ಅವನು ಕಾದು ಕುಳಿತಿದ್ದ ಅವಳಿಗೋಸ್ಕರ ಉದ್ಯಾನದಲ್ಲಿ.
ಕಾಯುವುದರಲ್ಲಿರುವ ಹಿತವಾದ ನೋವು ಅವನೇಷ್ಟೋ ಬಾರಿ ಅನುಭವಿಸಿದ್ದ. ಸಂಜೆ ಸಿಗುವೆ ಎಂದು ಹೇಳಿದವಳಿಗೋಸ್ಕರ ಮಧ್ಯಾನದಿಂದಲೇ ಕೂತು ಬಿಟ್ಟಿದ್ದ.
ಆಫೀಸಿನಲ್ಲಿ ಹೊಟ್ಟೆ ನೋವು ಎಂಬ ಸೋಗು ಹಾಕಿ ಹೋದವನು ನೆರವಾಗಿ ಉದ್ಯಾನಕ್ಕೆ ಬಂದಿದ್ದ.
ದೂರದಲ್ಲಿ ನಸು ನೀಲಿಯ ಸೀರೆಯಲ್ಲಿ ಒಂದು ಆಕೃತಿ ಬರುವುದು ಗೋಚರಿಸಿತು.
ಅಷ್ಟು ಹೊತ್ತಿನಿಂದ ಕಾದವನಿಗೆ ಈಗವಳು ಬರುವುದು ತಿಳಿದರೂ ಹುಸಿ ಮುನಿಸುಗೊಂಡವನಂತೆ ತಿರುಗಿ ಕುಳಿತ. ಅವಳು ಬಂದವಳೇ ಧುತ್ತನೆ ಅವನ ಪಕ್ಕ ಅವನಿಗೆ ಸಾಂಚಿ ಕುಳಿತಳು.
ತಿರುಗಿದ ಇವನು ಕಿರು ನಗೆ ನಕ್ಕ.
ಅವಳು “ಏನೋ. ಸಾಹೇಬ್ರಿಗೆ ಸಿಟ್ಟು ಬಂದ ಹಾಗಿದೆ” ಎಂದು ಕಣ್ಣು ಹೊಡೆದು ಕೈ ಅದುಮಿದಳು.
ಅವನ ನಾಟಕದ ಸಿಟ್ಟು ಜರ್ರನೆ ಇಳಿದು ಹೋಯಿತು.
ಅವಳಿಗೆ ಗೊತ್ತು ಅವನದೆಷ್ಟು ಕೋಪ ಗೊಂಡರೂ ಅವಳೆದುರು ಮದವೇರಿದ ಆನೆ ಹೆಣ್ಣಾನೆಗೆ ಮಣಿಯುವಂತೆ ಕರಗಿ ಹೋಗುವನೆಂದು.
ಅವಳನ್ನೇ ನೋಡಿ ಆ ಮೋಡಿಗೆ ಅವಾಕ್ಕಾಗಿ ಕುಳಿತ.
ಅವಳು “ಲೋ ಯಾಕೆ ಹಾಗೆ ನೋಡ್ತಿದ್ಯಾ, ಐದು ವರ್ಷ ಆಯಿತು ನನ್ನ ನೋಡೋದು ಸಾಕಗ್ಲಿಲ್ವಾ!?”
ಅವನು “ಇಲ್ಲ, ಜೀವನ ಪೂರ್ತಿ ಈ ಮೂತಿ ನೋಡ್ಬೇಕು ಅಂತ ಆಸೆ”
ಅವಳು ಬೇಕಂತಲೇ ಮುಂಗುರಳನ್ನು ಹಿಂದೆ ಸರಿಸಿ, ಕಣ್ಣಿನ ಕಾಜಲ್ ಸ್ವಲ್ಪ ಸವರಿ, ಅವನ ಕೆನ್ನೆಗೆ ಉಜ್ಜಿದಳು. “ನಿನ್ ಇವತ್ತು ಮುದ್ದಾಗಿ ಕಾಣುತ್ತಾ ಇದ್ದೀಯ, ದಾರಿಲಿ ಯವ್ದಾದ್ರೂ ನರಿ ನಾಯಿ ದೃಷ್ಟಿ ಆಗ್ದೆ ಇರಲಿ ಅಂತ ಹೀಗ್ ಮಾಡಿದೆ” ಅಂದಳು.
ಮಿಡಿಯುತ್ತಿದ ಅವನ ಹೃದಯ ನಗಾರಿಯಂತೆ ಹೊಡೆಯಲು ಶುರುವಾಯ್ತು.!
