಶ ಹುಟಗಿ, ಲಕ್ಷ್ಮಣ ಬಡಿಗೇರ್, ಪವಿತ್ರ ಮೃತ್ಯುಂಜಯ ಸ್ವಾಮಿ ಹಾಗೂ ಕಿರಣ ಹಿರಿಸಾವೆ ನಡೆಸಿಕೊಟ್ಟರು.
ಈ ವೇಳೆ ಮಾತನಾಡಿದ ಸಂತೋಷ್ ಕುಮಾರ ಮೆಹಂದಳೆಯವರು, ಸಾಹಿತ್ಯ ರಚನೆಗೆ ಆಸಕ್ತಿ ಮತ್ತು ಬದ್ಧತೆ ಅಗತ್ಯ ಎಂದು ಹೇಳಿದರು. “ಐತಿಹಾಸಿಕ ಕೃತಿಗಳನ್ನು ಬರೆಯುವಾಗ ಸತ್ಯವನ್ನು ಬಿಟ್ಟು ಬರೆಯಲು ಸಾಧ್ಯವಿಲ್ಲ. ಅಂತಹ ಬರವಣಿಗೆಯಲ್ಲಿ ‘ಪೊಯೆಟಿಕ್ ಲಿಬರ್ಟಿ’ಗೆ ಅವಕಾಶ ಕಡಿಮೆ. ನಿರೂಪಣಾ ಶೈಲಿಯೇ ಮುಖ್ಯವಾಗುತ್ತದೆ” ಎಂದರು.
ತಾವು ಇದುವರೆಗೆ ಸುಮಾರು 30 ಪುಸ್ತಕಗಳು ಹಾಗೂ 10 ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವುದಾಗಿ ತಿಳಿಸಿದ ಅವರು, 17ನೇ ವಯಸ್ಸಿನಿಂದಲೇ ಬರವಣಿಗೆಯಲ್ಲಿ ತೊಡಗಿರುವುದಾಗಿ ಹೇಳಿದರು. ರಾಮಾಯಣ ಮತ್ತು ಮಹಾಭಾರತದಂತಹ ಕೃತಿಗಳು ಕಾಲಾತೀತ ಸಾಹಿತ್ಯವಾಗಿದ್ದು, ಸಮಾಜಕ್ಕೆ ಉಪಯೋಗವಾಗುವ ಬರಹಗಳನ್ನು ಲೇಖಕರು ಬರೆಯಬೇಕು ಎಂದು ಅಭಿಪ್ರಾಯಪಟ್ಟರು.
ಮಹಿಳಾ ಪಾತ್ರಗಳನ್ನು ಪರಿಣಾಮಕಾರಿಯಾಗಿ ಹೇಗೆ ಚಿತ್ರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಮಾನವೀಯ ಭಾವನೆಗಳಲ್ಲಿ ದೊಡ್ಡ ವ್ಯತ್ಯಾಸ ಇರುವುದಿಲ್ಲ. ಕೌನ್ಸಿಲಿಂಗ್ ಅನುಭವ ಹಾಗೂ ಮನೋಭಾವಗಳ ಅಧ್ಯಯನದಿಂದ ಮಹಿಳಾ ಪಾತ್ರಗಳ ಒಳಮನಸ್ಸನ್ನು ಅರ್ಥೈಸಿ ಬರೆಯಲು ಸಾಧ್ಯವಾಗಿದೆ” ಎಂದರು.
ಎಐ ತಂತ್ರಜ್ಞಾನ ಕುರಿತು ಮಾತನಾಡಿದ ಅವರು, “ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಲೇಖನಗಳನ್ನು ಬರೆಯಬಹುದು. ಆದರೆ ಕಥೆ, ಭಾವನೆ ಹಾಗೂ ಸೃಜನಶೀಲತೆಯನ್ನು ಸಂಪೂರ್ಣವಾಗಿ ಸೃಷ್ಟಿಸಲು ಸಾಧ್ಯವಿಲ್ಲ” ಎಂದು ಹೇಳಿದರು. ಇದೇ ವೇಳೆ ಕಿರಣ ಹಿರಿಸಾವೆ, “ಎಐ ಭಾವನೆಗಳ ಅಧ್ಯಯನವನ್ನೂ ಮಾಡುತ್ತಿದೆ” ಎಂದು ಅಭಿಪ್ರಾಯಪಟ್ಟರು. ಲಕ್ಷ್ಮಣ ಬಡಿಗೇರ್ “ಅಕ್ಷರ ಸೃಜನಶೀಲತೆಯನ್ನು ಸಂಪೂರ್ಣವಾಗಿ ಎಐ ಮೂಲಕ ಸಾಧ್ಯವಾಗುವುದಿಲ್ಲ” ಎಂದರು.
ಐತಿಹಾಸಿಕ ಕಾದಂಬರಿಗಳ ರಚನೆ ಕುರಿತು ಮಾತನಾಡಿದ ಮೆಹಂದಳೆಯವರು, “ಇಂತಹ ಕೃತಿಗಳಿಗೆ ವ್ಯಾಪಕ ಅಧ್ಯಯನ ಅಗತ್ಯ. ಶಾಸನಗಳು, ಪುರಾಣಗಳು ಹಾಗೂ ಸಮಕಾಲೀನ ಸಾಹಿತ್ಯಗಳ ಅಧ್ಯಯನವೂ ಮುಖ್ಯ. ಇಂತಹ ಆಳವಾದ ಅಧ್ಯಯನವನ್ನು ಎಐ ಇನ್ನೂ ಸಂಪೂರ್ಣವಾಗಿ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತು ಪ್ರತಿಕ್ರಿಯಿಸಿದ ಅವರು, “ಓದುಗರೊಂದಿಗೆ ಸಂಪರ್ಕದಲ್ಲಿರಲು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತೇನೆ. ಇಂದಿನ ಸಾಹಿತ್ಯ ವಲಯದಲ್ಲಿ ಗುಂಪುಗಾರಿಕೆ ಮತ್ತು ಹೊಂದಾಣಿಕೆಯ ಪರಿಸ್ಥಿತಿಯೂ ಇದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ರಾಪಿಡ್ ಫೈರ್ ವಿಭಾಗದಲ್ಲಿ ತಮ್ಮ ಮೆಚ್ಚಿನ ನಟ ಡಾ. ರಾಜ್‌ಕುಮಾರ್ ಎಂದು ತಿಳಿಸಿದ ಅವರು, ಮಹಾಭಾರತದ ಮೆಚ್ಚಿನ ಮಹಿಳಾ ಪಾತ್ರ ಭಾನುಮತಿ ಎಂದು ಹೇಳಿದರು. ದ.ರಾ. ಬೇಂದ್ರೆ ಅವರನ್ನು ಅದ್ಭುತ ಬರಹಗಾರ ಎಂದು ಕೊಂಡಾಡಿದರು.
ಸುಮಾರು ಎರಡು ಗಂಟೆಗಳ ಕಾಲ ನಡೆದ ಸಂವಾದದಲ್ಲಿ ಸಾಹಿತ್ಯ, ಇತಿಹಾಸ, ಸೃಜನಶೀಲತೆ ಮತ್ತು ತಂತ್ರಜ್ಞಾನ ಕುರಿತ ಹಲವು ವಿಚಾರಗಳು ಚರ್ಚೆಗೆ ಬಂದವು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


