ಮಾತೆ- ಮಮತೆಯ ಸ್ಪೂರ್ತಿ

Upayuktha
0




ತಾಯಿ... ಎಂಬ ಈ ಒಂದು ಪದದಲ್ಲೇ ಪ್ರೀತಿ ಇದೆ, ಮಮತೆ ಇದೆ, ತ್ಯಾಗ ಇದೆ, ಕಾಳಜಿ ಇದೆ, ಜೀವನದ ಸಂಪೂರ್ಣ ಅರ್ಥವೇ ಅಡಗಿದೆ. ಜಗತ್ತಿನಲ್ಲಿ ಯಾವುದೇ ಸಂಬಂಧವು ಕೂಡ ತಾಯಿಯ ಪ್ರೀತಿಗೆ ಸಮನಾದದ್ದಲ್ಲ. ಮನುಷ್ಯನು ಈ ಭೂಮಿಗೆ ಬಂದ ಕ್ಷಣದಿಂದಲೇ ಅವನ ಮೊದಲ ಆಶ್ರಯದ ಮೂಲವೇ ತಾಯಿ. ಅವಳ ಮಡಿಲು ನಮ್ಮ ಮೊದಲ ಶಾಲೆ, ಅವಳ ಮಾತು ನಮ್ಮ ಮೊದಲ ಪಾಠ, ಅವಳ ಪ್ರೀತಿ ನಮ್ಮ ಜೀವನದ ಶಕ್ತಿ.


ಇಂದು ತಾಯಂದಿರ ದಿನ. ಈ ವಿಶೇಷ ದಿನದಂದು ನನ್ನ ಪ್ರೀತಿಯ ತಾಯಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ನನ್ನ ಜೀವನದಲ್ಲಿ ಪ್ರತಿಯೊಂದು ಹೆಜ್ಜೆಯಲ್ಲೂ ಬೆಂಬಲವಾಗಿ ನಿಂತ ನನ್ನ ಪ್ರೀತಿಯ ಅಮ್ಮನಿಗೆ ಎಷ್ಟೇ ಧನ್ಯವಾದ ಹೇಳಿದರು ಕಡಿಮೆಯೇ...


ಅಮ್ಮಾ, ಎಂಬ ಪದವೇ ಜೀವನಕ್ಕೆ ಬೆಳಕು ನೀಡುವಂತಹದು. ನಾನು ಮೊದಲ ಹೆಜ್ಜೆ ಇಡುವಾಗ ಕೈ ಹಿಡಿದು ನಡೆಯಲು ಕಲಿಸಿದವಳು ನೀನು. ನಾನು ಮಾತನಾಡಲು ಕಲಿಯುವ ಮುನ್ನವೇ ನನ್ನ ಮನಸ್ಸನ್ನು ಅರ್ಥಮಾಡಿಕೊಂಡವಳು ನೀನು. ನಾನು ಅಳುವಾಗ ಕಣ್ಣೀರನ್ನು ಒರೆಸಿ ಧೈರ್ಯ ಹೇಳಿದವಳು ನೀನು. ನನ್ನ ಪ್ರತಿಯೊಂದು ಸಂತೋಷದಲ್ಲೂ-ನೋವಿನಲ್ಲೂ ಒಟ್ಟಿಗಿದ್ದವಳು, ನಿನ್ನ ಮನಸಲ್ಲಿ ನೋವಿದ್ದರು ಯಾರಿಗೂ ಹೇಳದೆ ಮೌನವಾಗಿ ಕಣ್ಣೀರು ಹಾಕಿದವಳು ನೀನು.


ನನ್ನ ಜೀವನದಲ್ಲಿ ನಾನು ಏನೇ ಸಾಧನೆ ಮಾಡಿದ್ದರೂ ಅದರ ಹಿಂದೆ ನಿನ್ನ ಶ್ರಮ, ನಿನ್ನ ತ್ಯಾಗ ಮತ್ತು ನಿನ್ನ ಪ್ರೋತ್ಸಾಹವೇ ಕಾರಣ. ನಾನು ಎಷ್ಟೋ ಬಾರಿ ಸೋತಾಗ “ನೀನು ಮಾಡಬಲ್ಲೆ” ಎಂದು ಧೈರ್ಯ ತುಂಬಿದವಳು ನೀನು. ನಾನು ನಿರಾಶೆಯಲ್ಲಿದ್ದಾಗ ಹೊಸ ಆತ್ಮವಿಶ್ವಾಸ ತುಂಬಿದವಳು ನೀನು. ನನ್ನ ಕನಸುಗಳಿಗೆ ರೆಕ್ಕೆ ಕೊಟ್ಟು ಗುರಿಯೆತ್ತರಕ್ಕೆ ಹಾರಲು ಕಲಿಸಿದವಳು ನೀನು.


