ಹೃದಯ್ ಒಬ್ಬ ಮಧ್ಯಮ ವರ್ಗದ ಯುವಕ. ಎಲ್ಲರನ್ನೂ ನಗುಮುಖದಿಂದಲೇ ಮಾತನಾಡಿಸುವ ಸ್ವಭಾವ.ಒಂದಷ್ಟು ಪುಟ್ಟ ಪುಟ್ಟ ಕನಸುಗಳನ್ನು ಹೊತ್ತು ತನ್ನ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ತಾನೊಬ್ಬನೇ ಎದುರಿಸುತ್ತ ಮುನ್ನಡೆಯುತ್ತಿರುತ್ತಾನೆ.ಈತನ ಬಳಿ ಯಾರು ಸಹಾಯ ಕೇಳಿದರು ತನ್ನಿಂದ ಸಹಾಯ ಮಾಡಲು ಆಗುವುದಿಲ್ಲ ಎಂದು ಯಾವತ್ತು ಹೇಳಲಿಲ್ಲ. ಇನ್ನೊಬ್ಬರಿಂದ ಏನನ್ನು ಬಯಸದೆ ತನ್ನಿಂದಾದ ಸಹಾಯ ಮಾಡುತ್ತಾ ಇದ್ದ.ಆದರೆ ಈತನ ಮನಸ್ಸಿನಲ್ಲಿ ಏನೋ ಒಂದು ಬೇಜಾರು.
"ನಾನು ಯಾರೊಬ್ಬರನ್ನೂ ಹೊರಗಿನವರು ಅಂದುಕೊಂಡಿಲ್ಲ,ಯಾರು.. ಯಾವತ್ತೆ... ನನ್ನ ಬಳಿ ಸಹಾಯ ಕೇಳಲಿ ನಾ ಇಲ್ಲ ಎಂದಿಲ್ಲ. ಆದರೆ ನನ್ನ ಕಷ್ಟದ ಸಮಯದಲ್ಲಿ ಯಾರೊಬ್ಬರು ನನ್ನ ಬಳಿ ಏನಾದರೂ ಸಹಾಯ ಬೇಕಾ ಎಂದು ಒಬ್ಬರೂ.. ಕೇಳಿಲ್ಲ."
ಹೃದಯ್ ಯ ಗೆಳೆಯರು ಯಾವತ್ತೆ.. ಆತನನ್ನು ಸುತ್ತಾಡಲು ಕರೆದರೂ ಆತ "ನನಗೆ ಬೇರೆ ಕೆಲಸ "ಇದೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಏಕೆಂದರೆ ಆತನ ಆರ್ಥಿಕ ಸ್ಥಿತಿ ಅಷ್ಟು ಬಲವಾಗಿರಲಿಲ್ಲ.ಹೋಗುವುದಕ್ಕೆ ಮನಸಿದ್ದರೂ ಹೋಗುವ ಅದೃಷ್ಟವಿಲ್ಲ ಎಂದು ಮನಸಲ್ಲೇ ನೆನೆದು ದುಃಖಪಡುತ್ತಿದ್ದ. ತಾನು ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ ಎಂದು ಸದಾ ಬೇಜಾರಿನಲ್ಲೇ ಇರುತ್ತಿದ್ದ ಈತ ತನ್ನಕಾಲೇಜ್ ರಜೆಯ ದಿವಸ ನಿದ್ದೆಯಲ್ಲೇ ಇರುತ್ತಿದ್ದ. ಕನಿಷ್ಠ ನಿದ್ರೆಯಲ್ಲಾದರೂ ಸ್ವಲ್ಪ ನೆಮ್ಮದಿ ಸಿಗುತ್ತದೆಯೇನೋ ಅನ್ನೋ ಭಾವನೆ ಈತನದ್ದು.
ಈತನ ಜೀವನದಲ್ಲಿ ಪ್ರೀತಿಯ ಮಳೆ ಸುರಿಯಲು ಹಿಮಾ ಎಂಬ ಶ್ರೀಮಂತ ಹುಡುಗಿಯ ಆಗಮನ ಆಗುತ್ತದೆ.ಈಕೆ ಮಾತಿನ ಮಲ್ಲಿ.ಈಕೆ ಶ್ರೀಮಂತೆ ಎಂದು ಯಾವತ್ತೂ ತೋರಿಸಿಕೊಂಡವಳಲ್ಲ.ತನ್ನ ಜೀವನದಲ್ಲಿ ತಾನು ಭೇಟಿ ಮಾಡಿದ ಪ್ರತಿಯೊಬ್ಬರು ತನ್ನ ಗೆಳೆಯರ/ಗೆಳತಿಯರ ಪಟ್ಟಿಯಲ್ಲಿ ಸೇರಬೇಕು ಎನ್ನುವುದು ಈಕೆಯ ಆಸೆ.
