ಬಾಗಲಕೋಟೆ- ಇದ್ದಲಗಿ ಮುಳುಗಡೆ ಸಂತ್ರಸ್ತರ ಹೋರಾಟ ಆರನೇ ದಿನಕ್ಕೆ

Upayuktha
0

 ಧರಣಿ ಸ್ಥಳಕ್ಕೆ ಅಧಿಕಾರಿಗಳು ಬಂದರು, ಹೋದರು: ಜನಪ್ರತಿನಿಧಿಗಳ ಸುಳಿವಿಲ್ಲ 

 


 

ಹುನಗುಂದ: ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಕಳೆದು ಆರು ದಿನಗಳಿಂದ ವಿವಿಧ ಬೇಡಿಕೆ ಈಡೇರಿಕೆಗಾಗಿ ನಡೆಸುತ್ತಿರುವ ಮುಳುಗಡೆ ಸಂತ್ರಸ್ತರ ಧರಣಿ ಸ್ಥಳಕ್ಕೆ ಅಧಿಕಾರಿಗಳು ಬಂದು, ಭರವಸೆಯನ್ನು ನೀಡಿ ಹೋದರು. ಆದರೆ ಮತಕ್ಷೇತ್ರವನ್ನು ಪ್ರತಿನಿಧಿಸುವ ಮತ್ತು ಸಂತ್ರಸ್ತರ 18 ವರ್ಷಗಳ ನೋವಿನ ಬದುಕಿಗೆ ಧ್ವನಿಯಾಗಬೇಕಾಗಿರುವ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಮಾತ್ರ ಧರಣಿ ಸ್ಥಳದತ್ತ ಸುಳಿಯಲಿಲ್ಲ. ಅವರಿಗೊಂದು ಸಾಂತ್ವನ ಹೇಳುವ ಕೆಲಸ ಮಾಡದೇ ಇರುವುದು ದುರಂತ ಸಂಗತಿಯಾಗಿದೆ.

ಕಳೆದ 2007 ರಲ್ಲಿ ನಾರಾಯಣಪೂರ ಹಿನ್ನೀರಿನಿಂದ ಮತ್ತು ಮಲಪ್ರಭೆ ನದಿಯ ಪ್ರವಾಹದಿಂದ ಮನೆ ಮತ್ತು ಜಮೀನ ಕಳೆದುಕೊಂಡು 18 ವರ್ಷಗಳಿಂದ ತಾತ್ಕಾಲಿಕ ಶೆಡ್ಡಿನಲ್ಲಿ ರಣಭಯಂಕರ ಬಿಸಿಲು, ಬಾರೀ ಬಿರುಗಾಳಿ ಸಹಿತ ಮಳೆ, ರಕ್ತ ಹೆಪ್ಪುಗಟ್ಟುವ ಚಳಿಯನ್ನು ಸಹಿಸಿಕೊಂಡು ಕೊಳೆತ ಬಲಿಸು, ತುಕ್ಕು ಹಿಡಿದ ತಗಡು, ಬಾರೀ ಬಿರುಗಾಳಿ ಬಿಟ್ಟರೇ ಈಗಲೋ ಆಗಲೋ ಬಿದ್ದು ಹೋಗುವ ಶೆಡ್ ನಲ್ಲಿ ಆಗ ತಾನೆ ಜನಿಸಿದ ಹಸುಳೆ ಕಂದಮ್ಮನಿಂದ ಹಿಡಿದು ಚಿಕ್ಕ ಚಿಕ್ಕ ಮಕ್ಕಳು, ವಯೋವೃದ್ದರನ್ನು ಜೊತೆಗೆ ಜಾನುವಾರುಗಳನ್ನು ಕಟ್ಟಿಕೊಂಡು ತಗಡಿನ ಶೆಡಿನಲ್ಲಿ ಸಾಕಷ್ಟು ನರಕಯಾತನೆಯನ್ನು ಅನಭವಿಸಿದರೂ ಕೂಡಾ ಸಂತ್ರಸ್ತರ ಜೀವನಕ್ಕೊಂದು ಶಾಶ್ವತ ಪರಿಹಾರ ನೀಡುವಲ್ಲಿ ಎಲ್ಲ ಸರ್ಕಾರಗಳು ಇಲ್ಲಿವರಿಗೂ ಹೆಣಗಾಡುತ್ತಿರುವುದ್ದನ್ನು ಮನಗಂಡ ಸಂತ್ರಸ್ತರು ತಮ್ಮ ಹಕ್ಕಿಗಾಗಿ ಹೋರಾಟಕ್ಕೆ ಬೀದಿಗೀಳಿದು ಆರು ದಿನಗಳೇ ಸಂದಿವೆ.ಆದರೂ ಕೂಡಾ ಸಂತ್ರಸ್ತರ ಅನೇಕ ಬೇಡಿಕೆಗಳ ಪರಿಹಾರ ಮರಿಚೀಕೆಯಾಗಿದೆ.