ತಾಯಿ ಎನ್ನುವುದು ಕೇವಲ ಒಂದು ಸಂಬಂಧವಲ್ಲ, ಅದು ದೇವರ ರೂಪ. ದೇವರನ್ನು ನಾವು ನೋಡಿಲ್ಲ, ಆದರೆ ತಾಯಿಯ ರೂಪದಲ್ಲಿ ದೇವರ ಪ್ರೀತಿಯನ್ನು ಅನುಭವಿಸಿದವರು ನಾವು. ತನ್ನ ಮಕ್ಕಳಿಗಾಗಿ ತನ್ನ ಆಸೆಗಳನ್ನು ಬಲಿದಾನ ಮಾಡುವ ಮಹಾನ್ ಧೀಮಂತೆ ತಾಯಿಯೇ ಹೌದು. ಮಕ್ಕಳ ಸುಖಕ್ಕಾಗಿ ರಾತ್ರಿ ನಿದ್ರೆ ಮರೆತು ಕಾಳಜಿ ವಹಿಸುವವಳು ತಾಯಿ. ತನ್ನ ನೋವನ್ನು ಮರೆತು ಮಕ್ಕಳ ನಗುವಿನಲ್ಲಿ ಸಂತೋಷ ಕಾಣುವವಳು ತಾಯಿ.


ಅಮ್ಮಾ.. ನನ್ನ ಬಾಲ್ಯದ ಪ್ರತಿಯೊಂದು ನೆನಪಿನಲ್ಲೂ ತುಂಬಿರುವವಳು ನೀನು. ಶಾಲೆಗೆ ಹೋಗುವಾಗ ತಯಾರಿಸಿದ ಊಟ, ಪರೀಕ್ಷೆಯ ಸಮಯದಲ್ಲಿ ಕೊಟ್ಟ ಧೈರ್ಯ, ಅನಾರೋಗ್ಯವಾಗಿದ್ದಾಗ ರಾತ್ರಿ ಹಗಲು ಜಾಗರಣೆ ಮಾಡಿದ ಕ್ಷಣಗಳು– ಇವೆಲ್ಲವೂ ನನ್ನ ಮನಸ್ಸಿನಲ್ಲಿ ಸದಾ ಉಳಿಯುವ ಅಮೂಲ್ಯ ನೆನಪುಗಳು. ನನ್ನ ಜೀವನದ ಪ್ರತಿಯೊಂದು ಯಶಸ್ಸಿನ ಹಿಂದೆ ನಿನ್ನ ಆಶೀರ್ವಾದವೇ ಇದೆ.


ನಾನು ಕೆಲವೊಮ್ಮೆ ತಪ್ಪು ಮಾಡಿದ್ದರೂ ಕೋಪದಿಂದ ಮಾತನಾಡಿದರೂ ನೀನು ಎಂದಿಗೂ ಕೈಬಿಟ್ಟಿಲ್ಲ. ಕೋಪ ಬಂದಾಗ ಗದರಿಸಿದ್ದರೂ ಅದರ ಹಿಂದೆ ಇದ್ದದ್ದು ಪ್ರೀತಿಯೇ. ನನ್ನ ಒಳಿತಿಗಾಗಿ ಹೇಳಿದ ಪ್ರತಿಯೊಂದು ಮಾತಿನ ಅರ್ಥ ಇಂದು ನನಗೆ ತಿಳಿಯುತ್ತಿದೆ. ಜೀವನದಲ್ಲಿ ಹೇಗೆ ಒಳ್ಳೆಯ ವ್ಯಕ್ತಿಯಾಗಬೇಕು ಎಂಬ ಪಾಠವನ್ನು ನೀನು ಕಲಿಸಿದ್ದೀಯ.


