ಪ್ರೀತಿ, ಹೋರಾಟಕ್ಕೆ ವಿಶ್ರಾಂತಿಯಲ್ಲ; ಮುಂದಿನ ಪಯಣಕ್ಕೆ ಸ್ಪೂರ್ತಿ

Upayuktha
0


 


"ನೋಡಿ ಸ್ನೇಹಿತರೆ, ಯಂತ್ರಗಳು ಉಸಿರಾಡೋದು ನಾವು ಸುರಿಸೋ ಬೆವರಿನಿಂದ. ಕಬ್ಬಿಣದ ಚಕ್ರಗಳು ತಿರುಗುವುದು ನಮ್ಮ ನರಗಳ ಶಕ್ತಿಯಿಂದ. ಯಂತ್ರಕ್ಕೆ ಎಣ್ಣೆ ಹಾಕುವ ಮಾಲೀಕರಿಗೆ, ಯಂತ್ರ ನಡೆಸುವ ಮನುಷ್ಯನ ಹೊಟ್ಟೆಗೆ ಹಿಟ್ಟು ಹಾಕಲು ಮನಸ್ಸಿಲ್ಲ ಅಂದರೆ ಅದು ಬಂಡವಾಳವಲ್ಲ, ಅದು ಅಹಂಕಾರ!" ಮುಂದುವರಿದು, " ಕಾರ್ಖಾನೆಯ ಯಂತ್ರಗಳು ಉಗುಳುವುದು ಕೇವಲ ಹೊಗೆಯನ್ನಲ್ಲ, ನಮ್ಮ ಶ್ವಾಸಕೋಶದ ಗಾಳಿಯನ್ನು! ನಾವು ಕೇಳುತ್ತಿರುವುದು ನಮ್ಮ ಬೆವರಿನ ಹನಿಗಳಿಗೆ ನ್ಯಾಯಯುತವಾದ ಬೆಲೆಯನ್ನು ಮಾತ್ರ. ನೆನಪಿಡಿ, ಸಮುದ್ರ ಶಾಂತವಾಗಿದೆ ಎಂದರೆ ಅದರ ಅಲೆಗಳು ಸತ್ತಿವೆ ಎಂದಲ್ಲ, ಅದು ದೊಡ್ಡ ಸುನಾಮಿಗೆ ಸಿದ್ಧವಾಗುತ್ತಿದೆ ಎಂದರ್ಥ!" ಹೀಗಂತ ಕಾರ್ಮಿಕ ನಾಯಕನೆನಿಸಿದ ಸೂರ್ಯ ಕಾಂಪೌಂಡ್ ಗೋಡೆಯ ಮೇಲೆ ನಿಂತು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ. ಅವನ ಧ್ವನಿ ಗಂಭೀರವಾಗಿತ್ತು.

