ಕಾಕ್ರೋಚ್ ಜನತಾ ಪಾರ್ಟಿ: ಯಾವ ಅಜೆಂಡಾ ಹಾವಿನ ಹುನ್ನಾರ…?

Upayuktha
0

  


ಭಾರತದ ಡಿಜಿಟಲ್ ಲೋಕದಲ್ಲಿ ಸುನಾಮಿಯಂತೆ ಅಪ್ಪಳಿಸಿ ಕೇವಲ ಐದೇ ದಿನಗಳಲ್ಲಿ ಕೋಟ್ಯಂತರ ಫಾಲೋವರ್ಸ್ ಗಳಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಈಗ ಭಾರೀ ವಿವಾದಕ್ಕೆ ಸಿಲುಕಿದೆ. ವ್ಯವಸ್ಥೆಯ ವಿರುದ್ಧದ ವ್ಯಂಗ್ಯ ಎನ್ನಲಾಗುತ್ತಿದ್ದ ಜಿರಲೆ ಪಡೆಯ ಹಿಂದೆ ನೆರೆರಾಷ್ಟ್ರ ಪಾಕಿಸ್ತಾನದ ಕೈವಾಡವಿದೆ ಎಂಬ ಶಾಕಿಂಗ್ ಸುದ್ದಿ ಈಗ ಬೆಳಕಿಗೆ ಬಂದಿದೆ.

 

ಕೇವಲ ಐದು ದಿನಗಳಲ್ಲಿ ಒಂದೂವರೆ ಕೋಟಿ ಫಾಲೋವರ್ಸ್ ಗಳಿಸಿ ಬಿಜೆಪಿಯಂತಹ ದೊಡ್ಡ ಪಕ್ಷಗಳನ್ನೇ ದಂಗುಬಡಿಸಿದ್ದ ಪೇಜ್ ಅಸಲಿ ಮುಖವಾಡವನ್ನು ದೆಹಲಿಯ ಬಿಜೆಪಿ ನಾಯಕರೊಬ್ಬರು ಬಹಿರಂಗ ಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಇನ್ಸೈಟ್ ಡೇಟಾ ಪ್ರಕಾರ ಪೇಜ್ ಗೆ ಇರುವ ಫಾಲೋವರ್ಸ್ ಸಂಖ್ಯೆಯಲ್ಲಿ ಭಾರತೀಯರಿಗಿಂತ ಪಾಕಿಸ್ತಾನದವರೇ ಅತಿ ಹೆಚ್ಚು ಎನ್ನುವುದು ದೃಢಪಟ್ಟಿದೆ.

 

ಹಾಗಾದ್ರೆ, ಯಾರ್ಯಾರಿದ್ದಾರೆ ಜಿರಲೆ ಪಡೆಯ ಹಿಂದೆ?

ಬಿಡುಗಡೆಯಾಗಿರುವ ಅಂಕಿ ಅಂಶಗಳ ಪ್ರಕಾರ ಕಾಕ್ರೋಚ್ ಜನತಾ ಪಾರ್ಟಿಯನ್ನು ಫಾಲೋ ಮಾಡುತ್ತಿರುವವರಲ್ಲಿ ಶೇಕಡಾ ೪೯ರಷ್ಟು ಮಂದಿ ಪಾಕಿಸ್ತಾನದವರು. ಇನ್ನುಳಿದಂತೆ ಅಮೆರಿಕ ಶೇಕಡಾ ೧೪, ಬಾಂಗ್ಲಾದೇಶ ಶೇಕಡಾ ೧೪ ಹಾಗೂ ಭಾರತದ ಪಾಲು ಕೇವಲ ಶೇಕಡಾ ೯ರಷ್ಟಿದೆ. ಅಂದರೆ ಪೇಜ್ ಸೃಷ್ಟಿಸಿರುವ ಕ್ರೇಜ್ ಶೇಕಡಾ ೯೦ರಷ್ಟು ಭಾಗ ವಿದೇಶಿ ಫಾಲೋವರ್ಸ್ ಗಳಿಂದ ಕೂಡಿದೆ. ಇದನ್ನು ನೋಡಿರುವ ಬಿಜೆಪಿ ನಾಯಕರು ಇದು ಕಾಕ್ರೋಚ್ ಪಾರ್ಟಿ ಅಲ್ಲ ಬದಲಾಗಿ ಪಾಕಿಸ್ತಾನ್ ಪಾರ್ಟಿ ಎಂದು ಗುಡುಗಿದ್ದಾರೆ.

