ನಾಗರಿಕ ಪ್ರಜ್ಞೆ: ಕಸವನ್ನು ಎಲ್ಲಿ ಹಾಕಬೇಕು ಎಂಬುದನ್ನೇ ಕಲಿಸದ ವ್ಯವಸ್ಥೆ - ಇದು ಯಾವ ಅಭಿವೃದ್ಧಿ?

Upayuktha
0



ಸ್ವಾತಂತ್ರ್ಯ ಸಿಕ್ಕು ಸುಮಾರು 80 ವರ್ಷಗಳಾದರೂ, “ಕಸವನ್ನು ಎಲ್ಲಿ ಹಾಕಬೇಕು” ಎಂಬ ಸಾಮಾನ್ಯ ನಾಗರಿಕ ಜ್ಞಾನವನ್ನು ನಮ್ಮ ಸಮಾಜದಲ್ಲಿ ಇನ್ನೂ ಸಂಪೂರ್ಣವಾಗಿ ರೂಢಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದು ಕೇವಲ ವ್ಯಕ್ತಿಗಳ ತಪ್ಪೇ, ಅಥವಾ ನಮ್ಮ ಶಿಕ್ಷಣ ವ್ಯವಸ್ಥೆಯ ವೈಫಲ್ಯವೇ?


ಇಂದು ಎಲ್ಲೆಡೆ “ಶಿಕ್ಷಣವೇ ಅಭಿವೃದ್ಧಿಗೆ ಮೂಲ” ಎಂಬ ಮಾತು ಕೇಳಿಸುತ್ತಿದೆ. ಈ ಮಾತಿನ ಆಧಾರದಲ್ಲಿ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿವೆ. “ಗುಣಮಟ್ಟದ ಶಿಕ್ಷಣ” ಎಂಬ ಹೆಸರಿನಲ್ಲಿ ಆರಂಭವಾದ ಈ ಸಂಸ್ಥೆಗಳು, ಬಹುಮಟ್ಟಿಗೆ ಶಿಕ್ಷಣದ ವ್ಯಾಪಾರಿಕರಣದ ದಾರಿಗೆ ತಿರುಗಿರುವುದು ಕಣ್ಣಿಗೆ ಬೀಳುತ್ತದೆ. ಅಂಕಗಳು, ಫಲಿತಾಂಶಗಳು, ಜಾಹೀರಾತುಗಳು—ಇವೇ ಮುಖ್ಯವಾಗಿವೆ; ಆದರೆ ನಾಗರಿಕ ಜವಾಬ್ದಾರಿ, ಸಾಮಾಜಿಕ ಬದ್ದತೆಗಳು ಹಿಂದಕ್ಕೆ ಸರಿದಿವೆ.


ನಿಜವಾಗಿ ಗುಣಮಟ್ಟದ ಶಿಕ್ಷಣ ದೊರಕುತ್ತಿದ್ದರೆ, ನಮ್ಮ ನಗರಗಳು ಮತ್ತು ಊರುಗಳು ಇಷ್ಟು ಅಸ್ವಚ್ಛವಾಗಿರುತ್ತಿವೆಯೇ?


ಪ್ರತಿ ದಿನ ನಾವು ಕಾಣುವ ದೃಶ್ಯ ಒಂದೇ- ರಸ್ತೆ ಬದಿಗಳಲ್ಲಿ ಕಸದ ರಾಶಿ, ಪ್ರವಾಸಿ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಚೀಲಗಳು. ತೀರ್ಥಕ್ಷೇತ್ರಗಳಿಗೂ ಹೋಗಿದರೆ ಸಹ ಇದೇ ಪರಿಸ್ಥಿತಿ. ಪ್ರಕೃತಿಯ ಸೌಂದರ್ಯಕ್ಕಿಂತ ಮೊದಲು ನಮ್ಮ ಅಜಾಗರೂಕತೆಯ ಗುರುತುಗಳು ಕಾಣಿಸುತ್ತವೆ.


ಇದು ಕೇವಲ ಸ್ಥಳೀಯ ಆಡಳಿತದ ವೈಫಲ್ಯವಲ್ಲ. ಹೌದು, ನಗರಗಳು ವೇಗವಾಗಿ ಬೆಳೆಯುತ್ತಿವೆ, ಮೂಲಸೌಕರ್ಯ ಒದಗಿಸುವ ಜವಾಬ್ದಾರಿ ಆಡಳಿತದದ್ದೇ. ಆದರೆ, “ಕಸವನ್ನು ಎಲ್ಲಿ ಬೇಕಾದರೂ ಎಸೆಯಬಹುದು” ಎಂಬ ಮನೋಭಾವ ಬೆಳೆಸಿದವರು ಯಾರು? ನಿಯಮಗಳ ಕೊರತೆ ಒಂದೆಡೆ ಇದ್ದರೆ, ಜವಾಬ್ದಾರಿಯ ಕೊರತೆ ಇನ್ನೊಂದೆಡೆ ಇದೆ.


