‘ಗಜಾನನ ಕ್ರಿಕೆಟರ್ಸ್’ ಪ್ರೀಮಿಯರ್: ಕರಾವಳಿಯ ಕ್ರಿಕೆಟ್ ಸಂಸ್ಕೃತಿಗೆ ಸಿನೆಮಾ ರೂಪ

Upayuktha
0


ಮಂಗಳೂರು: ಮಂಗಳೂರಿನ ಭಾರತ್ ಸಿನೆಮಾಸ್‌ನಲ್ಲಿ ಗುರುವಾರ ಸಂಜೆ 5.30ಕ್ಕೆ ತುಳು ಚಲನಚಿತ್ರ ‘ಗಜಾನನ ಕ್ರಿಕೆಟರ್ಸ್: ಜಂತೊಟ್ಟು  ಸಿನ್ಸ್ 1983’ ಚಿತ್ರದ ಪ್ರೀಮಿಯರ್ ಪ್ರದರ್ಶನ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುದ್ರಣ, ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮ ಪ್ರತಿನಿಧಿಗಳು, ಸ್ಥಳೀಯ ಇನ್ಫ್ಲುಯೆನ್ಸರ್‌ಗಳು ಮತ್ತು ಸಿನಿರಂಗದ ಕಲಾವಿದರು ಭಾಗವಹಿಸಿದರು.


ಕೀರ್ತನ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಪ್ರಜ್ವಲ್ ಶೆಟ್ಟಿ ನಿರ್ಮಿಸಿದ್ದು, ಅವರು ಇದೇ ಚಿತ್ರದ ಮೂಲಕ ನಟನಾಗಿ ಸಹ ಕಾಣಿಸಿಕೊಂಡಿದ್ದಾರೆ. ರೋಹನ್ ಪೆರೆರಾ ಹಾಗೂ ಸಂತೋಷ್ ಲಾಡ್ ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಗೀತವನ್ನು ಸೃಜನ್ ಕುಮಾರ್ ತೋನ್ಸೆ ನೀಡಿದ್ದಾರೆ.


ವಿನೀತ್ ಕುಮಾರ್ (ಸಚ್ಚು), ಸಮತಾ ಅಮೀನ್ (ಅನುಷಾ), ಅನ್ವಿತಾ ಸಾಗರ್ (ಕಾವ್ಯ) ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಕರಾವಳಿಯ ಖ್ಯಾತ ಹಾಸ್ಯ ಕಲಾವಿದರು ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಜೆ ಹಾಗೂ ಉಮೇಶ್ ಮಿಜಾರ್ ಅವರ ಅಭಿನಯ ಚಿತ್ರಕ್ಕೆ ವಿಶೇಷ ಮೆರುಗು ನೀಡಿದೆ.


ಪ್ರದರ್ಶನದ ವೇಳೆ ನಟರು, ನಿರ್ದೇಶಕರು, ನಿರ್ಮಾಪಕರು ಮತ್ತು ಬರಹಗಾರರು ಪ್ರೇಕ್ಷಕರೊಂದಿಗೆ ಕೊನೆಯವರೆಗೂ ಉಳಿದು ಸಂವಾದ ನಡೆಸಿ, ಹಾಜರಾತಿಗೆ ಕೃತಜ್ಞತೆ ಸಲ್ಲಿಸಿದರು.


ಚಿತ್ರವು ಕರಾವಳಿಯ ಅಂಡರ್‌ಆರ್ಮ್ ಕ್ರಿಕೆಟ್ ಸಂಸ್ಕೃತಿಯನ್ನು ಹಿನ್ನೆಲೆಯಾಗಿ ತೆಗೆದುಕೊಂಡು ಸ್ನೇಹ, ಸ್ಪರ್ಧೆ, ಪ್ರೀತಿ ಹಾಗೂ ಜೀವನದ ಹೋರಾಟಗಳನ್ನು ತೆರೆದಿಡುತ್ತದೆ. ಕಥಾಹಂದರ ಸರಳವಾಗಿದ್ದು, ಕೆಲವೆಡೆ ನಿರೂಪಣೆಯಲ್ಲಿ ನಿಧಾನಗತಿ ಕಂಡುಬಂದರೂ, ಸ್ಥಳೀಯ ಹಾಸ್ಯ, ಸಂಭಾಷಣೆಗಳು ಮತ್ತು ಸಾಂಸ್ಕೃತಿಕ ಅಂಶಗಳು ಪ್ರೇಕ್ಷಕರನ್ನು ಹಿಡಿದಿಡುತ್ತವೆ.


ಒಟ್ಟಾರೆ, ‘ಗಜಾನನ ಕ್ರಿಕೆಟರ್ಸ್’ ಚಿತ್ರವು ಭಾರೀ ನಿರೀಕ್ಷೆಗಳಿಲ್ಲದೆ ನೋಡುವವರಿಗೆ ಮನರಂಜನಾತ್ಮಕ ಅನುಭವ ನೀಡುವ ಚಿತ್ರವಾಗಿದ್ದು, ವಿಶೇಷವಾಗಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ ನೋಡಲು ಸೂಕ್ತವಾದ ತುಳು ಚಿತ್ರವೆಂದು ಹೇಳಬಹುದು.


- ಅನನ್ಯ ಭಟ್, ಕೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top