ನನ್ನ ಕನಸುಗಳನ್ನು ನನಸಾಗಿಸಲು ನೀನು ಮಾಡಿದ ತ್ಯಾಗಗಳನ್ನು ನಾನು ಎಂದಿಗೂ  ಮರೆಯುವುದಿಲ್ಲ. ಮನೆಯ ಜವಾಬ್ದಾರಿಗಳ ನಡುವೆಯೂ ನನ್ನ ಶಿಕ್ಷಣ, ನನ್ನ ಭವಿಷ್ಯ, ನನ್ನ ಸಂತೋಷಕ್ಕಾಗಿ ನೀನು ತೋರಿದ ಕಾಳಜಿ ಅಸಾಧಾರಣ. ನಾನು ಕುಗ್ಗಿದಾಗ ಬೆನ್ನಿಗೆ ನಿಂತ ಶಕ್ತಿ ನೀನು. ನಾನು ಹೆದರಿದಾಗ ಧೈರ್ಯ ನೀಡಿದ ಧ್ವನಿ ನೀನು.


ಅಮ್ಮಾ, ನಿನ್ನ ಪ್ರೀತಿ ಸಾಗರದಷ್ಟು ಆಳವಾದುದು. ನಿನ್ನ ಹೃದಯ ಆಕಾಶದಷ್ಟು ವಿಶಾಲವಾದದು. ನಾನು ಎಷ್ಟೇ ದೊಡ್ಡವಳಾದರೂ ನಿನ್ನ ಮಡಿಲಲ್ಲಿ ನಾನು ಸದಾ ಚಿಕ್ಕ ಮಗುವೇ. ನಿನ್ನ ಮಮತೆಯ ನೆರಳಿಲ್ಲದೆ ನನ್ನ ಬದುಕು ಅಪೂರ್ಣವೇ ಸರಿ.



ತಾಯಂದಿರ ದಿನ ಕೇವಲ ಒಂದು ದಿನದ ಅನುಕರಣೆಯ ಆಚರಣೆಯಾಗದೆ, ಪ್ರತಿದಿನವೂ ತಾಯಿಯನ್ನು ಗೌರವಿಸುವಂತಾಗಬೇಕು. ತಾಯಿಯ ತ್ಯಾಗವನ್ನು ಅರಿತು ಅವಳಿಗೆ ಪ್ರೀತಿ, ಗೌರವ ಮತ್ತು ಕಾಳಜಿ ನೀಡುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ. ತಾಯಿಯ ಆಶೀರ್ವಾದವೇ ಮಕ್ಕಳಿಗೆ ದೊಡ್ಡ ಸಂಪತ್ತು.


ಇಂದು ಈ ವಿಶೇಷ ದಿನದಲ್ಲಿ ನಾನು ದೇವರಲ್ಲಿ ಒಂದು ಪ್ರಾರ್ಥನೆ ಮಾಡುತ್ತೇನೆ– ನನ್ನ ತಾಯಿಗೆ ಸದಾ ಆರೋಗ್ಯ, ಸಂತೋಷ ಮತ್ತು ದೀರ್ಘಾಯುಷ್ಯ ನೀಡಲಿ. ಅವಳ ಮುಖದಲ್ಲಿ ಸದಾ ನಗು ಇರಲಿ. ಅವಳ ಜೀವನವು ಸಂತೋಷದಿಂದ ತುಂಬಿರಲಿ.


ತಾಯಿ... ನನ್ನ ಬದುಕಿನ ಪ್ರತಿಯೊಂದು ಕ್ಷಣದಲ್ಲೂ ನನ್ನ ಜೊತೆ ನಿಂತು, ನನ್ನ ಬೆಳವಣಿಗೆಯಲ್ಲಿ ಪ್ರೋತ್ಸಾಹ ನೀಡುತ್ತಿರುವ, ನನ್ನ ಕನಸುಗಳಿಗೆ ಬಲ ನೀಡಿದ ನನ್ನ ಪ್ರೀತಿಯ ತಾಯಿಗೆ ತಾಯಂದಿರ ದಿನಾಚರಣೆಯ ಹೃತ್ಪೂರ್ವಕ ಶುಭಾಶಯಗಳು.




- ಧನ್ಯ ದಾಮೋದರ ಕೊಲ್ಚಾರ್ 

ಪ್ರಥಮ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top