ವಿರುದ್ಧ ದಿಕ್ಕುಗಳು ಪರಸ್ಪರ ಆಕರ್ಷಣೆಗೆ ಒಳಗಾಗುತ್ತದೆ ಎಂಬುವುದು ವಿಜ್ಞಾನದ ತತ್ತ್ವ. ಅಂತೆಯೇ ನಮ್ಮ ಕಥೆಯಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಎರಡು ವ್ಯಕ್ತಿಗಳು ಪರಸ್ಪರ ಅಕಸ್ಮಿಕವಾಗಿ ಒಂದು ಕಾರ್ಯಕ್ರಮದಲ್ಲಿ ಭೇಟಿಯಾಗುತ್ತಾರೆ.ಆಕೆಯ ನಗು ,ನಕ್ಷತ್ರದಂತೆ ಹೊಳೆಯುತ್ತಿದ್ದ ಆಕೆಯ ಕಣ್ಣುಗಳು,ಆಕೆಯ ಮುದ್ದಾದ ಮುಖ ,ಆಕೆಯ ಗುಣ ಮತ್ತೆ ಮತ್ತೆ ಆಕೆಯನ್ನೇ ನೋಡುತ್ತಾ ನಿಂತಲ್ಲೇ ಕಳೆದು ಹೋಗಬೇಕು ಎಂಬಂತೆ ಮಾಡುತ್ತದೆ.ಹಿಮಾ ಶ್ರೀಮಂತೆ ಎಂಬುದನ್ನು ತಿಳಿಯದೆ ಹೃದಯ್ ಆಕೆಯ ಜೊತೆ ಗೆಳೆತನ ಬೆಳೆಸುತ್ತಾನೆ.
ಇಬ್ಬರೂ ಅಕಸ್ಮಿಕವಾಗಿ ಭೇಟಿಯಾಗಿದ್ದರೂ ತಾವು ತುಂಬಾ ಸಮಯದಿಂದ ಪರಿಚಯಸ್ಥರು ಎಂಬಷ್ಟು ಸಲಿಗೆ ಒಂದೆರಡು ದಿನಗಳಲ್ಲೇ ಬೆಳೆಯುತ್ತದೆ. ಹೃದಯ್ ತನ್ನ ಮನಸ್ಸಿನಲ್ಲಿದ್ದ ನೋವನೆಲ್ಲ ಮರೆತು ನಗು ನಗುತ್ತಾ ಹಿಮಾಳ ಬಳಿ ಮಾತನಾಡುತ್ತಿದ್ದ.ಆಕೆಯು ಈತನ ಬಳಿ ನಗು ನಗುತ್ತಲೇ ಮಾತನಾಡುತ್ತಿದ್ದಳು. ಹೃದಯ್ ತನಗೆ ಹಾಡುವುದು, ಹಾಡುಕೇಳುವುದು, ಹಾಡುಬರೆಯುವುದು ಎಲ್ಲ ಇಷ್ಟ ಎಂದು ಆಕೆಯ ಬಳಿ ಹಂಚಿಕೊಂಡಿರುತ್ತಾನೆ.ಇದನ್ನು ತಿಳಿದ ಆಕೆ ತನಗೂ ಹಾಡಲು ಇಷ್ಟ ಎಂದು ಹೇಳಿಕೊಂಡಿರುತ್ತಾಳೆ.ಇದನ್ನು ಕೇಳಿದ ಹೃದಯ್ "ಓ ಇದು ನನಗೆ ಖುಷಿಯ ವಿಚಾರ ನೀನು ನನಗೋಸ್ಕರ ಒಂದು ಹಾಡನ್ನು ಹಾಡಬಹುದೇ? "ಎಂದು ಕೇಳುತ್ತಾನೆ. ಇದಕ್ಕೆ ಪ್ರತಿಯಾಗಿ ಹಿಮ "ಹ ಸರಿ ,ಆದರೆ ಈ ದಿನ ಬೇಡ ನಾಳೆ ಹಾಡುತ್ತೇನೆ "ಎಂದು ಹೇಳುತ್ತಾಳೆ.
ಇದು ಡಿಜಿಟಲ್ ಕಾಲವಾದ್ದರಿಂದ ಹಿಮಾ ಒಂದು ಹಾಡನ್ನು ರೆಕಾರ್ಡ್ ಮಾಡಿ ಫೋನ್ ನಲ್ಲೇ ಹೃದಯ್ ಗೆ ಕಳುಹಿಸುತ್ತಾಳೆ. ಹಾಡನ್ನು ಕೇಳಿದ ಹೃದಯ್ ಈ ಹಾಡನ್ನು ಹಿಮ ಹಾಡಿದ್ದಾಳೆ ಎಂದು ಭಾವಿಸಿ ಆಕೆಯ ಧ್ವನಿಗೆ ಮಾರುಹೋಗಿ ,ಆಕೆಯನ್ನು ಪ್ರೀತಿಸುವ ಯೋಚನೆಗೆ ಮುಂದಾಗುತ್ತಾನೆ. ಹಿಮಾ ಜೊತೆ ಇನ್ನಷ್ಟು ಸಲಿಗೆ ಬೆಳೆಸಿಕೊಳ್ಳುತ್ತಾನೆ.
