ಹುನಗುಂದ: ತಾಲೂಕಿನ ಸೂಳೇಬಾವಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಸನ್ಮಾನಿಸಿ ಸಿಹಿ ತಿನ್ನಿಸಿ ಕಾರ್ಮಿಕ ದಿನ ಆಚರಿಸಲಾಯಿತು. ಶಿಕ್ಷಕ ಅಶೋಕ ಬಳ್ಳಾ ತಮ್ಮ ನೂತನ ಮನೆ ಕಟ್ಟಡದ ಕಾರ್ಮಿಕರಿಗೆ ಶಾಲು ಹೊದಿಸಿ ಸನ್ಮಾನಿಸಿ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಶಿಕ್ಷಕ ಸುಭಾಸ ಕಣಗಿ ಮಾತನಾಡಿ, ಕಾರ್ಮಿಕರ ಬದುಕು ತುಂಬಾ ಶ್ರಮದಾಯಕವಾಗಿದ್ದು, ಬಿಸಿಲು ಮಳೆ ಗಾಳಿಯನ್ನದೆ ನಿರಂತರ ದುಡಿಮೆಯಲ್ಲಿ ತೊಡಗುವ ಅವರ ಬದುಕು ಬಂಗಾರವಾಗಬೇಕಾದರೆ, ದಿನದ ಕೂಲಿಯಲ್ಲಿ ತುಸು ಭಾಗ ಭವಿಷ್ಯಕ್ಕಾಗಿ ಉಳಿತಾಯ ಮಾಡಬೇಕು. ದುಶ್ಚಟಗಳಿಂದ ದೂರವಿರಬೇಕು. ಮೈಮುರಿದು ದುಡಿಯುವ ಕಾರ್ಮಿಕರು ಆದಾಯ ಕಡಿಮೆ ಇದ್ದರೂ ಆರೋಗ್ಯವಂತರಾಗಿರುತ್ತಾರೆ ಎಂದರು.
ಸನ್ಮಾನ ಸ್ವೀಕರಿಸಿದ ಗುಳೇದಗುಡ್ಡ ತಾಲೂಕಿನ ಪರ್ವತಿ ಗ್ರಾಮದ ಕಾರ್ಮಿಕ ಮಲ್ಲು ಹಾಲಟ್ಟಿ ಮಾತನಾಡಿ ಈ ದಿನ ನಮ್ಮನ್ನು ಗೌರವಿಸಿ ಸತ್ಕರಿಸಿದ್ದು ಖುಷಿಯ ಸಂಗತಿ. ಅಷ್ಟಾಗಿ ಶಾಲೆ ಕಲಿಯದ ನಮಗೆ ಕಾರ್ಮಿಕರಿಗೂ ಒಂದು ದಿನ ಆಚರಣೆ ಮಾಡುತ್ತಾರೆ ಎಂಬುದು ತಿಳಿದಿರಲಿಲ್ಲ. ಶಾಲೆ ಕಲಿತರೆ ಇಂತಹ ತಿಳುವಳಿಕೆ, ಸಮಾಜದಲ್ಲಿ ಗೌರವ, ಸರಕಾರಿ ನೌಕರಿ, ಕೈತುಂಬ ಸಂಬಳ ಸಿಗುತ್ತದೆ. ಹೀಗಾಗಿ ನಮ್ಮ ಮಕ್ಕಳಿಗಾದರೂ ಒಳ್ಳೆಯ ಶಿಕ್ಷಣ ಕೊಡಿಸುತ್ತೇವೆ ಎಂದರು.
ಶಿಕ್ಷಕ ಅಶೋಕ ಬಳ್ಳಾ ಮಾತನಾಡಿ, ಸರಕಾರ, ಸಂಘ-ಸಂಸ್ಥೆಗಳು ತಮ್ಮ ಕಚೇರಿಗಳಲ್ಲಿ ಈ ದಿನ ಆಚರಿಸಿದರೆ ಸಾಲದು. ನಿಜವಾದ ಕಾರ್ಮಿಕರಿಗೆ ಈ ದಿನದ ಅರಿವು, ಉದ್ದೇಶಗಳು ತಿಳಿಯಬೇಕು. ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗ ಮತ್ತು ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವ ಅವಕಾಶಗಳ ಬಗ್ಗೆ ಜಾಗೃತಿ ಮೂಡಬೇಕು ಎಂಬ ಉದ್ದೇಶದಿಂದ ಅವರು ಕೆಲಸ ನಿರ್ವಹಿಸುವ ಸ್ಥಳದಲ್ಲೇ ಅವರನ್ನು ಸತ್ಕರಿಸಿ ಕಾರ್ಮಿಕರ ದಿನ ಆಚರಿಸಲಾಗಿದೆ. ಇದರಿಂದ ಅವರಲ್ಲಿ ತಮ್ಮ ವೃತ್ತಿ ಗೌರವ ಮತ್ತು ಅಭಿಮಾನ ಇಮ್ಮಡಿಗೊಳ್ಳುತ್ತದೆ ಎಂಬ ಸದಾಶಯ ನನ್ನದು ಎಂದರು.
ಈ ಸಂದರ್ಭದಲ್ಲಿ ಮೇಸ್ತ್ರಿ ಮಹಮ್ಮದ ರಫೀಕ್ ಮುಲ್ಲಾ ಕಾರ್ಮಿಕರಾದ ಕುಶೇಲ ಕೊಟ್ನಳ್ಳಿ, ರಮೇಶ ಜಟ್ರಿ, ಕೆಲೂಡೆಪ್ಪ ಮುರಡಿ, ಯಲ್ಲಪ್ಪ ಹಾದಿಮನಿ, ಮಕ್ಕಳಾದ ಪ್ರಥಮ್, ವಿಮೋಚನಾ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