ಬಿಸಿಲ ಝಳಕ್ಕೆ ಕಾರ್ಖಾನೆಯ ತಗಡುಗಳು ಕೆಂಪಗಾಗಿದ್ದವು. ಆದರೆ ಬಿಸಿಲಿಗಿಂತ ಕಾರ್ಮಿಕರ ಎದೆಯೊಳಗಿನ ಆಕ್ರೋಶ ತೀವ್ರವಾಗಿತ್ತು. ಕಾರಣ ಕಾರ್ಖಾನೆಯ ಮಾಲೀಕ ಕಾರ್ಮಿಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿರಲಿಲ್ಲ. ಬಾಯಿಗೆ ಬಂದಂತೆ ಬೈಯ್ಯುತ್ತಲೇ ಇರುತ್ತಿದ್ದ. ಕಾಲಕಾಲಕ್ಕೆ ಕೊಡಬೇಕಾದ ಕಾರ್ಮಿಕರ ಸೌಲಭ್ಯಗಳನ್ನು ಕೊಡುತ್ತಿರಲಿಲ್ಲ. ಕಾರ್ಖಾನೆಯ ಬೃಹತ್ ಕಬ್ಬಿಣದ ಗೇಟುಗಳು ಕೇವಲ ಬಂಡವಾಳದ ಕೋಟೆಗಳಾಗಿರಲಿಲ್ಲ, ಅವು ಕಾರ್ಮಿಕರ ಕನಸುಗಳನ್ನು ನುಂಗುವ ದೈತ್ಯ ಹಸಿವಿನ ಸಂಕೇತಗಳಾಗಿದ್ದವು. ಇವೆಲ್ಲದ್ದರಿಂದ ಬೇಸರಗೊಂಡ ಸೂರ್ಯ ತನ್ನ ಕೆಂಪು ಶಾಲು ಹಾರಿಸುತ್ತಾ ಅಲ್ಲಿ ನಿಂತಾಗ, ಅವನ ಹಿಂದೆ ನೂರಾರು ಹಸಿದ ಹೊಟ್ಟೆಗಳ ದೃಢ ಸಂಕಲ್ಪವಿತ್ತು. ಅವನು ಮಾಲೀಕ ಧನರಾಜ್ ಪ್ರತಿ ಮಾತಿಗೂ ಪ್ರಶ್ನಿಸುತ್ತಿದ್ದ. ಮಾಲೀಕ ಧನರಾಜ್ ಸೂರ್ಯನನ್ನು ಕಂಡರೆ ಸಾಕು, ದ್ವೇಷ ಕಾರುತ್ತಿದ್ದ.


ಅಷ್ಟರಲ್ಲಿ ಮಿನುಗುವ ಬಿಳಿ ಕಾರೊಂದು ಜನಸಂದಣಿಯನ್ನು ಸೀಳಿಕೊಂಡು ಬಂತು. ಅದರಿಂದ ಇಳಿದವಳು ಮೇಘ ಕಾರ್ಖಾನೆಯ ಮಾಲೀಕ ಧನರಾಜ್ ಏಕೈಕ ಪುತ್ರಿ. ಅವಳ ಕಣ್ಣುಗಳಲ್ಲಿ ವಿದೇಶಿ ಶಿಕ್ಷಣದ ತೇಜಸ್ಸಿತ್ತು, ಆದರೆ ಮನಸ್ಸಿನಲ್ಲಿ ಮಣ್ಣಿನ ಮಮತೆಯಿತ್ತು. ಅವಳ ಮುಖದಲ್ಲಿ ಶ್ರೀಮಂತಿಕೆಯ ದರ್ಪವಿರಲಿಲ್ಲ, ಬದಲಿಗೆ ಒಂದು ರೀತಿಯ ಕುತೂಹಲವಿತ್ತು. ಸೂರ್ಯ ಅವರೇ, ಸಮಾಜದಲ್ಲಿ ಸಮಾನತೆ ಅನ್ನೋದು ಕೇವಲ ಪುಸ್ತಕದ ಸಾಲುಗಳಲ್ಲಿ ಚೆನ್ನಾಗಿರುತ್ತೆ. ವಾಸ್ತವದಲ್ಲಿ ಏಣಿ ಇರೋದೇ ಹತ್ತಲು, ತುಳಿಯಲು ಅಲ್ಲ ಅನ್ನೋದು ನಿಮಗೂ ಗೊತ್ತಿದೆ ಅಲ್ವಾ?" ಅಂತ ಮೇಘ ಹೇಳಿದಾಗ ಸೂರ್ಯ (ನಿಧಾನವಾಗಿ ಕೆಳಗಿಳಿದು) "ಮೇಘ ಅವರೇ, ಏಣಿ ಹತ್ತುವವನು ನೆಲದ ಮೇಲಿರುವವರನ್ನು ಮರೆತರೆ, ಏಣಿ ಜಾರಿದಾಗ ಅವನನ್ನು ಹಿಡಿಯಲು ಕೆಳಗೆ ಯಾರೂ ಇರೋದಿಲ್ಲ. ನಿಮ್ಮ ತಂದೆಗೆ ಲಾಭದ ಲೆಕ್ಕಾಚಾರ ಗೊತ್ತು, ಆದರೆ ನಮಗೆ ಬದುಕಿನ ಸಂಕಟ ಗೊತ್ತು. ಲಾಭ ಅನ್ನೋದು ಹೂವಿನ ಮೇಲಿನ ಮಂಜಿನ ಹನಿಯಂತೆ, ಆದರೆ ಕಾರ್ಮಿಕರ ಹಕ್ಕು ಅನ್ನೋದು ನೆಲದ ಬೇರಿನಂತೆ. ಬೇರು ಒಣಗಿದರೆ ಹೂವು ಅರಳಲು ಸಾಧ್ಯವೇ? ಮೇಘ ಅವರೇ ನೀವೇ ಹೇಳಿ." ಎಂದು ಮರು ಪ್ರಶ್ನೆ ಕೇಳಿದನು. ಆಗ ಮೇಘ "ಸೂರ್ಯ ಅವರೇ, ಗಲಾಟೆ ಮಾಡೋದ್ರಿಂದ ಯಾವುದೂ ಬಗೆಹರಿಯಲ್ಲ. ಬನ್ನಿ, ಕೂತು ಮಾತನಾಡೋಣ. " ಅಂದಾಗ ಸೂರ್ಯ (ಗಂಭೀರವಾಗಿ) "ಮಾತನಾಡೋ ಕಾಲ ಮುಗಿದಿದೆ ಮೇಘ ಅವರೇ. ಈಗೇನಿದ್ದರೂ ನಿರ್ಧಾರವಾಗಬೇಕು. ಹಸಿದ ಹೊಟ್ಟೆಗೆ ಮಾತುಗಳು ಊಟವಾಗಲ್ಲ, ಬರಿ ಭರವಸೆಗಳು ಔಷಧಿಯಾಗಲ್ಲ." ಎಂದನು. ಆದರೂ ಕೊನೆಯಲ್ಲಿ ಮೇಘಾ ಳೊಂದಿಗೆ ಮಾತುಕತೆಗೆ ಒಪ್ಪಿಕೊಂಡ.

 