ಅವಳ ಕೈ ಹಿಡಿದವನೇ ಎದ್ದು “ಎಲ್ಲಾದರೂ ಹೋಗೋಣ್ವಾ ಎಂದ” ಅವಳುತ್ತಾರಕ್ಕೂ ಕಾಯದೆ ಕೈ ಹಿಡಿದು ಸರ್ರನೆ ಬೈಕ್ ಕಡೆಗೆ ನಡೆದ. ಬೈಕ್ ಹತ್ತಿ ಅವನು ಝುಮ್ಮನೆ ಹೋಗಲು ಹಿಂದಿನಿಂದ ಭಯಗೊಂಡ ಗುಬ್ಬಚ್ಚಿಯಂತೆ ಅವಳು ತಬ್ಬಿ ಹಿಡಿದಳು.
ಕುಳಿರ್ಗಾಳಿ ಬೀಸಲು ಮುಸ್ಸಂಜೆಗೆ ಸುಯ್ಯನೆ ಚಳಿ ಕೊರೆಯ ತೊಡಗಲು ಅವಳ ಅಪ್ಪುಗೆ ಬಿಸಿಯನ್ನಿತ್ತಿತು.
ಅವಳು “ನಿಂಗೆ ಸ್ವಲ್ಪ ಮೆಲ್ಲ ಹೋಗ್ಬಾರ್ದ?! ಯಾಕಿಷ್ಟು ಬೇಗ ಹೋಗ್ತಿ ಎಂದು ಕಿರುಚಿದಳು”
ಅವನೇನು ಅನ್ನಲಿಲ್ಲ ಸುಮ್ಮನೆ ನಕ್ಕ. ಅವನ ನಗು ಅವಳಿಗೆ ಕನ್ನಡಿಯಲ್ಲಿ ಕಂಡಿತು. “ನಂಗೆ ಚಾ ಬೇಕು, ನಿಲ್ಸು”
ಅವನು ಮತ್ತೆರಡು ಕಿಲೋಮೀಟರ್ ಹೋಗಿ ನಿಲ್ಲಿಸಿದ.
ಚಾ ಕುಡಿಯಲು ಆ ಗೊಂಡಂಗಡಿಯ ಹಳದಿ ಲೈಟ್ ನಲ್ಲಿ ಅವಳ ಮುಖ ಮುದ್ದಾಗಿ ಕಂಡಿತು, ಹಳದಿ ಲೈಟ್ ಅವಳ ಮೂಗುತಿ ಮೇಲೆ ಪ್ರತಿಫಲನಗೊಂಡು ರೋಮಾಂಚನಗೊಂಡ. ಪ್ರಾಣಕಿಂತ ಹೆಚ್ಚಾಗಿ ಪ್ರೀತಿಸಿದ್ದ ಅವಳನ್ನು. ಆ ವಿಷಯ ಅವಳಿಗೂ ಗೊತ್ತು. ಒಂದೆರಡು ಚಹಾ ಕುಡಿದವರಿಗೆ ಇನ್ನೇನು ಮಾತಾಡಲು ತೋಚಲಿಲ್ಲ.
ಅವಳು “ಮನೆಗೆ ಬಿಡುವೆಯ, ತುಂಬಾ ಹೊತ್ತಾಯಿತು”
ಅವನು “ನಿ ನಮ್ಮನೆಗೆ ಬಂದು ಬಿಡು, ಎಷ್ಟು ದಿನ ಅಂತ ಕಾಯಲಿ”
ಅವಳು “ಮನೇಲಿ ನನ್ನ ವಿಷ್ಯ ಮಾತಾಡು, ಇನ್ನೆಷ್ಟು ದಿನ ಹೀಗೆ ತಿರ್ಗೋದು ನಾವು”
ಅವನು “ಏನಂತ ಮತಾಡಲಿ, ನನಗೊಂದು ಹುಡುಗಿ ಇಷ್ಟ, ಅವಳಿಗೆ ಮದ್ವೆ ಒಮ್ಮೆ ಆಗಿದೆ, ಗಂಡ ಸರಿ ಇಲ್ಲ, ಕುಡುಕ, ಬಿಟ್ಟೋದ ಅಂತ ಹೇಳಿದ್ರೆ ನಮ್ಮನೇಲಿ ಎಲ್ಲಿ ಒಪ್ಪುತ್ತಾರೆ?!”
ಅವಳು “ಲೋ, ನಿಂಗೆ ಐದು ವರ್ಷದಿಂದ ಜೊತೇಲಿ ಸುತ್ತುವಾಗ ಇದೆಲ್ಲ ಗೊತ್ತಿರ್ಲಿಲ್ವ, ಈಗ ಗೊತ್ತಾಗಿದ್ದ”
ಅವನು “ನನ್ನ ಮನೇಲಿ ಒಪ್ಪಿಸುವೆ ಎಂಬ ನಂಬಿಕೇಲಿ ಇದ್ದೆ, ಆದರೀಗ ನನ್ನ ಅಣ್ಣ ಒಬ್ಬ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾದ ನಂತರ ನನ್ನನ್ನು ತುಂಬಾ ಕಟ್ಟುನಿಟ್ಟಾಗಿ ನಾವು ನೋಡಿದ ಹುಡುಗಿಯನ್ನೇ ಮದುವೆ ಅಂತಲ್ಲಾ ಹೇಳುತ್ತಿದ್ದಾರೆ, ನಾ ಏನ್ ಮಾಡ್ಲಿ”
ಅವಳು “ಅದೇ, ಇದೆಲ್ಲ ನಂಜೊತೆ ಸುತ್ತುವಾಗ ನಿಂಗೇನು ಇರಲಿಲ್ಲ ಮದುವೆ ಮಾಡ್ಕೊಳ್ಳುವ ಎಂದಾಗ ಬಾಲ ಬಿಚ್ಚಿತಿಯ” ಎಂದಳು.
ಅವನು ಏನು ಹೇಳದಾದ, ಬಾ ಎಂದು ಕರೆದುಕೊಂಡು ಹೋಗಿ ಬೈಕ್ ಹತ್ತಿದ.
ಬರುವಾಗ ಇದ್ದ ಸನಿಹ ಹೋಗುವಾಗ ಇರಲಿಲ್ಲ ಅವಳೊಂದಂಗುಲ ಸರಿದು ದೂರ ಕುಳಿತಿದ್ದಳು. ನಿಧಾನಕ್ಕೆ ಅವಳ ಮನೆ ತಲುಪಿದ, ಬೈಕ್ ಇಳಿದವಳು ಏನೂ ಅನ್ನದೆ ನಡೆದಳು. ಅವಳ ಕಣ್ಣಂಚಿನ ನೀರು ಜಿನುಗಿದ್ದು ಅವನಿಗೆ ಗೋಚರವಾಗದೆ ಇರಲಿಲ್ಲ.
ಮನೆ ತಲುಪಿದ ಅವಳು ಬಾಗಿಲು ಹಾಕಿ ಗೊಳೋ ಎಂದು ಅತ್ತಳು.
ಹದಿನೈದು ನಿಮಿಷದಲ್ಲಿ ಕರೆಗಂಟೆ ಬಾರಿಸಿತು, ಸೆರಗಿನಲ್ಲಿ ಕಣ್ಣೊರೆಸಿ ಹೋಗಿ ಬಾಗಿಲು ತೆರೆದವಳಿಗೆ ಬಾಗಿಲಲ್ಲಿ ಅವನು ಗೋಚರಿಸಿದ. ಒಳಗೆ ಬಂದವನೇ ಮೊದಲು ಅವಳನ್ನು ಗಟ್ಟಿಯಾಗಿ ತಬ್ಬಿ ಎತ್ತಿ ಸೋಫಾ ದಲ್ಲಿ ಕುಳ್ಳಿರಿಸಿದ. ಶ್ ಎಂದು ತುಟಿ ಮೇಲೆ ಬೆರಳಿಟ್ಟು, “ನಿ ಮಾತಾಡ್ಬೇಡ, ನ ಹೇಳಿದಾಗೆ ಸುಮ್ನಿರು” ಎಂದು ಕೈಯಲ್ಲಿ ತಂದಿದ್ದ ದೊಡ್ಡ ದೊಡ್ಡ ಎರಡು ಸೂಟ್ಕೇಸ್ ತೆಗೆದು ಅವಳೆಲ್ಲ ವಸ್ತುಗಳನ್ನು ಪ್ಯಾಕ್ ಮಾಡಿದ...
“ನಡಿ ಹೋಗೋಣ, ನಾನ್ ಮನೇಲಿ ಎಲ್ಲ ಮಾತಾಡಿನೇ ಬಂದಿದೀನಿ, ಏನು ಯೋಚನೆ ಮಾಡ್ಬೇಡ, ಮುಂದಿನ ಭಾನುವಾರ ಪಕ್ಕದ ವೆಂಕಟೇಶ್ವರ ದೇವಸ್ಥಾನದಲ್ಲಿ ನಮ್ಮ ಮದುವೆ, ಅಲ್ಲಿ ವರೆಗೆ ನೀನು ನಮ್ಜೊತೆನೆ ಇರು”
ಎಂದು ಅವಳ ಉತ್ತರಕ್ಕೂ ಕಾಯದೆ ದರದರನೆ ಕರೆದುಕೊಂಡು ಹೋಗಿಯೇ ಬಿಟ್ಟ.
ಅವಳು ಏನು ತೋಚದ ಆಡಿನ ಮರಿಯಂತೆ ಅವನನ್ನು ಹಿಂಬಾಲಿಸಿದಳು. ಸಂಜೆ ಅವನ ಕೆನ್ನೆಗೆ ಅವಳು ಇಟ್ಟ ಕಾಜಲ್ ದಾರಿದೀಪಕ್ಕೆ ಸಣ್ಣಕೆ ಹೊಳೆಯಿತು.
-ಸಚಿನ್ ಕುಳಮರ್ವ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