 

ಈಗಾಗಲೇ ಪಕ್ಷದ ಎಕ್ಸ್ (ಟ್ವಿಟರ್) ಖಾತೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಭಾರತದ ರಾಜಕೀಯ ಮತ್ತು ಸಮಾಜದಲ್ಲಿ ಗೊಂದಲ ಮೂಡಿಸಲು ಹಾಗೂ ಸೋಷಿಯಲ್ ಮೀಡಿಯಾ ಟ್ರೆಂಡ್ ಗಳನ್ನು ಹೈಜಾಕ್ ಮಾಡಲು ಪಾಕಿಸ್ತಾನದ ಬಾಟ್ಗಳು ಮತ್ತು ಫೇಕ್ ಅಕೌಂಟ್ಗಳನ್ನು ಬಳಸಲಾಗುತ್ತಿದೆ ಎಂಬ ಅನುಮಾನ ದಟ್ಟವಾಗಿದೆ. ಯಮುನಾ ನದಿ ತೀರದಲ್ಲಿ ಕಸ ಆಯ್ದು ಸ್ವಚ್ಛಗೊಳಿಸುವ ವಿಡಿಯೋಗಳ ಮೂಲಕ ಜನರ ಗಮನ ಸೆಳೆದಿದ್ದ ಪೇಜ್ ಈಗ ದೇಶದ ಭದ್ರತೆ ಮತ್ತು ಡಿಜಿಟಲ್ ವಾರ್ ಗೆ ಸಂಬಂಧಿಸಿದ ಗಂಭೀರ ಚರ್ಚೆಗೆ ಕಾರಣವಾಗಿದೆ.

 

ಒಟ್ಟಿನಲ್ಲಿ ಕೇವಲ ಜೋಕ್ ಅಥವಾ ಮೀಮ್ ಪೇಜ್ ಎಂದು ಭಾವಿಸಿದ್ದ ಜಿರಲೆ ಪಾರ್ಟಿಯ ಕಥೆ ಈಗ ಅಂತಾರಾಷ್ಟ್ರೀಯ ಪಿತೂರಿಯ ಆಯಾಮ ಪಡೆದುಕೊಂಡಿದೆ. ಭಾರತದ ಯುವಕರು ಇದನ್ನು ಹೊಸ ರಾಜಕೀಯ ಪರ್ಯಾಯ ಎಂದು ಸಂಭ್ರಮಿಸುತ್ತಿದ್ದರೆ ಮತ್ತೊಂದೆಡೆ ಶತ್ರು ರಾಷ್ಟ್ರದ ಫಾಲೋವರ್ಸ್ ಸಂಖ್ಯೆ ನೋಡಿ ದೇಶದ ನೆಟ್ಟಿಗರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿದೆ. ಜಿರಲೆ ಪಡೆಯ ಅಸಲಿ ಉದ್ದೇಶವೇನು ಎಂಬುದು ಈಗ ಸಮಗ್ರ ತನಿಖೆಯ ವಿಷಯವಾಗಿದೆ.

 

ಪ್ರಾಮಾಣಿಕವಾಗಿ ಹೇಳಬೇಕೆಂದರೆ ಸಾಮಾಜಿಕ ಮಾಧ್ಯಮದ ಟ್ರೆಂಡ್ ಆಗಿರುವುದನ್ನು ಬಿಟ್ಟರೆ ಬೇರೇನೂ ಇಲ್ಲ. ಇದು "ಕನಿಷ್ಠ ಪಕ್ಷ ಅವರು ಏನನ್ನಾದರೂ ಮಾಡುತ್ತಿದ್ದಾರೆ" ಎಂಬಂತಹ ಕೆಲಸಗಳಲ್ಲಿ ಒಂದಾಗಿದೆ, ಅದು ಬಹಳಷ್ಟು ಬಿಸಿ ಗಾಳಿಯನ್ನು ಬೀಸುತ್ತದೆ ಮತ್ತು ಏನೂ ಫಲಿತಾಂಶವನ್ನು ನೀಡುವುದಿಲ್ಲ. ಆದರೂ ಉಗಿಯನ್ನು ಬಿಡಲು ಉತ್ತಮ ಮಾರ್ಗವಾಗಿದೆ.

