ಗೋಕರ್ಣ: ಶ್ರೀಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಮೌಲ್ಯಮಾಪನ ವರ್ಷ 2016-17 ಸಾಲಿಗೆ ರೂ.13 ಲಕ್ಷ ಮತ್ತು 2019-20 ನೆಯ ಸಾಲಿಗೆ ರೂ.90 ಲಕ್ಷ ತೆರಿಗೆ ಬಾಕಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯು ಆದೇಶಿಸಿತ್ತು. ಈ ಆದೇಶದ ವಿರುದ್ಧವಾಗಿ ಮೇಲ್ಮನವಿ ಮಾಡಲಾಗಿ; ಇದೀಗ ಮೇಲ್ಮನವಿಯ ಆದೇಶ ಬಂದಿದ್ದು, ದೇವಾಲಯಕ್ಕೆ ಜಯ ಲಭಿಸಿದೆ ಹಾಗೂ ಆ ಮೂಲಕ ತೆರಿಗೆ ಬಾಕಿ ಶೂನ್ಯ ಎಂಬುದನ್ನು ಆದಾಯ ತೆರಿಗೆ ಇಲಾಖೆಯ ಮೇಲ್ಮನವಿ ಆಯುಕ್ತರು ತಮ್ಮ ಆದೇಶದಲ್ಲಿ ದೃಢೀಕರಿಸಿದ್ದಾರೆ.
ಇದಕ್ಕೂ ಮುನ್ನ 2015-16 ನೆಯ ವರ್ಷದ ಪ್ರಕರಣದಲ್ಲಿಯೂ ರೂ.1.42 ಕೋಟಿ ತೆರಿಗೆ ಬಾಕಿ ಪ್ರಕರಣದಲ್ಲೂ ದೇವಸ್ಥಾನದ ಆಡಳಿತಕ್ಕೆ ಜಯ ಲಭಿಸಿದ್ದನ್ನು ಸ್ಮರಿಸಬಹುದಾಗಿದ್ದು, ಇದೀಗ ದೇವಾಲಯದ ಆಡಳಿತದ ವಿರುದ್ಧದ ಎಲ್ಲಾ ಆದಾಯ ತೆರಿಗೆ ಪ್ರಕರಣಗಳೂ ಮುಕ್ತಾಯಗೊಂಡಿವೆ.
ಶ್ರೀರಾಮಚಂದ್ರಾಪುರ ಮಠವು ಕರ್ನಾಟಕ ಘನ ಸರ್ಕಾರದ ಆದೇಶದನ್ವಯ 2008 ರಿಂದ ಶ್ರೀಮಹಾಬಲೇಶ್ವರ ದೇವಾಲಯದ ಆಡಳಿತವನ್ನು ಪುನಃವಹಿಸಿಕೊಂಡಿತ್ತು ಹಾಗೂ ಸರ್ವೋಚ್ಚ ನ್ಯಾಯಾಲಯದ ಮಧ್ಯಂತರ ತೀರ್ಪಿನ ಅನ್ವಯ 08.05.2021 ರಂದು ಮೇಲುಸ್ತುವಾರಿ ಸಮಿತಿಗೆ ಶ್ರೀಮಠದಿಂದ ಆಡಳಿತವು ಹಸ್ತಾಂತರಿಸಲ್ಪಟ್ಟಿದೆ.