ಮಳೆ ಸುರಿಯುತ್ತಿತ್ತು. ಕಾರ್ಖಾನೆಯ ಆವರಣದ ಸಣ್ಣ ಕ್ಯಾಂಟೀನ್ನಲ್ಲಿ ಇಬ್ಬರೂ ಮುಖಾಮುಖಿಯಾದರು. ಅದು ಕೇವಲ ಇಬ್ಬರು ವ್ಯಕ್ತಿಗಳ ಭೇಟಿಯಾಗಿರಲಿಲ್ಲ, ಹಸಿದ ಹೊಟ್ಟೆ ಮತ್ತು ತುಂಬಿದ ಕೈಗಳ ನಡುವಿನ ಸಂವಾದವಾಗಿತ್ತು. ಮೇಘಾ ತಂದ ಕಾಗದ ಪತ್ರಗಳನ್ನು ಸೂರ್ಯ ಗಮನಿಸುತ್ತಿದ್ದ. ಮೇಘ "ನೀನು ಯಾಕೆ ಇಷ್ಟೊಂದು ಹಠ ಮಾಡ್ತೀಯಾ ಸೂರ್ಯ?  "ಯಾಕೆ ನೀನು ಯಾವಾಗಲೂ ಇಷ್ಟೊಂದು ಕಠಿಣವಾಗಿ ಇರ್ತೀಯಾ? ನಿನಗೆ ನಿನ್ನ ಜೀವನ, ನಿನ್ನ ಸುಖ ಮುಖ್ಯ ಅನ್ನೋದಿಲ್ವಾ?" ಸೂರ್ಯ (ಮಂದಹಾಸದೊಂದಿಗೆ) " ಮೇಘ ಅವರೇ, ಸಮಾಜದಲ್ಲಿ ಕೆಲವರು ದೀಪವಾಗಬೇಕು, ಇನ್ನು ಕೆಲವರು ದೀಪ ಉರಿಯಲು ಎಣ್ಣೆಯಾಗಬೇಕು. ನಾನಂತೂ ಬೆವರಿನ ರೂಪದ ಎಣ್ಣೆಯಾಗಿ ಅವರ ಬದುಕನ್ನು ಬೆಳಗಲು ಇಷ್ಟಪಡುತ್ತೇನೆ. ನನ್ನ ವೈಯಕ್ತಿಕ ಸುಖ ಅಂದ್ರೆ, ನನ್ನ ಜೊತೆ ಇರೋ ನೂರು ಕುಟುಂಬಗಳ ಮುಖದಲ್ಲಿರೋ ನಗು." ಎಂದು ಹೇಳಿದ. ಆಗ ಮೇಘ " ಜೀವನ ಅಂದ್ರೆ ಸುಖವಾಗಿ ಇರೋದು ಅಂದುಕೊಂಡಿದ್ದೆ. ಆದರೆ ನಿನ್ನನ್ನು ನೋಡಿದ್ರೆ ಹೋರಾಟವೇ ಜೀವನ ಅನ್ಸುತ್ತೆ. ಸೂರ್ಯ ನಿನಗೆ ಸೋಲುವ ಭಯ ಇಲ್ವಾ?"  "ಸೂರ್ಯ, ಹಠ ಮಾಡುವುದರಿಂದ ವ್ಯವಹಾರ ನಡೆಯುವುದಿಲ್ಲ. ಲಾಭವಿಲ್ಲದೆ ನಾವು ಕಾರ್ಖಾನೆ ನಡೆಸಲು ಸಾಧ್ಯವಿಲ್ಲ ಎಂಬ ವಾಸ್ತವ ನಿಮಗೆ ಅರ್ಥವಾಗುತ್ತಿಲ್ಲವೇ?" ಸೂರ್ಯ (ಕಿರುನಗು ವಿನೊಂದಿಗೆ): "ಮೇಘ ಅವರೇ, ಲಾಭ ಅನ್ನೋದು ಗಿಡದ ಮೇಲಿನ ಹೂವಿನಂತೆ, ನೋಡಲು ಸುಂದರ. ಆದರೆ ಕಾರ್ಮಿಕ ಅನ್ನೋನು ಗಿಡದ ಬೇರು. ಬೇರಿಲ್ಲದೆ ಹೂವು ಅರಳದು. ನೀವು ಬರಿ ಹೂವಿನ ಸುಗಂಧದ ಬಗ್ಗೆ ಮಾತಾಡ್ತಿದ್ದೀರಾ, ನಾನು ಬೇರುಗಳಿಗೆ ಬೀಳುತ್ತಿರುವ ಕೊಡಲಿಯೇಟಿನ ಬಗ್ಗೆ ಮಾತಾಡ್ತಿದ್ದೀನಿ. ಹೊಟ್ಟೆ ತುಂಬಿದವರಿಗೆ ಉಪದೇಶ ಸುಲಭ, ಆದರೆ ಹೊಟ್ಟೆ ಹಸಿದವರಿಗೆ ಅದು ವಿಷದಂತೆ ಕೇಳಿಸುತ್ತದೆ." ಎಂದ. ಸೂರ್ಯ (ಹೊರಗಿನ ಮಳೆಯನ್ನು ತೋರಿಸುತ್ತಾ) "ನೋಡು ಮೇಘ, ಮಳೆ ಹನಿಗಳು ಆಕಾಶದಿಂದ ಬೀಳುವಾಗ ತಾನು ಮಣ್ಣಲ್ಲಿ ಕರಗಿ ಹೋಗ್ತೀನಿ ಅನ್ನೋ ಭಯ ಇರೋದಿಲ್ಲ. ಯಾಕಂದ್ರೆ ಅದಕ್ಕೆ ಗೊತ್ತು, ತಾನು ಕರಗಿದರೇನೇ ಭೂಮಿ ಹಸಿರಾಗೋದು ಅಂತ. ನಾನೂ ಅಷ್ಟೇ, ನನ್ನ ಹೋರಾಟದಲ್ಲಿ ನಾನು ಕರಗಬಹುದು, ಆದರೆ ತ್ಯಾಗ ನೂರು ಕುಟುಂಬಗಳ ಒಲೆಯಲ್ಲಿ ಬೆಂಕಿಯಾಗಿ ಉರಿಯುತ್ತೆ ಅಂದ್ರೆ ಸೋಲಲ್ಲೂ ಒಂದು ಗೆಲುವಿದೆ." ಆಗ ಮೇಘ, "ನಿನ್ನ ಮಾತುಗಳು ಗಾಯಕ್ಕೆ ಹಚ್ಚುವ ಮುಲಾಮಿನಂತಿದೆ. ನನ್ನ ಪ್ರಪಂಚ ಬರಿ ಗೋಡೆಗಳ ಮಧ್ಯೆ ಇತ್ತು. ನಿನ್ನ ಪ್ರಪಂಚ ವಿಶಾಲವಾದ ಮನುಷ್ಯರ ಮಧ್ಯೆ ಇದೆ. ಮೇಘಾಳಿಗೆ ಸೂರ್ಯನ ಮೇಲಿದ್ದ ಸಿಟ್ಟು ಹೋಗಿ ಗೌರವ ಮೂಡಿತು. ಆತನ ಹೋರಾಟದ ಹಿಂದಿರೋ ಪ್ರಾಮಾಣಿಕತೆ ಅವಳ ಮನಸ್ಸನ್ನು ಗೆದ್ದಿತು. ಮೇಘಾಳಿಗೆ ಆತನ ಮಾತಿನಲ್ಲಿದ್ದ ಸತ್ಯದ ತೂಕ ಅರ್ಥವಾಯಿತು. ಅವಳು ಆತನ ಹೋರಾಟದಲ್ಲಿ ಒಬ್ಬ ವಿರೋಧಿಯಾಗಿ ಬಂದವಳು, ಆತನ ವ್ಯಕ್ತಿತ್ವಕ್ಕೆ ಸೋತು ಹೋದಳು.

 