 

ಮೊದಲಿಗೆ, ಕಾಕ್ರೋಚ್ ಜನತಾ ಪಾರ್ಟಿ ಎಂಬ ಹೆಸರು, ಗ್ರಾಮೀಣ, ಮೊಹಲ್ಲಾ ಪ್ರದೇಶಗಳಲ್ಲಿ ಸಾಮಾನ್ಯ ಜನರಿಗೆ ಇದರ ಬಗ್ಗೆ ನೀವು ಹೇಗೆ ಮನವರಿಕೆ ಮಾಡಿಕೊಡುತ್ತೀರಿ? ನನ್ನ ಪ್ರಕಾರ ಜಿರಳೆಯನ್ನು ಚಪ್ಪಲಿಯಿಂದ ಹೊಡೆಯಬೇಕಾದ ಅಸಹ್ಯಕರ ಜೀವಿ. ಸಾಮಾಜಿಕ ಮಾಧ್ಯಮದಲ್ಲಿ "ಜಿರಳೆ ಎಂದು ಹೆಮ್ಮೆಪಡುತ್ತೇನೆ" ಎಂದು ನಿಮ್ಮನ್ನು ನೀವು ತೋರಿಸಿಕೊಳ್ಳುವುದು ಒಂದು ವಿಷಯ, ಅದನ್ನು ಸಾರ್ವಜನಿಕವಾಗಿ ಹೇಳಿಕೊಳ್ಳುವುದು ಇನ್ನೊಂದು ವಿಷಯ, ಅಲ್ಲಿ ನಿಮ್ಮನ್ನು ಒಂದು ರೀತಿಯ ಹುಚ್ಚನಂತೆ ನೋಡಲಾಗುತ್ತದೆ ಎಂಬುದು ಅತ್ಯಂತ ಗಹನವಾದ ವಿಷಯ. ಭಾರತದ ನಿರುದ್ಯೋಗಿ ಯುವಕರನ್ನು ದೇಶದೊಳಗೇ ದೊಂಬಿಯೆಬ್ಬಿಸುವಂತೆ ಮಾಡುವ ದೇಶದ್ರೋಹಿಗಳ ಮಹಾಸಂಚು ಎಂಬುದು ಯಾವನಿಗೆ ಅರ್ಥವಾಗುವುದಿಲ್ಲ, ಹೇಳಿ.

 

ಯಾವನು ತಾನು ಸೋಮಾರಿ ಮತ್ತು ನಿರುದ್ಯೋಗಿ ಎಂದು ತನ್ನನ್ನು ತಾನು ಬಗ್ಗಿಸಿಕೊಂಡು, ನಿಜ ಜೀವನದಲ್ಲಿಯೂ ಹಾಗೆ ಮಾಡಲು ಪ್ರಯತ್ನಿಸಿ, ತನ್ನನ್ನು ನೋಡಿದವರು ನಗುತ್ತಾರೆಂದು ಅರಿಕೆ ಮಾಡಿಕೊಂಡು ಸಾಮಾಜಿಕ ಮಾಧ್ಯಮದಿಂದ ಹೊರಬಂದು ನಿಜ ಬದುಕಿನ ಬಗ್ಗೆ ಆಲೋಚಿಸಿದಾಗ ಇಂಥ ಸಂಚುಗಳ ಬಗ್ಗೆ ಅರಿವಾಗುತ್ತದೆ.

 

ಅಷ್ಟಕ್ಕೂ ಕಣ್ಣಮುಂದೆ ಕಟ್ಟಿದ ಪಕ್ಷವೇ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಾಗುವುದು ವರ್ಷಗಳು ಸಂದಮೇಲೆಯೇ! ಅಂಥದ್ದರಲ್ಲಿ ಅಲ್ಲೆಲ್ಲೋ ಅಮೆರಿಕಾದಲ್ಲಿ ಅಭಿಜಿತ್ ದೀಪ್ಕೆ ಎಂಬವ ಸಾಮಾಜಿಕ ಮಾಧ್ಯಮದಲ್ಲಿ ಒಂದು ಖಾತೆಯನ್ನು ಓಪನ್ ಮಾಡಿದ್ದಕ್ಕೆ ಪರಿಯ ಫಾಲೋವರ್ಸ್ ಹುಟ್ಟಿಕೊಂಡಾಗಲೇ ಎಂಥವನಿಗೂ ಅನುಮಾನ ಹುಟ್ಟುತ್ತದೆ. ದೇಶವನ್ನು ಹರಿದು ಹುರಿದು ಮುಕ್ಕಲು, ಇಲ್ಲ ಆಂತರಿಕ ಕ್ಷೋಭೆಯನ್ನು ಹೆಚ್ಚಿಸಿ ತಲ್ಲಣಗೊಳಿಸಲು ಹುಟ್ಟಿಕೊಂಡ ಮತ್ತೊಂದು ಹುನ್ನಾರವಿದು ಅಂತ! ಜನಾಂದೋಲನಕ್ಕೆ ನಾನು ಕರೆಯನ್ನು ಕೊಡಲಿಲ್ಲ ಅಂತ ಅಭಿಜಿತ್ ದೀಪ್ಕೆ ಹೇಳಿದ್ದು ಟಿವಿಯಲ್ಲಿ ಪ್ರಸಾರವಾಗಿದೆ. ಅಷ್ಟಕ್ಕೂ ಇಂವ ಇದ್ದದ್ದು ಭಾರತದಲ್ಲಲ್ಲ.