ಶ್ರೀರಾಮಚಂದ್ರಾಪುರ ಮಠವು ಸುಮಾರು 13 ವರ್ಷಗಳ ಕಾಲ ಶ್ರೀಸಂಸ್ಥಾನ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ನಿರ್ವಹಿಸಿದ್ದು, ಪ್ರತಿ ವರ್ಷ ಲೆಕ್ಕಪರಿಶೋಧನೆಯನ್ನು ನಡೆಸಿ; ಸುವ್ಯವಸ್ಥಿತವಾಗಿ ಲೆಕ್ಕಪತ್ರಗಳನ್ನು ನಿರ್ವಹಿಸಿ- ಸುಭದ್ರವಾಗಿ ದಾಖಲೀಕರಣ ಮಾಡಿದೆ. ದೇವಾಲಯದಲ್ಲಿ ಶ್ರೀಮಠದ ಸುವ್ಯವಸ್ಥಿತ- ಸುಭದ್ರ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ಅಂತಾರಾಷ್ಟ್ರೀಯವಾದ ISO ಪ್ರಮಾಣಪತ್ರವೂ ಲಭಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಶ್ರೀಮಠದ ಆಡಳಿತದ ಅವಧಿಯಲ್ಲಿ ದೇವಹಿತ~ ಭಕ್ತಹಿತ~ ಸೇವಕಹಿತ ಎಂಬ ಮೂರು ಅಂಶಗಳನ್ನು ಪ್ರಧಾನವಾಗಿ ಇರಿಸಿಕೊಂಡು ಸಂಸ್ಥಾನ ಶ್ರೀಮಹಾಬಲೇಶ್ವರ ದೇವಾಲಯದ ಆಡಳಿತವನ್ನು ಸುವ್ಯವಸ್ಥಿತ ಹಾಗೂ ಪಾರದರ್ಶಕಗೊಳಿಸಲಾಗಿತ್ತು.
Question is not of mis appropriation. but it is a matter of taxability ಎಂದು ತೆರಿಗೆ ಇಲಾಖೆಯೇ ಹೇಳಿರುವಂತೆ, ಇಲಾಖೆಯು ನೀಡಿದ್ದ ನೋಟೀಸ್ ತೆರಿಗೆ ಸಾಧ್ಯತೆಯನ್ನು ನಿರ್ಧರಿಸುವ ಸಲುವಾಗಿತ್ತೇ ವಿನಃ ಇದು ಅಲ್ಲಿ ಯಾವುದೇ ಅವ್ಯವಹಾರ ನಡೆದಿತ್ತು ಎಂಬುದನ್ನು ಸೂಚಿಸುವುದಿಲ್ಲ. ಇದೀಗ ಆದಾಯ ತೆರಿಗೆ ಇಲಾಖೆಯ ನೋಟೀಸ್ ವಿರುದ್ಧ ದಾಖಲಿಸಲಾಗಿದ್ದ ಮೇಲ್ಮನವಿಯ ತೀರ್ಪು ಪ್ರಕಟವಾಗಿದ್ದು; ಮಹಾಬಲೇಶ್ವರ ದೇವಾಲಯವು ಯಾವುದೇ ತೆರಿಗೆ ಬಾಕಿ ಹೊಂದಿರುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆಯೇ ದೃಢೀಕರಿಸಿ ಆದೇಶಿಸಿದೆ. ಕುಮಟಾದ ಎ.ಎನ್.ಕೆ.ಎಚ್ & ಅಸೋಸಿಯೇಟ್ಸ್'ನ ಸಿಎ. ವಿನಾಯಕ ಹೆಗಡೆಯುವರು ಈ ಮೇಲ್ಮನವಿಗೆ ಅಗತ್ಯವಾದ ಎಲ್ಲಾ ದಾಖಲಾತಿಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದೀಗ ಮೇಲ್ಮನವಿ ಆದೇಶದನ್ವಯ ತೆರಿಗೆ ಬಾಕಿ ಶೂನ್ಯವಾಗಿರುವುದು ಭಕ್ತಾದಿಗಳ ಗೊಂದಲಗಳನ್ನು ನಿವಾರಿಸಿದ್ದು ಮಾತ್ರವಲ್ಲದೇ, ದೇಗುಲದ ಇಂದಿನ ಆಡಳಿತ ಮಂಡಳಿಯ ಸ್ಪಷ್ಟೀಕರಣವನ್ನು ಆದಾಯ ತೆರಿಗೆ ಇಲಾಖೆ ಮಾನ್ಯ ಮಾಡಿರುವುದು ಅಂದಿನ ಶ್ರೀರಾಮಚಂದ್ರಾಪುರಮಠದ ಮಾದರಿ ಆಡಳಿತ ವ್ಯವಸ್ಥೆಗೆ ಸಂದ ಜಯವಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