ಧರಣಿ ಮೊದಲು ದಿನ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಮತ್ತು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ ಸಂತ್ರಸ್ತರ ಸ್ಥಳಕ್ಕೆ ತೆರಳಿ ಅವರ ಬೇಡಿಕೆಗಳನ್ನು ಆಲಿಸಿ, ಮನವಿ ಸ್ವೀಕರಿಸಿ ನಂತರ ಇದರ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆಂದು ಹೇಳಿ ಹೋದವರು ಮರಳಿ ಅತ್ತ ಸುಳಿದಿಲ್ಲ. ಇನ್ನು ಎರಡನೆಯ ದಿನದ ಧರಣಿ ಸ್ಥಳಕ್ಕೆ ಪುನರ್ವಸತಿ ಮತ್ತು ಪುನರ್ನಿರ್ಮಾಣ ಇಲಾಖೆ ಸಹಾಯಕ ಎಂಜನಿಯರ್ ಕೆ. ಎನ್. ಒಡೆಯರ ಭೇಟಿ ನೀಡಿ ಸಂತ್ರಸ್ತರು ವಾಸಿಸುವ ಶೆಡ್ ಗಳ ಪುನರ್ನಿರ್ಮಾಣಕ್ಕಾಗಿ ೭೩ ಲಕ್ಷ ಅನುದಾನದ ಬೇಡಿಕೆಯುಳ್ಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಲಾಗಿದೆ. ಇಲಾಖೆಯಲ್ಲಿ ಅನುದಾನ ಕೊರತೆ ಇದೆ. ಅನುದಾನ ಬಂದ ತಕ್ಷಣವೇ ಶೆಡಗಳ ಪುನರ ನಿರ್ಮಾಣ ಮಾಡಿಕೊಡುತ್ತೇವೆಂದು ಕಳೆದ ನಾಲ್ಕು ತಿಂಗಳಿಂದ ಇದನ್ನೇ ಹೇಳುತ್ತಾ ಬಂದಿದ್ದಾರೇ ಹೊರತು ಅವರು ಇಲ್ಲಿವರಿಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದರ ಕುರಿತು ಸ್ಪಷ್ಟತೆ ಇಲ್ಲ.



ಪುನರ್ ನಿರ್ಮಾಣ ಮಾಡಿಕೊಡಲು ಅಧಿಕಾರಿಗಳ ಬೃಹನ್ನಾಟಕ:

ಧರಣಿ ಸ್ಥಳಕ್ಕೆ ಆರ್ & ಆರ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಕೆಂದೋಳಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಶಿಥಿಲಗೊಂಡ ಪ್ರತಿ ಶೆಡ್ ಗಳ ಪಟ್ಟಿ ಮಾಡಿ ಅಲ್ಲಿ ವಾಸಿಸುವರ ಸಂತ್ರಸ್ತರ ಹೆಸರಗಳನ್ನು ಬರೆದುಕೊಂಡು ನಾಳೆನೇ ಶೆಡ್ಗಳನ್ನು ಪುನರ್ ನಿರ್ಮಾಣ ಮಾಡಿಕೊಡುತ್ತೇವೆ ಎನ್ನುವಂತೆ ಬೃಹನ್ ನಾಟಕ ಮಾಡಿ ಹೋದರು. ಮರಳಿ ಉತ್ತರವೂ ಇಲ್ಲ,ಅವರ ಪತ್ತೆಯೂ ಇಲ್ಲಂದಂತಾಗಿದೆ.

ಸಂತ್ರಸ್ತರ ಧರಣೆ ಸ್ಥಳಕ್ಕೆ ಸುಳಿಯದೇ ಇರುವ ಹಾಲಿ ಮತ್ತು ಮಾಜಿ ಶಾಸಕರು:

ಶೆಡ್ ಪುನರ್ನಿರ್ಮಾಣ, ಎರಡನೆಯ ಹಂತದ ಪರಿಹಾರದ ಹಣ, ನಾಲ್ಕು ಗುಂಟೆ ನಿವೇಶನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದ್ದಲಗಿ ಗ್ರಾಮದ ಸಂತ್ರಸ್ತರು ನಡೆಸುತ್ತಿರುವ ಧರಣಿ ಆರನೆಯ ದಿನಕ್ಕೆ ತಲುಪಿದರೂ ಕೂಡಾ ಕ್ಷೇತ್ರವನ್ನು ಪ್ರತಿನಿಧಿಸುವ ಹಾಲಿ ಶಾಸಕರಾಗಲಿ ಮತ್ತು ಮಾಜಿ ಶಾಸಕರಾಗಲಿ ಸೌಜನ್ಯಕ್ಕಾದರೂ ಧರಣಿ ಸ್ಥಳಕ್ಕೆ ಬಂದು ಅವರ ಸಮಸ್ಯೆಯನ್ನು ಆಲಿಸಿ ಅವರ ಬೇಡಿಕೆಗಳ ಪರಿಹಾರಕ್ಕೆ ಕ್ರಮಕ್ಕೆ ಮುಂದಾಗಬೇಕಿತ್ತು. ಕಾರ್ಯ ಇಲ್ಲಿವರೆಗೆ ಆಗಿಲ್ಲ.

 

-ಬಸವರಾಜ ಎಂ ಬಡಿಗೇರ

 

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top