ಒಂದು ರಾತ್ರಿ ವೇಳೆ ಮುಷ್ಕರ ಕುಳಿತಿದ್ದ ಕಾರ್ಮಿಕರಿಗೆ ಮೇಘ ರಹಸ್ಯವಾಗಿ ಆಹಾರ ತಂದಿದ್ದಳು. ಚಂದಿರನ ಬೆಳಕಿನಲ್ಲಿ ಇಬ್ಬರೂ ಗೇಟಿನ ಪಕ್ಕದ ಕಟ್ಟೆಯ ಮೇಲೆ ಕುಳಿತಿದ್ದರು.ಮೇಘ "ನಿನ್ನ ಜೀವನ ಯಾವಾಗಲೂ ಹೋರಾಟದಲ್ಲೇ ಕಳೆದುಹೋಗುತ್ತಾ ಸೂರ್ಯ? ನಿನಗೆ ನಿನ್ನದೇ ಆದ ಸಂಸಾರ, ಶಾಂತಿ ಬೇಡವಾ?" ಅಂತ ಮೇಘ ಕೇಳಿದಾಗ, ಸೂರ್ಯ "ಮೇಘ, ಸಮಾಜದಲ್ಲಿ ಎಲ್ಲರೂ ತನ್ನ ಸುಖವನ್ನೇ ನೋಡಿಕೊಂಡರೆ, ದೀನದಲಿತರ ಪರವಾಗಿ ಕಣ್ಣೀರು ಹಾಕುವವರು ಯಾರು? ನೂರು ದೀಪಗಳನ್ನು ಬೆಳಗಲು ಒಬ್ಬ ಹತ್ತಿಯ ಬತ್ತಿಯಾಗಿ ಸುಡಲೇಬೇಕು. ಬತ್ತಿಯಾಗುವ ಅವಕಾಶ ಸಿಕ್ಕಿದ್ದೇ ನನ್ನ ಸೌಭಾಗ್ಯ." ಆಗ ಮೇಘ (ಭಾವಪರವಶಳಾಗಿ): " ಬತ್ತಿ ಸುಡುವಾಗ ಅದಕ್ಕೆ ಎಣ್ಣೆಯಾಗಿ ಸದಾ ಜೊತೆಗಿರಲು ನನಗೂ ಆಸೆ ಇದೆ ಸೂರ್ಯ. ನಿನ್ನ ಪ್ರೀತಿ ನನಗೆ ಅಧಿಕಾರಕ್ಕಿಂತ ದೊಡ್ಡದಾಗಿ ಕಾಣುತ್ತಿದೆ. ಕಾರ್ಮಿಕರ ಬೆವರಿನಲ್ಲಿ ನನಗೂ ಒಂದು ಭಾಗ ಸಿಗಲಿ." ಎನ್ನುತ್ತಾ ," ಸೂರ್ಯ, ನಿನ್ನ ದಾರಿಯಲ್ಲಿ ನಾನೂ ಜೊತೆಯಾದರೆ?" "ನನಗೂ  ನಿನ್ನ ಜೊತೆ ನಡೆಯೋಕೆ ಅವಕಾಶ ಕೊಡ್ತೀಯಾ? ನಿನ್ನ ಹೋರಾಟಕ್ಕೆ ಶಕ್ತಿಯಾಗಿ, ನಿನ್ನ ಪ್ರೇಮಕ್ಕೆ ಸಾಕ್ಷಿಯಾಗಿ ಇರಬೇಕು ಅಂತ ಆಸೆ ಇದೆ." ಎಂದಳು. ಅದಕ್ಕೆ ಸೂರ್ಯ (ನಗುನಗುತ್ತಾ) " ಬೇಡ ಮೇಘ, ನನ್ನ ದಾರಿ ಮಲ್ಲಿಗೆಯ ಹಾದಿಯಲ್ಲ, ಇದು ಕಲ್ಲು ಮುಳ್ಳುಗಳ ಹಾದಿ. ಇಲ್ಲಿ ಸೌಂದರ್ಯಕ್ಕಿಂತ ಸತ್ಯಕ್ಕೆ ಬೆಲೆ ಹೆಚ್ಚು. ರಾಜಕುಮಾರಿಯಂತಿರುವ ನೀನು, ಕಾರ್ಮಿಕರ ಕಷ್ಟದ ರೊಟ್ಟಿಯನ್ನು ಹಂಚಿಕೊಳ್ಳಬಲ್ಲೆಯಾ?" ಎಂದನು.

