ಶಿಸ್ತು, ಸಮಯ ಪಾಲನೆಯಿಂದ ಜೀವನದಲ್ಲಿ ಯಶಸ್ಸು: ಶಸ್ತ್ರ ಚಿಕಿತ್ಸಕ ಡಾ. ಕಿಶನ್ ಕುಮಾರ್ ಬಾಳಿಲ

Upayuktha
0

 ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಥಮ ಪಿಯು ತರಗತಿಗಳ ಉದ್ಘಾಟನೆ


ಪುತ್ತೂರು: ಪದವಿಪೂರ್ವ ಹಂತ ಜೀವನವನ್ನು ರೂಪಿಸುವ ಪ್ರಮುಖ ಘಟ್ಟವಾಗಿದ್ದು, ನಿರಂತರ ಓದು ಪರಿಶ್ರಮ ಅಗತ್ಯ. ಈ ಸಂದರ್ಭದಲ್ಲಿ ಕೆಲವು ವಯಕ್ತಿಕ ಜೀವನದ ಆಕಾಂಕ್ಷೆಗಳನ್ನು ತ್ಯಾಗ ಮಾಡಬೇಕಾಗಿರುವುದು ಅನಿವಾರ್ಯ. ವಿದ್ಯಾರ್ಥಿಗಳು ಪರಿಶ್ರಮ, ಆತ್ಮವಿಶ್ವಾಸ, ನಂಬಿಕೆ, ಸಮಯಪಾಲನೆ, ಶಿಸ್ತು ರೂಪಿಸಿಕೊಂಡಾಗ ವಾರ್ಷಿಕ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ಯಶಸ್ಸು ಪಡೆಯಲು ಸಾಧ್ಯ ಎಂದು ಮಂಗಳೂರಿನ ಖ್ಯಾತ ಶಸ್ತ್ರಚಿಕಿತ್ಸಕ ಡಾ. ಕಿಶನ್ ಕುಮಾರ್ ಬಾಳಿಲ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥಗಳ ಆವರಣದಲ್ಲಿರುವ ಶ್ರೀಶಂಕರ ಸಭಾಭವನದಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿಭಾಗದ ಪ್ರಥಮ ವರ್ಷದ ಪದವಿಪೂರ್ವ ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.  


ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಅಂಕ ಗಳಿಸುವುದು ಸವಾಲಿನ ಕೆಲಸವಾದರೂ ಕಷ್ಟವಲ್ಲ. ಜೀವನದಲ್ಲಿ ಸಾಧಿಸಬೇಕಾದ ದೊಡ್ಡ ಗುರಿಯನ್ನು ಇಟ್ಟುಕೊಂಡು ಅದಕ್ಕೆ ಬೇಕಾದ ಪೂರಕ ತಯಾರಿಗಳನ್ನು ನಡೆಸುವುದು ಅಗತ್ಯ. ಸೋಲು ಅಥವಾ ಸವಾಲು ಎದುರಾದಾಗ ಎಲ್ಲವನ್ನೂ ಎದುರಿಸಿಕೊಂಡು ಮುನ್ನಡೆಯುವ ಅಗತ್ಯತೆಯಿದೆ. ಜವಾಬ್ದಾರಿ ವಹಿಸಿಕೊಂಡು, ಉತ್ತಮ ಅಧ್ಯಯನ ನಡೆಸಿ ಹೆಚ್ಚು ಅಂಕ ಗಳಿಸಿದದಾಗ ಮೆರಿಟ್ ಸೀಟಿನಂತಹಾ ಲಭ್ಯತೆಯಿಂದ ತಂದೆ- ತಾಯಿಯರ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು ಎಂದರು. 