 

ಆದರೆ, ಮಧ್ಯೆ ಮೋದಿಯನ್ನು ಟೀಕಿಸುವ ಭರದಲ್ಲಿ ಕಾಕ್ರೋಚ್ ಜನತಾ ಪಾರ್ಟಿಗೆ ನಮ್ಮ ಬೆಂಬಲ ಇದೆಯಂತ ಸದ್ಯ ರಾಜ್ಯಸಭಾ ಸದಸ್ಯ ಸ್ಥಾನದ ಆಕಾಂಕ್ಷಿಯೂ, ಕಾಂಗ್ರೆಸ್ಸಿನ ಮುಖಂಡರೂ ಆಗಿರುವ ಬಿ.ಕೆ.ಹರಿಪ್ರಸಾದರು ಹೇಳಿದ್ದು ಟಿವಿಯಲ್ಲಿ ಪ್ರಸಾರವಾಗಿದೆ. ಹುಟ್ಟೇ ಇಲ್ಲದ ಪಕ್ಷಕ್ಕೆ ಅಷ್ಟು ಅವಸರದಲ್ಲಿ ಬೆಂಬಲ ಕೊಡುವಷ್ಟು ಔದಾರ್ಯ ಕಾಂಗ್ರೆಸ್ಸಿಗೆ ಬಂದಿದ್ದಾದರೂ ಏಕೆ? ಅನುಮಾನ ಬರುವುದಿಲ್ಲವೆ? ಆಫ್ ಕೋರ್ಸ್ ಕಾಂಗ್ರೆಸ್ಸಿನ ಮೇಲೆ ಲಾಗಾಯ್ತಿನಿಂದಲೂ ನನ್ನಲ್ಲಿ ಅನುಮಾನವಿದೆ.

 

ಹೋಗಲಿ ಬಿಡಿ, ಯಾರೇನೇ ಕುತಂತ್ರ ಮಾಡಿದರೂ ದೇಶವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಆದರೆ, ಒಳಗಿನ ಅನ್ನದ್ರೋಹಿಗಳನ್ನು ನಿಯಂತ್ರಿಸಿದರೆ ಮಾತ್ರ ಹೊರಗಿನಿಂದ ಇಂಥ ಕಾಕ್ರೋಚು, ಪೊಕ್ಸು, ಕ್ರಾಕ್ ಡೈಲು, ಹೈನಾದಂಥ ಎಷ್ಟೇ ಪಾರ್ಟಿಗಳು ಬಂದರೂ ಏನು ಕಿತ್ತುಕೊಳ್ಳೋಕೆ ಆಗಲ್ಲ. ಆಗ ಯಾವ ಮುಖಂಡ ಏನ್ ಬೆಂಬಲ ಕೊಟ್ಟರೇನು ಬಂತು ಪ್ರಯೋಜನ? ದಾರಿತಪ್ಪಿಸುವ ಇಂಥ ದೇಶದ್ರೋಹಿ ಪಾರ್ಟಿಗಳು ಮತ್ತು ಬೆಂಬಲ ಕೊಡುವವರ ಬಗ್ಗೆ ಎಚ್ಚರದಿಂದಿರಬೇಕು, ಅಷ್ಟೆ. ಯಾಕೆಂದರೆ, ಭಾರತ ನಮ್ಮದು. ದೇಶ ಕಟ್ಟುವವರಿಗೆ ಮಾತ್ರ ನಮ್ಮ ಬಲ, ಬೆಂಬಲ.

 

ಟಿ. ದೇವಿದಾಸ್

 

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top