 

ಕಾರ್ಮಿಕರಿಂದ ಕಾರ್ಖಾನೆಯ ಮುಷ್ಕರ ಆರಂಭವಾಗಿ ಇಪ್ಪತ್ತನೇ ದಿನಕ್ಕೆ ಕಾಲಿಟ್ಟಿತ್ತು. ಕಾರ್ಖಾನೆಯ ಮಾಲೀಕರು ಬಗ್ಗಲಿಲ್ಲ, ಪೊಲೀಸರ ಮೂಲಕ ಲಾಠಿ ಪ್ರಹಾರ ಮಾಡಿಸಿದರು. ವಿಷಯ ತಿಳಿದು ಮೇಘ ಸೂರ್ಯ ಬಂಧನಕ್ಕೊಳಗಾಗುವ ಮುನ್ನವೇ ಅಲ್ಲಿಗೆ ಓಡಿ ಬಂದಳು. ರಕ್ತಸಿಕ್ತನಾದ  ಸೂರ್ಯನನ್ನು ಕಂಡ ಮೇಘ ತನ್ನ ತಂದೆಯ ವಿರುದ್ಧವೇ ಸಿಡಿದೆದ್ದಳು. ಮಾಧ್ಯಮಗಳ ಮುಂದೆ ನಿಂತು ತನ್ನ ತಂದೆಯ ಅನ್ಯಾಯವನ್ನು ಬಯಲು ಮಾಡಿದಳು. ಕೊನೆಗೆ ಮಾಲೀಕರು ಸೋಲೊಪ್ಪಿಕೊಂಡರು. ಕಾರ್ಮಿಕರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಕೊಡಿಸಲು ಅವಳು ಸೂರ್ಯನಿಗೆ ಬೆನ್ನೆಲುಬಾಗಿ ನಿಂತಳು. ಏಕೆಂದರೆ ಮೇಘ ಸೂರ್ಯನ ಹೋರಾಟ, ನ್ಯಾಯಪ್ರಾಮಾಣಿಕತನವನ್ನು ಮೆಚ್ಚಿ ಅವನನ್ನು ಪ್ರೀತಿಸಲು ಆರಂಭಿಸಿದ್ದಳು. ಪ್ರೀತಿ ಮೇಘಾಳನ್ನು ತನ್ನ ತಂದೆಯ ವಿರುದ್ಧವೇ ಸಿಡಿದೇಳುವಂತೆ ಮಾಡಿತ್ತು. ಆಗ ಸೂರ್ಯನನ್ನು ನೋಡುತ್ತಾ ಮೇಘ "ಸೂರ್ಯ, ಅಧಿಕಾರ ಅನ್ನೋದು ಮರಳಿನ ಮೇಲೆ ಬರೆದ ಹೆಸರಿದ್ದಂತೆ, ಗಾಳಿ ಬಂದರೆ ಅಳಿಸಿ ಹೋಗುತ್ತೆ. ಆದರೆ ಜನರ ಮನಸ್ಸಿನ ಮೇಲೆ ಪ್ರೀತಿಯಿಂದ ಬರೆದ ಹೆಸರು ಎಂದಿಗೂ ಅಳಿಯಲ್ಲ. ನಾನು ನನ್ನ ಅಪ್ಪನ ಮಗಳಾಗಿ ಅಲ್ಲ, ಮಣ್ಣಿನ ಮಗಳಾಗಿ ನಿನ್ನ ಜೊತೆ ನಿಂತಿದ್ದೇನೆ." ಸೂರ್ಯ ಆಸ್ಪತ್ರೆಯ ಮಂಚದ ಮೇಲೆ ಮಲಗಿದ್ದಾಗ ಮೇಘಾಳ ಕೈ ಹಿಡಿದು ಹೇಳಿದ. "ಇವತ್ತು ನನ್ನ ಹೋರಾಟಕ್ಕೆ ಪೂರ್ಣ ವಿಜಯ ಸಿಕ್ಕಿದೆ ಮೇಘ. ಯಾಕಂದ್ರೆ ನನಗೆ ನ್ಯಾಯದ ಜೊತೆಗೆ ನಿನ್ನಂತಹ ನಿರ್ಮಲವಾದ ಪ್ರೀತಿಯೂ ಸಿಕ್ಕಿದೆ. ಅಧಿಕಾರಕ್ಕೆ ಬಗ್ಗದ ಮನುಷ್ಯ ನಿನ್ನ ಪ್ರೀತಿಗೆ ಶರಣಾಗಿದ್ದಾನೆ." ಆಗ ಮೇಘ, "ಸೂರ್ಯ, ಪ್ರೀತಿ ಅಂದರೆ ಬರಿ ಅಪ್ಪುಗೆಯಲ್ಲ, ಅದು ಅನ್ಯಾಯದ ವಿರುದ್ಧ ಒಟ್ಟಾಗಿ ನಿಲ್ಲುವ ಧೈರ್ಯ. ನಮ್ಮಿಬ್ಬರ ಪ್ರೇಮ ಕಥೆ ಇತಿಹಾಸದಲ್ಲಿ ಕೇವಲ ಪ್ರೇಮಿಯಾಗಿ ಅಲ್ಲ, ಒಂದು ಕ್ರಾಂತಿಯಾಗಿ ದಾಖಲಾಗಲಿ." ಎಂದಾಗ, ಸೂರ್ಯ ಅವಳ ಕಣ್ಣಲ್ಲಿನ ದೃಢತೆಯನ್ನು ನೋಡಿ ಬೆರಗಾದ. "ಮೇಘ, ಪ್ರೀತಿ ಅಂದ್ರೆ ಎರಡು ಜೀವಗಳು ಒಂದಾಗೋದಲ್ಲ, ಎರಡು ಆದರ್ಶಗಳು ಒಂದಾಗೋದು. ಇವತ್ತು ನಾವಿಬ್ಬರು ಒಂದಾಗುತ್ತಿಲ್ಲ, ನ್ಯಾಯ ಮತ್ತು ಧೈರ್ಯ ಒಂದಾಗುತ್ತಿದೆ. ಕಾರ್ಮಿಕರ ಬೆವರಿನ ಹನಿಗಳಿಗೆ ನೀನು ಮಳೆಬಿಲ್ಲಾಗಿ ಬಂದಿದ್ದೀಯಾ. "ಕೊನೆಗೂ ನ್ಯಾಯ ದಕ್ಕಿತು. ಕಾರ್ಖಾನೆಯ ಮಾಲೀಕರು ಕಾರ್ಮಿಕರ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದರು. ಸಂಜೆ ಸೂರ್ಯಾಸ್ತದ ಸಮಯದಲ್ಲಿ ಇಬ್ಬರೂ ಮಾತನಾಡುತ್ತಿದ್ದಾಗ , ಮೇಘ: "ಈಗಲಾದರೂ ನಿನಗೆ ನಿನ್ನ ಬಗ್ಗೆ ಯೋಚನೆ ಮಾಡೋಕೆ ಸಮಯ ಇದೆಯಾ?" ಎಂದು ಕೇಳಿದಳು. ಅದಕ್ಕೆ ಸೂರ್ಯ: "ಇದೆ ಮೇಘ... ಇಷ್ಟು ದಿನ ನಾನು 'ನಾನು' ಮತ್ತು 'ಅವರು' ಅಂತ ಬದುಕುತ್ತಿದ್ದೆ. ಇನ್ನು ಮುಂದೆ 'ನಾವು' ಅಂತ ಬದುಕೋಣ. ನಿನ್ನ ಪ್ರೀತಿ ನನ್ನ ಹೋರಾಟಕ್ಕೆ ವಿಶ್ರಾಂತಿಯಲ್ಲ, ಅದು ನನ್ನ ಮುಂದಿನ ಪಯಣಕ್ಕೆ ಸ್ಪೂರ್ತಿ." ಎಂದನು ಸೂರ್ಯ. ಮೇಘ ತನ್ನ ಓದಿನ ಅನುಭವದ ಹಿನ್ನೆಲೆಯಲ್ಲಿ "ಬಂಡವಾಳಶಾಹಿ ಅನ್ನೋದು ಮಂಜಿನಂತೆ ಅಧಿಕಾರದ ಬಿಸಿಲಿಗೆ ಕರಗಬಹುದು. ಆದರೆ ಕಾರ್ಮಿಕರ ಸಂಘಟನೆ ಅನ್ನೋದು ಬೆಟ್ಟದಂತೆ, ಎಂತಹ ಬಿರುಗಾಳಿ ಬಂದರೂ ಅಲುಗಾಡುವುದಿಲ್ಲ. ಬೆಟ್ಟದ ಮೇಲೆ ಅರಳಿದ ಹೂವೇ ನಮ್ಮ ಪ್ರೀತಿ." ಎಂದಳು.

 



إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top