ಒಮ್ಮೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಒಂದು ಮಾತು ನೆನಪಾಗುತ್ತದೆ— “ವಿದ್ಯಾವಂತರು ಕಸ ಎಸೆಯುತ್ತಾರೆ; ಅವಿದ್ಯಾವಂತರು ಕಸವನ್ನು ಗುಡಿಸುತ್ತಾರೆ.”


ಇದು ಕೇವಲ ವ್ಯಂಗ್ಯವಲ್ಲ, ಒಂದು ಕಹಿ ಸತ್ಯ.


ಹಾಗಾದರೆ ಪ್ರಶ್ನೆ ಏನು ಎಂದರೆ— ನಮ್ಮ ಶಿಕ್ಷಣ ಸಂಸ್ಥೆಗಳು ಏನು ಕಲಿಸುತ್ತಿವೆ? ಕೇವಲ ಅಂಕ ಗಳಿಸುವುದನ್ನೇನಾ? ಅಥವಾ, ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಬದುಕುವುದನ್ನೂ ಕಲಿಸುತ್ತಿವೆಯಾ?


ಶಿಕ್ಷಣ ಎಂದರೆ ಕೇವಲ ಪುಸ್ತಕ ಜ್ಞಾನವಲ್ಲ. ಅದು ಬದುಕಿನ ಶಿಸ್ತನ್ನು, ಸಾರ್ವಜನಿಕ ಸ್ಥಳಗಳ ಬಗ್ಗೆ ಗೌರವವನ್ನು, ಪರಿಸರದ ಬಗ್ಗೆ ಕಾಳಜಿಯನ್ನು ಬೆಳೆಸಬೇಕು. ಶಾಲೆಯಲ್ಲಿಯೇ “ಕಸವನ್ನು ಸರಿಯಾದ ಸ್ಥಳದಲ್ಲಿ ಹಾಕುವುದು” ಎಂಬ ಸರಳ ಅಭ್ಯಾಸವನ್ನು ಬಲವಾಗಿ ಬೆಳೆಸಿದರೆ, ಸಮಾಜದಲ್ಲಿ ದೊಡ್ಡ ಬದಲಾವಣೆ ಸಾಧ್ಯ.


ಆಡಳಿತ ವ್ಯವಸ್ಥೆಗಳೂ ತಮ್ಮ ಪಾತ್ರವನ್ನು ಮರೆತಂತಿಲ್ಲ. ನಿಯಮಗಳನ್ನು ಕಠಿಣವಾಗಿ ಜಾರಿಗೊಳಿಸುವುದು, ಕಸದ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು—ಇವು ಕೂಡ ಅತಿ ಮುಖ್ಯ. ಪಂಚಾಯಿತಿಗಳು, ನಗರಸಭೆಗಳು ಚುನಾವಣೆಗಳಿಗಷ್ಟೇ ಸೀಮಿತವಾಗದೆ, ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು.


ಪ್ರವಾಸೋದ್ಯಮದ ದೃಷ್ಟಿಯಿಂದಲೂ ಇದು ಮಹತ್ವದ್ದಾಗಿದೆ. ಸ್ವಚ್ಛವಾದ, ಸುಂದರವಾದ ಸ್ಥಳಗಳು ಮಾತ್ರ ಜನರನ್ನು ಆಕರ್ಷಿಸುತ್ತವೆ. ನಮ್ಮ ದೇಶದ ಅಭಿವೃದ್ಧಿಗೆ ಪ್ರವಾಸೋದ್ಯಮ ಒಂದು ಪ್ರಮುಖ ಆಧಾರವಾಗಿದ್ದರೂ, ಅಸ್ವಚ್ಛತೆ ಅದಕ್ಕೆ ಅಡ್ಡಿಯಾಗುತ್ತಿದೆ.


ಕೊನೆಯಲ್ಲಿ ಪ್ರಶ್ನೆ ಮತ್ತೆ ಅದೇ— “ಶಿಕ್ಷಣ ಇದ್ದೂ, ಶಿಸ್ತಿಲ್ಲದ ಸಮಾಜ. ಇದು ಯಾವ ಪ್ರಗತಿ?”



- ವಿಶ್ವನಾಥ ದೊಡ್ಮನೆ, ಸಿರ್ಸಿ



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top