ಪೂರ್ವ ತಯಾರಿ ಅಗತ್ಯ: 

ದೊಡ್ಡ ಗುರಿಯನ್ನು ಸಾಧಿಸಲು ಪರಿಣಾಮಕಾರಿ ಅಧ್ಯಯನ ವಿಧಾನ ಅಳವಡಿಕೆ ಅವಶ್ಯಕ. ಭಾನುವಾರವೂ ಸೇರಿದಂತೆ ನಿತ್ಯದ ಟೈಂ ಟೇಬಲ್ ರಚಿಸಿಕೊಂಡು, ಪಾಠಗಳನ್ನು ಪುನರ್ಮನನ ಮಾಡಿಕೊಳ್ಳುವುದು ಅಗತ್ಯ. ಇದು ವಿದ್ಯಾರ್ಥಿಗಳ ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ನಡೆದ ದಿನನಿತ್ಯದ ಪಾಠಗಳನ್ನು ಅಂದೇ ಓದಿಕೊಂಡು, ಮರುದಿನ ನಡೆಯುವ ತರಗತಿಗಳ ಕುರಿತು ಅರಿತು ತರಗತಿಗೆ ಸಿದ್ಧವಾಗಿ ಬಂದಾಗ ವಿಷಯದ ಗ್ರಹಿಕೆ, ಕಲಿಕೆ ಮತ್ತು ಸ್ಮರಣೆ ಸುಲಭವಾಗುತ್ತದೆ ಎಂದು ತಿಳಿಸಿದರು.


ಕಲಿಕೆಗೆ ಮನೆಯ ವಾತಾವರಣವೂ ಪೂರಕ: 

ವಿದ್ಯಾರ್ಥಿಗಳಿಗೆ ಪದವಿಪೂರ್ವದ ಎರಡು ವರ್ಷಗಳು ಅತೀ ಅಮೂಲ್ಯವಾಗಿದ್ದು, ನಿಮಿಷಗಳೂ ಗಣನೆಗೆ ಬರುತ್ತವೆ. ವಿದ್ಯಾರ್ಥಿಗಳ ಓದುವಿಕೆಯಲ್ಲಿ ಪೋಷಕರ ಪಾತ್ರವೂ ಅಗತ್ಯ, ಮನೆಯಲ್ಲಿ ಓದುವಿಕೆಗೆ ಪೂರಕವಾದ ವಾತಾವರಣ ರೂಪಿಸಬೇಕು. ಮುಖ್ಯವಾಗಿ ಮಕ್ಕಳು ಟಿ.ವಿ., ಮೊಬೈಲ್ ನಂತಹಾ ಆಕರ್ಷಣೆಗೆ ಒಳಗಾಗದಂತೆ ನೋಡಿಕೊಳ್ಳಲು ಪೋಷಕರೂ ತ್ಯಾಗ ಮಾಡುವುದು ಅನಿವಾರ್ಯ. ಹೀಗಾದಲ್ಲಿ ಮಾತ್ರ ಮಕ್ಕಳು ಉತ್ತಮ ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಅಂಕ ಪಡೆಯುತ್ತಾರೆ ಎಂದರು. 


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುತ್ತೂರಿನ ಖ್ಯಾತ ವೈದ್ಯ ಡಾ. ಸುರೇಶ್ ಪುತ್ತೂರಾಯ, ಪದವಿಪೂರ್ವ ಹಂತದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಕುರಿತು ಹೆಚ್ಚಿನ ಆಸಕ್ತಿ ವಹಿಸಿದಾಗ ತಮ್ಮ ಜೀವನದ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಅಂಬಿಕಾ ಸಂಸ್ಥೆ ಶಿಕ್ಷಣದ ಜೊತೆ ದೇಶಭಕ್ತಿಯನ್ನು ಹಾಗೂ ಧರ್ಮ ಜಾಗೃತಿಯನ್ನು ಮೂಡಿಸುವ ಕೇಂದ್ರವಾಗಿದ್ದು, ದೇಶದ ಪ್ರಜ್ಞಾವಂತ ನಾಗರೀಕರನ್ನು ರೂಪಿಸುತ್ತಿದೆ ಎಂದು ಶುಭಹಾರೈಸಿದರು. 


