ಹಾಸನ:
ವಿಶ್ವ ಸಾಹಿತ್ಯದ ದೈತ್ಯ ಪ್ರತಿಭೆಯಾದ ಕುವೆಂಪು ಅವರು ಕನ್ನಡಿಗರ ಎದೆಯಲ್ಲಿ
ಬಿತ್ತಿದ 'ಕನ್ನಡ ಪ್ರಜ್ಞೆ'ಯು ವಿಶ್ವಮಾನವ ಪ್ರಜ್ಞೆಯ
ಭಾಗವಾಗಿ, ಕುವೆಂಪು ಅವರ ಕಾವ್ಯ, ಕತೆ,
ಕಾದಂಬರಿ, ನಾಟಕ, ವಿಮರ್ಶೆ, ಆತ್ಮಚರಿತ್ರೆಯಲ್ಲಿ ದಟ್ಟವಾಗಿ ಮೂಡಿಬಂದಿದೆ. ಅವರ ಒಟ್ಟು ಸಾಹಿತ್ಯದಲ್ಲೇ
ಕನ್ನಡಪ್ರಜ್ಞೆಯ ವಿರಾಟ್ ದರ್ಶನ ಲಭಿಸುತ್ತದೆ. ಕನ್ನಡ ಬದುಕಿನ ಅನಾವರಣ, ಪ್ರಕೃತಿಯ ವರ್ಣನೆ, ಭಾಷೆಯ ಸಾರಸತ್ವ, ಜನಜೀವನದ ದರ್ಶನದಲ್ಲಿ ಕನ್ನಡ ಪ್ರಜ್ಞೆಯ ಕೇಂದ್ರಿತ ನೆಲೆಗಳಿವೆ. ಈ ನೆಲೆಗಳು ನಮ್ಮ
ಭಾಷೆ ಮತ್ತು ಸಂಸ್ಕೃತಿಯ ಮೂಲಕ ಕನ್ನಡದ ಅಸ್ಮಿತೆಯನ್ನು
ಎತ್ತಿಹಿಡಿಯುತ್ತವೆ ಎಂದು ಪ್ರಸಿದ್ಧ ಸಾಹಿತಿ
ಹಾಗೂ ಮೈಸೂರಿನ ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ
ಅಭಿಪ್ರಾಯಪಟ್ಟರು.
ಅವರು
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು ಹಾಗೂ ಟೈಮ್ಸ್ ಪಿ.ಯು.ಕಾಲೇಜು ಹಾಸನ
ವತಿಯಿಂದ ನಗರದ ಸತ್ಯಮಂಗಲದಲ್ಲಿರುವ ಟೈಮ್ಸ್
ಗುರುಕುಲ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ಕುವೆಂಪು ಮತ್ತು ಕನ್ನಡ ಪ್ರಜ್ಞೆ” ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಕುವೆಂಪು ಅವರಿಗೆ ಕನ್ನಡವೇ ಧರ್ಮ ಮತ್ತು ಕರ್ಮ
ಎರಡೂ ಆಗಿತ್ತು. ನಮ್ಮ ಸಮಾಜವನ್ನು 'ಕನ್ನಡ
ಸಮಾಜ' ಎಂದು ಕರೆದು ಅದರ
ಹುಳುಕುಗಳನ್ನು ವಿಮರ್ಶಿಸಿ, ಅದಕ್ಕೆ ತಮ್ಮ ಬರಹದ ಮೂಲಕ
ಚಿಕಿತ್ಸೆ ಕೊಟ್ಟರು. ಕನ್ನಡ ಭಾಷೆಯ ಹಾಗೂ ಕನ್ನಡ ಸಾಹಿತ್ಯದ
ಮೂಲಕ ಕರ್ನಾಟಕ ಸಂಸ್ಕೃತಿಯ ಸಮಾಜದ ವಿಕಾಸಕ್ಕೆ ಶ್ರಮಿಸಿದರು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಪದ, ಕರ್ನಾಟಕ ಮತ್ತು ಕನ್ನಡಿಗನಿಗೆ ಸಂಬಂಧಿಸಿದ ಕುವೆಂಪು ಅವರ ಪರಿಕಲ್ಪನೆ ಮತ್ತು
ಚಿಂತನೆಗಳು ಗಮನಾರ್ಹವಾದವು ಎಂದರು.
