ಭಗವದ್ಗೀತೆ: ಬದುಕಿನ ಕೈಪಿಡಿ” ಕೃತಿ ಬಿಡುಗಡೆ

Upayuktha
0
ಯುವಜನತೆಗೆ ಬದುಕಿನ ದಿಕ್ಕು ತೋರುವ ಗೀತೆಯ ಸಂದೇಶ: ಹಿರಿಯ ಪತ್ರಕರ್ತ ಡಾ .ಬಾಬು ಕೃಷ್ಣಮೂರ್ತಿ ಅಭಿಮತ



ಬೆಂಗಳೂರು: ಚಿಂತಕ ಹಾಗೂ ಲೇಖಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರ “ಭಗವದ್ಗೀತೆ: ಬದುಕಿನ ಕೈಪಿಡಿ” ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಡಾ. ಬಾಬು ಕೃಷ್ಣಮೂರ್ತಿ ಮಾತನಾಡಿ, ಭಗವದ್ಗೀತೆ ಜೀವನದ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ನೀಡುವ ಮಹಾಗ್ರಂಥವಾಗಿದೆ ಎಂದು ಹೇಳಿದರು.


“ಗೀತೆಯನ್ನು ಕೇವಲ ವೃದ್ಧಾಪ್ಯ ಅಥವಾ ಸಂನ್ಯಾಸ ಜೀವನಕ್ಕೆ ಸಂಬಂಧಿಸಿದ ಗ್ರಂಥವೆಂದು ನೋಡುವ ಮನೋಭಾವ ಸರಿಯಲ್ಲ. ಇಂದಿನ ಯುವಜನತೆ ಎದುರಿಸುತ್ತಿರುವ ಗೊಂದಲ, ಒತ್ತಡ ಮತ್ತು ಸವಾಲುಗಳಿಗೆ ಗೀತೆ ಸ್ಪಷ್ಟ ದಾರಿದೀಪವಾಗುತ್ತದೆ. ಸಂಯಮ, ಕರ್ತವ್ಯನಿಷ್ಠೆ, ಸತ್ಸಂಗ ಮತ್ತು ಮೌಲ್ಯಾಧಾರಿತ ಬದುಕಿನ ಅಗತ್ಯತೆಯನ್ನು ಅದು ಸಾರುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.


ಈ ಕೃತಿಯಲ್ಲಿ ಭಗವದ್ಗೀತೆಯ ತತ್ತ್ವಗಳನ್ನು ಸಮಕಾಲೀನ ಬದುಕಿನೊಂದಿಗೆ ಜೋಡಿಸಿ ಸರಳ ಹಾಗೂ ಮನಮುಟ್ಟುವ ಭಾಷೆಯಲ್ಲಿ ನಿರೂಪಿಸಿರುವುದು ವಿಶೇಷವಾಗಿದೆ. ಜಾತಿ, ಮತ, ಪಂಥಗಳ ಮಿತಿಯನ್ನು ಮೀರಿ ಸಮಸ್ತ ಮಾನವಕುಲಕ್ಕೆ ಅನ್ವಯಿಸುವ ಧರ್ಮದ ಸಂದೇಶವನ್ನು ಲೇಖಕರು ಪರಿಣಾಮಕಾರಿಯಾಗಿ ವಿವರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಲೇಖಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮಾತನಾಡಿ, “ಭಗವದ್ಗೀತೆ ಬದುಕಿನಿಂದ ದೂರ ಓಡಲು ಹೇಳುವುದಿಲ್ಲ; ಬದುಕಿನ ಸಂಕಷ್ಟಗಳ ನಡುವೆಯೇ ಧರ್ಮಪರವಾಗಿ ನಿಲ್ಲುವ ಧೈರ್ಯವನ್ನು ನೀಡುತ್ತದೆ” ಎಂದು ಹೇಳಿದರು. ಗೀತೆಯನ್ನು ಕೇವಲ ಪೂಜ್ಯ ಗ್ರಂಥವಾಗಿ ಮಾತ್ರವಲ್ಲದೆ, ಜೀವನದ ಕಾರ್ಯಪ್ರವೃತ್ತಿಯ ಕೈಪಿಡಿಯಾಗಿ ಅರ್ಥಮಾಡಿಕೊಳ್ಳಬೇಕೆಂದು ಅವರು ತಿಳಿಸಿದರು.


ಅಧಿಕ ಜ್ಯೇಷ್ಠ (ಪುರುಷೋತ್ತಮ) ಮಾಸದ ಅಂಗವಾಗಿ ಈ ಕೃತಿಯನ್ನು “ಗ್ರಂಥ ಬಾಗಿನ” ರೂಪದಲ್ಲಿ ವಿತರಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಸಾಹಿತಿ ಎಸ್. ಜಗನ್ನಾಥ ರಾವ್ ಹೇಳಿದರು. ನಿವೃತ್ತ ಶಿಕ್ಷಣ ಇಲಾಖಾ ಅಧಿಕಾರಿ ಭುಜಂಗ ರಾವ್ ಸಾಳುಂಕೆ ದಂಪತಿಗಳು ಶ್ರೀ ಜಟಲಿಂಗೇಶ್ವರ ಸ್ವಾಮಿ ಅಂಬಾಭವಾನಿ ದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ಈ ಕೃತಿಯನ್ನು ಭಕ್ತರಿಗೆ ವಿತರಿಸಿದರು.


ಪ್ರಣವ ಮೀಡಿಯಾ ಹೌಸ್ ಪ್ರಕಟಿಸಿರುವ ಈ ಕೃತಿ ಸರಳ ಕನ್ನಡದಲ್ಲಿ ಗಂಭೀರ ತತ್ತ್ವಗಳನ್ನು ಮನದಟ್ಟು ಮಾಡುವ ವಿಶಿಷ್ಟ ಪ್ರಯತ್ನವಾಗಿದೆ ಎಂದು ಮರಾಠ ಪರಿವಾರ ಅಧ್ಯಕ್ಷ ಸು. ವಿಠ್ಠಲ ರಾವ್ ಗಾಯಕ್ವಾಡ್ ಮೆಚ್ಚುಗೆ ವ್ಯಕ್ತಪಡಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top