ಪುತ್ತೂರು: ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮೂರು ಪರಿಶಿಷ್ಟ ಪಂಗಡದ (ST) ಬಡ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ವಿಳಂಬ ನೀತಿಯನ್ನು ಖಂಡಿಸಿ ನಡೆದ ಧರಣಿ ಸತ್ಯಾಗ್ರಹಕ್ಕೆ ಅಧಿಕಾರಿಗಳು ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಹೋರಾಟದ ಹಿನ್ನೆಲೆ:
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುಣಚ ಗ್ರಾಮದ ಮೂರು ಅರ್ಹ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ತಾರತಮ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ, ಅಂಬೇಡ್ಕರ್ ತತ್ವ ರಕ್ಷಣಾ ಸಮಿತಿಯ ಅಧ್ಯಕ್ಷ ಗಿರಿಧರ್ ನಾಯ್ಕ್ ನೇತೃತ್ವದಲ್ಲಿ ಬೃಹತ್ ಧರಣಿ ಹಮ್ಮಿಕೊಳ್ಳಲಾಗಿತ್ತು. ಈ ಹೋರಾಟಕ್ಕೆ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ಕ್ಯಾಪ್ಟನ್ ಬ್ರಜೇಶ್ ಚೌಟ ಹಾಗೂ ಪುತ್ತೂರು-ಬಂಟ್ವಾಳ ಬಿಜೆಪಿ ಘಟಕಗಳು ಸಂಪೂರ್ಣ ಬೆಂಬಲ ಘೋಷಿಸಿ, ಬಡ ಕುಟುಂಬಗಳ ಪರವಾಗಿ ಧ್ವನಿ ಎತ್ತಿದ್ದವು.
ಸ್ಥಳಕ್ಕೆ ಶಾಸಕ ರಾಜೇಶ್ ನಾಯ್ಕ್ ಭೇಟಿ – ಅಧಿಕಾರಿಗಳ ಭರವಸೆ:
ಇಂದು (ಮೇ 21, 2026) ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಾಗ ಸ್ಥಳಕ್ಕೆ ಭೇಟಿ ನೀಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಧರಣಿನಿರತರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಬಳಿಕ ತಹಶೀಲ್ದಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು, ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ಶಾಸಕರ ಮಧ್ಯಸ್ಥಿಕೆಗೆ ಸ್ಪಂದಿಸಿದ ದಂಡಾಧಿಕಾರಿಗಳು, ಬರುವ ಮೇ 26, 2026ರಂದು ಪೆರ್ಣೆ ಗ್ರಾಮದಲ್ಲಿ ನಡೆಯಲಿರುವ ಬಗರ್ ಹುಕುಂ ಸಭೆಯಲ್ಲಿ ಈ ಮೂರು ಕುಟುಂಬಗಳಿಗೆ ಕಡ್ಡಾಯವಾಗಿ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿದರು.
"ಒಂದು ವೇಳೆ ನಿಗದಿತ ದಿನಾಂಕದಂದು ಹಕ್ಕುವಂಚಿತ ಫಲಾನುಭವಿಗಳಿಗೆ ನ್ಯಾಯ ಸಿಗದಿದ್ದರೆ, ಮತ್ತೆ ಆರಂಭವಾಗುವ ಪ್ರತಿಭಟನೆಗೆ ನಾನು ಸ್ವತಃ ಮುಂಚೂಣಿಯಲ್ಲಿ ನಿಂತು ಬೆಂಬಲ ನೀಡಲಿದ್ದೇನೆ" ಎಂದು ಶಾಸಕ ರಾಜೇಶ್ ನಾಯ್ಕ್ ಈ ಸಂದರ್ಭದಲ್ಲಿ ಎಚ್ಚರಿಸಿದರು.
ತಾತ್ಕಾಲಿಕವಾಗಿ ಮುಂದೂಡಲ್ಪಟ್ಟ ಪ್ರತಿಭಟನೆ:
ಬಳಿಕ ಸ್ಥಳಕ್ಕೆ ಆಗಮಿಸಿದ ಪುತ್ತೂರು ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಅವರು, ಅಧಿಕಾರಿಗಳಿಂದ ಹಕ್ಕು ಪತ್ರ ವಿತರಣೆಯ ಭರವಸೆಯ ಆದೇಶವನ್ನು ಲಿಖಿತ ರೂಪದಲ್ಲಿ ಪಡೆದುಕೊಂಡರು. ಲಿಖಿತ ಆಶ್ವಾಸನೆ ಸಿಕ್ಕ ಹಿನ್ನೆಲೆಯಲ್ಲಿ, ಮೇ 26ರವರೆಗೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಲಾಯಿತು.
ಪ್ರಮುಖರ ಉಪಸ್ಥಿತಿ:
ಈ ಸಂದರ್ಭದಲ್ಲಿ ಹಕ್ಕು ಪತ್ರದ ಫಲಾನುಭವಿಗಳಾದ ಪ್ರೇಮಾ, ಬೇಬಿ, ವಿಜಯಲಕ್ಷ್ಮಿ ಅವರೊಂದಿಗೆ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜ್ರೆಮಾರು, ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಪ್ರಮುಖ ಮುಖಂಡರಾದ ಸುದರ್ಶನ್ ಬಜ, ಹರೀಶ್ ಬಿಜತ್ರೆ, ಹರಿಪ್ರಸಾದ್ ಯಾದವ್, ಲೋಕೇಶ್ ಚಾಕೋಟೆ, ವಿದ್ಯಾಧರ್ ಜೈನ್, ರಾಜೇಶ್ ಬಾಳೆಕಲ್ಲು, ಉದಯ ವಿಟ್ಲ, ಹರೀಶ್ ವಿಟ್ಲ, ಕಿರಣ್ ಶೆಟ್ಟಿ, ಕಿರಣ್ ರೈ, ಮಾಧವ ಮಾವೆ, ರೋನಿ ಡಿಸೋಜ, ದಿನೇಶ್ ಅಮ್ಟೂರು, ನಿತೀಶ್ ಕುಮಾರ್ ಶಾಂತಿವನ ಹಾಗೂ ಪುರುಷೋತ್ತಮ್ ಮುಂಗ್ಲಿಮನೆ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