ಕಾರ್ಯಕ್ರಮವನ್ನು
ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಹಾಸನ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ
ನಾಕಲಗೂಡು ಮಾತನಾಡಿ ಕನ್ನಡ ಪ್ರಜ್ಞೆ ಎನ್ನುವುದು ಕುವೆಂಪುರವರ ಅಂತರ್ಮುಖಿ ಮತ್ತು ಬಹಿರ್ಮುಖಿ ಎರಡೂ ದಿಸೆಗಳಲ್ಲೂ ಹಾಸುಹೊಕ್ಕಾಗಿತ್ತು.
ಕುವೆಂಪು ಯಾವುದೇ ಜಾತಿ, ಧರ್ಮ, ಪಂಗಡಕ್ಕೆ ಅಂಟಿಕೊಳ್ಳಲಿಲ್ಲ. ಅವರು ಬರೆದಂತೆ ನಡೆದವರು,
ನಡೆದಂತೆ ಬರೆದವರು ಎಂದರು.
ಟೈಮ್ಸ್
ಗುರುಕುಲ ಮತ್ತು ಟೈಮ್ಸ್ ಪಿ.ಯು.ಕಾಲೇಜಿನ
ಅಧ್ಯಕ್ಷ ಎ.ಬಿ.ಸುರೇಂದ್ರ
ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ನಾಡು ನುಡಿಗೆ ಕುವೆಂಪು
ಕೊಟ್ಟ ಕೊಡುಗೆ ಅಪಾರವಾದುದು. ಕರ್ನಾಟಕ ಚಾರಿತ್ರಿಕ ನಾಡಗೀತೆಯನ್ನು ಅದ್ಭುತವಾಗಿ ಬರೆದು ನಮಗೆ ನೀಡಿದ್ದಾರೆ. ನಾವು
ಎಷ್ಟೇ ಭಾಷೆಗಳನ್ನು ಕಲಿತರೂ ಕನ್ನಡ ನಮ್ಮ ತಾಯಿ ಭಾಷೆ.
ಅದಕ್ಕೆ ತನ್ನದೇಯಾದ ಮಹತ್ವ ಹಾಗೂ ಪೂಜ್ಯನೀಯ ಗೌರವ
ಸ್ಥಾನವಿದೆ. ನಮ್ಮ ನಾಡುನುಡಿ, ಕವಿ
ಸಾಹಿತಿಗಳ ಬದುಕನ್ನು ನಮ್ಮ ಮಕ್ಕಳು ಅರ್ಥ
ಮಾಡಿಕೊಳ್ಳಬೇಕಿದೆ ಎಂದರು.
ಕೇಂದ್ರ
ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಆಶಯ
ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಹಿರಿಯ
ಸಾಹಿತಿ ಗೊರೂರು ಅನಂತರಾಜು, ಕದಂಬ ಸೇನೆಯ ಜಿಲ್ಲಾಧ್ಯಕ್ಷ
ಎ.ಎಚ್.ಗಣೇಶ್, ಎ.ವಿ.ಕೆ. ಕಾಲೇಜಿನ
ಉಪನ್ಯಾಸಕ ಪ್ರಕಾಶ್, ಮೈಸೂರಿನ ಅದಮ್ಯ ರಂಗ ಶಾಲೆಯ ಸ್ಥಾಪಕ
ಹಾಗೂ ರಂಗಕರ್ಮಿ ಚಂದ್ರು ಮಂಡ್ಯ, ಕವಯಿತ್ರಿಯರಾದ ಗಿರಿಜಾ ನಿರ್ವಾಣಿ, ಮಂಜುಳಾ ಪ್ರಸಾದ್, ಪದ್ಮಾವತಿ ವೆಂಕಟೇಶ್, ಪ್ರಭಾಮಣಿ, ಪ್ರಾಂಶುಪಾಲರಾದ ಶೈಲರಾಯ್, ಉಪನ್ಯಾಸಕ ಪ್ರಮೋದ್, ಕನ್ನಡ ಉಪನ್ಯಾಸಕ ಅರವಿಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