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳನ್ನು ದೇಶದ ಸಂಪನ್ಮೂಲಗಳನ್ನಾಗಿ ಪರಿವರ್ತಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ, ಅಂಬಿಕಾ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಯೋಗ ಶಿಕ್ಷಣ, ಧಾರ್ಮಿಕ ಪ್ರಜ್ಞೆಯ ಅರಿವು, ದೇಶ ಭಕ್ತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಬೆಳೆಸಲಾಗುತ್ತದೆ. ಶಿಸ್ತು, ಸಮಯ ಪಾಲನೆ, ಉತ್ತಮ ಶಿಕ್ಷಣ ಯಶಸ್ಸಿನ ಅಂಬಿಕಾದ ಭಾಗವಾಗಿದ್ದು, ಅತ್ಯುತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳನ್ನು ಪ್ರತಿ ವರ್ಷ ರೂಪಿಸಲಾಗುತ್ತಿದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಪೋಷಕರು ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರ ಜೊತೆ ಸಂಪರ್ಕದಲ್ಲಿದ್ದು, ತಮ್ಮ ಮಕ್ಕಳ ಮಾಹಿತಿ ಪಡೆಯುತ್ತಿರಬೇಕು ಎಂದರು. 


ದ್ವಿತೀಯ ಪದವಿಪೂರ್ವ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಖಜಾಂಚಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಕೆ. ಸುರೇಶ್ ಶೆಟ್ಟಿ, ಡಾ. ಎಚ್. ಮಾಧವ ಭಟ್ ಉಪಸ್ಥಿತರಿದ್ದರು. 


ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿನಿ ಆವನಿ ನಾಯಕ್ ಪ್ರಾರ್ಥಿಸಿದರು. 


ಐಎಎಸ್‍ಗೆ ತಯಾರಿ ನಡೆಸಿ ಸರ್ಜನ್!

ತಂದೆ- ತಾಯಿಗಳಿಗೆ ಗೌರವ ನೀಡುವ ಕುರಿತು ಮಾತನಾಡಿದ ಡಾ. ಕಿಶನ್ ವೈದ್ಯಕೀಯ ತರಬೇತಿ ಪಡೆಯುವ ಹಂತದಲ್ಲಿ ತನಗೆ ಸಮಾಜದಲ್ಲಿ ಪರಿವರ್ತನೆ ತರುವ ಉದ್ದೇಶದಿಂದ ಐಎಎಸ್ ಪರೀಕ್ಷೆಗೆ ಪೂರ್ಣ ಪ್ರಮಾಣದ ತಯಾರಿ ನಡೆಸಿದ್ದೆ. ಆದರೆ ತಂದೆ- ತಾಯಿ ತಾನೊಬ್ಬ ಉತ್ತಮ ಸರ್ಜನ್ ಆಗಬೇಕೆಂದು ಕನಸು ಕಂಡಿದ್ದರು, ಅವರ ಮಾತನ್ನು ಮೀರುವುದು ನನಗೆ ಇಷ್ಟವಿರಲಿಲ್ಲ. ಆದ್ದರಿಂದ ಕೇವಲ 3 ತಿಂಗಳ ಸೀಮಿತ ಅವಧಿಯಲ್ಲಿ ವೈದ್ಯಕೀಯ ಪರೀಕ್ಷೆಗೆ ತಯಾರಿ ನಡೆಸಿ ಶಸ್ತ್ರಚಿಕಿತ್ಸಕ ತರಬೇತಿಗೆ ಸೇರಿದೆ. ವಿದ್ಯೆಯ ಜೊತೆಗೆ ತಂದೆ- ತಾಯಿಗಳ ಮಾತಿಗೆ ಗೌರವ ನೀಡಿದಾಗ ಮಾತ್ರ ನಮ್ಮ ಜೀವನದ ಸಾಧನೆಗಳಿಗೆ ಅರ್ಥ ಸಿಗುತ್ತದೆ ಎಂದು ತಮ್ಮ ಜೀವನದ ಸ್ವಾರಸ್ಯಕರ ಘಟನೆಯನ್ನು ವಿದ್ಯಾರ್ಥಿಗಳ ಮುಂದಿಟ್ಟರು. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top