ಹೀಗೆ.. ಇವರಿಬ್ಬರ ಮಾತು ಕಥೆ ಒಂದೆರಡು ವಾರಗಳ ಕಾಲ ಮುಂದುವರೆಯುತ್ತದೆ. ಹೀಗೆ ಒಂದು ದಿನ ಹೃದಯ್ ತನ್ನ ಫೋನ್ ನಲ್ಲಿ ರೀಲ್ಸ್ಗಳನ್ನು ನೋಡುತ್ತಾ ಇರುವಾಗ ಹಿಮ ಕಳುಹಿಸಿದ ಅದೇ ಹಾಡು ಸಿಗುತ್ತದೆ ಹಾಗೂ ಧ್ವನಿಯೂ ಅದೇ ಆಗಿರುತ್ತದೆ.ಹಿಮ ಕಳುಹಿಸಿದ ಧ್ವನಿ ಹಾಗೂ ತಾನು ಈಗತಾನೆ ಕೇಳಿದ ಧ್ವನಿ ಎರಡು ಒಂದೇ ಹಾಗೂ ಈ ಹಾಡನ್ನು ಹಿಮಾ ಹಾಡಿಲ್ಲ ಆದರೆ ತಾನೇ ಹಾಡಿದ್ದೇನೆ ಎಂದು ಹೇಳಿರುವುದು ಹೃದಯ್ ಯ ಗಮನಕ್ಕೆ ಬರುತ್ತದೆ.ಇದೆಲ್ಲದನ್ನು ಅರಿತ ಹೃದಯ್ ಒಂದು ಕ್ಷಣ ಆಘಾತಕ್ಕೆ ಒಳಗಾಗುತ್ತಾನೆ.ನಂತರ ಹೃದಯ್ ಹಿಮಾಳ ಬಳಿ ಪ್ರಶ್ನಿಸುತ್ತಾನೆ "ನಿಜವಾಗಿ ಈ ಹಾಡನ್ನು ನೀನೇ ಹಾಡಿದ್ದೀಯಾ?" ಎಂದು ಈಗ ಹಿಮ ಪುನಃ"ಹೌದು !ನಿನಗೇಕೆ ಇಷ್ಟು ಸಂಶಯ, ಎಷ್ಟು ಭಾರಿ ಹೇಳಲಿ ಇದು ನನ್ನದೇ ಧ್ವನಿ ಎಂದು.." ಎಂದು ಕೋಪದಲ್ಲಿ ಹೇಳುತ್ತಾಳೆ.ಆದರೆ ಸತ್ಯವನ್ನು ಅರಿತ ಹೃದಯ್ ಸಾಕ್ಷಿ ಸಮೇತ ಸಾಬೀತು ಮಾಡಿದರೆ ಎಲ್ಲಿ ಆಕೆಯ ಗೆಳೆತನ ಕಳೆದುಕೊಳ್ಳುತೇನೋ ಎಂಬ ಯೋಚನೆಯೊಂದಿಗೆ ಮೌನಿಯಾಗಿ ಬಿಡುತ್ತಾನೆ.ಆದರೆ "ಅಯ್ಯೋ ಈ ಧ್ವನಿ ಹಿಮಾಳದ್ದು ಎಂದು ತಿಳಿದು ನಾನು ಆಕೆಯನ್ನು ಪ್ರೀತಿಸಲು ಹೊರಟಿದ್ದೇನಲ್ಲಾ.....,ಆದರೂ ಈಕೆ ಒಳ್ಳೆಯ ಹುಡುಗಿ ,ಅಹಂಕಾರ ಎಂಬುವುದು ಎಳ್ಳಷ್ಟು ಇಲ್ಲ,ಆದರೆ ನನ್ನ ಬಳಿ ಏಕೆ ಸುಳ್ಳು ಹೇಳಿದಳು?"ಎಂದು ಒಂದಷ್ಟು ಪ್ರಶ್ನೆಗಳನ್ನು ತನಗೆ ತಾನೇ ಕೇಳಿಕೊಳ್ಳುತ್ತಾನೆ.
ಇಷ್ಟೆಲ್ಲಾ ನಡೆದ ನಂತರ ಹಿಮ ಒಬ್ಬಳು ಶ್ರೀಮಂತೆ ಎಂಬುದನ್ನು ತಿಳಿದರೆ ಹೃದಯ್ ಯ ಪರಿಸ್ಥಿತಿ ಹೇಗಿರಬಹುದು? (ಮುಂದುವ ರೆಯುವುದು......)
-ಈಶಕೃಷ್ಣ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


